ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನಕ್ಕೆ ಕೇವಲ 48 ಗಂಟೆಗಳಷ್ಟೇ ಬಾಕಿ. ಎರಡೂ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ನಡುವೆ ಬಿರುಸಿನ ಪೈಪೋಟಿ ಇದ್ದರೂ, ಮತದಾರ ಯಾವ ಪಕ್ಷದ ಅಭ್ಯರ್ಥಿಗೆ ಜೈ ಎನ್ನುತ್ತಾನೆ ಎಂಬುದು ಕುತೂಹಲವಾಗಿಯೇ ಉಳಿದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
| ಜಗನ್ನಾಥ್ ಕಾಳೇನಹಳ್ಳಿ ತುಮಕೂರು
ಕುಂಚಿಟಿಗರ ಸಾಮ್ರಾಜ್ಯ ಶಿರಾದಲ್ಲಿ ಮೊದಲಿನಿಂದಲೂ ಕಾಂಗ್ರೆಸ್-ಜೆಡಿಎಸ್ ನಡುವೆಯೇ ನೇರ ಹಣಾಹಣಿ ಇದ್ದು, ಉಪಚುನಾವಣೆಯಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿರುವುದು ಫಲಿತಾಂಶವನ್ನು ‘ಫೋಟೋ ಫಿನಿಶ್’ ಹಂತಕ್ಕೆ ಕೊಂಡೊಯ್ಯಲಿದೆ.
ಶಿರಾ ಜೆಡಿಎಸ್ ಅಸ್ತಿತ್ವದ ಪ್ರಶ್ನೆಯಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸವಾಲಾಗಿ ಸ್ವೀಕರಿಸಿದ್ದಾರೆ. ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಕ್ಷೇತ್ರ ಉಳಿಸಿಕೊಳ್ಳಲು ಅವರ ಪತ್ನಿ ಅಮ್ಮಾಜಮ್ಮರನ್ನು ಕಣಕ್ಕಿಳಿಸಿ, ‘ಅನುಕಂಪ’ದ ದಾಳ ಉರುಳಿಸಿದ ಗೌಡರು, ಚುನಾವಣಾ ಉಸ್ತುವಾರಿಗೆ ಇಡೀ ಕುಟುಂಬವನ್ನೇ ನೇಮಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್​ಗೆ
ಮೊದಲ ಚುನಾವಣೆ ಎಂಬ ಪ್ರತಿಷ್ಠೆ. ಶಿರಾ ಗೆಲ್ಲುವ ಮೂಲಕ ಕೃಷ್ಣಾಕೊಳ್ಳ ದಾಟುವ ತವಕದಲ್ಲಿರುವ ಬಿಜೆಪಿ ಇಡೀ ಸರ್ಕಾರದ ಶಕ್ತಿಯನ್ನೇ ವ್ಯಯಿಸಿ ಕೊಂಡು ಕಮಲ ಅರಳಿಸುವ ಪ್ರಯತ್ನ ನಡೆಸಿದೆ.
ಉಪಚುನಾವಣೆ ಆರಂಭದಲ್ಲಿ ಆರ್ಭಟಿಸಿದ ಅನುಕಂಪ, ಅಭಿವೃದ್ಧಿ, ಮದಲೂರು ಕೆರೆಗೆ ಹೇಮೆ ನೀರು ಹರಿಸುವ ವಿಷಯಗಳು ಕ್ರಮೇಣ ‘ಹಣಬಲ, ಅಧಿಕಾರಬಲ’ದ ಮುಂದೆ ಗೌಣವಾದವು. ಗೊಲ್ಲರ ಮತಬ್ಯಾಂಕ್ ವಶಕ್ಕೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಚುನಾವಣೆ ಉದ್ದಕ್ಕೂ ಸದ್ದು ಮಾಡಿತು. ಒಬಿಸಿ ಮತಬ್ಯಾಂಕ್ ವಿಭಜನೆ ಕಾಂಗ್ರೆಸ್​ನ ನಿದ್ದೆಗೆಡಿಸಿದೆ. ಜಿಲ್ಲೆಯ ಘಟಾನುಘಟಿಗಳಾದ ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಜಯಚಂದ್ರ ಆರಂಭದಲ್ಲೇ ಹಳೆಯ ವೈಷಮ್ಯಗಳನ್ನು ಮರೆತು ಒಗ್ಗಟ್ಟಾಗಿ ಪ್ರಚಾರ ಕೈಗೊಂಡರು. ಜತೆಗೆ ಜೆಡಿಎಸ್-ಬಿಜೆಪಿಗಿಂತ ಮೊದಲೇ ಜಯಚಂದ್ರರನ್ನು ಅಭ್ಯರ್ಥಿಯನ್ನಾಗಿ ಘೊಷಿಸಿದ್ದು ರೇಸ್​ನಲ್ಲಿ ಒಂದು ಹೆಜ್ಜೆ ಮುಂದೆ ಇರುವಂತಾಯಿತು.
ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ, ಯಾದವ ಸಮುದಾಯದ ಮುಖಂಡ ರಘುವೀರ ರೆಡ್ಡಿ ಅವರನ್ನು ಡಿಸಿಎಂ ಅಶ್ವತ್ಥನಾರಾಯಣ್ ಭೇಟಿ ಮಾಡಿದ ಸುದ್ದಿ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕಿತು. ಜಿಲ್ಲೆಯ ಯಾದವ ಸಮುದಾಯದ ಮೇಲೆ ಸಾಕಷ್ಟು ಪ್ರಭಾವ ಹೊಂದಿರುವ ರಘುವೀರ ರೆಡ್ಡಿ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಬೆವರು ಹರಿಸುವಂತಾಯಿತು. ಪ್ರಚಾರದಿಂದ ರಘುವೀರರೆಡ್ಡಿ ದೂರವೇ ಉಳಿದರು. ಕಾಂಗ್ರೆಸ್ ನಾಯಕರ ಸ್ಥೈರ್ಯ ಕದಡುವ ಬಿಜೆಪಿ ಚುನಾವಣಾ ತಂತ್ರಗಾರಿಕೆಯಲ್ಲಿ ಅಶ್ವತ್ಥನಾರಾಯಣ್ ಭೇಟಿ ಕೂಡ ಒಂದಾಗಿತ್ತು. ಬಿಜೆಪಿಗೆ ನೆಲೆಯೇ ಇಲ್ಲದ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್​ಗಾಗಿ ಪ್ರಬಲ ಪೈಪೋಟಿ ಏರ್ಪಟಿತ್ತು. ಆಕಾಂಕ್ಷಿಗಳಾದ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್ ಜತೆಗಿಟ್ಟುಕೊಂಡು ಬೂತ್​ವುಟ್ಟದಿಂದ ಪಕ್ಷ ಸಂಘಟಿಸಿ ಸಮರ್ಥನ ಹುಡುಕಾಟದಲ್ಲಿದ್ದ ಪಕ್ಷ ಕೊನೇ ಕ್ಷಣದಲ್ಲಿ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ಡಾ.ಸಿ.ಎಂ.ರಾಜೇಶ್​ಗೌಡಗೆ ಟಿಕೆಟ್ ನೀಡಿ ಅಸಮಾಧಾನ ಭುಗಿಲೇಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕ್ಷೇತ್ರದಲ್ಲಿ ಜೆಡಿಎಸ್ ತನ್ನದೇ ವೋಟ್​ಬ್ಯಾಂಕ್ ಹೊಂದಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ‘ಸ್ತ್ರೀಶಕ್ತಿ’ ಪಡೆಯುವ ನಿರೀಕ್ಷೆ ಯಲ್ಲಿದೆ. ಕಾಂಗ್ರೆಸ್- ಬಿಜೆಪಿ ಅಬ್ಬರದ ಮುಂದೆ ಜೆಡಿಎಸ್ ಆರ್ಥಿಕವಾಗಿ ಬಲಹೀನ ವಾಗಿ ಕಾಣುತ್ತಿದ್ದರೂ ಅನುಕಂಪದ ಬಲದ ಮೇಲೆ ಪ್ರಬಲ ಪೈಪೋಟಿ ನೀಡುವುದನ್ನು ತಳ್ಳಿ ಹಾಕುವಂತಿಲ್ಲ. ಮೂರು ಪಕ್ಷಗಳು ಸರಿ ಸಮಾನವಾಗಿ ಕಾಣುತ್ತಿದ್ದು, ಮತದಾರ ಗುಟ್ಟುಬಿಟ್ಟು ಕೊಡದೆ ಮುಗುಳ್ನಗುತ್ತಿದ್ದಾನೆ.
ಕುಂಚಿಟಿಗರ ಮತ ಕದನ
ಈ ಬಾರಿ ಮೂರೂ ಪಕ್ಷಗಳು ಕುಂಚಿಟಿಗರಿಗೆ ಮಣೆ ಹಾಕಿವೆ. ಸಮುದಾಯದಲ್ಲಿ 48 ಬೆಡಗು ಗಳಿದ್ದು, ಜಾತಿ ಜತೆ ಬೆಡಗುಗಳ ಸದ್ದು ಕ್ಷೇತ್ರದಲ್ಲಿದೆ. ಅಮ್ಮಾಜಮ್ಮ ಅಲ್ಪೆನವರು ಬೆಡಗು. ಜಯಚಂದ್ರ ಕೋಡಿಹಳ್ಳಿ ಜಾನಕಲ್ ಬೆಡಗು. ರಾಜೇಶ್​ಗೌಡ ಬೆಳ್ಳೆನವರು ಬೆಡಗುನವರಾಗಿದ್ದು ಕುಂಚಿಟಿಗರ ಮತಗಳು ಹಂಚಿ ಹೋಗಲಿವೆ. ನಂತರದ ಸ್ಥಾನದಲ್ಲಿ ಪರಿಶಿಷ್ಟ ಜಾತಿಯವರಿದ್ದಾರೆ. 3 ಪಕ್ಷಗಳು ಈ ಮತಬ್ಯಾಂಕ್​ಗೆ ಕೈ ಇಟ್ಟಿವೆ. ಕುರುಬರು, ಮುಸ್ಲಿಮರು ಸರಿಸಮನಾಗಿದ್ದು ಕಾಂಗ್ರೆಸ್ ಬಲ ವಾಗಿ ನೆಚ್ಚಿಕೊಂಡಿದೆ. ಗೊಲ್ಲರು ನಿರ್ಣಾಯಕ ಸಂಖ್ಯೆಯಷ್ಟಿದ್ದು ಬಿಜೆಪಿ ಹೆಚ್ಚಿನ ಮತ ಪಡೆಯುವ ತವಕದಲ್ಲಿದೆ. ಸಣ್ಣ ಪುಟ್ಟ ಸಮಾಜಗಳ ಮತಗಳನ್ನು ಕ್ರೋಡೀಕರಿಸುವ ಬಿಜೆಪಿ ತಂತ್ರ ಫಲಕೊಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ದಳ ಮತಬ್ಯಾಂಕ್​ಗೆ ಕಮಲ ಕೈ
ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಭದ್ರನೆಲೆ ಹೊಂದಿದ್ದರೂ ಚುನಾವಣೆ ಘೊಷಣೆಗೂ ಮುನ್ನವೇ ಬಿಜೆಪಿ ಬೂತ್​ವುಟ್ಟದಲ್ಲಿ ಸಂಘಟನೆ ಆರಂಭಿಸಿದ್ದು, ಮೇಲ್ನೋಟಕ್ಕೆ ವರ್ಕೌಟ್ ಆದಂತೆ ಕಾಣುತ್ತಿದೆ. ಹಳ್ಳಿ ಹಳ್ಳಿಯಲ್ಲೂ ಬಿಜೆಪಿ ಸದ್ದು ಜೋರಾಗಿದ್ದು, ಇದಕ್ಕೆ ‘ವಾರ್ ರೂಂ’ ಕಾರ್ಯ ತಂತ್ರ ಕಾರಣವಾಗಿದೆ. ಜೆಡಿಎಸ್ ಮತಬ್ಯಾಂಕ್​ಗೆ ಬಿಜೆಪಿ ಕೈಯಿಟ್ಟಿದ್ದರೂ, ಕಾಂಗ್ರೆಸ್ ನೆಲೆ ಕದಡಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್-ಬಿಜೆಪಿ ನಡುವೆ ‘ನೆಕ್ ಟು ನೆಕ್ ಫೈಟ್’ ಇದ್ದು, ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂಬುದು ಕಾಂಗ್ರೆಸ್ ಮಾಜಿ ಸಂಸದರೊಬ್ಬರ ಅಭಿಪ್ರಾಯ.
ವಿಜಯೇಂದ್ರ ತಂಡ ರಣತಂತ್ರ
ಶಿರಾ ಉಪಸಮರ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕೇಂದ್ರೀಕೃತವೆನಿಸಿದೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲು ಕಾರಣರಾಗಿದ್ದ ವಿಜಯೇಂದ್ರ ಹೆಗಲಿಗೆ ಶಿರಾ ಜವಾಬ್ದಾರಿ ವಹಿಸಲಾಗಿದೆ. ಚುನಾವಣಾ ಘೊಷಣೆ ದಿನದಿಂದ ಕ್ಷೇತ್ರದಲ್ಲೇ ಠಿಕಾಣಿ ಹೂಡಿರುವ ವಿಜಯೇಂದ್ರ ಶಕ್ತಿಮೀರಿ ಬಿಜೆಪಿಯನ್ನೂ ರೇಸ್​ನಲ್ಲಿಟ್ಟಿದ್ದಾರೆ. ಜಾತಿಬಲ, ಬಿಎಸ್​ವೈ ಸಕ್ವೇತ್ರ ಎಂಬ ಅಂಶಗಳು ಕೆ.ಆರ್.ಪೇಟೆಯಲ್ಲಿ ವಿಜಯೇಂದ್ರ ಕೈಹಿಡಿದಿತ್ತು. ಇಲ್ಲಿ ಆ ಅಂಶಗಳು ಗೌಣವಾಗಲಿವೆ ವಿಜಯೇಂದ್ರ, ಎಂಎಲ್ಸಿ ರವಿಕುಮಾರ್, ಹಾಸನ ಶಾಸಕ ಪ್ರೀತಂಗೌಡ, ತಮ್ಮೇಶ್​ಗೌಡ ತಂಡ ರಣತಂತ್ರ ರೂಪಿಸಿ, ಹಳ್ಳಿಹಳ್ಳಿಯಲ್ಲೂ ಹವಾ ಸೃಷ್ಟಿಸುವ ಪ್ರಯತ್ನ ಮಾಡಿದೆ.
ಆರ್​ಆರ್ ನಗರ ಏರಿಳಿತ: ಮತದಾರ ಯಾರಿಗೆ ಜೈ ಎನ್ನುತ್ತಾನೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − thirteen =
Remember me
