ಆತ ಅನಾದಿ ಕಾಲದಿಂದ ಅನಂತ ಕಾಲದ ಅವಿಜ್ಞಾತನಸಖ. ಅವನನ್ನು ಅರಿತವರು ಯಾರೂ ಇಲ್ಲ. ಆತನನ್ನು ಹಿಡಿಯುವ ಸಾಮರ್ಥ್ಯ ಯಾರಿಗೂ ಇಲ್ಲ. ಯೋಗ್ಯತಾನುಸಾರ ತಿಳಿಯಲು ಹೊರಟ ಹಂಬಲಿಗರಿಗೆ ಈತ ಅಗೆದಷ್ಟೂ ಆಳ, ಮುಟ್ಟುವಷ್ಟೂ ಮುಗಿಲು. ಸಿಕ್ಕ ಎಂದಾಕ್ಷಣ ಮಾಯವಾದ. ದೊರೆಯಲು ಅಸಾಧ್ಯ ಎನಿಸಿದಷ್ಟೂ ಸನಿಹನಾದ. ಅವನ ಮಾಯೆ ಬಲ್ಲವರಿಲ್ಲ. ಅದಕ್ಕೆ ಒಳಗಾದವರೇ ಎಲ್ಲ. ಅಂತೆಂದೇ ಕಪಟನಾಟಕನೆಂದೇ ಪ್ರಸಿದ್ಧನಾದ. ಆದರೆ ಭಕ್ತರ ಕೈಯಾಳು ಎನಿಸಿಕೊಂಡಾತನೂ ಆತನೇ. ‘ಕರ್ಮ ಮಾಡು, ಫಲದ ಅಪೇಕ್ಷೆ ಬಿಡು’ ಎಂದ. ಆದರೆ ಕರ್ಮವೂ ಆತನ ಅಧೀನವೇ. ಕಾರ್ಯಕ್ಕೆ ಪ್ರೇರಕ ಅವನೇ, ಪೋಷಕ ಅವನೇ, ಕತೃತ್ವ ಅವನ ಅಧೀನ. ಕಾಲ ಅವನ ವಶ. ಹೀಗಿರುವಾಗ ಅಸ್ವತಂತ್ರವಾದ ಸರ್ವ ಜೀವರಾಶಿಗಳು ಮತ್ತು ಜಡ ಪದಾರ್ಥಗಳೆಲ್ಲವೂ ಆತನ ಅಧೀನ. ಆ ಸರ್ವ ಸ್ವತಂತ್ರನಾದ, ಜಗನ್ನಿಯಾಮಕನಾದ, ಅಪ್ರಾಕೃತನಾದ, ಸರ್ವ ದೋಷದೂರನಾದ, ಸರ್ವ ಸೃಷ್ಟಿಕರ್ತ, ಸ್ಥಿತಿಕರ್ತ, ಲಯಕರ್ತ ಎನಿಸಿದ, ಅನಂತಕೋಟಿ ಬ್ರಹ್ಮಾಂಡ ನಾಯಕನಾದ, ಅನಂತ ನಾಮದೊಡೆಯನಾದ, ಪೊಡವಿಗೊಡೆಯನಾದ ಆ ಶ್ರೀಕೃಷ್ಣನ ಅಧೀನ ಎನ್ನಲು ಮತ್ತಿನ್ನಾವ ತರ್ಕಗಳು ಬೇಕು?
ಶ್ರೀಕೃಷ್ಣನ ಅನಂತತೆಯ ಅರಿವಿನ ಅಸಾಧ್ಯತೆಯನ್ನು ಪ್ರತಿಕ್ಷಣ ಅನುಭವಿಸಿದವರೇ ನಾವುಗಳೆಲ್ಲ. ಕೃಷ್ಣವೆಂಬ ಸಾಗರದ ಅಂಚು, ಆಳ, ವಿಸ್ತಾರ ತಿಳಿಯಲಾಗದು. ಅದು ಬಹು ಗಂಭೀರ. ಅಸಂಖ್ಯ ತೆರೆಗಳು. ತುಂಬಿದ ತುಳುಕದ ಪ್ರವಾಹ. ಬೇಸಿಗೆಗೆ ಕುಗ್ಗದು, ನೀರು ತುಂಬಿಬಂದಾಗ ಹೆಚ್ಚದು. ಈ ಸಾಗರ ಬದುಕಲು ಕಲಿಸುವ ಪಾಠದಂತಿದೆ. ಜೀವನದ ಹಲವು ಪದರಗಳನ್ನು ನಾಜೂಕಾಗಿ ತೆರೆದು, ಬಾಳುವ ಸೂಕ್ಷ್ಮತೆಯನ್ನು ತಿಳಿಸುತ್ತದೆ. ಆದಿ ಅಂತ್ಯಗಳಿಗೆಟುಕದ ಭಗವಂತ ಧರೆಗೆ ಅವತರಿಸಿ ಬಂದ. ವಸುದೇವ- ದೇವಕಿಯರಿಗಾಗಿ, ಯಶೋದೆ-ನಂದರಿಗಾಗಿ ಬಂದ. ಅಸಾಮಾನ್ಯ ಭಕುತರ ಉದ್ಧಾರಕ್ಕಾಗಿ ಬಂದ. ಸಾಮಾನ್ಯರ ಕರೆಗೆ ಓಗೊಟ್ಟು ಬಂದ. ಶಿಷ್ಠರ ಪರಿಪಾಲನೆಗಾಗಿ ಬಂದ. ಖಳರ ನಟ್ಟಡಗಿಸಲು ಬಂದ. ಧರ್ಮಸಂರಕ್ಷಣೆಯ ಮಹತ್ವ ಸಾರಲು ಬಂದ, ಅದನುಳಿಸಿ, ಬೆಳೆಸಲು ಬಂದ. ನಿಸ್ಸೀಮನಾದರೂ ಸೀಮಿತ ಅವಧಿಗೆಂದು ಬಂದ. ಅಪ್ರಾಕೃತನಾದರೂ ಪ್ರಾಕೃತ ರೂಪ ಧರಿಸಿ ಬಂದ. ಅಗೋಚರನಾದರೂ ತನ್ನವರಿಗಾಗಿ ಗೋಚರಿಸಿ ನಿಂದ. ಗೊಲ್ಲ ಗೋಪಾಲರೊಡನೆ ಗೆಳೆಯನಂತೆ ಮಿಂದ. ತಂದೆ-ತಾಯಿಯರಿಗೆ ಸುಲಭ ತನಯನಾದ. ಅಂಗನೆಯರಿಗೆ ಅತಿ ಪ್ರಿಯ ಸಖನಾದ. ಇಷ್ಟಮಿತ್ರರಿಗೆ ತಾನೇ ಜೀವನಾಡಿಯಾದ. ದ್ವೇಷಿಪರಿಗೆ ತಕ್ಕ ಶತ್ರುವಾದ. ಏನಾಗಲಿಲ್ಲ ನಮ್ಮ ಕಾಳಮರ್ದನ ಕೃಷ್ಣ? ಮಹತ್ತರ ಪಾತ್ರಗಳ ವೇಷದ-ಶೇಷತೆ, ಯಾವುದೂ ಉಳಿಸಲಿಲ್ಲ. ಯೋಗಿಗಳಿಗೆ ಯೋಗ
ರಾಜನಾದ. ನಿರತ ಭೋಗಿ ಗಳಿಗೆ ಎಚ್ಚರಿಕೆಯ ಗಂಟೆಯಾದ. ಕತೃತ್ವ ಕರ್ಮಗಳಿಗೆ ಕರ್ಮ ಯೋಗವನ್ನರುಹಿದ. ಭಗವದ್ಗೀತೆ ಎಂಬ ಲೋಕೋತ್ತರತಮ ಗ್ರಂಥಕರ್ತನಾದ. ಪಾರ್ಥನ ಯಶಸ್ಸಿನ ಪ್ರೇರಕನಾದ. ಭಕುತರಿಗೆ ಭಕ್ತಿಯೋಗವನ್ನಿಳುಹಿದ. ಮತ್ತಿನ್ನೇನಾಗಲಿಲ್ಲ…ಪಾಂಚಾಲಿಗೆ ಅಗಮ್ಯ ಅನುಜನಾದ. ರಾಧೆಯ ಮನದ ರಮಣನಾದ. ಸುದಾಮನಂಥ ಗೆಳೆಯರು ಏನೂ ಬೇಡದಿದ್ದದರೂ ಸರ್ವವನ್ನೂ ಕೊಡಲು ಬಂದ. ವಿಪ್ರ ಪತ್ನಿಯರೇ ಇರಲಿ ಅಥವಾ ಗೋಪಿಕಾ ಸ್ತ್ರೀಯರೇ ಇರಲಿ ಅವರವರ ಇಚ್ಛೆಯಂತೆ ಸಾತ್ವಿಕವಾಗಿ ಬಾಳಿ, ಸಹಕರಿಸಲು ಬಂದ. ಅಧರ್ಮ, ಅರಾಜಕತೆ, ಅನ್ಯಾಯದ ಆಡಳಿತ ಅಳಿಸಲು ಬಂದ. ಯುದ್ಧವೂ ಧರ್ಮ, ಶಾಂತಿಯೂ ಧರ್ಮ, ಎಂಬ ಉದ್ದೇಶಪೂರಿತ ನೀತಿಶಾಸ್ತ್ರ ನಿರ್ವಿುಸಲು ಬಂದ. ಭೋಗ, ಸಂಪತ್ತು, ಅಧಿಕಾರ, ಪ್ರತಿಷ್ಠೆ ಇವಾವುದನ್ನೂ ಬಯಸದೆ, ಸಮಾಜದ ಹಿತ ಸಾಧಿಸಬಹುದೆಂದು ತಿಳಿಸಲು ಬಂದ. ಸದಾ ತನ್ನ ನಂಬಿದ ಭಕ್ತರ ಭವಪಾಶ ಕಳೆಯುತ್ತ ಭವರೋಗ ವೈದ್ಯನಾಗಲು ಸದಾ ಸನ್ನದ್ಧನಾದ. ಅಂತಹ ಭಗವಂತನ ಅಸಾದೃಶ ಅವತಾರವಾದ ಶ್ರೀಕೃಷ್ಣನನ್ನು ಕೇವಲ ಈ ಜಯಂತಿಯಂದು ಮಾತ್ರವಲ್ಲದೇ ‘ಸದಾ ಎನ್ನ ಹೃದಯದಲ್ಲಿ ವಾಸ ಮಾಡು ಶ್ರೀಹರಿ’ ಎಂಬ ದಾಸರ ಪದದಂತೆ ನಿತ್ಯ ಆತನನ್ನು ಧ್ಯಾನಿಸಿ ಧನ್ಯರಾಗೋಣ.
ದೇವರು ಭೂಮಿಯಲ್ಲಿ ಅವತಾರ ಮಾಡುವಾಗ ಯಾರು ಸ್ವಾಗತ ಮಾಡುತ್ತಾರೋ ಅವರ ಮೇಲೆ ಭಗವಂತನ ವಿಶೇಷ ಕೃಪಾದೃಷ್ಟಿ ಇರುತ್ತದೆ. ಭಗವಂತ ಜಗತ್ತಿನ ಉದ್ಧಾರಕ್ಕೋಸ್ಕರ ಧರೆಗಿಳಿದು ಬಂದಿದ್ದಾನೆ. ‘ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎಂಬುದಾಗಿ ಗೀತೆಯಲ್ಲಿ ತಿಳಿಸಿದಂತೆ ಸಜ್ಜನರ ರಕ್ಷಣೆ ಮತ್ತು ದುರ್ಜನರ ನಿಗ್ರಹದೊಂದಿಗೆ ಧರ್ಮವನ್ನು ಉಳಿಸುವುದು ಅವತಾರದ ಮೂಲ ಉದ್ದೇಶ. ಹೀಗಾಗಿ ನಾವೆಲ್ಲ ಕೃಷ್ಣನಿಗೆ ಕೃತಜ್ಞತೆ ಸಮರ್ಪಣೆ ಮಾಡಿದರೆ, ಈ ಜಗತ್ತಿನ ಸೇವೆ ಮಾಡಿದ ಪುಣ್ಯ ಲಭಿಸುತ್ತದೆ. ಕೃಷ್ಣ ಜನ್ಮಾಷ್ಟಮಿ ವಿಶೇಷ ಸಂದರ್ಭದಲ್ಲಿ ಜಗದೋದ್ಧಾರ ವಿಶೇಷ ಕೃಪೆ ನಮ್ಮ ಮೇಲಿರಲಿ ಎಂಬುದಾಗಿ ಪ್ರಾರ್ಥಿಸೋಣ.
| ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪರ್ಯಾಯ ಪುತ್ತಿಗೆ ಮಠ
ಜನ್ಮಾಷ್ಟಮಿಯಂದು ಭಗವಾನ್ ಶ್ರೀಕೃಷ್ಣನ ಜನ್ಮದ ಸಂಭ್ರಮವನ್ನು ಆಚರಿಸುತ್ತೇವೆ. ಕೃಷ್ಣನು ಓರ್ವ ವ್ಯಕ್ತಿಯಲ್ಲ, ಶಕ್ತಿ. ಕೃಷ್ಣನು ಪೂರ್ಣ ಕಲಾವತಾರಿ. ಕೃಷ್ಣನು ನನ್ನಲ್ಲೇ ಇದ್ದಾನೆ, ಅವನು ನನಗಿಂತಲೂ ಬೇರೆಯಲ್ಲ ಎಂದು ಅರಿಯುವ ಸಲುವಾಗಿ ಸಂಭ್ರಮವನ್ನಾಚರಿಸುತ್ತೇವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು, ‘ಯಾರು ನನ್ನಲ್ಲಿ ಎಲ್ಲರನ್ನೂ ನೋಡುತ್ತಾರೋ ಮತ್ತು ನನ್ನನ್ನು ಎಲ್ಲರಲ್ಲೂ ಕಾಣುತ್ತಾರೋ, ಅಂತಹ ವ್ಯಕ್ತಿಗೆ ನಾನು ಎಂದಿಗೂ ಗುಪ್ತವಾಗಿರುವುದಿಲ್ಲ, ಅಂತಹ ವ್ಯಕ್ತಿಯು ನನ್ನಿಂದ ದೂರವಿರಲು ಸಾಧ್ಯವೇ ಇಲ್ಲ’ ಎನ್ನುತ್ತಾನೆ. ನಿಮ್ಮೊಳಗಿರುವ ಕೃಷ್ಣ ಚೈತನ್ಯವನ್ನು ಎಬ್ಬಿಸಿ. ‘ಕೃಷ್ಣ ನನಗಿಂತಲೂ ಎಲ್ಲೋ ದೂರದಲ್ಲಿಲ್ಲ. ಅವನು ನನ್ನೊಳಗಿದ್ದಾನೆ’ ಎಂಬ ಭಾವನೆ ಮಾತ್ರದಿಂದಲೇ ಜೀವನವು ಕೃಷ್ಣನಿಂದ ತುಂಬಿ ಹೋಗುತ್ತದೆ.
| ಗುರುದೇವ ಶ್ರೀ ಶ್ರೀ ರವಿಶಂಕರ್
ಇವರೇ ನೋಡಿ ಆಲ್ಕೋಹಾಲ್​ ಮುಟ್ಟದ ಟೀಮ್ ಇಂಡಿಯಾದ ಮೂವರು ಸ್ಟಾರ್​ ಕ್ರಿಕೆಟಿಗರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − sixteen =
Remember me
