ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಪ್ರಾರ್ಥನೆ ಮಾಡುವುದು ಗೊತ್ತು. ಅನೇಕಾನೇಕ ರೀತಿಯಲ್ಲಿ ಸ್ವಾರ್ಥದಿಂದ ಕೂಡಿರುವ ಪ್ರಾರ್ಥನೆ ಮಾಡುತ್ತಿರುವುದನ್ನು ನಾವು ಕಾಣುತ್ತೇವೆ. ಆದರೆ ಭಗವದ್ಗೀತೆಯಲ್ಲಿ ತಿಳಿಸಿರುವಂತೆ ‘ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ | ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ || (7-3). ಸಾವಿರಾರು ಮಂದಿಯಲ್ಲಿ ಯಾರೋ ಒಬ್ಬ ಸಿದ್ಧಿಗಾಗಿ ಪ್ರಯತ್ನಿಸುತ್ತಿರುತ್ತಾನೆ. ಹಾಗೆ ಪ್ರಯತ್ನಿಸಿದವರಲ್ಲಿ, ಪ್ರಯತ್ನಿಸಿ ಗುರಿ ಮುಟ್ಟಿದವರಲ್ಲಿ ಯಾರೋ ಒಬ್ಬ ನನ್ನನ್ನು ಸ್ಪಷ್ಟವಾಗಿ ಅರಿತುಕೊಳ್ಳುತ್ತಾನೆ. ಹಾಗೆಯೇ ಸಹಸ್ರ ಸಹಸ್ರ ಮನುಜರಲ್ಲಿ ಯಾರೋ ಒಬ್ಬರು ಮಾತ್ರ ಭಗವಂತನಲ್ಲಿ ಸರಿಯಾಗಿ, ನಿಜವಾದ ಅರ್ಥದಲ್ಲಿ ಪ್ರಾರ್ಥಿಸುವುದನ್ನು ಕಾಣಬಹುದು.
ನಿಜವಾದ ಅರ್ಥದಲ್ಲಿ ಪ್ರೀಣಾತಿ ಇತಿ ಪ್ರಾರ್ಥನಾ. ಅದರಿಂದ ಭಗವಂತನಿಗೆ ಅತ್ಯಂತ ಸಂತೋಷವಾಗುತ್ತದೆ. ಏಕೆಂದರೆ ನಿಜವಾದ ಭಕ್ತ ಭಗವಂತನಲ್ಲಿ ಏನೂ ಕೋರುವುದಿಲ್ಲ, ಬದಲಾಗಿ ಭಗವಂತನ ಚರಣಾರವಿಂದಗಳಲ್ಲಿ ತನ್ನ ಮನಸ್ಸು ಸದಾ ಮುಳುಗಿರಲಿ ಎಂದೇ ಪ್ರಾರ್ಥಿಸುವುದು ಸನಾತನ ಧರ್ಮದ ಮೂಲ ಅಂಶವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ತಾಯಿ ಕುಂತಿಯ ಪ್ರಾರ್ಥನೆ ಒಂದು ಅದ್ಭುತ ಎನಿಸಿಕೊಳ್ಳುತ್ತದೆ. ‘ವಿಪದಃ ಸಂತು ತಾಃ ಶಾಶ್ವತತ್ರ ತತ್ರ ಜಗದ್ಗುರೋ | ಯತ್ಸಾಯದ ಪುನರ್ಭವ ದರ್ಶನಮ್ || 25 ||- ಎಲ್ಲಾ ವಿಪತ್ತುಗಳು ಮತ್ತೆ ಮತ್ತೆ ಸಂಭವಿಸಲಿ ಎಂದು ನಾನು ಬಯಸುತ್ತೇನೆ, ಇದರಿಂದ ನಾವು ಮತ್ತೆ ಮತ್ತೆ ನಿನ್ನ ದರ್ಶನ ಪಡೆಯಬಹುದು. ಇದರ ಒಳ ಅರ್ಥ, ಆಪತ್ತುಗಳು ಸದಾ ಬರುತ್ತಿದ್ದರೆ ಪ್ರಭುವನ್ನು ಪ್ರಾರ್ಥಿಸುವುದು ಅತಿ ಸುಲಭ. ಇಲ್ಲದಿದ್ದರೆ ಈ ಕ್ಷಣಿಕ ಪ್ರಪಂಚದ ಆಸೆ, ಲಾಲಸೆ, ಸುಖ, ಭೋಗಳ ಸಮಯದಲ್ಲಿ ಆ ದಿವ್ಯ ಭಗವದ್ ಶಕ್ತಿಯನ್ನು ಸಂಪೂರ್ಣ ಮರೆತೇ ಬಿಡುತ್ತಾರೆ.
ನಿಜವಾದ ಅರ್ಥದಲ್ಲಿ ಪ್ರಾರ್ಥನೆಯೆಂದರೆ ಸಂಪೂರ್ಣ ಆ ಭಗವದ್ ಶಕ್ತಿಯಲ್ಲಿ ಶರಣಾಗತಿ ಹೊಂದುವುದು. ಈ ಜಗತ್ತಿನಲ್ಲಿ ಕೆಲವೇ ಜನರ ಹೊರತು ಮತ್ತೆಲ್ಲರಿಗೂ ಪ್ರಾರ್ಥನೆಯ ನಿಜವಾದ ಅರ್ಥವೇ ತಿಳಿದಿಲ್ಲ ಎನ್ನಬಹುದು.
ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಪ್ರಾರ್ಥನೆಯ ಬಗ್ಗೆ ತಮ್ಮ ಬಳಿ ಬಂದ ಭಕ್ತರಿಗೆ ಏನು ಹೇಳುತ್ತಿದ್ದರು ಎಂಬುದನ್ನು ತಿಳಿಯೋಣ. ಪರಮಹಂಸರು ದೇವದೇವಿಯರ ನಾಮ ಸಂಕೀರ್ತನೆ ಮಾಡುತ್ತಿದ್ದಾರೆ. ಭಕ್ತರೆಲ್ಲರೂ ತಾವು ಕುಳಿತಲ್ಲಿಯೇ ಕುಳಿತು ಅದನ್ನು ಆಲಿಸುತ್ತಿದ್ದಾರೆ. ರಾಮಕೃಷ್ಣರು ನಾಮ ಸಂಕೀರ್ತನೆಯನ್ನು ಮುಗಿಸಿ ಪ್ರಾರ್ಥನೆ ಮಾಡಲಾರಂಭಿಸಿದ್ದಾರೆ.
ಅದು ಸಾಕ್ಷಾತ್ ಭಗವಂತನೇ ಯಾವ ರೀತಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಪರಮಹಂಸರ ಮೂಲಕ ತೋರಿಸುತ್ತಿರುವನೋ ಏನೋ ಎಂಬಂತಿತ್ತು. ಪರಮಹಂಸರು ಪ್ರಾರ್ಥಿಸುತ್ತಿದ್ದಾರೆ: ‘ಹೇ ತಾಯೆ, ನಾನು ನಿನ್ನಲ್ಲಿ ಶರಣಾಗತನಾಗಿದ್ದೇನೆ, ನಾನು ನಿನ್ನಲ್ಲಿ ಶರಣಾಗತನಾಗಿದ್ದೇನೆ, ನನಗೆ ಸುಖ ಬೇಡ, ತಾಯೆ; ಲೋಕ ಮಾನ್ಯತೆ ಬೇಡ ತಾಯೆ; ಅಣಿಮಾದಿ ಅಷ್ಟಸಿದ್ದಿಗಳು ಬೇಡ; ಕೇವಲ ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿ ಉಂಟಾಗುವಂತೆ ಕೃಪೆ ಮಾಡು.’ ಇದು ನಿಜವಾದ, ಶುದ್ಧವಾದ ಪ್ರಾರ್ಥನೆ. ನೂರಾರು, ಸಾವಿರಾರು ಪ್ರಾಪಂಚಿಕ ಪ್ರಾರ್ಥನೆಗಳೊಂದಿಗೆ ಲಕ್ಷಾಂತರ ಮಂದಿ ದೇವಾಲಯ, ಪುಣ್ಯಕ್ಷೇತ್ರ, ದಿವ್ಯ ಧಾಮಗಳಿಗೆ ಯಾತ್ರೆ ನಡೆಸಿ ಪ್ರಾರ್ಥಿಸಿಕೊಳ್ಳುತ್ತಾರೆ. ಭಗವಂತಾ ಈ ಕೆಲಸ ಮಾಡಿಸಿಕೊಡು, ಅದಕ್ಕೆ ನೂರೊಂದು ತೆಂಗಿನಕಾಯಿ, ಇನ್ನೂ ಸ್ವಲ್ಪ ಹೆಚ್ಚಿನ ಕೆಲಸವಾದಲ್ಲಿ ಸಾವಿರದೊಂದು ತೆಂಗಿನಕಾಯಿ, ಹೀಗೆ ಭಗವಂತನನ್ನು ಒಬ್ಬ ವ್ಯಾಪಾರಿ ಎಂಬಂತೆ ಭಾವಿಸುತ್ತಾರೆ. ಆದರೆ ಭಗವತ್ಪ್ರೀತಿಯಿಂದ ಸ್ವಾಮಿ ನೀನು ದೈವ, ನಾನು ಮನುಜ, ನಿನ್ನಿಚ್ಛೆಯಂತೆ ನಡೆಯಲಿ ಎಂದು ಸಂಪೂರ್ಣ ಶರಣಾಗಿ ಭಗವಂತನನ್ನು ಭಜಿಸುವುದು ವಿರಳ.
ದೇವಾಲಯವೆಂದರೆ ಭಗವಂತನ ಆವಾಸಸ್ಥಾನ. ಕೇವಲ ಸ್ವಾರ್ಥ ಮನೋಭಿಲಾಷೆಯನ್ನು ಈಡೇರಿಸಲು ಅವು ಇವೆ ಎಂಬ ತಪ್ಪು ಕಲ್ಪನೆ ಮನುಜರಿಗೆ ಒದಗಿ ಬಂದಿದೆ. ಭಕ್ತಿಯ ಪಂಥದಲ್ಲಿ ನಾವು ಕಾಣುವುದು ಭಗವಂತನಲ್ಲಿ ನಂಬಿಕೆ. ನಂಬಿಕೆ ಹಾಗೂ ಆ ದಿವ್ಯ ಶಕ್ತಿಯ ಇರುವಿಕೆಯ ಅರಿವಿಲ್ಲದ ಹೊರತು ಪ್ರಾರ್ಥನೆಗೆ ಅರ್ಥ ಇರುವುದಿಲ್ಲ. ರಾಮಕೃಷ್ಣರು ಮತ್ತೊಂದು ಸತ್ಸಂಗದಲ್ಲಿ ಪ್ರಾರ್ಥನೆಯ ಅರಿವನ್ನು ಹೀಗೆ ಮೂಡಿಸುತ್ತಾರೆ: ‘ವ್ಯಾಕುಲಚಿತ್ತದಿಂದ ಆತನನ್ನು ಪ್ರಾರ್ಥಿಸು, ವಿವೇಕಕ್ಕಾಗಿ ಆತನಿಗೆ ಪ್ರಾರ್ಥನೆ ಮಾಡಿಕೋ, ಭಗವಂತನೊಬ್ಬನೆ ಸತ್ಯ, ಉಳಿದಿದ್ದೆಲ್ಲ ಅನಿತ್ಯ, ವಿವೇಕ ಎಂಬುದು ಇದೇನೆ. ಭಗವಂತನಲ್ಲಿ ಸದಾ ಗದ್ಗದಿತ ಕಂಠದಿಂದ ಈ ಪ್ರಾಪಂಚಿಕತೆಯು ಕ್ರಮೇಣವಾಗಿ ನಾಶವಾಗಿ ಭಗವದ್ ಚಿಂತನೆ, ಭಗವತ್ಪ್ರೇಮ, ಭಕ್ತಿ, ಶ್ರದ್ಧೆ ಸದಾ ಒದಗುವಂತಾಗಲಿ ಎಂದು ಪ್ರಾರ್ಥಿಸು.’ ಇದೇ ನಿಜವಾದ ಅರ್ಥದಲ್ಲಿ ಪ್ರಾರ್ಥನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
