|ಮಂಜುನಾಥ ಕೋಳಿಗುಡ್ಡಬೆಳಗಾವಿ
ದಿನದಿಂದ ದಿನಕ್ಕೆ ಸಂಚಲನ ಉಂಟು ಮಾಡುತ್ತಿರುವ ಗೋಕಾಕ, ಬೆಳಗಾವಿ ಗ್ರಾಮೀಣ ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಹಾಗೂ ಕಾಂಗ್ರೆಸ್​ನ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರ ಹೆಚ್ಚು ಸದ್ದು ಮಾಡುತ್ತಿವೆ. ರಾಮದುರ್ಗ, ಸವದತ್ತಿ, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಬಂಡಾಯ ಸಂಚಲನ ಸೃಷ್ಟಿಸಿದೆ.
ಹಿಂದುಳಿದಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ರಾಮದುರ್ಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಬಿಜೆಪಿ ಟಿಕೆಟ್ ವಂಚಿತ ಶಾಸಕ ಮಹಾದೇವಪ್ಪ ಯಾದವಾಡ, ಪಿ.ಎಫ್. ಪಾಟೀಲ ಅವರು ಬಿಜೆಪಿ ಅಭ್ಯರ್ಥಿ ಚಿಕ್ಕ ರೇವಣ್ಣ ಅವರಿಗೆ ಬೆಂಬಲ ನೀಡಿದ್ದರೂ, ಪ್ರಚಾರ ನಡೆಸುತ್ತಿಲ್ಲ. ಇದು ಕೆಲ ಭಾಗಗಳಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯಿದೆ. ಅಲ್ಲದೆ, ಕಾಂಗ್ರೆಸ್​ನ ಅಶೋಕ ಪಟ್ಟಣಗೆ ಪರೋಕ್ಷಗಾಗಿ ಬಿಜೆಪಿಯ ಕೆಲ ನಾಯಕರು ಬೆಂಬಲ ಸೂಚಿಸಿದ್ದಾರೆ. ಇದು ಕಮಲ ಪಡೆಯ ಆತಂಕಕ್ಕೆ ಪ್ರಮುಖ ಕಾರಣ. ಮತ್ತೊಂದೆಡೆ ಕಾಂಗ್ರೆಸ್​ನಲ್ಲೂ ಕೆಲವರು ಅಶೋಕ ಪಟ್ಟಣ ವಿರುದ್ಧ ಧ್ವನಿ ಎತ್ತಿದ್ದು, ಬಹಿರಂಗವಾಗಿ ಅಭ್ಯರ್ಥಿ ವಿರುದ್ಧವೇ ಪ್ರಚಾರ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಉಭಯ ರಾಷ್ಟ್ರೀಯ ಪಕ್ಷಗಳಲ್ಲಿನ ಬಂಡಾಯದ ಬೇಗುದಿ ಇಬ್ಬರೂ ಅಭ್ಯರ್ಥಿಗಳನ್ನು ತಲ್ಲಣಗೊಳಿಸಿದೆ.
ಬಿಜೆಪಿ ಭದ್ರಕೋಟೆಯಾಗಿರುವ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಶಾಸಕ ಆನಂದ ಮಾಮನಿ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ರತ್ನಾ ಆನಂದ ಮಾಮನಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇತ್ತ ದಿ. ಆನಂದ ಚೋಪ್ರಾ ಪುತ್ರ ಸೌರಭ ಚೋಪ್ರಾ ಜೆಡಿಎಸ್​ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್​ನ ವಿಶ್ವಾಸ ವೈದ್ಯ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಮತ್ತೊಂದೆಡೆ ಕ್ಷೇತ್ರದ ಅಭಿವೃದ್ಧಿಗೆ ಮತ ನೀಡುವಂತೆ ಜೆಡಿಎಸ್ ಬಿರುಸಿನ ಪ್ರಚಾರ ನಡೆಸುತ್ತಿದೆ.
ಇದನ್ನೂ ಓದಿ:ನಟ ಶರತ್​ಬಾಬು ಕುರಿತು ಏನಿದು ವದಂತಿ?: ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕಮಲಹಾಸನ್!
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಬಿಜೆಪಿ ಎಲ್ಲ ರೀತಿಯ ಕಸರತ್ತು ನಡೆಸುತ್ತಿದೆ. ಆದರೆ, ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಉಂಟಾಗಿರುವ ಅತೃಪ್ತಿ ಈಗಲೂ ಮುಂದುವರಿದಿದೆ. ಬಿಜೆಪಿಯಲ್ಲಿನ ಅತೃಪ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿ ಆರ್.ಎಂ.ಚೌಗುಲೆ ಅವರಿಗೆ ವರದಾನವಾಗಿದೆ. ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯವಿರುವುದರಿಂದ ಎಂಇಎಸ್ ಹೆಚ್ಚು ಬಲಿಷ್ಠವಾಗಿದೆ. ಹಾಗಾಗಿ ಹಿಂದುತ್ವದ ಅಡಿ ಮತಗಳ ಕ್ರೋಡೀಕರಣವನ್ನು ಎಂಇಎಸ್ ಮಾಡುತ್ತಿರುವುದರಿಂದ ಕಾಂಗ್ರೆಸ್, ಬಿಜೆಪಿಗೆ ತಲೆನೋವಾಗಿದೆ. ಕ್ಷೇತ್ರದ ಕೆಲ ಭಾಗದಲ್ಲಿ ಕಾಂಗ್ರೆಸ್ ಸೋಲಿಸುವ ಏಕೈಕ ಉದ್ದೇಶದಿಂದ ಬಿಜೆಪಿ ಸ್ಥಳೀಯ ಮಟ್ಟದ ನಾಯಕರು ಪರೋಕ್ಷವಾಗಿ ಎಂಇಎಸ್​ಗೆ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್- ಎಂಇಎಸ್ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.
ಕಳೆದ ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ ಮೆಟಗುಡ್ಡ ಈ ಬಾರಿ ಬಿಜೆಪಿ ಅಧಿಕೃತ ಅಭ್ಯರ್ಥಿ. ಮತ್ತೊಂದೆಡೆ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಡಾ.ವಿಶ್ವನಾಥ ಪಾಟೀಲ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಕಮಲ ಪಡೆ ಬಂಡಾಯದ ಲಾಭ ಪಡೆದುಕೊಂಡು ಎರಡನೇ ಬಾರಿ ಗೆಲುವು ಸಾಧಿಸುವ ತವಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕೌಜಲಗಿ ಇದ್ದಾರೆ. ಬಿಜೆಪಿ ಅಧಿಕೃತ ಮತ್ತು ಬಂಡಾಯ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಇದೆ. ಡಾ.ವಿಶ್ವನಾಥ ಪಾಟೀಲ ಪ್ರಬಲ ಸ್ಪರ್ಧೆ ಪಕ್ಷಗಳಿಗೆ ಬಿಸಿತುಪ್ಪವಾಗಿದೆ. ಜೆಡಿಎಸ್​ನ ಶಂಕರ ಮಾಡಲಗಿ ಕೂಡ ಜೋರಾಗಿ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಲು ಮುಂದಾಳತ್ವ ವಹಿಸಿದ್ದ ಬಿಜೆಪಿಯ ಹಾಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸೋಲಿಸಿ ಮತ್ತೆ ಗೋಕಾಕ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಕೈ ನಾಯಕರು ಪಣತೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ವೈದ್ಯರಾದ ಡಾ.ಮಹಾಂತೇಶ ಕಡಾಡಿ ಅವರನ್ನು ಕಣಕ್ಕಿಳಿಸಿದೆ. ಪಂಚಮಸಾಲಿ ಮತ ಸೆಳೆಯಲು ಕಾಂಗ್ರೆಸ್ ತಂತ್ರ ಹೂಡುತ್ತಿದ್ದರೆ, ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಕಿಹೊಳಿ ಪ್ರತಿತಂತ್ರ ಹೂಡುತ್ತಿದ್ದಾರೆ. ಒಳ ವಿರೋಧಿಗಳು ರಮೇಶಗೆ ಕೊಂಚ ತಲೆನೋವು ತರಿಸಿದ್ದಾರೆ.
ಕಾಂಗ್ರೆಸ್​ಗೆ ನೆಲೆ ಕಲ್ಪಿಸಿಕೊಟ್ಟಿರುವ ಕಿತ್ತೂರು ಕ್ಷೇತ್ರ ಮಾಜಿ ಸಚಿವ ಡಿ.ಬಿ.ಇನಾಮದಾರ್ ನಿಧನದಿಂದ ಹೊಸ ದಿಕ್ಕಿನತ್ತ ವಾಲಿದೆ. ಬಿಜೆಪಿ ಅಭ್ಯರ್ಥಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಇನಾಮದಾರ ಶಿಷ್ಯ ಬಾಬಾಸಾಹೇಬ ಪಾಟೀಲ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದಾರೆ. ಬಾಬಾ ಸಾಹೇಬ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇನಾಮದಾರ್ ಸೋಲಿಗೆ ಕಾರಣರಾಗಿದ್ದರು. ಇನಾಮದಾರ್ ನಿಧನರಾಗಿರುವ ಹಿನ್ನೆಲೆ ಅವರ ಕುಟುಂಬ ತಟಸ್ಥವಾಗಿದೆ. ಇದು ಕಾಂಗ್ರೆಸ್​ಗೆ ಹಿನ್ನಡೆಯಾದರೂ ಅಚ್ಚರಿಯಿಲ್ಲ.
ಬಿಜೆಪಿಯ ಭದ್ರಕೋಟೆ ಹಾಗೂ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ರಾಜಕೀಯ ನೆಲೆ ಗಟ್ಟಿಗೊಳಿಸಿರುವ ಅರಬಾವಿ ಕ್ಷೇತ್ರ ವಶಪಡಿಸಿಕೊಳ್ಳಲು ದಶಕಗಳಿಂದ ಕಾಂಗ್ರೆಸ್ ನಡೆಸುತ್ತಿರುವ ಅವಿರತ ಪ್ರಯತ್ನಕ್ಕೆ ಪಕ್ಷೇತರರು, ಜೆಡಿಎಸ್ ಅಡ್ಡಿಯಾಗಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್​ನ ಅರವಿಂದ ದಳವಾಯಿ, ಜೆಡಿಎಸ್​ನ ಭೀಮಪ್ಪ ಗಡಾದ ಇತರರು ಒಂದಾಗಿದ್ದರು. ಗಡಾದ ಕಾಂಗ್ರೆಸ್​ಗೆ ಸೇರ್ಪಡೆ ಕೂಡ ಆಗಿದ್ದರು. ಆದರೆ, ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಅರವಿಂದ ದಳವಾಯಿ ಯಶಸ್ವಿಯಾದರು. ಇತ್ತ ಟಿಕೆಟ್ ಸಿಗದೆ ಭೀಮಪ್ಪ ಗಡಾದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಸಮಾಧಾನ ಬಿಜೆಪಿಗೆ ವರದಾನವಾಗುವ ಸಾಧ್ಯತೆ ಹೆಚ್ಚಿದೆ.
ಬೆಳಗಾವಿ ಉತ್ತರದಲ್ಲಿ ಪ್ರಾಬಲ್ಯ ಮೆರೆಯಲು ಬಿಜೆಪಿ ಮತ್ತು ಕಾಂಗ್ರೆಸ್ ನೇರಾನೇರ ಸೆಣಸುತ್ತಿವೆ. ಹಿಂದುತ್ವ ಅಸ್ತ್ರದೊಂದಿಗೆ ಲಿಂಗಾಯತ, ಮರಾಠ ಹಾಗೂ ಅಹಿಂದ ವರ್ಗಗಳನ್ನು ಕ್ರೋಡೀಕರಿಸಿ ಗೆಲುವಿನ ಹಾದಿ ಸುಗಮಗೊಳಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಸೇಠ್ ಮುಸ್ಲಿಂ ಸಮುದಾಯದ ಮತಗಳ ಜತೆಗೆ ಲಿಂಗಾಯತ, ಎಸ್​ಸಿ, ಎಸ್​ಟಿ ಮತ ಹಿಡಿದಿಟ್ಟುಕೊಳ್ಳಲು ಪಕ್ಷದ ಮುಖಂಡರ ಮೊರೆ ಹೋಗಿದ್ದಾರೆ. ಜೆಡಿಎಸ್, ಆಮ್ ಆದ್ಮಿ ರಾಷ್ಟ್ರೀಯ ಪಕ್ಷಗಳಿಗೆ ಕೊಂಚ ಸ್ಪರ್ಧೆಯೊಡ್ಡಬಹುದು.
ನೇಕಾರರು, ಮರಾರಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಜತೆಗೆ ಭಾಷಾ ರಾಜಕಾರಣ ಸದ್ದು ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್ ಅಭ್ಯರ್ಥಿ ಪ್ರಭಾವತಿ ಮಾಸ್ತ ಮರಡಿ ಬೆಲೆ ಏರಿಕೆ ವಿಷಯದ ಮೇಲೆ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಎಂಇಎಸ್ ಭಾಷೆ ಹೆಸರಿನಲ್ಲಿ ಮರಾಠಿಗರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಬಿಜೆಪಿ ಗೆಲುವಿನ ಓಟಕ್ಕೆ ಎಂಇಎಸ್ ಬ್ರೇಕ್ ಹಾಕಲು ಮುಂದಾಗಿದೆ.
ಮರಾಠಿಗರ ಪ್ರಾಬಲ್ಯದ ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ಇದೆ. ಆದರೆ, ಇಲ್ಲಿಯವರೆಗೆ ನಡೆದಿರುವ ಚುನಾವಣೆಗಳಲ್ಲಿ 12 ಬಾರಿ ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಒಂದೊಂದು ಬಾರಿ ಗೆದ್ದಿವೆ. ಈ ಬಾರಿ ಬಿಜೆಪಿಯಿಂದ ವಿಠ್ಠಲ ಹಲಗೇಕರ್, ಕಾಂಗ್ರೆಸ್​ನಿಂದ ಡಾ.ಅಂಜಲಿ ನಿಂಬಾಳ್ಕರ್, ಜೆಡಿಎಸ್​ನಿಂದ ನಾಸೀರ್ ಬಾಗವಾನ್ ಹಾಗೂ ಎಂಇಎಸ್​ನಿಂದ ಮುರಳೀಧರ ಪಾಟೀಲ ಅಖಾಡದಲ್ಲಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
