ಪ್ರಬುದ್ಧ ಮತ್ತು ಪ್ರಜ್ಞಾವಂತ ಸಮಾಜಗಳಲ್ಲಿ ಯಾರು ಆದರ್ಶವ್ಯಕ್ತಿಗಳೋ, ಯಾರು ಅನುಕರಣೀಯರೋ, ಯಾರು ಜೀವನದ ಎಲ್ಲ ಸಂದರ್ಭಗಳಲ್ಲೂ ಮೇಲ್ಪಂಕ್ತಿಯಾಗಬಲ್ಲರೋ ಅವರೇ ಸಮಾಜದ ಗತಿಯನ್ನು ನಿರ್ಧರಿಸುವವರಾಗಬೇಕು. ಅವರ ಚಿಂತನೆಗಳು, ಅಭಿಪ್ರಾಯಗಳೇ ಆಡಳಿತದ ಯಂತ್ರಕ್ಕೆ ಮಾರ್ಗದರ್ಶಿ ಸೂತ್ರಗಳಾಗಬೇಕು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಳಮದ್ದಲೆ ಎಂಬ ಕಲಾರೂಪವಿದೆ. ಇಲ್ಲಿ ಇತಿಹಾಸ, ಪುರಾಣ ಇತ್ಯಾದಿಗಳ ಒಂದು ಘಟನೆಯನ್ನು ತೆಗೆದುಕೊಂಡು ವಿದ್ವತ್ತು, ಘನತೆಗಳಿಗೆ ಹೆಸರಾದ ಮಾನ್ಯರೊಬ್ಬರು ಅದರ ಅದ್ಭುತ ವಿಶ್ಲೇಷಣೆಯನ್ನು ಮಾಡುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಸಿದ್ಧಹಸ್ತರಾಗಿದ್ದವರು ಶ್ರೀಮಾನ್ ಸಾಮಗರು. ರಾಮಾಯಣದ ವಾಲಿವಧೆ ಎಂಬ ಪ್ರಸಂಗ, ವಾಲಿ ಮತ್ತು ಶ್ರೀರಾಮರ ನಡುವೆ ಸಂವಾದ. ವಾಲಿ ರಾಮನನ್ನು ಪ್ರಶ್ನಿಸುತ್ತಾನೆ. ‘ಮರೆಯಲ್ಲಿ ನಿಂತು ನೀನು ಬಾಣ ಹೂಡಿದ್ದು ಸರಿಯೋ?’ ರಾಮನ ಉತ್ತರ ಸಿದ್ಧವಾಗಿಯೇ ಇತ್ತು. ‘ಮಗಳಸಮಾನಳಾದ ತಮ್ಮನ ಹೆಂಡತಿಯನ್ನು ನಿನ್ನ ಹೆಂಡತಿಯ ಸ್ಥಾನದಲ್ಲಿ ಕುಳ್ಳಿರಿಸಿರುವುದು ಸರಿಯೋ?’ ವಾಲಿಯ ಮರುಪ್ರಶ್ನೆ, ‘ಆ ನಿಯಮಗಳೆಲ್ಲ ನಿಮ್ಮಮನುಷ್ಯ ಸಮಾಜದಲ್ಲಿ! ನಾವು ವಾನರರು; ಕಪಿಗಳು. ನಮಗಿಲ್ಲ ಆ ನಿಯಮ’. ಈಗ ರಾಮನೇನೂ ತಬ್ಬಿಬ್ಬಾಗುವುದಿಲ್ಲ. ‘ಹಾಗಾದರೆ ಮೃಗವೊಂದನ್ನು ಕೊಲ್ಲಬೇಕಾದರೆ ಎದುರಿಗೆ ನಿಂತೇ ಬಾಣವನ್ನು ಬಿಡಬೇಕೆಂದೇನೂ ಇಲ್ಲ’. ವಾಲಿ ಬಾಯಿಮುಚ್ಚುತ್ತಾನೆ.
ಆಧುನಿಕ ಬುದ್ಧಿಜೀವಿಗಳಿಗೂ ವಾಲಿಯಂತೆಯೇ ಪ್ರಶ್ನೆಗಳು ಬಂದು ಅದರ ಬಗ್ಗೆ ಥಿಸೀಸ್ ಬರೆದು ಪ್ರಶಸ್ತಿ, ಬಿರುದುಗಳನ್ನು ಸರ್ಕಾರಗಳಿಂದ ಪಡೆದುಕೊಂಡಿದ್ದರೆ ಆಶ್ಚರ್ಯವೇನೂ ಇಲ್ಲ. ಕೆಲವೊಮ್ಮೆ ಭಕ್ತರು ಬಂದು ಮುಖಪುಸ್ತಕ (ಫೇಸ್​ಬುಕ್)ದಲ್ಲಿ ಬರುವ ಇಂಥ ವಿಚಿತ್ರಗಳನ್ನು ತೋರಿಸುತ್ತಿರುತ್ತಾರೆ. ಅಗ್ಗದ ಪ್ರಚಾರಕ್ಕಾಗಿಯೋ ಅಥವಾ ಕೆಲ ಅನ್ಯಧರ್ವಿುಯ ಪಟ್ಟಭದ್ರ ಹಿತಾಸಕ್ತಿಗಳು ಕಾಲಕಾಲಕ್ಕೆ ಕೊಡುವ ಆಕರ್ಷಣೆಗಳಿಗೆ ಕಟ್ಟುಬಿದ್ದೋ ಇಂದು ಹಲವು ಜನ ತಲೆಬುಡವಿಲ್ಲದೆ ಮಾಧ್ಯಮಗಳಲ್ಲಿ ಹರಟುತ್ತಿರುತ್ತಾರೆ. ಸವಲತ್ತುಗಳಿದ್ದಲ್ಲಿ ಸತ್ಯಕ್ಕೆ ಎಳ್ಳುನೀರು ಬಿಟ್ಟೇ ಬಿಡಬಹುದು ಎಂಬ ಅನುಷ್ಠಾನಶೀಲ ಶೀಲವೊಂದನ್ನು ಇವರು ಕಂಡುಹಿಡಿದುಬಿಟ್ಟಿದ್ದಾರೆ. ತಲೆಯೊಳಗೆ ಮಿದುಳಿಲ್ಲದ ವ್ಯಕ್ತಿಯೊಬ್ಬ ವರ್ಣಾಶ್ರಮದ ಬಗ್ಗೆ ಇಂಥ ಥಿಸೀಸ್ ಒಂದನ್ನು ಒದರುತ್ತಿದ್ದುದನ್ನು ಇತ್ತೀಚೆಗೆ ನಾನೇ ನೋಡಿದೆ. ಸ್ವಾಮಿ ವಿವೇಕಾನಂದರಾದಿಯಾಗಿ ಎಷ್ಟೋ ವಿಶ್ವಮಾನ್ಯ ವಿದ್ವಾಂಸರು ಇದರ ಬಗ್ಗೆ ಸರ್ವಸಮ್ಮತ ಚರ್ಚೆಗಳನ್ನು ಮಾಡಿ ಮುಗಿಸಿದ್ದಾರೆ. ಅವುಗಳ ವಿವರಣೆ ಪ್ರಸ್ತುತವೇ ಹೊರತು ಅಲ್ಪತೆಯ ಗೊಣಗಾಟಗಳಲ್ಲ.
ಈ ವಿಷಯ ಒತ್ತಟ್ಟಿಗಿರಲಿ. ಮನುಷ್ಯರಾಗಿ ಕಾಣುತ್ತಿರುವವರೆಲ್ಲ ಮನುಷ್ಯರಲ್ಲ ಎಂಬ ಸತ್ಯವನ್ನು ಸನಾತನ ಧರ್ಮ ಎಂದೋ ಕಂಡುಕೊಂಡಿದೆ. ಇದನ್ನೇ ಬ್ರಿಟಿಷ್ ಚಿಂತಕ, ನೊಬೆಲ್ ವಿಜೇತ ಬಟರ್Åಂಡ್ ರಸೆಲ್, ‘ಗಛಿ ಚ್ಟಛಿ ಚ್ಝ್ಝ ್ಚ್ಞಜಿಛಚಠಿಛಿಠ ಠಿಟ ಜ್ಠಞಚ್ಞಜಿಠಿಢ ಚ್ಞಛ ್ಞಠಿ ಜ್ಠಞಚ್ಞಠ ಢಛಿಠಿ’ ಎನ್ನುತ್ತಾನೆ. ಅರ್ಥಾತ್ ‘ನಾವೆಲ್ಲ ಮನುಷ್ಯರಾಗುವುದಕ್ಕೆ ಹೊರಟವರು ; ಮನುಷ್ಯರಲ್ಲ’ ಎಂದು. ಕಾಣುತ್ತಿರುವುದು ಮನುಷ್ಯರಂತೆಯೇ ; ಆದರೆ ಇನ್ನೂ ಮನುಷ್ಯರಾಗಿಲ್ಲ ಮೃಗದಂತೆ ಕಾಣುತ್ತಿಲ್ಲ ಅಷ್ಟೇ. ‘ರೋಗವಿಲ್ಲವೆಂಬ ಮಾತ್ರಕ್ಕೆ ಆರೋಗ್ಯವಂತನೇನೂ ಅಲ್ಲ’ ಎಂಬಂತೆ!
ಹಾಗಾದರೆ ಯಾವ ಆಧಾರದ ಮೇಲೆ ಒಬ್ಬರನ್ನು ಮನುಷ್ಯರೆಂದು ಕರೆಯೋಣ? ಅವನ ಮನಸ್ಸು, ಬುದ್ಧಿ ಇತ್ಯಾದಿಗಳು ಹೇಗಿವೆಯೋ ಅದರ ಆಧಾರದ ಮೇಲೆ. ಈ ಬುದ್ಧಿ, ಮನಸ್ಸುಗಳನ್ನು ಸಂಸ್ಕೃತದಲ್ಲಿ ‘ಅಂತಃಸತ್ವ’ ಎಂದು ಕರೆಯುತ್ತಾರೆ. ಅರ್ಥಾತ್ ಒಳಗಿನ ವಸ್ತು. ಮನುಷ್ಯಲೋಕದಲ್ಲಿ ಪ್ರತಿಯೊಂದು ಸಂದರ್ಭದಲ್ಲೂ ನಾವು ಗಣನೆಗೆ ತಂದುಕೊಳ್ಳಬೇಕಾದ್ದು ಈ ಅಂತಃಸತ್ವವನ್ನೇ. ಒಂದು ಆರ್ಯೋಕ್ತಿ ಹೀಗೆ ಹೇಳುತ್ತದೆ
ಯೇಷಾಂ ನ ವಿದ್ಯಾ ನ ತಪೋ ನ ದಾನಂ |ನ ಜ್ಞಾನಂ ನ ಶೀಲಂ ನ ಗುಣೋ ನ ಧರ್ಮಃ | |ತೇ ಮರ್ತಯ ಭುವಿಭಾರಭೂತಾ |ಮನುಷ್ಯರೂಪೇಣ ಮೃಗಾಶ್ಚರಂತಿ! ||
ಯಾರಲ್ಲಿ ವಿದ್ಯೆ, ತಪಸ್ಸು, ದಾನ, ಜ್ಞಾನ, ಶೀಲ, ಗುಣ, ಧರ್ಮ ಇವುಗಳಿರುವುದಿಲ್ಲವೋ ಅವರು ಭೂಮಿಗೆ ಭಾರವಿದ್ದಂತೆ. ಮೃಗಗಳು ಮನುಷ್ಯರೂಪದಲ್ಲಿ ಚಲಿಸುತ್ತಿರುವಂತೆ.ಇಲ್ಲಿ ಅರ್ಥೈಸುವುದಕ್ಕೇನು ಬಹಳ ಕಷ್ಟಪಡಬೇಕಾಗಿಲ್ಲ. ವಿದ್ಯೆ ಎಂದರೆ ವಿವೇಚನಾ ಶಕ್ತಿ, ತಪಸ್ಸು ಎಂದರೆ ಗುರಿ ಮುಟ್ಟುವವರೆಗೆ ನಿಲ್ಲದಿರುವ ದಾಷ್ಟರ್್ಯತೆ, ಜ್ಞಾನ, ದಾನ, ಶೀಲ, ಗುಣ ಇವುಗಳನ್ನು ಯಾರೂ ಅರ್ಥೈಸಬಹುದಾದ್ದೇ, ಧರ್ಮ ಎಂದರೆ ನ್ಯಾಯಮಾರ್ಗಕ್ಕೆ ಕಟ್ಟುಬೀಳುವುದು. ಇವು ಯಾರಲ್ಲಿ ಇವೆಯೋ ಅವರು ಮಾತ್ರವೇ ಮನುಷ್ಯರು. ಬೇರೆಯವರು ಮನುಷ್ಯರೂಪದಲ್ಲಿದ್ದಾರೆ ಅಷ್ಟೇ.
ಭಾರತೀಯ ಜೀವನ ಸಂಹಿತೆ ಮನುಷ್ಯನ ಜನ್ಮವನ್ನು ಒಂದು ಸೌಭಾಗ್ಯವೆಂದಷ್ಟೇ ಕರೆದಿಲ್ಲ, ಅವನ ಜೀವನವನ್ನು ಒಂದು ಅದ್ಭುತ ಹೋರಾಟವನ್ನಾಗಿಯೂ ಮಾಡಿದೆ. ಇದೇ ನಿಜವಾದ ಹೋರಾಟ. ಇವನೇ ನಿಜವಾದ ಧೀರ. ಇತಿಹಾಸ ಇರಬೇಕಾದ್ದು ಇಂಥವರನ್ನು ಕುರಿತೇ. ದೊಡ್ಡ ದನದ ಮಂದೆಯಂತೆ ನುಗ್ಗಿ ಎದುರಿಗೆ ಬಂದವರನ್ನೆಲ್ಲ ತರಿದು, ಅವನ ಸಂಪತ್ತನ್ನು ದೋಚಿ, ಸ್ತ್ರೀಸಂಕುಲವನ್ನು ಅವಮಾನಿಸಿ, ಅಟ್ಟಹಾಸ ಕೇಕೆಗಳನ್ನು ಹಾಕುತ್ತ ಕೊನೆಗೆ ಮಗನಿಂದಲೋ ಹೆಂಡತಿಯಿಂದಲೋ ಮೋಸಕ್ಕೊಳಗಾಗಿ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು ಹಿಟ್ಲರ್​ನಂತೆ ‘ವೇರ್ ಐ ವೆಂಟ್ ರಾಂಗ್’ ಎಂದು ನಿಟ್ಟುಸಿರು ಬಿಟ್ಟು ಸಾಯುವವನಲ್ಲ ಧೀರ. ಅಪ್ರಬುದ್ಧ ಪಾಶ್ಚಾತ್ಯನೋ, ಅಪ್ರಬುದ್ಧ ಮಧ್ಯಪ್ರಾಚ್ಯನೋ, ಅವರನ್ನು ಐತಿಹಾಸಿಕ ವ್ಯಕ್ತಿಗಳೆನ್ನಬಹುದು. ಭಾರತ ಹಾಗೆನ್ನಲಾರದು. ಆದ್ದರಿಂದಲೇ ನಮ್ಮ ಇತಿಹಾಸದ ಪುಸ್ತಕಗಳು ರಾಮಾಯಣ, ಮಹಾಭಾರತಗಳು. ಇವುಗಳನ್ನೆಲ್ಲ ಕಂಡು ರೋಸಿಹೋಗಿಯೇ ಸ್ವಾಮಿ ವಿವೇಕಾನಂದರು, ‘ಭಾರತದ ಇತಿಹಾಸವನ್ನು ಭಾರತೀಯ ಮನಸ್ಸುಗಳೇ ಬರೆಯಬೇಕು’ ಎಂದಿದ್ದು. ಅಷ್ಟೇ ಅಲ್ಲ ಅವುಗಳಿಗೆ ವೇದ, ಪುರಾಣಗಳು ಮತ್ತು ಸಮಕಾಲೀನ ಭಾರತೀಯ ಸಾಹಿತ್ಯವೇ ಆಧಾರವಾಗಿರಬೇಕು ಎಂದು ಮತ್ತೆ ಮತ್ತೆ ಪುನರಾವರ್ತಿಸಿದ್ದು. ಆದರೆ ‘ಮನುಷ್ಯರೂಪೇಣ ಮೃಗಾಃ’ ಬಿರುದನ್ನು ಧರಿಸಿದವರು ಇವುಗಳನ್ನೆಲ್ಲ ತಿಳಿಯಲಾರರು.
ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆ ಎಂದರೆ ದಿನಬೆಳಗಾದರೆ ಆ ಹಗರಣ, ಈ ಭ್ರಷ್ಟಾಚಾರ, ಈ ವಂಚನೆ, ಆ ಕೊಲೆ! ಮತ್ತು ಇದನ್ನು ಮಾಡುತ್ತಿರುವವರಾದರೂ ಯಾರು? ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು, ಶಿಕ್ಷಣ ಪಡೆದವರು, ಪ್ರತಿ ತಿಂಗಳು ಜನಸಾಮಾನ್ಯರ ತೆರಿಗೆಯಿಂದ ಸಾವಿರಾರು ರೂಪಾಯಿ ಸಂಬಳ ಪಡೆಯುವವರು. ಜನರಿಂದ ಚುನಾಯಿತರಾದವರು, ನಾಯಕ ಎಂದು ಹೆಸರು ಹೊತ್ತವರು. ಬಡವರ ಬಂಧುಗಳು. ಇವರಿಗೆಲ್ಲ ಆತ್ಮಸಾಕ್ಷಿ ಸತ್ತುಹೋಗಿದೆಯೇ? ನಾಯಕರೇ ಹೀಗಿದ್ದರೆ ಇನ್ನು ಜನಸಾಮಾನ್ಯರು ಹಾದಿ ಬಿಡದೇ ಇರುವರೇ? ನಾಯಕನ ಮೊದಲ ಲಕ್ಷಣವೇ ಅವನನ್ನು ಅವನ ಅನುಯಾಯಿಗಳು ಆಂಶಿಕವಾಗಿ ಅನುಸರಿಸಿದರೂ ವ್ಯವಸ್ಥೆ ಸುಭದ್ರವಾಗಿರಬೇಕು. ಏಕೆಂದರೆ ಅನಾಚಾರ, ಅವ್ಯವಹಾರಗಳು ತೂತು ಬಿದ್ದ ಮಡಕೆಯಂತೆ. ಇಂಥ ಸಮಾಜದಲ್ಲಿ ಎಷ್ಟೇ ಸಂಪನ್ಮೂಲಗಳಿದ್ದರೂ, ಎಷ್ಟೇ ಉತ್ಪಾದನೆಗಳಾದರೂ ಜನಸಾಮಾನ್ಯರಿಗೆ ಅವು ತಲುಪುವುದಿಲ್ಲ. ರಾಜಧಾನಿಯಿಂದ ಹೊರಟ ಒಂದು ರೂಪಾಯಿ ಪ್ರಜೆಯನ್ನು ಮುಟ್ಟುವ ವೇಳೆಗೆ ಹದಿನೈದು ಪೈಸೆಯಾಗಿರುತ್ತದೆ ಎಂದು ಮಾಜಿ ಪ್ರಧಾನಿಯೊಬ್ಬರು ಹಲುಬಿದ್ದನ್ನು ನೆನೆಸಿಕೊಳ್ಳೋಣ. ಆಡಳಿತಯಂತ್ರಕ್ಕೆ ಇರಬೇಕಾದ ಮೊದಲ ಅರ್ಹತೆಯೇ ಶುದ್ಧಹಸ್ತ . ವೇದಕಾಲದಿಂದ ಮೆಕಾಲೆ ಪದ್ಧತಿ ಬರುವವರೆಗೂ ಭಾರತದಲ್ಲಿ ಶಿಕ್ಷಣದ ಸಾರವಿರುತ್ತಿದ್ದುದು ಮನುಷ್ಯತ್ವವನ್ನು ಬೆಳೆಸಿಕೊಳ್ಳುವುದರ ಕಡೆಗೆ.
ಮನುಷ್ಯ ಮತ್ತು ಮನುಷ್ಯರೂಪದ ಮೃಗಗಳಿಗಿರುವ ವ್ಯತ್ಯಾಸವನ್ನು ನೆನಪಿಸಿಕೊಳ್ಳಿ! ಪವಿತ್ರಾತ್ಮನೇ ಪಾವಿತ್ರ್ಯವೇ ಇಲ್ಲಿ ಪರಮೋಚ್ಚ ಆದರ್ಶ. ನೈತಿಕ ಬದ್ಧತೆ ಮತ್ತು ಅದಕ್ಕಾಗಿ ಯಾವ ವೈಯಕ್ತಿಕ ಸವಲತ್ತನ್ನೂ ಪಕ್ಕಕ್ಕಿಡಬಲ್ಲ ದೃಢತೆಯೇ ಇಲ್ಲಿ ಪಾವಿತ್ರ್ಯ ಅಥವಾ ಶೌಚ. ಅರ್ಥಪೂರ್ಣ ಜೀವನದ, ಆದರ್ಶ ಜೀವನದ ಬುನಾದಿಯೇ ಶೌಚ. ಅದರಿಂದ ಸಿಗುವ ಆತ್ಮಾಭಿಮಾನ ಮತ್ತು ಸಾಮಾಜಿಕ ಗೌರವಗಳೇ ಪ್ರತಿಷ್ಠಿತ ಜನರ ವ್ಯಕ್ತಿಪ್ರತಿಷ್ಠೆಗೆ ಬುನಾದಿ ಎಂದು ಪತಂಜಲಿ ಹೇಳುತ್ತಾನೆ. ಇದು ಸುಲಭವಲ್ಲ ಅದು ಎಲ್ಲರಿಗೂ ಗೊತ್ತು. ಆದರೆ ಹತ್ತರಲ್ಲಿ ಹನ್ನೊಂದನೆಯವನಂತೆ ಬದುಕದೇ ನನಗೂ ಒಂದು ಸ್ಥಾನವಿದೆ, ಮಾನವಿದೆ ಎಂದು ಬದುಕಲಿಚ್ಛಿಸುವ ವ್ಯಕ್ತಿ ಸುಲಭವಾಗಿ ಸಿಗುವ ಮಾರ್ಗವನ್ನು ಅನುಸರಿಸಿದರೆ ಸಮಕಾಲೀನ ಭಾರತೀಯ ಸಮಾಜದಂತೆ ವ್ಯವಸ್ಥೆ ನರಕಸದೃಶವಾಗುವುದೇ ದಿಟ. ಈಗ ಆಗುತ್ತಿರುವುದೂ ಹಾಗೆಯೇ.
ಧರ್ಮವಿದ್ದಲ್ಲಿ ಜಯವಿದೆ ಎನ್ನುವ ಸಂಶೋಧನೆ ನಡೆದಿದ್ದು ಭಾರತದಲ್ಲೇ! ಆದರೆ ಆ ಧರ್ಮದ ಹತ್ತು ಲಕ್ಷಣಗಳಲ್ಲಿ ಮೊದಲನೆಯದ್ದೇ ಧೃತಿ. ಧೃತಿ ಎಂದರೆ ಸಂದರ್ಭ ಬಂದಾಗ ಕಲ್ಲೆದೆಯವನಾಗುವುದು. ರಾಮನಂತೆ. ಇಂಥ ಮಾತುಗಳನ್ನು ಹೇಳುವಾಗ ನನ್ನ ಕಣ್ಮುಂದೆ ಬರುವುದೇ ಶ್ರೀರಾಮಕೃಷ್ಣರ ತಂದೆ ಕ್ಷುಧಿರಾಮ್ ಚಟರ್ಜಿಯವರ ಉದಾಹರಣೆ. ಕೋರ್ಟಿನಲ್ಲಿ ಸುಳ್ಳುಸಾಕ್ಷಿ ಹೇಳುವುದನ್ನು ನಿರಾಕರಿಸಿ ತಮ್ಮ ಇಡೀ ಆಸ್ತಿ (ಐವತ್ತು ಎಕರೆ ಭೂಮಿ )ಯನ್ನೇ ಕಳೆದುಕೊಂಡವರು ಅವರು. ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಂದವರು. ಆದರೆ ಇವರ ಮತ್ತು ಇಂಥವರ ಬಗ್ಗೆ ನಮ್ಮ ಪುಸ್ತಕಗಳು ಮೌನ. ಉಛ್ಠ್ಚಠಿಜಿಟ್ಞ ಡಿಜಿಠಿಜಟ್ಠಠಿ ್ಟ್ಝಜಜಿಟ್ಞ ಞಚkಛಿಠ ಚ ಞಚ್ಞ ಚ cಛಿಡಛ್ಟಿ ಚ್ಞಜಿಞಚ್ಝ ಎಂದು ಅರಿಸ್ಟಾಟಲ್ ಹೇಳಿರುವುದು ನಮ್ಮನ್ನೇ ಕುರಿತಂತಿದೆ. ಆಧುನಿಕ ಸಮಾಜ ಈ ಕ್ಲೆವರ್​ನೆಸ್​ನ್ನೇ ಸ್ಮಾರ್ಟ್​ನೆಸ್ ಎಂದು ಕರೆದು ಮ್ಯಾನೆಜ್​ವೆುಂಟ್ ಅಧ್ಯಯನ ಇತ್ಯಾದಿಗಳಲ್ಲಿ ಅದರ ತರಬೇತಿಯನ್ನೂ ನೀಡುತ್ತಿದೆ. ಈ ಕ್ಲೆವರ್​ನೆಸ್ ಅಥವಾ ಸ್ಮಾರ್ಟ್​ನೆಸ್ ಇರುವವರನ್ನು ಭಾರತೀಯ ಸಂಸ್ಕೃತಿ ಮೂರನೇ ಸ್ಥಾನದಲ್ಲಿಟ್ಟಿತ್ತು. ಕ್ಷುಧೀರಾಮ್ ಚಟರ್ಜಿಯಂಥವರನ್ನೇ ಮೊದಲ ಸ್ಥಾನದಲ್ಲಿಟ್ಟಿದ್ದುದು.
17, 18ನೇ ಶತಮಾನಗಳ ಬ್ರಿಟಿಷ್ ಆಡಳಿತಯಂತ್ರದ ಈ ಸ್ಮಾರ್ಟ್​ನೆಸ್​ನಿಂದ ರೋಸಿಹೋಗಿದ್ದ ಆಂಗ್ಲೋಐರಿಷ್ ಕವಿ ಜೊನಾಥನ್ ಸ್ವಿಫ್ಟ್ ತನ್ನ ಎlಜಿಡಛ್ಟಿ’ಠ ಠ್ಟಿಚಡಛ್ಝಿಠ ನಲ್ಲಿ ಆಡಳಿತವರ್ಗಕ್ಕೆ ಮುಖ್ಯವಾಗಿ ಬೇಕಾದ್ದು ‘ನೈತಿಕ ಸೆ ್ಥರ್ಯವೇ ಹೊರತು ಗುಳ್ಳೆನರಿಯ ಬುದ್ಧಿಯಲ್ಲ’ ಎಂದು ಹೇಳಿ ಕುಟುಕುತ್ತಾನೆ. ನರಿಬುದ್ಧಿಯನ್ನು ಬಳಸಬೇಕಾದ್ದು ದುಷ್ಟಶಕ್ತಿಗಳ ವಿರುದ್ಧ ಮಾತ್ರ. ಶ್ರೀಕೃಷ್ಣ ಮತ್ತು ಚಾಣಕ್ಯರು ಇದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ. ಚಾಣಕ್ಯನಂಥ ಚಾಣಕ್ಯನೂ ಪಟ್ಟಾಭಿಷಕ್ತನಾದ ಚಂದ್ರಗುಪ್ತನಿಗೆ ಪ್ರಧಾನಮಂತ್ರಿಯನ್ನಾಗಿ ನಿಯೋಜಿಸುವುದು ಪ್ರಾಮಾಣಿಕತೆ, ಸ್ವಾಮಿನಿಷ್ಠೆ, ಶುದ್ಧಹಸ್ತಗಳಿಗೆ ಹೆಸರಾದ ಅಮಾತ್ಯ ರಾಕ್ಷಸನನ್ನೇ. ಎಂದಿಗೂ ಮೊದಲ ಸ್ಥಾನವಿರಬೇಕಾದ್ದೇ ಸದ್ಗುಣಗಳಿಗೆ. ಎಲ್ಲ ಸಾಮರ್ಥ್ಯಗಳೂ ನಂತರ ಬರಬೇಕಾದ್ದೇ. ಸ್ಪಷ್ಟ ಮಾತುಗಳಲ್ಲಿ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ, ‘ಹೃದಯ ಮತ್ತು ಬುದ್ಧಿಗಳ ನಡುವೆ ಘರ್ಷಣೆ ಉಂಟಾದಾಗ ಹೃದಯದ ಮಾತುಗಳನ್ನೇ ಅನುಸರಿಸು’ ಎಂದು. ಇಷ್ಟು ಮಹತ್ವಪೂರ್ಣವಾದ ನೈತಿಕ ಶಿಕ್ಷಣ ಇಂದು ನಮ್ಮಲ್ಲಿ ಯಾವ ಸ್ಥಾನವನ್ನು ಅಲಂಕರಿಸಿದೆ.
ಐವತ್ತು ವರ್ಷದ ಹಿಂದೆ ಮಧ್ಯಾಹ್ನದ ತರಗತಿಗಳಲ್ಲಿ ಮಾರಲ್ ಹೆಲ್ತ್ ಎಂದು ಒಂದು ಪಿರಿಯಡ್ ಇರುತ್ತಿತ್ತು. ತರಗತಿಯಲ್ಲೇನಾದರೂ ನಿದ್ದೆ ಬಂದರೆ ವಿದ್ಯಾರ್ಥಿಗಳು ನಿದ್ದೆ ಮಾಡಿ ಬಿಡಲಿ ಎನ್ನುವ ಉದ್ದೇಶವಿರಲಿಲ್ಲವೆಂದು ಭಾವಿಸುತ್ತೇನೆ. ದಿನಗಳೆದಂತೆ ಆ ತರಗತಿಯು ಲೆಟ್ ಆಫ್ ಆಗುವುದಕ್ಕೆ ಪ್ರಾರಂಭವಾಯಿತು. ಒಟ್ಟಿನಲ್ಲಿ ಮಾರೆಲಿಟಿಗೆ ಲೆಟ್ ಆಫ್ ಕೊಟ್ಟುಬಿಟ್ಟಿತು ನಮ್ಮ ಶಿಕ್ಷಣ ವ್ಯವಸ್ಥೆ. ಪ್ರಬುದ್ಧ ಮತ್ತು ಪ್ರಜ್ಞಾವಂತ ಸಮಾಜಗಳಲ್ಲಿ ಯಾರು ಆದರ್ಶವ್ಯಕ್ತಿಗಳೋ, ಯಾರು ಅನುಕರಣೀಯರೋ, ಯಾರು ಜೀವನದ ಎಲ್ಲ ಸಂದರ್ಭಗಳಲ್ಲೂ ಮೇಲ್ಪಂಕ್ತಿಯಾಗಬಲ್ಲರೋ ಅವರೇ ಸಮಾಜದ ಗತಿಯನ್ನು ನಿರ್ಧರಿಸುವವರಾಗಬೇಕು. ಅವರ ಚಿಂತನೆಗಳು, ಅಭಿಪ್ರಾಯಗಳೇ ಆಡಳಿತದ ಯಂತ್ರಕ್ಕೆ ಮಾರ್ಗದರ್ಶಿ ಸೂತ್ರಗಳಾಗಬೇಕು. ಅಷ್ಟೇ ಅಲ್ಲ ಅವರೇ ಉನ್ನತ ಮಟ್ಟದ ಜವಾಬ್ದಾರಿ ಸ್ಥಾನಗಳನ್ನು ಅಲಂಕರಿಸಬೇಕು ಕೂಡ. ಏಕೆಂದರೆ ಮೌಲ್ಯಗಳ ವಿಷಯ ಬಂದಲ್ಲಿ ವಜ್ರದಷ್ಟು ಕಠೋರವಾಗಬಲ್ಲರು ಅವರು. ‘ವಜ್ರಾದಪಿ ಕಠೋರಾಣಿ’ ಎಂದರೆ ಇದೇ ಅರ್ಥ. ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇಲ್ಲಿ ಸ್ಮರಣೀಯ.
ಈ ಸೂತ್ರಗಳನ್ನೆಲ್ಲ ಆಡಳಿತವರ್ಗ ಗಮನಿಸಬೇಕು. ಮೊದಲು ತನ್ನನ್ನೇ ಈ ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸಿಕೊಳ್ಳಬೇಕು. ಗೋಪುರವನ್ನಾಗಲಿ ಯಾವುದೇ ವಸ್ತುವನ್ನಾಗಲಿ ತೊಳೆಯಬೇಕಾದ್ದು ಮೇಲಿನಿಂದಲೇ. ಆದ್ದರಿಂದಲೇ ವ್ಯವಸ್ಥೆಯೊಂದರಲ್ಲಿ ನಾಯಕತ್ವ ಬಹಳ ಮುಖ್ಯ. ನಾಯಕನಲ್ಲಿರಬೇಕಾದ ಮೊದಲ ಪ್ರತಿಭೆ, ಮೊದಲ ಅರ್ಹತೆ, ಮೊದಲ ಸಾಮರ್ಥ್ಯವೇ ಆದರ್ಶ ವ್ಯಕ್ತಿತ್ವ. ಬೇರೆಲ್ಲದಕ್ಕೂ ನಂತರದ ಸ್ಥಾನವಷ್ಟೇ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ತಾತ್ಕಾಲಿಕ ತಡೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 17 =
Remember me
