ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ 2004 ರಿಂದ ಸತತವಾಗಿ ಗೆಲ್ಲುತ್ತಿದ್ದಾರೆ. ಮೋದಿ ಸಂಪುಟದಲ್ಲಿ ಒಮ್ಮೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 1996, 1999ರಲ್ಲಿ ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪ ಕ್ಷೇತ್ರ ಪ್ರತಿನಿಧಿಸಿದ್ದರು. ಇತಿಹಾಸ ಅವಲೋಕಿಸಿದರೆ ಕ್ಷೇತ್ರ ಮೂಲತಃ ಕಾಂಗ್ರೆಸ್ ಹಿಡಿತದಲ್ಲಿತ್ತು. ಆ ಪಕ್ಷದ ಚನ್ನಯ್ಯ ಒಡೆಯರ್ 3 ಬಾರಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಅವರಿಗಿಂತ ಮೊದಲು ಟಿ.ವಿ. ಚಂದ್ರಶೇಖರಪ್ಪ, ಕೇಂದ್ರದಲ್ಲಿ ಸಚಿವರಾಗಿದ್ದ ಕೊಂಡಜ್ಜಿ ಬಸಪ್ಪ ಅವರೂ ಆಯ್ಕೆಯಾಗಿದ್ದರು.
ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 2023ರ ಚುನಾವಣೆಯಲ್ಲಿ 6 ಕಾಂಗ್ರೆಸ್ ಪಾಲಾಗಿ, ಬಿಜೆಪಿ ಒಂದರಲ್ಲಿ ಗೆದ್ದಿತ್ತು (ಮತ್ತೊಬ್ಬರು ಪಕ್ಷೇತರ). ಈ ದೃಷ್ಟಿಯಿಂದ ಕಾಂಗ್ರೆಸ್ ನಿರಾಳವಾಗಿದೆ. ಆದರೆ ಈ ಹಿಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು.

ಬಿಜೆಪಿಯಲ್ಲಿ ಬಣ ರಾಜಕಾರಣ:ಜಿಲ್ಲಾ ಬಿಜೆಪಿಯಲ್ಲಿ ಎರಡು ಬಣಗಳಾಗಿವೆ. ಸಂಸದ ಜಿ.ಎಂ.ಸಿದ್ದೇಶ್ವರ ಬೆಂಬಲಿಗರದು ಒಂದು ಗುಂಪಾದರೆ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ. ರವಿಂದ್ರನಾಥ್, ಮಾಜಿ ಶಾಸಕ ಟಿ.ಗುರುಸಿದ್ಧನಗೌಡ ಇತರರದ್ದು ಮತ್ತೊಂದು ಬಣ. ಈ ಬಾರಿ ಸ್ಥಳೀಯರಿಗೇ ಟಿಕೆಟ್ ನೀಡಬೇಕು. ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಬೇಕು ಎಂಬುದು ಸಿದ್ದೇಶ್ವರ ವಿರೋಧಿ ಬಣದವರ ವಾದ. ಇದೇ ವಿಚಾರವಾಗಿ ಬೆಂಗಳೂರಿಗೆ ನಿಯೋಗ ತೆರಳಿದ್ದ ಆ ಬಣದವರು ರಾಜ್ಯದ ವರಿಷ್ಠರ ಮುಂದೆ ಅಹವಾಲು ಸಲ್ಲಿಸಿದ್ದರು.
ಮತ ಲೆಕ್ಕಾಚಾರ
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 1,69,702 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜಿ.ಎಂ.ಸಿದ್ದೇಶ್ವರ 6,52,996 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ.ಮಂಜಪ್ಪ 4,83,294 ಮತ ಪಡೆದು ಪರಾಭವಗೊಂಡಿದ್ದರು. ಅಭ್ಯರ್ಥಿಯಾಗಲು ಎಸ್.ಎಸ್.ಮಲ್ಲಿಕಾರ್ಜುನ್ ಹಿಂದೇಟು ಹಾಕಿದ್ದರಿಂದ ಮಂಜಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
ಯಾರಿಗೆ ಒಲಿಯಲಿದೆ ಕಾಂಗ್ರೆಸ್ ಟಿಕೆಟ್?
ಬಿಜೆಪಿಯಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೇ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಅವರ ಅನುಭವ, ಜನಸಂಪರ್ಕ, ಎದುರಾಳಿಗಳಿಗೆ ಫೈಟ್ ನೀಡಬಲ್ಲ ಸಾಮರ್ಥ್ಯ ಅವರಿಗಿರುವ ಪ್ಲಸ್ ಪಾಯಿಂಟ್. ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಡಾ. ಟಿ.ಜಿ. ರವಿಕುಮಾರ್, ಪರಿಸರ ಇಲಾಖೆಯ ನಿವೃತ್ತ ಅಧಿಕಾರಿ ಕೆ.ಬಿ. ಕೊಟ್ರೇಶ್ ಅವರೂ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್​ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಎಸ್.ಎಸ್. ಕೇರ್ ಟ್ರಸ್ಟ್​ನ ಲೈಫ್ ಟ್ರಸ್ಟಿ ಆಗಿರುವ ಅವರು, ಜಿಲ್ಲಾದ್ಯಂತ ಉಚಿತ ಆರೋಗ್ಯ ಶಿಬಿರಗಳನ್ನು ಸಂಘಟಿಸಿ ಗುರುತಿಸಿಕೊಂಡಿದ್ದಾರೆ. ಆದರೆ ಅವರು ಇದುವರೆಗೆ ಆಕಾಂಕ್ಷಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ಶಾಮನೂರು ಕುಟುಂಬ ಹೊರತುಪಡಿಸಿದರೆ ಇನ್​ಸೈಟ್ಸ್ ಐಎಎಸ್ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಪ್ರಬಲ ಆಕಾಂಕ್ಷಿ. ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸುವ ಮೂಲಕ ಜನಸಂಪರ್ಕದಲ್ಲಿದ್ದಾರೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಶಿವಕುಮಾರ್ ಒಡೆಯರ್ ಅವರ ಹೆಸರುಗಳೂ ಆಕಾಂಕ್ಷಿಗಳ ಪಟ್ಟಿಯಲ್ಲಿವೆ.
ಪ್ರಭಾವ ಬೀರುವ ಅಂಶಗಳು
ಪ್ರಧಾನಿ ಮೋದಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಾಮಬಲ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಿಜೆಪಿಗೆ ಅನುಕೂಲಕರ ಅಂಶಗಳು. ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ವಿಷಯ ನೋಡಿ ಜನರು ಮತ ಹಾಕಿದರೆ, ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರದ ಹಿತ, ನಾಯಕತ್ವ ನೋಡುತ್ತಾರೆ. ಕಾಂಗ್ರೆಸ್​ಗೆ ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆಯಾಗಲಿವೆ. ಜತೆಗೆ ಶಾಮನೂರು ಕುಟುಂಬದ ವರ್ಚಸ್ಸು ಪ್ರಭಾವ ಬೀರಬಲ್ಲದು.
ಸದನದಲ್ಲಿ ಹಾಜರಾತಿ
ಸಂಸದ ಜಿ.ಎಂ.ಸಿದ್ದೇಶ್ವರ ಸಂಸತ್ ಕಲಾಪದಲ್ಲಿ ಶೇ. 69 ಹಾಜರಾತಿ ಹೊಂದಿದ್ದಾರೆ. 329 ಪ್ರಶ್ನೆಗಳನ್ನು ಕೇಳಿದ್ದು 15 ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ.
ಸಂಸದರ ಅನುದಾನದಲ್ಲಿ ನೂರಾರು ಕಾಮಗಾರಿ
ಕೇಂದ್ರ ಸರ್ಕಾರದಿಂದ 17 ಕೋಟಿ ರೂ. ಬಿಡುಗಡೆಯಾಗಿತ್ತು. ಸಂಸದರು 314 ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು (16.89 ಕೋಟಿ ರೂ.) 234 ಪೂರ್ಣಗೊಂಡಿವೆ. 71 ಕಾಮಗಾರಿಗಳು ಪ್ರಗತಿಯಲ್ಲಿವೆ. 15ಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಬೇಕಾಗಿದೆ. ದಾವಣಗೆರೆಯಲ್ಲಿ 1072 ಕೋಟಿ ರೂ.ಗಳ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಯೋಜನೆ ಬರಲು ನಾವು ಕಾರಣ ಎಂಬುದು ಕಾಂಗ್ರೆಸ್ ವಾದ. 620 ಕೋಟಿ ರೂ. ವೆಚ್ಚದ ‘ಜಲಸಿರಿ’ ಯೋಜನೆ ಜಾರಿಯಾಗಿದೆ. ದಾವಣಗೆರೆಯಲ್ಲಿ ಸಾಫ್ಟ್​ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಇನ್​ಕುಬೇಷನ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಲೋಕಸಭಾ ಕ್ಷೇತ್ರದ 848 ಗಾ ್ರುಗಳ 1,115 ಜನವಸತಿಗಳಿಗೆ 880 ಕೋಟಿ ರೂ. ವೆಚ್ಚದಲ್ಲಿ ನಲ್ಲಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. –ಜಿ.ಎಂ.ಸಿದ್ದೇಶ್ವರ, ದಾವಣಗೆರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
