ಭಾರತವು ಬಹಳ ವಿಶಾಲವಾದ ದೇಶ. ಬಹಳ ದೀರ್ಘವಾದ ಇತಿಹಾಸವನ್ನು ಹೊಂದಿರುವ ದೇಶ. ಪ್ರಾಯಶಃ ಜಗತ್ತಿನಲ್ಲೇ ಪ್ರಾಚೀನತಮವಾದದ್ದೂ ಹೌದೆನ್ನಬಹುದೇನೋ? ಅನೇಕಾನೇಕ ರಾಜರುಗಳು ಆಳಿಹೋಗಿರುವ ದೇಶ. ಆದ್ದರಿಂದ, ಒಂದು ದೇಶವು ಚೆನ್ನಾಗಿರಬೇಕೆಂದರೆ ಆಳ್ವಿಕೆ ಹೇಗಿರಬೇಕು? ರಾಷ್ಟ್ರನಾಯಕನ ಪಾತ್ರವೆಂತಹುದು? – ಮುಂತಾದ ಪ್ರಶ್ನೆಗಳಿಗೆ ಉತ್ತರಗಳಿಗಾಗಿ ಒಂದಿಷ್ಟು ಮಥನಗಳು ನಡೆದೇ ಇವೆ.
ದೇಶದಲ್ಲೀಗ ಪರಮಸಂಭ್ರಮದಿಂದ ಪ್ರಧಾನಿಗಳ ಕಣ್ಗಾವಲಿನಲ್ಲಿ ರಾಮೋತ್ಸವ ನಡೆದಿರುವ ಸಂದರ್ಭದಲ್ಲಿ, ಈ ಬಗ್ಗೆ ರಾಮಾಯಣವೇನಾದರೂ ಹೇಳಿದೆಯೇ? – ಎಂಬ ಜಿಜ್ಞಾಸೆಯು ಯುಕ್ತವೇ ಸರಿ. ಹೌದು, ಈ ನಿರೀಕ್ಷೆ ಸರಿಯಾದದ್ದೇ. ರಾಮಾವತಾರವಾದ ಮೇಲೆ ಆದ ಕೃಷ್ಣಾವತಾರವನ್ನು ಚಿತ್ರಿಸುವ ಮಹಾಭಾರತದಲ್ಲೂ ರಾಜಧರ್ಮವನ್ನು ಕುರಿತಾಗಿ ಸುದೀರ್ಘ ವಾದ ವಿಮರ್ಶೆಗಳೇ ಬಂದಿರುವುವಾದರೂ, ರಾಮಾಯಣದಲ್ಲಿ ಆ ಬಗ್ಗೆ ಉದ್ಬೋಧಕವಾದ ಮಾತುಗಳು ಕಡಿಮೆಯೇನಿಲ್ಲ. ಅವಲ್ಲೊಂದು ಕಿರುನುಡಿಯನ್ನು ರುಚಿನೋಡಲೆಂದು ಇಲ್ಲಿ ಕಿಂಚಿತ್ತಾಗಿ ಪರಿಶೀಲಿಸಿದೆ.
ರಾಜನು ದೇಶದ ನಾಯಕನಲ್ಲವೇ? ‘ನಾಯಕ’ ಎಂಬ ಪದವು ಏನನ್ನು ಹೇಳುತ್ತದೆ? – ಎಂಬ ಬಗ್ಗೆ ಕೌತುಕ ಸಹಜವೇ. ನಾಯಕ ಎಂಬುದು ಸಂಸ್ಕೃತಪದ. ಆದ್ದರಿಂದ ಆ ಪದದ ವ್ಯುತ್ಪತ್ತಿ (ಹುಟ್ಟು) ಏನು ಎಂಬುದು ಪರಿಶೀಲನೀಯ. ಏಕೆಂದರೆ, ಎಷ್ಟೋ ಪದಗಳ ಹುಟ್ಟೇ ಅವುಗಳ ಗುಟ್ಟನ್ನು ಹೇಳುತ್ತವೆ. ಸಂಸ್ಕೃತದಲ್ಲಂತೂ ಇದು ಹೆಚ್ಚು ಸತ್ಯವೆಂದರೆ ತಪ್ಪಾಗಲಾರದು. ಆ ಪದವೊಂದೇ ಅಲ್ಲ; ತತ್ಸಂಬಂಧಿಯಾದ ಇನ್ನಿತರಪದಗಳೂ ಅರ್ಥಜ್ಞಾನಕ್ಕೆ ಸಹಕಾರಿ.
ನಾಯಕನೆಂಬ ಪದವು ಬಂದಿರುವುದು ನೀ ಎಂಬ ಧಾತುವಿನಿಂದ. ನಯತಿ ಎಂದರೆ ಒಯ್ಯುತ್ತಾನೆ. ನಯನ ಎಂದರೆ ಕಣ್ಣು ಎಂಬ ಅರ್ಥ ಎಲ್ಲರಿಗೂ ಗೊತ್ತಿರುವುದೇ. ನೇತ್ರ ಎಂಬುದಕ್ಕೂ ಅದೇ ಅರ್ಥ; ಹಾಗೆಯೇ, ನೇತಾ ಎಂದರೂ ನಾಯಕನೇ ತಾನೆ?
ನಮ್ಮನ್ನು ಸ್ಥಳದಿಂದ ಸ್ಥಳಕ್ಕೆ ಒಯ್ಯುವುದು ನಮ್ಮ ಕಾಲು, ಅಲ್ಲವೇ? ಆದರೆ ವಾಸ್ತವವಾಗಿ, ನಮ್ಮನ್ನು ನಿಜವಾಗಿ ಒಯ್ಯುವುದು ಕಣ್ಣೇ. ಕಾಲು ಬರೀ ನಡೆಯುತ್ತದೆ ಕಣ್ಣು ಹೇಳಿದಲ್ಲಿಗೆ. ಕಣ್ಣಿಲ್ಲದವ ಕಾಲು ಗಟ್ಟಿಯಾಗಿದೆಯೆಂದು ರಭಸದಿಂದ ನಡೆದರೆ ಏನಾದೀತು? ಎಲ್ಲೋ ಡಿಕ್ಕಿಯೋ, ಹಳ್ಳಕ್ಕೆ ಬೀಳುವುದೋ, ಕಟ್ಟಿಟ್ಟದ್ದೇ. ಹೀಗಾಗಿ, ಕಣ್ಣೇ ನಮ್ಮನ್ನು ಒಯ್ಯುವುದು, ಬರೀ ಕಾಲಲ್ಲ.
ನಾಯಕನೆಂದರೂ ಹಾಗೆಯೇ:ಜನರಿಗೆ ಮಾರ್ಗದರ್ಶನ ನೀಡಿ ನಡೆಸುವ ಮುಂದಾಳು. ಹಾಗಾದರೆ ಯಾರು ನಿಜವಾದ ನಾಯಕ? ಯಾರು ನಮ್ಮನ್ನು ಜೀವನಲಕ್ಷ್ಯದತ್ತ ಒಯ್ಯುವನೋ ಆತನೇ. ಯೋಗ್ಯರಾಜನಿಗಿರುವ ಈ ಸಾಮರ್ಥ್ಯದಿಂದಾಗಿ ಆತನನ್ನು ಮನುಷ್ಯರ ಪ್ರಭು, ನರರ ಇಂದ್ರ – ಎಂದು ಕರೆಯುವುದೂ ಉಂಟು. ನರೇಂದ್ರನೆಂದರೆ ರಾಜನೇ. ರಾಮಾಯಣವೂ ಹಲವೆಡೆ ಅದೇ ಪದವನ್ನೇ ಬಳಸಿದೆ. ಶರೀರಕ್ಕೆ ಕಣ್ಣು ಹೇಗೋ – ಯಥಾ ದೃಷ್ಟಿಃ ಶರೀರಸ್ಯ – ರಾಷ್ಟ್ರಕ್ಕೆ ನರೇಂದ್ರನು ಹಾಗೆ (ತಥಾ ನರೇಂದ್ರೋ ರಾಷ್ಟ್ರಸ್ಯ) ಎನ್ನುತ್ತದೆ ವಾಲ್ಮೀಕಿ ಕೃತಿ.
ಎಲ್ಲಿ? ದಶರಥನು ಮೃತನಾದಾಗ, ಭರತನಿನ್ನೂ ಆಗಮಿಸಿಲ್ಲವಾದಾಗ; ಆಗ ದಶರಥನ ಮಂತ್ರಿಗಳು ವಸಿಷ್ಠರಿಗೆ ಜ್ಞಾಪಿಸುತ್ತಾರೆ: ರಾಜನಿಲ್ಲದಿದ್ದರೆ ಪ್ರಜೆಗಳು ದಿಕ್ಕೆಡುತ್ತಾರೆ, ಬಗೆಬಗೆಯ ಏರುಪೇರುಗಳು ಅದರಿಂದುಂಟಾಗುತ್ತವೆ – ಎಂಬುದನ್ನವರಿಗೆ ಜ್ಞಾಪಿಸುವಾಗಿನ ಮಾತಿದು.ಜೀವನದಲ್ಲಿ ಮೊದಲಾಗಬೇಕಾದದ್ದು, ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು? – ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದು. ಆಮೇಲಾಗಬೇಕಾದದ್ದೆಂದರೆ, ಒಳ್ಳೆಯದನ್ನೇ ಸಾಧಿಸುವ ಪರಿಯನ್ನರಿತು ಆಚರಿಸುವ ಬಿಗಿಯನ್ನು ಸಂಪಾದಿಸುವುದು. ಮೊದಲನೆಯದನ್ನು ಸತ್ಯವೆಂದೂ ಎರಡನೆಯದನ್ನು ಧರ್ಮವೆಂದೂ ಹೇಳಲಾಗುವುದು. ಹೀಗಾಗಿ, ಸತ್ಯ-ಧರ್ಮಗಳೇ ಜನರಿಗೆ ಸುಖ-ನೆಮ್ಮದಿಗಳನ್ನು ಉಂಟುಮಾಡತಕ್ಕವು.
ಅಲ್ಲಿಗೆ,ರಾಜನ ಕರ್ತವ್ಯವೆಂದರೆ ಎರಡು:ಸತ್ಯವನ್ನರಿಯಲು ತಾನು ಶ್ರಮಿಸುವುದು; ಜನತೆಗೆ ಧರ್ವಚರಣೆಗೆ ಅನುವುಮಾಡಿಕೊಡುವುದು. ಸರಿಯಾಗಿ ನೋಡಿ ಗುರಿಯತ್ತ ನಡೆಸು ಎನ್ನುವೀ ಕೆಲಸವನ್ನು ತಾನೆ ಶರೀರಕ್ಕೆ ಕಣ್ಣು ಮಾಡುವುದು? ಶರೀರದ ಭಾಗವೇ ತಾನಾಗಿದ್ದೂ, ಶರೀರವನ್ನು ನಿಷ್ಕಂಟಕವಾದ ಹಾದಿಯಲ್ಲಿ ಒಯ್ದು ಗಮ್ಯವನ್ನು ಮುಟ್ಟಿಸುವುದೇ ಅದು. ಅಂತೆಯೇ ಧರ್ಮಕಂಟಕರನ್ನು ಇಲ್ಲವಾಗಿಸಿ, ಶ್ರೇಷ್ಠಲಕ್ಷ್ಯದತ್ತ ರಾಷ್ಟ್ರವನ್ನು ಒಯ್ಯುವವನೇ ಯೋಗ್ಯ ನರೇಂದ್ರ! ಯಾವನಲ್ಲಿ ಧರ್ಮವು ವಿರಾಜಿಸುವುದೋ ಆತನೇ ನಿಜವಾದ ರಾಜ – ಎಂಬುದಾಗಿ ಶ್ರೀರಂಗಮಹಾಗುರುಗಳು ನಿರೂಪಿಸಿದ್ದಾರೆ.
ಮೈಗೆ ಕಣ್ಣೆಂತೋ ರಾಷ್ಟ್ರಕ್ಕೆ ನರೇಂದ್ರನಂತು! ಎಂಬ ವಾಲ್ಮೀಕಿಗಳ ಮಾತು ಎಷ್ಟು ಮಾರ್ವಿುಕವಲ್ಲವೇ?
(ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)

ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ; ವಿನ್ನರ್​ ಕಾರ್ತಿಕ್ ಮಹೇಶ್​​ ಬೆಂಕಿ ರಿಯಾಕ್ಷನ್ ಕೇಳಿ​​?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − one =
Remember me
