ಮೃತ್ಯುಂಜಯ ಕಪಗಲ್ಬೆಂಗಳೂರು:ರಾಷ್ಟ್ರ ರಾಜಕಾರಣದ ಗಮನಸೆಳೆದಿದ್ದ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತು, ದಕ್ಷಿಣ ಭಾರತದಲ್ಲಿ ಇದ್ದ ಒಂದು ರಾಜ್ಯದ ಅಧಿಕಾರವನ್ನೂ ಕಳೆದುಕೊಂಡಿದೆ. ಪಕ್ಷದ ಕೇಂದ್ರ ನಾಯಕರು ಏನೆಲ್ಲ ಕಸರತ್ತು ನಡೆಸಿದರೂ ಹಿನ್ನಡೆಗೆ ಪ್ರಮುಖವಾಗಿ ಹುಂಬ ವಿಶ್ವಾಸ, ಪಕ್ಷದೊಳಗೊಂದು ‘ಪ್ರತಿಪಕ್ಷ’ ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಕ್ಷ ಮತ್ತಷ್ಟು ಪ್ರಪಾತಕ್ಕೆ ಬೀಳುವುದನ್ನು ಪ್ರಧಾನಿ ನರೇಂದ್ರ ಮೋದಿಯವರ ಬಿರುಸಿನ ಸಂಚಾರ, ಪ್ರಚಾರದ ಅಬ್ಬರ ಹಾಗೂ ರೋಡ್ ಶೋಗಳು ತಡೆದಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸ್ವಂತ ಬಲದ ಮೇಲೆ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಲು ಕೇಸರಿಪಡೆ ಬಯಸಿತ್ತು. ಸಮೀಕ್ಷೆ ಪ್ರಕಾರ ಅತಂತ್ರ ಸ್ಥಿತಿ ಸೃಷ್ಟಿಯಾಗಬಹುದು ಎನ್ನಲಾಗಿತ್ತು. ಆದರೆ ಕಾಂಗ್ರೆಸ್​ನ ಗಾಳಿಗೆ ಕಮಲದ ಪಕಳೆಗಳು ನಿರೀಕ್ಷೆಗೂ ಮೀರಿ ಉದುರಿಹೋಗಿವೆ. ಮತಗಳು ಹಾಗೂ ಸ್ಥಾನಗಳ ಗಳಿಕೆಯಲ್ಲೂ ಕುಸಿದಿರುವುದು ಆಘಾತ ತಂದಿದೆ. ತಾವು ಗೆದ್ದು, ಮತ್ತೊಬ್ಬರನ್ನು ಗೆಲ್ಲುವ ಸಾಮರ್ಥ್ಯವುಳ್ಳವರ ಸೋಲುಂಡಿದ್ದಾರೆ. ‘ಆಡಳಿತ ವಿರೋಧಿ ಅಲೆ’ ಅಂತರ್ಗಾಮಿಯಾಗಿ ಹರಿಯುತ್ತಿತ್ತು ಎನ್ನುವುದಕ್ಕೆ ಕೈಗನ್ನಡಿ.
ಮೋದಿ ಬರುತ್ತಾರೆ, ಅವರ ವರ್ಚಸ್ಸಿನ ಬಲದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ‘ಹುಂಬ ವಿಶ್ವಾಸ’ದಿಂದ ರಾಜ್ಯ ನಾಯಕತ್ವ ತನ್ನ ಕೆಲಸದಲ್ಲಿ ಮೈಮರೆಯಿತು. ದಾವಣಗೆರೆಯಲ್ಲಿ ಆಯೋಜಿಸಿದ್ದ ವಿಜಯಸಂಕಲ್ಪ ಯಾತ್ರೆ ಮಹಾಸಂಗಮ ಸಮಾವೇಶದಲ್ಲಿ ಮೋದಿಯವರು ಯಾರಿಗೆ ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಹೇಳಿದ್ದರು.
‘ಮೋದಿ ಬರುತ್ತಾರೆ, ಗೆಲ್ಲಿಸುತ್ತಾರೆ ಎಂದುಕೊಂಡು ಸ್ವಪ್ರಯತ್ನ ಕೈಬಿಡಬೇಡಿ’ ಎಂಬ ಸೂಚ್ಯವಾದ ಸಂದೇಶ ಗ್ರಹಿಸುವಲ್ಲಿ ರಾಜ್ಯದ ನಾಯಕರು ಮುಗ್ಗರಿಸಿರುವುದು ನಿಚ್ಚಳ. ಎಲ್ಲ ಭಾರವನ್ನು ಮೋದಿ, ಅಮಿತ್ ಷಾ, ನಡ್ಡಾ, ಬಿಎಸ್​ವೈ, ಬೊಮ್ಮಾಯಿ ಹೆಗಲಿಗೆ ಹೊರಿಸಿ ಅಧಿಕಾರದ ಪಾಲುದಾರರು ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿಬಿಟ್ಟರು.
ಆಡಳಿತದ ಚುಕ್ಕಾಣಿ ಹಿಡಿದ ಪಕ್ಷಗಳು ಎದುರಿಸಿದ ಚುನಾವಣೆಗಳಲ್ಲಿ ಸೋಲು ಹೊಸದೇನಲ್ಲ. ಈ ಹಿಂದೆ ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಕಾಂಗ್ರೆಸ್, ಜೆ.ಎಚ್.ಪಟೇಲ್ ಅವಧಿಯಲ್ಲಿ ಜೆಡಿಯು, ಜೆಡಿಎಸ್, ಜಗದೀಶ ಶೆಟ್ಟರ್ ಸಾರಥ್ಯವಿದ್ದಾಗ ಬಿಜೆಪಿ, ನಂತರ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಸೋಲನುಭವಿಸಿದ ಉದಾಹರಣೆಗಳಿವೆ.
ಕೇಂದ್ರ ನಾಯಕರಿಗೆ ಎಡವಿದ್ದೆಲ್ಲಿ ಎಂದು ವೇದ್ಯವಾಯಿತು. ಆಂತರಿಕವಾಗಿ ಆಡಳಿತ ಸರಿಪಡಿಸುವ ಕೆಲಸಕ್ಕೆ ಕೈಹಾಕಿದರೆ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪಕ್ಷವನ್ನು ಸುಪರ್ದಿಗೆ ಪಡೆದರು. ಸಚಿವ-ಸಂಪುಟ ರಚನೆ, ನಿಗಮ, ಮಂಡಳಿಗಳ ನೇಮಕ, ಸಂಘಟನೆ ರಚನೆ ವ್ಯವಸ್ಥೆ ಹೀಗೆ ಪ್ರತಿಯೊಂದು ಹಂತದಲ್ಲಿ ಸಂಪರ್ಕ, ಸಂವಹನ ಕೊರತೆ ಢಾಳಾಗಿ ಕಾಡಿತು. ಕೇಂದ್ರ ನಾಯಕರು ತಾವು ಪೂರ್ತಿ ಮಾಡಲಿಲ್ಲ, ರಾಜ್ಯ ನಾಯಕರಿಗೂ ಬಿಡಲಿಲ್ಲ. ಇದರಿಂದಾಗಿ ಪಕ್ಷದೊಳಗೊಂದು ಪ್ರತಿಪಕ್ಷ ತಲೆಎತ್ತಿದವು. ಗುಂಪುಗಾರಿಕೆ ಮತ್ತು ಒಳೇಟುಗಳ ಮೇಲಾಟದಲ್ಲಿ ಬಾವುಟ ಹಿಡಿದ ಕಾರ್ಯಕರ್ತ ಹತಾಶೆ ಮಡುವಿಗೆ ಬಿದ್ದ.
ಸಂಘಟನಾ ಚಟುವಟಿಕೆಗಳು ನಿರಂತರವಾಗಿದ್ದವು. ಕಾರ್ಯಯೋಜನೆ ಉತ್ತಮವಾಗಿತ್ತು. ಆದರೆ ಕಾರ್ಯಕರ್ತರ ಜತೆಗೆ ಸಚಿವರು, ಶಾಸಕರು, ಅಭ್ಯರ್ಥಿಗಳ ನಿಕಟತೆ ಸಾಧ್ಯವಾಗಲಿಲ್ಲ. ಕಾರ್ಯಕರ್ತರು, ಪ್ರಮುಖರ ಅಭಿಪ್ರಾಯ ಆಧಾರಿತ ಆಯ್ಕೆ ಎಂದು ಬಿಂಬಿಸಲಾಯಿತು. ಹೊಸ ಪ್ರಯೋಗದ ಹೆಸರಿನಲ್ಲಿ ವರಿಷ್ಠರ ಪ್ರಯತ್ನಗಳೆಲ್ಲ ಅರೆಬರೆ, ನೀತಿ-ನಿಯಮದಲ್ಲೂ ದ್ವಂದ್ವ ನಿಲುವು ಆಂತರಿಕ ಉದ್ವೇಗ ಹೆಚ್ಚಿಸಿತು. ಹಾಲಿ ಒಬ್ಬ ಸಚಿವ ಸೇರಿ 15 ಶಾಸಕರನ್ನು ಕೈಬಿಟ್ಟು, 75 ಹೊಸಮುಖಗಳಿಗೆ ಮಣೆ ಹಾಕಿತು. ಈ ಪೈಕಿ 15 ಅಭ್ಯರ್ಥಿಗಳು ಮಾತ್ರ ಗೆದ್ದಿದ್ದು, ಹೊಸ ಪ್ರಯೋಗ ನಿರೀಕ್ಷಿತ ಫಲ ನೀಡಿಲ್ಲ ಎಂಬುದಕ್ಕೆ ನಿದರ್ಶನ. ವಿಭಜಿತ ರೂಪ, ಪ್ರತಿಷ್ಠೆಯ ಸ್ವರೂಪ, ಎಲ್ಲವನ್ನೂ ತಮ್ಮ ಹತೋಟಿಗೆ ಇಟ್ಟುಕೊಳ್ಳುವ ಪ್ರಯತ್ನಗಳೇ ಮೇಲುಗೈಪಡೆದು ಪಕ್ಷ ಒಟ್ಟಾಗಿ ಚುನಾವಣೆ ಎದುರಿಸುವಲ್ಲಿ ವಿಫಲವಾಯಿತು.
ಕ್ಷಿಪ್ರ ರಾಜಕೀಯ ಪಲ್ಲಟ, ಅಧಿಕಾರದ ಗದ್ದುಗೆ ಏರುವ ಮುನ್ನ ಆಂತರಿಕ ಒಡಂಬಡಿಕೆಗಳೇನಾಗಿದ್ದವು ಎಂದು ಸಾಮಾನ್ಯ ಕಾರ್ಯಕರ್ತರು, ಜನರಿಗೆ ಗೊತ್ತಿರುವುದಿಲ್ಲ. ಪ್ರಕೃತಿ ವಿಕೋಪ, ಕರೊನಾ ಸೋಂಕು ಮಾರಿ ಸಂಕಷ್ಟವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದ ಯಡಿಯೂರಪ್ಪ ಅವರು ‘ಸ್ವಯಂಪ್ರೇರಿತ’ವಾಗಿ ರಾಜೀನಾಮೆ ನೀಡುವಂತೆ ಮಾಡಿದ್ದೇಕೆ ? ಎಂಬ ಅಂಶವೂ ಅಭಿಮಾನಿಗಳು, ವೀರಶೈವ-ಲಿಂಗಾಯತ ಸಮುದಾಯಕ್ಕೆ ಮನವರಿಕೆಯಾಗಿಲ್ಲ. ಯಡಿಯೂರಪ್ಪ ಸೂಚಿಸಿದ ಬೊಮ್ಮಾಯಿಯವರಿಗೆ ಸಿಎಂ ಪಟ್ಟ ಕಟ್ಟುವುದಾದರೆ ಅವರನ್ನೇ ಮುಂದುವರಿಸಿದ್ದೇಕೆ ? ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ಸಾಧ್ಯವಾಗಿಲ್ಲ. ಸಮುದಾಯದ ಅಂತರಾರ್ಥ ಅರಿತ ಪ್ರತಿಪಕ್ಷ ಕಾಂಗ್ರೆಸ್, ಚುನಾವಣೆ ಕಾಲಕ್ಕೆ ಬಿಎಸ್​ವೈ ಕಡೆಗಣನೆ ಅಸ್ತ್ರ ಪ್ರಯೋಗಿಸಿತು. ಕಮಲಪಡೆ ನಾಯಕರ ಸಮರ್ಥನೆಯಲ್ಲಿ ‘ಅಸಹಾಯಕ ಧ್ವನಿ’ಯೇ ಹೆಚ್ಚಾಗಿ ಜನರಿಗೆ ಕೇಳಿಸಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 7 =
Remember me
