ಬಿಡದಿ:ಮೈಸೂರು ಪಾದಯಾತ್ರೆ ಕೈಗೊಂಡಿರುವ ಬಿಜೆಪಿ ಮತ್ತು ಜೆಡಿಎಸ್​​ಗೆ ಟಕ್ಕರ್ ಕೊಡಲು ಕಾಂಗ್ರೆಸ್​​ ಜನಾಂದೋಲ ಕಾರ್ಯಕ್ರಮ ನಡೆಸುತ್ತಿದ್ದು, ಇಂದು (ಆಗಸ್ಟ್ 02) ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಡೆದ ಜನಾಂದೋಲ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಜೆಡಿಎಸ್​ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ವಿಜಯೇಂದ್ರನಿಗೆ ತಾಕತ್ತಿದ್ದರೆ ಪಾದಯಾತ್ರೆಗೆ ಯಾವ ಕಾಂಗ್ರೆಸಿಗ ಕುಮ್ಮಕ್ಕು ಕೊಟ್ಟಿದ್ದಾನೆ ಹೇಳಲಿ: ಡಿಕೆಶಿ
ದೇವೇಗೌಡರು ನನ್ನ ಪುಣ್ಯ ಭೂಮಿ, ಕರ್ಮಭೂಮಿ‌ ಎಂದಿದ್ದರು. ಕುಮಾರಸ್ವಾಮಿ ತಂದೆ ಈ ಜಿಲ್ಲೆಯಿಂದ‌ ಪ್ರಧಾನಿ, ಮುಖ್ಯಮಂತ್ರಿ ಆಗಿದ್ದರು. ಕುಮಾರಸ್ವಾಮಿ ಪತ್ನಿ ಈ‌ ಜಿಲ್ಲೆಯಿಂದ‌ ಶಾಸಕಿಯಾಗಿದ್ದರು. ಆದ್ರೆ, ಪಾದಯಾತ್ರೆಯಲ್ಲಿ‌ ಜೆಡಿಎಸ್ ಪಕ್ಷದ ಒಂದು ಬಾವುಟವೂ ಇಲ್ಲ. ಕುದುರೆ ಎಷ್ಟೇ ಚೆನ್ನಾಗಿದ್ದರೂ ಚಾಟಿ ಏಟು ಬೀಳದೇ ಇರುವುದಿಲ್ಲ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.
ನಿನ್ನೆ ತಮ್ಮ ಭಾಷಣದಲ್ಲಿ ಏನು ಹೇಳಿದ್ರಿ? ನಾನು ಈ ಪಾದಯಾತ್ರೆಯನ್ನ ಮಾಡಲ್ಲ, ನನ್ನ ಕರ್ಮ ಭೂಮಿ ಎಂದು ಹೇಳೋ‌ ಧೈರ್ಯ ಇಲ್ಲ. ತಾವು‌ ಕೇಂದ್ರದ ಸಚಿವರನ್ನ ಭೇಟಿ ಮಾಡಿ ಏನೇನು‌ ಪಟ್ಟಿ ಕೊಟ್ಟಿದ್ದೀರಿ ಗೊತ್ತು. ಸಿಎಂ ಹಾಗೂ ನನ್ನ ಆಸ್ತಿಯನ್ನೆಲ್ಲ ಹುಡುಕಿ‌ ಹುಡುಕಿ‌ ಕೊಟ್ಟಿದ್ದೀರಿ ಎಂದು ಹೊಸ ಬಾಂಬ್ ಸಿಡಿಸಿದರು.
ನಿಮ್ಮ ಕುಟುಂಬದ ಆಸ್ತಿ ಬಗ್ಗೆ ಮಾತಾಡಿ:“ಕುಮಾರಸ್ವಾಮಿ ಅವರೇ, ನೀವು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ನನ್ನ ಕುಟುಂಬದ ಆಸ್ತಿಯ ಪಟ್ಟಿ ಕೊಟ್ಟಿರುವುದು ನನಗೆ ಗೊತ್ತಿದೆ. ನನ್ನ ಆಸ್ತಿ ಎಷ್ಟಿದೆ, ಸಿದ್ದರಾಮಯ್ಯ ಅವರ ಆಸ್ತಿ ಎಷ್ಟಿದೆ ಅಂತ ಪಟ್ಟಿ ಕೊಟ್ಟಿದ್ದೀರಿ. ಬಹಳ ಸಂತೋಷ, ಇದಕ್ಕೆಲ್ಲಾ ನಾನು ಸಿದ್ಧನಾಗಿದ್ದೇನೆ, ಉತ್ತರ ಕೊಡುತ್ತೇನೆ” ಎಂದು ತಿಳಿಸಿದರು.
“ನಿಮ್ಮ ತಂದೆ ಈ ಜಾಗಕ್ಕೆ ಬಂದಾಗ ನಿಮ್ಮ ತಂದೆ ಬಳಿ ಎಷ್ಟು ಆಸ್ತಿ ಇತ್ತು, ಇಲ್ಲಿ ಬಂದ ನಂತರ ಎಷ್ಟು ಜಮೀನು ಪಡೆದುಕೊಂಡಿರಿ? ಯಾರ ಜಮೀನನ್ನು ಪಡೆದುಕೊಂಡಿರಿ? ಈಗ ಎಷ್ಟು ಎಕರೆ ಅಸ್ತಿಯಾಗಿದೆ? ಆ ಆಸ್ತಿಗಳು ಯಾರ ಹೆಸರಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಮತ್ತೆ ಮರಳಿ ನಿಮ್ಮ ಹೆಸರಿಗೆ ಬಂದಿದ್ದು ಹೇಗೆ? ನಿಮ್ಮ ಹಾಗೂ ನಿಮ್ಮ ಕುಟುಂಬದವರದ್ದು ಇಲ್ಲಿ ನೂರಾರು ಎಕರೆ, ಕುಂಬಳಗೋಡು ಬಳಿ 200-250 ಎಕರೆ, ದೊಡ್ಡ ಗುಬ್ಬಿ ಹಾಗೂ ಚಿಕ್ಕ ಗುಬ್ಬಿ, ಬೆಂಗಳೂರು ಉತ್ತರದ ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ, ಹಾಸನ, ನೆಲಮಂಗಲದಲ್ಲಿ ಎಷ್ಟು ಆಸ್ತಿ ಇದೆ? ಇವುಗಳ ಮೌಲ್ಯ ಎಷ್ಟು?” ಎಂದು ಪ್ರಶ್ನೆ ಮಾಡಿದರು.
ಸಹೋದರ, ಶಾಸಕರಿಂದ ಸದನದಲ್ಲಿ ಚರ್ಚೆ ಮಾಡಿಸಿ:“ನನಗೆ ಲುಲುಕುಮಾರ, ಬೇರೆ ತರಹದ ಚಿತ್ರ ತೋರಿಸಿದ್ದೆ ಎಂದು ಟೀಕೆ ಮಾಡುತ್ತೀರಲ್ಲಾ ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಆಹ್ವಾನ ನೀಡಿದೆ. ಆದರೂ ನೀವು ಬರಲಿಲ್ಲ. ಕಳೆದ ಎರಡು ಅಧಿವೇಶನಗಳಲ್ಲೂ ನೀವು ಚರ್ಚೆಗೆ ಬರಲಿಲ್ಲ. ಈಗಲೂ ನಿಮ್ಮ ಸಹೋದರ, ಶಾಸಕರುಗಳ ಬಳಿ ದಾಖಲೆಗಳನ್ನು ಕೊಟ್ಟು ಸದನದಲ್ಲಿ ಚರ್ಚೆ ಮಾಡಲು ಹೇಳಿ. ಎಲ್ಲಾ ಅಂಶಗಳು ಸದನದಲ್ಲಿ ದಾಖಲೆಯಾಗಿ ಉಳಿಯಲಿ” ಎಂದು ಸವಾಲು ಹಾಕಿದರು.
ಹಳೇ ವಿಚಾರ ಮತ್ತೆ ನೆನಪಿಸಿದ್ದೀರಿ: “ನಾನು, ನೀವು ಒಂದಾಗಿ ಸರ್ಕಾರ ಮಾಡಿದಾಗ, ನೀವು ಈ ಹಿಂದೆ ನಿಮ್ಮ ಅಣ್ಣ ಬಾಲಕೃಷ್ಣಗೌಡ ಎಂಬ ಅಧಿಕಾರಿ ಮೂಲಕ ನನ್ನ ತಂಗಿ, ಮಡದಿ, ಸಹೋದರ, ರವಿ ಅವರ ಮೇಲೆ ಕೇಸು ದಾಖಲಿಸಿದ್ದನ್ನು ಮರೆತಿದ್ದೆ. ಚಂದ್ರಪ್ಪ ಅವರಿಂದ ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಯಾವ ರೀತಿ ಕೇಸು ದಾಖಲಿಸಿದ್ದಿರಿ ಎಂಬುದನ್ನು ನಾನು ಮರೆತಿದ್ದೆ. ಆದರೆ ಕಳೆದ ಒಂದು ವರ್ಷದಲ್ಲಿ ಅವುಗಳನ್ನು ನೆನೆಸಿಕೊಳ್ಳುವಂತೆ ಮಾಡಿದ್ದೀರಿ. ಇದಕ್ಕೆಲ್ಲಾ ಉತ್ತರ ಕೊಡಲು, ಚರ್ಚೆ ಮಾಡಲು ಸಿದ್ಧನಾಗಿದ್ದೇನೆ. ಮುಂದಿನ ಅಧಿವೇಶನದಲ್ಲಾದರೂ ಚರ್ಚೆಗೆ ಕಳಿಸಿ. ನಿಮ್ಮ ಅನಿಷ್ಟಗಳು, ನಿಮ್ಮ ಸಹೋದರ ಬಾಲಕೃಷ್ಣಗೌಡನ ಆಸ್ತಿಗಳ ಬಗ್ಗೆ ಚರ್ಚೆ ಮಾಡೋಣ. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾನೆ ಎಂದು ಬಯಲು ಮಾಡಲು ಸಿದ್ಧನಿದ್ದೇನೆ” ಎಂದು ಗುಡುಗಿದರು.
ಈ ಜಿಲ್ಲೆಯ ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ:“ಈ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ನಮ್ಮ ಜಿಲ್ಲೆ. ಕೆಂಪೇಗೌಡರು ಹುಟ್ಟಿದ, ಕಟ್ಟಿದ ನಾಡಿನವರು ನಾವು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮಿಗಳು ಇಲ್ಲಿ ಜನಿಸಿದ್ದಾರೆ. ಇಲ್ಲಿನ ಜನ ನಾವುಗಳು ಬೆಂಗಳೂರಿನವರು. ಈ ಭಾಗ ಬೆಂಗಳೂರಿನಿಂದ ಬೆಂಗಳೂರು ಗ್ರಾಮಾಂತರವಾಯಿತು. ಮತ್ತೆ ಬೆಂಗಳೂರು ವಿಭಾಗವಾಗಿದೆ. ನಮ್ಮ ಸ್ವಾಭಿಮಾನ ಬಿಟ್ಟುಕೊಡಲು ಸಾಧ್ಯವಿಲ್ಲ. ನೀವು ಇಲ್ಲಿ ಬಂದು ಜನರ ಮತಗಳ ಆಧಾರದ ಮೇಲೆ ಅಧಿಕಾರ ಮಾಡಿದ್ದೀರಿ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ದೇವೇಗೌಡರು ಪ್ರಧಾನಿಯಾದ ಜಾಗದಲ್ಲೇ ಸಿಎಂ. ಲಿಂಗಪ್ಪನವರು ಗೆದ್ದಿರುವ ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಜನ ಏನುಬೇಕಾದರೂ ತೀರ್ಮಾನ ಮಾಡಲು ಅವಕಾಶವಿದೆ” ಎಂದು ತಿಳಿಸಿದರು.
ಮೇಕೆದಾಟು ಅನುಮತಿ ಕೊಡಿಸುವುದಾಗಿ ಹೇಳಿದ್ದಲ್ಲ, ಏನಾಯ್ತು?:ಕುಮಾರಣ್ಣ ಲೋಕಸಭೆ ಚುನಾವಣೆ ಸಮಯದಲ್ಲಿ ಒಂದೇ ದಿನದಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದಲ್ಲಪ್ಪಾ, ಆದರೂ ಬಜೆಟ್ ನಲ್ಲಿ ಈ ವಿಚಾರ ಪ್ರಸ್ತಾಪ ಆಗಲಿಲ್ಲ ಯಾಕೆ? ಈ ಬಗ್ಗೆ ನಿಮ್ಮ ಮಂತ್ರಿಗಳು ಯಾರೂ ಮಾತನಾಡಲಿಲ್ಲ ಯಾಕೆ? ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಿ, ನ್ಯಾಯ ಕೊಡಿಸಲು ಡಿ.ಕೆ. ಸುರೇಶ್, “ನಮ್ಮ ತೆರಿಗೆ ನಮ್ಮ ಹಕ್ಕು” ಎಂದು ಹೋರಾಟ ಮಾಡಿದರು. ಅದಕ್ಕೆ ಅವರನ್ನು ಷಡ್ಯಂತ್ರ ಮಾಡಿ ಸೋಲಿಸಿದ್ದೀರಿ.
ಲೋಕಸಭೆ ಚುನಾವಣೆಯಲ್ಲಿ ನಾನು ಯಾಮಾರಿದೆ, ನನ್ನ ಲೆಕ್ಕಾಚಾರ ವಿಫಲವಾಗಿ ನೀವು ಗೆದ್ದಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅವರು ಹೇಳಿರುವ ಪಾಠ ಕಲಿಯುತ್ತೇನೆ ಎಂದು ತನ್ನ ಸಹೋದರ ಡಿಕೆ ಸುರೇಶ್ ಸೋಲು ನೆನಪು ಮಾಡಿಕೊಂಡರು.
ಕುಮಾರಣ್ಣ ನಿನಗೆ ಉಪಕಾರ ಸ್ಮರಣೆ ಇರಲಿ:“2028ರಲ್ಲಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ. ಕುಮಾರಣ್ಣ ನಾನು ಪರಮೇಶ್ವರ ಅವರು ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಮುಂದಾದೆವು. ಆಗ ಸಿದ್ದರಾಮಯ್ಯನವರು ಬಂದು 38 ಶಾಸಕರಿದ್ದ ನಿನ್ನನ್ನು ಮುಖ್ಯಮಂತ್ರಿ ಮಾಡಲು 82 ಶಾಸಕರಿದ್ದ ಕಾಂಗ್ರೆಸ್ ಪಕ್ಷದ ವತಿಯಿಂದ ಬರೆದುಕೊಟ್ಟಿದ್ದೆವು. ನಿನಗೆ ಉಪಕಾರ ಸ್ಮರಣೆ ಇರಬೇಕು. ನಿಮ್ಮ ಆಸ್ತಿ ವಿವರಗಳ ಬಗ್ಗೆ ಸರ್ಕಾರ ಜಮೀನು ಕಬಳಿಕೆ ಬಗ್ಗೆ ನೀನೇ ಮನಬಿಚ್ಚಿ ಮಾತಾನಾಡಬೇಕು ಎಂದು ಮನವಿ ಮಾಡುತ್ತೇನೆ” ಎಂದರು.
“ಈ ಜನಾಂದೋಲನ ಸಭೆಯನ್ನು ನಾಳೆ ರಾಮನಗರ, ನಾಡಿದ್ದು ಚನ್ನಪಟ್ಟಣ, ಆಚೆ ನಾಡಿದ್ದು ಮದ್ದೂರು, ಆನಂತರ ಮಂಡ್ಯ ಹಾಗೂ ಮೈಸೂರಿನಲ್ಲಿ ಮಾಡಿ ಪ್ರಶ್ನೆ ಕೇಳುತ್ತೇವೆ. ನಾಳೆಯಿಂದ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳೂ ಬರುತ್ತಾರೆ. ನೆರೆ ಪೀಡಿತ ಪ್ರದೇಶಗಳ ಬಗ್ಗೆ ಮೇಲ್ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಇಂದಿನ ಕಾರ್ಯಕ್ರಮಕ್ಕೆ ಬಂದಿಲ್ಲ” ಎಂದು ತಿಳಿಸಿದರು.
ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಟ್ವಿಸ್ಟ್: ಅಶ್ಲೀಲ ವಿಡಿಯೋಗಳು ಅಸಲಿ ಎಫ್‌ಎಸ್‌ಎಲ್‌ ವರದಿ ಬಹಿರಂಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + 11 =
Remember me
