ಬೆಂಗಳೂರು:ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 2004ರಿಂದಲೂ ಸಮವಸ್ತ್ರವಿದ್ದು, ಇಷ್ಟು ದಿನ ಇಲ್ಲದ ಸಮಸ್ಯೆ ಈಗ ಏಕಾಏಕಿ ಉದ್ಭವಿಸಿದೆ. ಇದಕ್ಕೆಲ್ಲ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್​ಐ) ಎಂಬ ಸಂಘಟನೆಯೇ ಕಾರಣ ಎಂದು ಹಿರಿಯ ವಕೀಲ ಎಸ್.ಎಸ್. ನಾಗಾನಂದ್ ಹೈಕೋರ್ಟ್​ಗೆ ತಿಳಿಸಿದರು.
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಫೆ.5ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೀಠದಲ್ಲಿ ಬುಧವಾರವೂ ಮುಂದುವರಿಯಿತು.
ಉಡುಪಿ ಪದವಿ ಪೂರ್ವ ಕಾಲೇಜಿನ ಪರ ವಾದ ಮಂಡಿಸಿದ ನಾಗಾನಂದ್, 2021ರ ಡಿ.30ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್​ಐ) ಎಂಬ ಸಂಘಟನೆ ಕಾಲೇಜು ಅಧಿಕಾರಿಗಳನ್ನು ಭೇಟಿ ಮಾಡಿ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿತ್ತು. ಇದಕ್ಕೆ ನಿರಾಕರಿಸಿದಾಗ ಇಷ್ಟೆಲ್ಲ ಗದ್ದಲಗಳು ಸೃಷ್ಟಿಯಾಗಿವೆ. ಕಾಲೇಜಿಗೆ ಸಂಬಂಧವೇ ಪಡದ ಸಂಘಟನೆಯೊಂದು ಇಷ್ಟೆಲ್ಲ ಗದ್ದಲಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಕೋರ್ಟ್​ಗೆ ಸಿಎಫ್​ಐ ಅಚ್ಚರಿ!:ಸಿಎಫ್​ಐ ಎಂದರೇನು ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದಕ್ಕೆ ನಾಗಾನಂದ್, ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ಹಿಜಾಬ್​ನ ಪರವಾಗಿರುವ ವಾದವನ್ನು ಮುನ್ನಡೆಸುತ್ತಿದೆ. ಈ ಸಂಘಟನೆ ಯಾವುದೇ ಯೂನಿಯನ್ ಮಾನ್ಯತೆ ಪಡೆದಿಲ್ಲ ಎಂದರು. ಈ ಸಂಘಟನೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಅಡ್ವೊಕೇಟ್ ಜನರಲ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕುತ್ತರಿಸಿದ ಎಜಿ, ಸರ್ಕಾರದ ಬಳಿ ಕೆಲ ಮಾಹಿತಿ ಇದೆ. ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಆಗ ನ್ಯಾಯಪೀಠ, ಇದ್ದಕ್ಕಿದ್ದಂತೆ ಈ ಸಂಘಟನೆ ಎಲ್ಲಿಂದ ಉದ್ಭವಿಸಿತು ಎಂದು ಅಚ್ಚರಿ ವ್ಯಕ್ತಪಡಿಸಿತು. ಅರ್ಜಿದಾರರೊಬ್ಬರ ಪರ ವಕೀಲರು, ಈ ಪ್ರಕರಣದಲ್ಲಿ ಕೇಸರಿ ಶಾಲುಗಳನ್ನು ಹಂಚಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಂದು ಸಂಘಟನೆ ಬಗ್ಗೆ ವರದಿ ಕೇಳಿದರೆ, ಮತ್ತೊಂದು ಸಂಘಟನೆಯ ಬಗ್ಗೆಯೂ ಕೇಳಬೇಕಾಗುತ್ತದೆ ಎಂದರು. ಅದನ್ನು ಪರಿಶೀಲಿಸುವುದಾಗಿ ಸಿಜೆ ಹೇಳಿದರು.
ಶಿಕ್ಷಕರ ವಿರುದ್ಧ ಸುಳ್ಳು ಆರೋಪ:ಶಿಕ್ಷಕರು ನಿಂದಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಅರ್ಜಿದಾರ ವಿದ್ಯಾರ್ಥಿನಿಯರು, ಈ ಆರೋಪಗಳಿಗೆ ಯಾವುದೇ ಸಮರ್ಥನೆ ನೀಡಿಲ್ಲ. ಗೈರು ಹಾಜರಿ ಹಾಕುವುದಾಗಿ ಬೆದರಿಸಿದ್ದಾರೆಂದು ಹೇಳಲಾಗಿದೆ. ತರಗತಿಗಳಿಗೆ ಹಾಜರಾಗದಿದ್ದರೆ ಗೈರು ಹಾಜರಿ ಹಾಕದೆ ಮತ್ತೇನು ಮಾಡಬೇಕು? ಇದರಲ್ಲಿ ಬೆದರಿಕೆಯ ಮಾತೆಲ್ಲಿದೆ ಎಂದ ಎಸ್.ಎಸ್. ನಾಗಾನಂದ್, 2021ರ ಸೆಪ್ಟೆಂಬರ್​ನಿಂದಲೇ ಶಿಕ್ಷಕರು ತರಗತಿಗಳಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ, ಹಿಜಾಬ್ ಧರಸಲು ಅನುಮತಿ ಕೋರಿ ಕಾಲೇಜಿಗೆ ಡಿಸೆಂಬರ್​ನಲ್ಲಿ 2 ಮನವಿ ಸಲ್ಲಿಸಿರುವ ಅರ್ಜಿದಾರರು ಈ ಯಾವ ಆರೋಪಗಳನ್ನೂ ಮಾಡಿಲ್ಲ. ಮೂರು ತಿಂಗಳು ಸುಮ್ಮನಿದ್ದು, ಆರು ತಿಂಗಳ ಬಳಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಜಾತ್ಯತೀತ ದೃಷ್ಟಿಕೋನವಿರಬೇಕು:ಸಿಡಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ಸಂವಿಧಾನದ ಪರಿಚ್ಛೇದ 28ರ ಅನುಸಾರ ಸರ್ಕಾರದ ಅನುದಾನ ಪಡೆಯುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿಯು ತನ್ನ ಧಾರ್ವಿುಕ ಉಡುಗೆ ಧರಿಸಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲ. ಅದು ಅತ್ಯಗತ್ಯ ಧಾರ್ವಿುಕ ಆಚರಣೆಯಾಗಿದ್ದರೂ ಸಾರ್ವಜನಿಕ ಸಂಸ್ಥೆಯಲ್ಲಿ ಅದನ್ನು ಬಿಡಬೇಕು. ಶಾಲೆಯ ಆವರಣದಲ್ಲಿ ಜಾತ್ಯತೀತ ದೃಷ್ಟಿಕೋನವನ್ನು ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶ್ರೀಮಂತ-ಬಡವ, ಹಿಂದು-ಮುಸ್ಲಿಂ ಎಂಬ ತಾರತಮ್ಯವನ್ನು ಹೋಗಲಾಡಿಸಲು ಸಮವಸ್ತ್ರ ಧರಿಸಬೇಕು. ಹಿಜಾಬ್ ಅತ್ಯಗತ್ಯ ಧಾರ್ವಿುಕ ಆಚರಣೆ ಎಂದು ಭಾವಿಸಿದರೂ ಶಾಲೆಯೊಳಗೆ ಯಾವುದೇ ಧರ್ಮವನ್ನು ಅನುಮತಿಸಲಾಗುವುದಿಲ್ಲ. ಯಾವುದೇ ಧಾರ್ವಿುಕ ಚಿಹ್ನೆಗಳು ಶಿಕ್ಷಣ ಸಂಸ್ಥೆಗಳ ಆವರಣ ಪ್ರವೇಶಿಸಬಾರದು. ಹಿಜಾಬ್ ಧರಿಸದ ಮುಸ್ಲಿಂ ಸಮುದಾಯದ ಮಕ್ಕಳು ಇಸ್ಲಾಂ ಧರ್ಮವನ್ನು ಪಾಲಿಸುತ್ತಿಲ್ಲ ಎಂದರ್ಥವೇ ಎಂದು ಪ್ರಶ್ನಿಸಿದರು.
ಎಲ್ಲ ಕಾಲೇಜುಗಳಿಗೂ ಮಧ್ಯಂತರ ಆದೇಶ ಅನ್ವಯ:ವಿದ್ಯಾರ್ಥಿಗಳು ತರಗತಿಗಳಲ್ಲಿ ಕೇಸರಿ ಶಾಲು (ಭಗವಾ), ಹಿಜಾಬ್ ಅಥವಾ ಯಾವುದೇ ಧಾರ್ವಿುಕ ಬಾವುಟಗಳೊಂದಿಗೆ ತರಗತಿಗಳಿಗೆ ಪ್ರವೇಶಿಸುವಂತಿಲ್ಲ ಎಂದು ಈ ಹಿಂದೆ ನೀಡಿರುವ ಮಧ್ಯಂತರ ಆದೇಶವು ಸಮವಸ್ತ್ರ ನಿಯಮ ಜಾರಿಯಲ್ಲಿರುವ ಎಲ್ಲ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೂ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.
ದಿನದ ವಿಚಾರಣೆ ಮುಕ್ತಾಯಗೊಳ್ಳುವ ಹಂತದಲ್ಲಿ ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ತಾಹಿರ್, ಹೈಕೋರ್ಟ್​ನ ಮಧ್ಯಂತರ ಆದೇಶದ ನೆಪ ಮಾಡಿಕೊಂಡು ಪದವಿ ಕಾಲೇಜುಗಳೂ ಸಹ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಒಳಗೆ ಬಿಡುತ್ತಿಲ್ಲ. ಇದರಿಂದ ಶೈಕ್ಷಣಿಕವಾಗಿ ತೊಂದರೆಯಾಗುತ್ತಿದೆ. ಆದ್ದರಿಂದ, ಮಧ್ಯಂತರ ಆದೇಶದ ಕುರಿತು ಸ್ಪಷ್ಟನೆ ನೀಡಬೇಕು ಎಂದು ಕೋರಿದರು.
ಅದಕ್ಕೆ ಸಿಜೆ ಪ್ರತಿಕ್ರಿಯಿಸಿ, ನಮ್ಮ ಆದೇಶ ಅತ್ಯಂತ ಸ್ಪಷ್ಟವಾಗಿದೆ, ಎಲ್ಲೆಲ್ಲಿ ಸಮವಸ್ತ್ರ ಜಾರಿಯಲ್ಲಿದೆಯೋ ಅಲ್ಲಿ ಮಧ್ಯಂತರ ಆದೇಶ ಅನ್ವಯವಾಗಲಿದೆ ಎಂದರು. ವಕೀಲ ತಾಹೀರ್, ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ, ವಿದ್ಯಾರ್ಥಿನಿಯರನ್ನು ಬಲವಂತವಾಗಿ ಹೊರದಬ್ಬಲಾಗುತ್ತಿದೆ. ಅದರಲ್ಲೂ ಸಮವಸ್ತ್ರ ಇಲ್ಲದ ಪದವಿ ಕಾಲೇಜುಗಳಲ್ಲೂ ಹಿಜಾಬ್​ಗೆ ಅವಕಾಶ ನೀಡುತ್ತಿಲ್ಲ ಎಂದರು. ಆಗ ಮುಖ್ಯ ನ್ಯಾಯಮೂರ್ತಿಗಳು, ಪದವಿ ಕಾಲೇಜಿರಲಿ, ಪದವಿಪೂರ್ವ ಕಾಲೇಜಿರಲಿ ಎಲ್ಲೆಲ್ಲಿ ಸಮವಸ್ತ್ರ ನಿಗದಿಯಾಗಿದೆಯೋ ಅಲ್ಲೆಲ್ಲ ಧಾರ್ವಿುಕ ಉಡುಗೆಗಳನ್ನು ಧರಿಸುವಂತಿಲ್ಲ. ಇದನ್ನು ಮತ್ತೆ ಕೋರ್ಟ್ ಸ್ಪಷ್ಟಪಡಿಸುತ್ತಿದೆ. ನ್ಯಾಯಾಲಯದಲ್ಲಿ ಅರ್ಜಿಗಳು ಇತ್ಯರ್ಥವಾಗುವವರೆಗೆ ಮಧ್ಯಂತರ ಆದೇಶ ಪಾಲನೆ ಮಾಡಬೇಕು ಎಂದರು.
ಆಧಾರ್ ಕಾರ್ಡ್​ನಲ್ಲಿ ಹಿಜಾಬ್ ಇಲ್ಲ:ಅರ್ಜಿದಾರ ವಿದ್ಯಾರ್ಥಿನಿಯರ ಆಧಾರ್ ಕಾರ್ಡ್​ಗಳನ್ನು ನ್ಯಾಯಪೀಠಕ್ಕೆ ತೋರಿಸಿದ ಹಿರಿಯ ವಕೀಲ ಎಸ್.ಎಸ್. ನಾಗಾನಂದ್, ಆಧಾರ್ ಕಾರ್ಡ್​ಗಳ ಫೋಟೋಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಯಾವಾಗಲೂ ಹಿಜಾಬ್ ಧರಿಸುತ್ತೇವೆ ಎಂಬ ಅರ್ಜಿದಾರರ ಹೇಳಿಕೆ ಸತ್ಯವಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ತಾಯಿಯ ಪ್ರಮಾಣಪತ್ರಕ್ಕೆ ಆಕ್ಷೇಪ:ಅರ್ಜಿದಾರ ವಿದ್ಯಾರ್ಥಿನಿಯೊಬ್ಬಳಿಗೆ 2021ರಲ್ಲೇ 18 ವರ್ಷ ತುಂಬಿದೆ. ಹೀಗಿದ್ದರೂ, ಆಕೆಯ ಅರ್ಜಿಯಲ್ಲಿ ತಾಯಿಯ ಮುಖಾಂತರ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಪ್ರೌಢಾವಸ್ಥೆ ತಲುಪಿರುವ ಮಗಳು ಯಾವ ಕಾರಣಕ್ಕೆ ತಾಯಿಯ ಮೂಲಕ ಪ್ರಮಾಣಪತ್ರ ಸಲ್ಲಿಸಿದ್ದಾಳೆಂದು ಸ್ಪಷ್ಟಪಡಿಸಿಲ್ಲ ಎಂದು ನಾಗಾನಂದ್ ಆಕ್ಷೇಪಿಸಿದರು.
ಲಿಖಿತವಾಗಿ ಸಲ್ಲಿಸಿ:ಪ್ರಕರಣದ ವಿಚಾರಣೆ ವೇಳೆ, ಮಧ್ಯಂತರ ಅರ್ಜಿದಾರರ ಪರ ವಕೀಲರೊಬ್ಬರು ತಮ್ಮ ವಾದ ಮಂಡನೆಗೂ ಅವಕಾಶ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಾಕಷ್ಟು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿವೆ, ಪ್ರತಿಯೊಬ್ಬರಿಗೂ ವಾದ ಮಂಡನೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ನಿಮ್ಮ ವಾದ ಏನೇ ಇದ್ದರೂ ಲಿಖಿತ ಹೇಳಿಕೆಯಲ್ಲಿ ಸಲ್ಲಿಸಿ, ಕೋರ್ಟ್ ಅದನ್ನು ಪರಿ ಗಣಿಸಲಿದೆ ಎಂದು ತಿಳಿಸಿತು.
ಶಾಲೆಗೆ ಹೋಗು ಎಂದಿದ್ದಕ್ಕೆ ಸತ್ತೇ ಹೋದ್ಲು ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 14 =
Remember me
