ಹುಬ್ಬಳ್ಳಿ:ನಕಲಿ ಅಂಕಪಟ್ಟಿ ಜಾಲದ ಕುಖ್ಯಾತ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಆತನ ಬಂಧನಕ್ಕೆ ಕಾರಣವಾಗಿದ್ದ ವ್ಯಕ್ತಿಯ ವಿರುದ್ಧವೇ ಎಪಿಎಂಸಿ- ನವನಗರ ಠಾಣೆ ಪೊಲೀಸರು ಎರಡು ವರ್ಷಗಳ ನಂತರ ದೂರು ದಾಖಲಿಸಿ ಅವನನ್ನೇ ಆರೋಪಿಯನ್ನಾಗಿಸಿದ್ದಾರೆ !
ಈ ಹೊಸ ತಂತ್ರ, ಪೊಲೀಸರ ಪಾತ್ರದ ಕುರಿತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಂಪ್ಯೂಟರ್ ಸೆಂಟರ್ ನಡೆಸುವ ನವನಗರದ ರಮೇಶ ಯಲ್ಲಪ್ಪ ಅಸುಂಡಿ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಇದೇ ವ್ಯಕ್ತಿ ಈ ಹಿಂದೆ ನಕಲಿ ಅಂಕಪಟ್ಟಿ ಜಾಲ ಭೇದಿಸಲು ಸಹಕರಿಸಿದ್ದಕ್ಕೆ ನವನಗರ ಠಾಣೆ ಪೊಲೀಸರು ಶ್ಲಾಘಿಸಿದ್ದರು.
ಘಟನೆ ಹಿನ್ನೆಲೆ: ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಸುರೇಂದ್ರಸಿಂಗ್ ಸೋಳಂಕಿ ಎಂಬಾತ 10ರಿಂದ 30 ಸಾವಿರ ರೂ. ಪಡೆದು ಪರೀಕ್ಷೆಯನ್ನೂ ಬರೆಸದೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ, ಉತ್ತರ ಪ್ರದೇಶದ ಬುಂದೇಲಖಂಡ ವಿವಿ, ಆಗ್ರಾದ ಡಾ.ಬಿ.ಆರ್. ಅಂಬೇಡ್ಕರ್ ವಿವಿ, ಸಿ.ವಿ. ರಾಮನ್ ವಿವಿ ಸೇರಿ ರಾಜ್ಯ ಅಂತಾರಾಜ್ಯ ವಿಶ್ವವಿದ್ಯಾಲಯಗಳ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ.
ನವನಗರದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ ರಮೇಶ ಅಸುಂಡಿ ಅವರನ್ನು 2016ರಲ್ಲಿ ಆನ್​ಲೈನ್ ಮೂಲಕ ಸಂರ್ಪಸಿದ್ದ ಸುರೇಂದ್ರಸಿಂಗ್, ದೇಶದ ಪ್ರಸಿದ್ಧ ವಿವಿಗಳ ಪದವಿ ಪ್ರಮಾಣ ಪತ್ರ ಕೊಡಿಸುವುದಾಗಿ ನಂಬಿಸಿದ್ದ. ನಂತರ ರಮೇಶ ಮೂಲಕ ಹಣ ಪಡೆದು ನಕಲಿ ಅಂಕಪಟ್ಟಿ ಕೊಟ್ಟು ವಂಚಿಸಿದ್ದ. ಆತ ನೀಡುತ್ತಿದ್ದುದು ಅಂಕಪಟ್ಟಿ ನಕಲಿ ಎಂದು ತಿಳಿದ ಕೂಡಲೇ ರಮೇಶ ನವೆಂಬರ್ 28, 2018ರಲ್ಲಿ ಎಪಿಎಂಸಿ- ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಎಪಿಎಂಸಿ- ನವನಗರ ಪೊಲೀಸ್ ಠಾಣೆಯ ಅಂದಿನ ಇನ್ಸ್​ಪೆಕ್ಟರ್ ಎಸ್.ಆರ್. ನಾಯಕ, ರಮೇಶ ಅಸುಂಡಿ ಸಹಾಯದಿಂದ ಉತ್ತರಪ್ರದೇಶಕ್ಕೆ ತೆರಳಿ 2019 ಮಾರ್ಚ್ 1 ರಂದು ಸುರೇಂದ್ರಸಿಂಗ್​ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗಷ್ಟೇ ಆತ ಜಾಮೀನು ಪಡೆದು ಹೊರಬಂದಿದ್ದಾನೆ.
ಈ ಹಿಂದೆ ಸುರೇಂದ್ರಸಿಂಗ್ ಗದಗ ಮೂಲದ ಪ್ರಶಾಂತ ಕೃಷ್ಣಗೌಡ ಪಾಟೀಲ ಅವರಿಂದ 35,000 ರೂ. ಪಡೆದು ನಕಲಿ ಅಂಕಪಟ್ಟಿ ನೀಡಿ ವಂಚಿಸಿರುವ ಕುರಿತು ರಮೇಶ ಅಸುಂಡಿ ರಸೀದಿ ಸಹಿತ 2018 ನವೆಂಬರ್ 28 ರಂದೇ ದೂರಿನಲ್ಲಿ ತಿಳಿಸಿದ್ದರು. ಆದರೆ, 2020 ಮಾರ್ಚ್ 17 ರಂದು ಮತ್ತೆ ಅದೇ ಪ್ರಶಾಂತ ಕೃಷ್ಣಗೌಡ ಪಾಟೀಲ ಹೆಸರಲ್ಲಿ ರಮೇಶ ಅಸುಂಡಿ ವಿರುದ್ಧ ದೂರು ದಾಖಲಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ!
ಸ್ವತಃ ದೂರು ನೀಡಿ, ಅಂಕಪಟ್ಟಿ ನಕಲಿ ಎಂದು ಪತ್ತೆ ಹಚ್ಚಿ, ಉತ್ತರ ಪ್ರದೇಶದ ಸುರೇಂದ್ರಸಿಂಗ್​ನ ಬಂಧನಕ್ಕೆ ಕಾರಣವಾಗಿದ್ದ ರಮೇಶ ಅಸುಂಡಿ ವಿರುದ್ಧ ಎರಡು ವರ್ಷದ ಬಳಿ ಈಗ ದೂರು ದಾಖಲಿಸಿದ್ದು ಏಕೆ? ಈ ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ಬಂದಿರುವ ಸಮಯದಲ್ಲಿ ಏಕೆ ಪ್ರಕರಣ ದಾಖಲಿಸಲಾಗಿದೆ ? ಇದರ ಹಿಂದೆ ಯಾರ ಕೈವಾಡ ಇದೆ ಎಂಬ ಪ್ರಶ್ನೆ ಉದ್ಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ ಇದರ ಹಿಂದೆ ಪೊಲೀಸ್ ಅಧಿಕಾರಿಗಳ ನಡುವಿನ ಈರ್ಷೆ, ಪ್ರತಿಷ್ಠೆಗಳಿವೆ ಎನ್ನಲಾಗಿದೆ. ಈ ಕುರಿತು ಹು-ಧಾ ಪೊಲೀಸ್ ಆಯುಕ್ತರು ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಜರುಗಿಸಬೇಕಿದೆ.
ಹಳೇ ಪ್ರಕರಣದಲ್ಲೇನಿದೆ?:ದೂರ ಶಿಕ್ಷಣದ ಮೂಲಕ ಪ್ರಮುಖ ವಿಶ್ವವಿದ್ಯಾಲಯಗಳಿಂದ ಅಂಕಪಟ್ಟಿ ಕೊಡಿಸುವುದಾಗಿ ತನ್ನಿಂದ ಹಾಗೂ ಇನ್ನೂ ಹಲವು ವಿದ್ಯಾರ್ಥಿಗಳಿಂದ ಹಣ ಪಡೆದು ಖೊಟ್ಟಿ ಅಂಕಪಟ್ಟಿ ನೀಡಿ ವಂಚಿಸಿದ್ದಾನೆ ಎಂದು ರಮೇಶ ಅಸುಂಡಿ 2018 ನವೆಂಬರ್ 28 ರಂದು ಎಪಿಎಂಸಿ- ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಅವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ.
ಹೊಸ ಪ್ರಕರಣದಲ್ಲೇನಿದೆ?:ಉತ್ತರ ಪ್ರದೇಶದ ಬುಂದೇಲಖಂಡ ವಿವಿ ಮೂಲಕ ಅಂಚೆ ಶಿಕ್ಷಣದ ಮೂಲಕ ಬಿ.ಎಡ್ ಪದವಿ ಕೊಡಿಸುವುದಾಗಿ 35,000 ರೂ. ಪಡೆದು ನಕಲಿ ಅಂಕಪಟ್ಟಿ ನೀಡಿ ವಂಚಿಸಿದ್ದಾರೆ ಎಂದು ರಮೇಶ ಅಸುಂಡಿ ವಿರುದ್ಧವೇ ಎಪಿಎಂಸಿ- ನವನಗರ ಠಾಣೆ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗದಗ ಮೂಲದ ಪ್ರಶಾಂತ ಕೃಷ್ಣಗೌಡ ಪಾಟೀಲ ಎಂಬುವರ ಹೆಸರಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ ಬಾಂಬ್ ಸ್ಪೋಟಕ್ಕೆ ನಕ್ಸಲ್ ನಂಟು ಶಂಕೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 2 =
Remember me
