ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಎ. ನಾರಾಯಣಸ್ವಾಮಿ ರಾಜಕೀಯ ನಿರಾಸಕ್ತಿ ನಡೆ, ಬಿಜೆಪಿಯ ಹಲವು ಆಕಾಂಕ್ಷಿಗಳ ಕನಸಿಗೆ ಗರಿ ಮೂಡಿಸಿದೆ. ಕಾಂಗ್ರೆಸ್​ನಿಂದಲೂ ಹಲವರು ತುದಿಗಾಲಲ್ಲಿದ್ದಾರೆ. ‘ಹೊರಗಿನವರು-ಸ್ಥಳೀಯರು’ ಎಂಬ ಕೂಗಿನ ನಡುವೆ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದರಿಂದ ಕೇತ್ರದಲ್ಲಿ ನೇರ ಹಣಾಹಣಿ ನಿಶ್ಚಿತ.
| ಡಿಪಿಎನ್​ ಶ್ರೇಷ್ಠಿ ಚಿತ್ರದುರ್ಗಪ್ರಮುಖ ಪಕ್ಷಗಳ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳದಿಂದ ಚಿತ್ರದುರ್ಗ ಎಸ್​ಸಿ ಮೀಸಲು ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ. ಕೈ ಜಾರಿರುವ ಕ್ಷೇತ್ರವನ್ನು ಹಿಡಿತಕ್ಕೆ ಪಡೆಯಲು ಕಾಂಗ್ರೆಸ್, ಮತ್ತೆ ಗೆಲುವಿಗೆ ಬಿಜೆಪಿ ಕಸರತ್ತು ನಡೆಸಿವೆ.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್​ನಂತೆ, ಬಿಜೆಪಿ-ಜೆಡಿಎಸ್ ಮೈತ್ರಿ ಪಾಳಯದಲ್ಲೂ ಆಯಾ ಪಕ್ಷಗಳ ವರಿಷ್ಠರು ಲೆಕ್ಕಾಚಾರ ನಡೆಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕೈ ಶಾಸಕರಿದ್ದಾರೆ. ಹೊಳಲ್ಕೆರೆಯಲ್ಲಿ ಮಾತ್ರ ಬಿಜೆಪಿ ಎಂಎಲ್​ಎ ಇದ್ದಾರೆ. ಗ್ಯಾರಂಟಿಗಳು ಹಾಗೂ ಅಹಿಂದ ವರ್ಗದ ಶ್ರೀರಕ್ಷೆಯಿಂದ ಗೆಲುವು ನಮ್ಮದೆಂಬ ವಿಶ್ವಾಸ ಕಾಂಗ್ರೆಸ್ಸಿನದ್ದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಲೆ, ಶ್ರೀರಾಮ ಮಂದಿರ, ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲದಿದ್ದರೂ ಜೆಡಿಎಸ್​ನ ಮತಗಳಿಕೆಯಿಂದ ಗೆಲುವು ನಮ್ಮದೇ ಎಂಬ ವಿಶ್ವಾಸ ಮೈತ್ರಿ ಪಾಳಯದಲ್ಲಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರತಿನಿಧಿಸಿರುವ ಕ್ಷೇತ್ರದಲ್ಲಿ, ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ರಾಜಕೀಯದೆಡೆ ನಿರಾಸಕ್ತಿ ಪ್ರಕಟಿಸಿರುವ ನಾರಾಯಣಸ್ವಾಮಿ ನಡೆ, ಬಿಜೆಪಿಯ ಹಲವು ಆಕಾಂಕ್ಷಿಗಳ ಕನಸಿಗೆ ಗರಿ ಮೂಡಿಸಿದೆ.
‘ಹೊರಗಿನವರು-ಸ್ಥಳೀಯರು’ ಎಂಬ ಕೂಗು ಕಾಂಗ್ರೆಸ್​ನಲ್ಲಿ ಜೋರಾಗಿದೆ. ಅನ್ಯ ಪಕ್ಷಗಳಲ್ಲೂ ಈ ಕೂಗು ಇಲ್ಲವೆಂದಿಲ್ಲ. ಕೈ ಭದ್ರಕೋಟೆಯ ಕ್ಷೇತ್ರದಲ್ಲಿ ಗೆಲ್ಲುವ (2009) ಮೂಲಕ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಜನಾರ್ದನಸ್ವಾಮಿ ಅವರಿಗೆ ಸಲ್ಲುತ್ತದೆ. ನಂತರ ಗೆಲುವು ಸಾಧಿಸಿದ್ದ ಕಾಂಗ್ರೆಸ್ಸಿನ ಬಿ.ಎನ್.ಚಂದ್ರಪ್ಪ 2019ರಲ್ಲಿ ನಾರಾಯಣಸ್ವಾಮಿ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ.
ಕೈ, ಕಮಲದ ಆಕಾಂಕ್ಷಿಗಳು:ಕಾಂಗ್ರೆಸ್​ನಿಂದ ಬಿ.ಎನ್.ಚಂದ್ರಪ್ಪ, ಡಾ.ಬಿ.ತಿಪ್ಪೇಸ್ವಾಮಿ ಜೆಜೆ ಹಟ್ಟಿ, ವಿನಯ್ ತಿಮ್ಮಾಪೂರ, ಎಚ್.ವಿ. ಕುಮಾರಸ್ವಾಮಿ, ಡಿ.ಬಸವರಾಜ್, ಹಿರಿಯೂರು ಜಿ.ಎಸ್.ಮಂಜುನಾಥ್, ನೇರಲಗುಂಟೆ ರಾಮಪ್ಪ, ಸುನೀಲ್​ಕುಮಾರ್ ಮತ್ತಿತರ 24ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಗೂ ನಾನು ಟಿಕೆಟ್ ಕೇಳಲ್ಲ ಎಂದಿರುವ ಮಾಜಿ ಸಚಿವ ಎಚ್.ಆಂಜನೇಯ ಅವರ ಹೆಸರೂ ಚಾಲ್ತಿಯಲ್ಲಿದೆ. ಮಾಜಿ ಸಂಸದ ಜನಾರ್ದನಸ್ವಾಮಿ, ವಿಜಯಕುಮಾರ್, ಎಂ.ಸಿ.ರಘುಚಂದನ್, ಭಾರ್ಗವಿ ದ್ರಾವಿಡ್, ನಿವೃತ್ತ ಐಎಎಸ್ ಅಧಿಕಾರಿಗಳು, ಪರಿವಾರ ಹಿನ್ನೆಲೆಯವರು ಸೇರಿ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕ್ಷೇತ್ರದ ಇತಿಹಾಸ:ಸಾಮಾನ್ಯ ಕ್ಷೇತ್ರವಾಗಿದ್ದ ಚಿತ್ರದುರ್ಗ 2008ರಲ್ಲಿ ಎಸ್​ಸಿ ಮೀಸಲು ಕ್ಷೇತ್ರವಾಗಿದೆ. ಈವರೆಗೆ 11 ಬಾರಿ ಕಾಂಗ್ರೆಸ್, ಪ್ರಜಾ ಸೋಷಲಿಸ್ಟ್ ಪಾರ್ಟಿ, ಸ್ವತಂತ್ರ ಪಾರ್ಟಿ ಒಂದೊಂದು ಬಾರಿ, ತಲಾ ಎರಡು ಬಾರಿ ಜನತಾದಳ ಹಾಗೂ ಬಿಜೆಪಿಗೆ ಕ್ಷೇತ್ರ ಒಲಿದಿದೆ. ರಾಷ್ಟ್ರೀಯ ನಾಯಕ ಎಸ್.ನಿಜಲಿಂಗಪ್ಪ ಮೊದಲ ಬಾರಿಗೆ ಪ್ರತಿನಿಧಿಸಿದ್ದಾರೆ. ಪ್ರಜಾಸೋಷಲಿಸ್ಟ್ ಪಾರ್ಟಿಯಿಂದ ಒಮ್ಮೆ ಹಾಗೂ ಸ್ವತಂತ್ರ ಪಾರ್ಟಿಯಿಂದ ಮತ್ತೊಮ್ಮೆ ಜೆ.ಮೊಹಮ್ಮದ್ ಇಮಾಮ್ ಆಯ್ಕೆಯಾಗಿದ್ದಾರೆ.
ಮತ ಲೆಕ್ಕಾಚಾರ :17ನೇ ಲೋಕಸಭೆ ಚುನಾವಣೆಯಲ್ಲಿ 19 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯ ಎ.ನಾರಾಯಣಸ್ವಾಮಿ 6,26,195 (ಶೇ.50.26) ಮತ ಪಡೆದು ವಿಜಯಿಯಾಗಿದ್ದರು. 5,46,017 (ಶೇ.43.82) ಮತ ಪಡೆದಿದ್ದ ಕಾಂಗ್ರೆಸ್ಸಿನ ಬಿ.ಎನ್.ಚಂದ್ರಪ್ಪ 80,178 ಮತಗಳ ಅಂತರದಿಂದ ಪರಾಜಿತಗೊಂಡಿದ್ದರು.
ನೇರಾ ಹಣಾಹಣಿ:ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಎದುರಾಗಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕೊಂಚ ಎಡವಿದರೂ ಆಡಳಿತ-ಪ್ರತಿಪಕ್ಷಗಳ ನಿರೀಕ್ಷೆಯ ಫಲಿತಾಂಶದಲ್ಲಿ ಏರುಪೇರಾದರೆ ಅಚ್ಚರಿ ಪಡುವಂತಿಲ್ಲ.
ಮಾದಾರ ಶ್ರೀ ಕಣಕ್ಕೆ?:ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಮಾತು ಕ್ಷೇತ್ರಾದ್ಯಂತ ಹರಿದಾಡುತ್ತಿದೆ.
ಹಲವು ಕಾಮಗಾರಿಗಳ ರೂವಾರಿ:ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿಗೆ ಪೂರಕವಾಗಿ ಅಜ್ಜಂಪುರ ಬಳಿ ಅಂಡರ್​ಪಾಸ್ ನಿರ್ವಣ, ಈ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರೂ. ಘೊಷಿಸಲು ಹಾಗೂ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗದ ಪ್ರಗತಿಗೆ ಸಂಸದ ನಾರಾಯಣಸ್ವಾಮಿ ಶ್ರಮಿಸಿದ್ದಾರೆ. ಚಿತ್ರದುರ್ಗ ರೈಲು ನಿಲ್ದಾಣದ ಅಭಿವೃದ್ಧಿಗೂ ಕ್ರಮವಹಿಸಿದ್ದಾರೆ. ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಕೈ ಜೋಡಿಸಿದ್ದಾರೆ. ರಾ.ಹೆ.ಗಳಲ್ಲಿ ಫ್ಲೈ ಓವರ್, ರಸ್ತೆಗಳು, ಪವರ್ ಸ್ಟೇಷನ್ಸ್, ನೀರಾವರಿ ಪಂಪ್​ಸೆಟ್​ಗಳಿಗೆ ಸೋಲಾರ್ ವಿದ್ಯುತ್ (ಟೆಂಡರ್ ಹಂತ), ಜೆಜೆಎಂ, ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ನೆರವು, ಎಂವಿಎಸ್, ಸಮುದಾಯ ಭವನ, ಸಾಲಸೌಲಭ್ಯ, ಹಲವು ಎಸ್ಸಿ, ಎಸ್ಟಿ ಕಾಲನಿಗಳಿಗೆ ಮೂಲಸೌಕರ್ಯ, ಅಂಗವಿಕಲರಿಗೆ ಸಲಕರಣೆ ವಿತರಣೆ ಕ್ಯಾಂಪ್​ಗಳನ್ನು ಏರ್ಪಡಿಸಿದ್ದಾರೆ. 335 ಕಾಮಗಾರಿಗಳ ಪೈಕಿ 133 ಪೂರ್ಣಗೊಂಡಿವೆ. ಸಂಸದರ ನಿಧಿ 18 ಕೋಟಿ ರೂ. ಮೊತ್ತಕ್ಕೆ ಮೂಲಸೌಕರ್ಯ ಕಾಮಗಾರಿಗಳ ಅನುಷ್ಠಾನ ಹಾಗೂ ಇನ್ನೂ ಹಲವು ವರ್ಕ್​ಗಳು ಮಂಜೂರಾಗಬೇಕಿದೆ.
ಸದನದಲ್ಲಿ ಹಾಜರಾತಿ:ಸಂಸದ ನಾರಾಯಣಸ್ವಾಮಿ ಸಂಸತ್ ಕಲಾಪ ಹಾಜರಾತಿ ಶೇ.71 ಇದೆ. ಐದು ವರ್ಷಗಳಲ್ಲಿ 169 ಪ್ರಶ್ನೆಗಳನ್ನು ಕೇಳಿದ್ದಾರೆ. 63 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ಮಹಿಳೆಯರಿಗೆ ರೆಡ್‌ ಬಾಲ್ ಕ್ರಿಕೆಟ್‌ ಟೂರ್ನಿ ನಡೆಸಲು ಬಿಸಿಸಿಐ ಐತಿಹಾಸಿಕ ನಿರ್ಧಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
