ಬೆಂಗಳೂರು:ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಅಡಗೂರು ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಕೈ ತಪ್ಪಲು ಕಾರಣ ಏನು? ಎನ್ನುವುದು ರಾಜಕೀಯವಾಗಿ ಬಹು ರ್ಚಚಿತ ಸಂಗತಿಯಾಗಿದೆ. ಕಾಂಗ್ರೆಸ್, ಜೆಡಿಎಸ್​ನಲ್ಲಿ ನೆಲೆ ನಿಲ್ಲದ ವಿಶ್ವನಾಥ್ ಬಿಜೆಪಿಗೂ ಅಪಥ್ಯವಾಗಿದ್ದು ಯಾಕೆ? ಎನ್ನುವುದಕ್ಕೆ ಅವರತ್ತಲೇ ಬೊಟ್ಟು ಮಾಡಿ ಹೇಳುತ್ತಿವೆ ಹಲವು ಸಂಗತಿಗಳು. ವಿಶ್ವನಾಥ್​ಗೆ ಟಿಕೆಟ್ ನೀಡಬೇಕು ಎನ್ನುವ ವಿಷಯ ಯಾವುದೇ ಹಂತದಲ್ಲಿ ಪಕ್ಷದಲ್ಲಿ ಒಮ್ಮತಾಭಿಪ್ರಾಯ ಮೂಡಲಿಲ್ಲ. ಇದಕ್ಕೆ ಅವರ ನಡವಳಿಕೆಗಳು ಕಾರಣ ಎಂದು ಬಿಜೆಪಿ ಪಟ್ಟಿ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಅಂತಿಮ ಹಂತದ ತನಕ ಸರ್ಕಸ್ ಮಾಡಿದ್ದು ದಿಟ. ಆದರೆ, ವಿಶ್ವನಾಥ್​ಗೆ ಟಿಕೆಟ್ ಕೊಡಲೇಬೇಕು ಎಂಬ ಧ್ವನಿ ಬಿಜೆಪಿಯ ಯಾವ ನಾಯಕರಿಂದಲೂ ಬರಲಿಲ್ಲ. ಅಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿ ಅಧಿಕಾರ ಹಿಡಿದಿರುವ ಸಚಿವರಾದಿಯಾಗಿ ಯಾರೂ ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಲಿಲ್ಲ! ವಿಚಾರವಾದಿಯಾಗಿರುವ ವಿಶ್ವನಾಥ್ ಅವರನ್ನು ಪಕ್ಷದೊಳಗೆ ಅರಗಿಸಿಕೊಳ್ಳುವುದು ಕಷ್ಟ. ನಮ್ಮ ವಿಚಾರಧಾರೆಯಲ್ಲಿ ವಿಶ್ವನಾಥ್ ಇನ್ನೂ ಹದಗೊಳ್ಳಬೇಕಾದ ಅಗತ್ಯವಿದೆ. ಆದ್ದರಿಂದ ಈಗಲೇ ಏಕಾಏಕಿ ಅವರಿಗೆ ಮಣೆ ಹಾಕುವುದು ಬೇಡ ಎನ್ನುವುದು ಪಕ್ಷದ ಪ್ರಮುಖರ ನಡುವೆ ಚರ್ಚೆ ನಡೆದಿತ್ತು. ಆರ್​ಎಸ್​ಎಸ್ ಪ್ರಮುಖರು ಕೂಡ ವಿಶ್ವನಾಥ್ ಪರ ಒಲವು ತೋರಿಸಿರಲಿಲ್ಲ. ಈ ಎಲ್ಲ ಮಾಹಿತಿಗಳನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಜೊತೆಗೆ ಹೊಂದಾಣಿಕೆ ರಾಜಕೀಯದಲ್ಲಿರುವ ಕೆಲ ಜೆಡಿಎಸ್-ಕಾಂಗ್ರೆಸ್ ನಾಯಕರು, ತಮಗಿರುವ ಸಂಪರ್ಕ ಬಳಸಿಕೊಂಡು ಎಚ್.ವಿಶ್ವನಾಥ್​ಗೆ ಟಿಕೆಟ್ ನೀಡುವ ಹಂತದಲ್ಲಿ ಅಡ್ಡಗಾಲು ಹಾಕಿದ್ದರು ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ.
ಬಿಜೆಪಿ ಸೇರಿದ ಬಳಿಕ ವಿಶ್ವನಾಥ್ ಸಿಎಂ ಭೇಟಿ ಮಾಡಿ ಹೋಗುತ್ತಿದ್ದರೇ ವಿನಾ ಪಕ್ಷದ ಕಚೇರಿ ಜತೆ ಹೆಚ್ಚು ಸಂಪರ್ಕ ಬೆಸೆದುಕೊಳ್ಳಲಿಲ್ಲ. ನಾಯಕರೊಟ್ಟಿಗೂ ಹೆಚ್ಚು ಒಡನಾಟ ಇಟ್ಟುಕೊಳ್ಳಲಿಲ್ಲ. ಇದೆಲ್ಲವೂ ಅವರಿಗೆ ಮಾರಕ ಆಗಿರಬಹುದು ಎಂದು ಪಕ್ಷದ ಪ್ರಮುಖರ ಅನಿಸಿಕೆ. ರಾಜ್ಯದಲ್ಲಿ ಬಿಎಸ್​ವೈ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ವಿಶ್ವನಾಥ್ ಶ್ರಮವೂ ಇದೆ ಎನ್ನುವುದು ಬಿಜೆಪಿ ನಾಯಕರಿಗೆ ತಿಳಿದಿದೆ. ಇಲ್ಲಿ ಅಂದುಕೊಂಡಂತೆ ಏನೂ ನಡೆಯುವುದಿಲ್ಲ ಎನ್ನುವ ಮಾಹಿತಿ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಎಲ್ಲರಿಗೂ ಸಂದೇಶ ಕಳುಹಿಸುವುದು ಹೈಕಮಾಂಡ್ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:10 ವರ್ಷಗಳ ಬಳಿಕ ಸಿಕ್ಕಿಬಿದ್ದ ಗುತ್ತಿಗೆದಾರನ ಸೋಗಿನ ಅತ್ಯಂತ ಸ್ಮಾರ್ಟ್​ ಕಳ್ಳ!
ಸಮಾಧಾನಿಸಿದ ಸಿಎಂ ಬಿಎಸ್​ವೈ:ಟಿಕೆಟ್ ಕೈ ತಪ್ಪಿದ ತೀವ್ರ ಬೇಸರದಿಂದಲೇ ತಮ್ಮನ್ನು ಭೇಟಿಯಾಗಿದ್ದ ಎಚ್.ವಿಶ್ವನಾಥ್ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾಧಾನಿಸಿದ್ದಾರೆ. ನಿಮಗೆ ಟಿಕೆಟ್ ನೀಡಬೇಕೆಂದು ಕೋರ್ ಕಮಿಟಿಯಲ್ಲಿ ಹೆಸರು ಅಂತಿಮಗೊಳಿಸಿ ಕಳುಹಿಸಿಕೊಟ್ಟಿದ್ದೆವು. ದೆಹಲಿ ಮಟ್ಟದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಕೊನೇ ತನಕ ನಿಮ್ಮ ಪರವಾಗಿಯೇ ವಾದಿಸಿದ್ದು ಪ್ರಯೋಜನವಾಗಿಲ್ಲ. ಆದರೂ ಬೇಸರಿಸಿಕೊಳ್ಳಬೇಡಿ. ಮುಂದೆ ಅವಕಾಶಗಳು ಬಂದೇ ಬರುತ್ತವೆ. ಆಗ ನಿಮಗೆ ಆಗಿರುವ ಅನ್ಯಾಯ ಸರಿಪಡಿಸುವ ಜವಾಬ್ದಾರಿ ನಮ್ಮದು ಎಂದು ಬಿಎಸ್​ವೈ ವಿಶ್ವಾಸ ತುಂಬಿದ್ದಾರೆ.
ಸಿದ್ದರಾಮಯ್ಯದು ಕುತಂತ್ರ ರಾಜಕಾರಣ ಕುಮಾರಸ್ವಾಮಿಯದ್ದು ರಾಕ್ಷಸ ಸರ್ಕಾರ:ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗಬಹುದೆಂಬ ಭರವಸೆ ಇದೆ. ನನಗೆ ಪರಿಷತ್ ಟಿಕೆಟ್ ತಪ್ಪಿಸುವಲ್ಲಿ ಕೆಲ ಕಾಣದ ಕೈಗಳು ಕೆಲಸ ಮಾಡಿದ್ದು, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಷಡ್ಯಂತ್ರ ನಡೆಸಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರದ್ದು ಕುತಂತ್ರ ರಾಜಕಾರಣ. ಅಧಿಕಾರ ಕಳೆದುಕೊಂಡು ಕುಮಾರಸ್ವಾಮಿ ಹುಚ್ಚುಚ್ಚಾಗಿ ಮಾತನ್ನಾಡುತ್ತಿದ್ದಾರೆ. ಇವರ ಗೋಳಾಟ ರಾಜ್ಯದ ಜನರಿಗೂ ಗೊತ್ತಾಗಿದೆ. ಸಮ್ಮಿಶ್ರ ಸರ್ಕಾರ ರಾಕ್ಷಸ ರಾಜಕಾರಣಕ್ಕೆ ಓಂನಾಮ ಬರೆದಿತ್ತು, ರಾಕ್ಷಸ ಸರ್ಕಾರವನ್ನ ಕಿತ್ತೊಗೆಯುವ ಸಲುವಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆವು. ನಮ್ಮ ಪ್ರಯತ್ನದ ಫಲವಾಗಿ ಯಡಿಯೂರಪ್ಪ ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದರು. ಈ ವಿಶ್ವನಾಥ್ ರಾಜಕಾರಣದಲ್ಲಿ ಯಾವತ್ತೂ ಏಕಾಂಗಿಯಲ್ಲ, ಹಳ್ಳಿಹಕ್ಕಿಗೆ ಗೂಡಿನಲ್ಲಿ ಕೂರುವ ಜಾಯಮಾನವಿಲ್ಲ. ಸ್ವಚ್ಛಂದವಾಗಿ ವಿಹರಿಸುತ್ತೆ ಹಾಡುತ್ತೆ ಎಂದರು.
ಅವನಿಗೆ ಬುದ್ಧಿ ಇಲ್ಲ..:ನಾಲಿಗೆ ಇದೆ ಅಂತ ಏನು ಬೇಕಾದರೂ ಮಾತನಾಡಬಾರದು. ವಿಶ್ವನಾಥ್ ಬಿಜೆಪಿ ಸೇರಿ ಆ ಪಕ್ಷವನ್ನು ಅಧಿಕಾರಕ್ಕೆ ತಂದರು. ಇಂದು ಬೀದಿಬದಿ ವ್ಯಾಪಾರಿಗಳನ್ನ ಬೀದಿಗೆ ತಂದಿದ್ದಾರೆ. ವಿಶ್ವನಾಥ್ ರಾಕ್ಷಸಿ ಸರ್ಕಾರ ತಂದರು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರೆ, ‘ವಿಧಾನಪರಿಷತ್ ಚುನಾವಣೆಯಲ್ಲಿ ವಿಶ್ವನಾಥ್​ಗೆ ನಾನೇಕೆ ಟಿಕೆಟ್ ತಪ್ಪಿಸಲಿ. ಹಾಗಾದರೆ ವಿಶ್ವನಾಥ್ ಪ್ರಕಾರ ಬಿಜೆಪಿಗೂ ನಾನೇ ಹೈಕಮಾಂಡಾ? ಅವನಿಗೆ ಬುದ್ಧಿ ಇಲ್ಲ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eighteen =
Remember me
