ಬಾಂಗ್ಲಾದೇಶ ನಿರ್ವಣದ ಕಾಲಕ್ಕೆ ಭಾರತ ಮಾಡಿದ ಸಹಾಯದ ನೆನಪನ್ನು ಬಾಂಗ್ಲಾದೇಶ ನಿರ್ವತೃ ಶೇಖ್ ಮುಜಿಬುರ್ ರೆಹಮಾನ್ ಮಾತ್ರವಲ್ಲ ಅವರ ಪುತ್ರಿ ಶೇಖ್ ಹಸೀನಾ ಕೂಡ ಎಂದೂ ಮರೆತವರಲ್ಲ. ಬಾಂಗ್ಲಾದ ಬಾಂಧವ್ಯವನ್ನು ಭಾರತದೊಂದಿಗೆ ಹಸೀನಾ ಸದಾ ಉತ್ತಮವಾಗಿ ಇಟ್ಟುಕೊಂಡವರು. ಹಸೀನಾ ಮತ್ತು ಭಾರತದ ಅನ್ಯೋನ್ಯತೆಯೂ ಹೊಸದಲ್ಲ.
ನೆರೆಯ ಬಾಂಗ್ಲಾದೇಶದಲ್ಲಿ ಆಗಿರುವ ಕ್ಷಿಪ್ರ ರಾಜಕೀಯ ಬಂಡಾಯ ಭಾರತ ಪರ ಚಿಂತಿಸುವ ಕೋಟ್ಯಂತರ ಜನರಲ್ಲಿ ಕಳವಳ ಉಂಟು ಮಾಡಿದೆ. ಕಾರಣ, ಬಾಂಗ್ಲಾದೇಶದಲ್ಲಿರುವ ಹಿಂದೂಗಳು, ಸಿಖ್ಖರು, ಬೌದ್ಧರು ಸೇರಿದಂತೆ ಅಲ್ಲಿನ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಪದಚ್ಯುತಗೊಂಡ ಪ್ರಧಾನಿ ಶೇಖ್ ಹಸೀನಾರ ವಿರೋಧಿಗಳು ನಿರಂತರ ದಾಳಿ ಮಾಡುತ್ತಿರುವುದು. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕೋಮು ಹಿಂಸಾಚಾರದಲ್ಲಿ 500ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ವಿಚಿತ್ರ ಎಂದರೆ ಅಮೆರಿಕ, ಬ್ರಿಟನ್ ಆ ಬಗ್ಗೆ ತುಟಿ ಬಿಚ್ಚುವುದಿರಲಿ ಭಾರತದ ಸೆಕ್ಯುಲರ್ ನಾಯಕರು ಕೂಡ ಸೊಲ್ಲೆತ್ತುತ್ತಿಲ್ಲ!
ಆರ್​ಎಸ್​ಎಸ್ ಮತ್ತು ಅದರ ಪರಿವಾರದ ಸಂಘಟನೆಗಳು ಹಾಗೂ ಇತರ ಹಿಂದೂಪರ ಸಂಘಟನೆಗಳನ್ನು ಬಿಟ್ಟರೆ ಬೇರಾರು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರ ಇದುವರೆಗೆ ನಿಂತಿಲ್ಲ. ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಾಜಾ ಮತ್ತು ಪ್ಯಾಲೆಸ್ತೀನ್ ಕದನದ ಸಂತ್ರಸ್ತರಿಗೆ ಪರಿಹಾರ ನೀಡಿಕೆಗೆ, ಪುನರ್ವಸತಿಗೆ ಆಗ್ರಹಿಸಿದರು. ಹಿಂಸಾಚಾರ, ಸಾವು ನೋವಿನ ಕುರಿತು ಆತಂಕ ತೋಡಿಕೊಂಡರು. ಆದರೆ ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರ, ಅತ್ಯಾಚಾರದ ಬಗ್ಗೆ ಮೌನ ಮುರಿದಿಲ್ಲ. ಹಾಗಾದರೆ ಇದು ಜಾಣಮೌನವೇ? ಯೋಜಿತ ಮೌನವೇ?
ಆತಂಕ ಸೃಷ್ಟಿಸಿದ ಸಲ್ಮಾನ್ ಖುರ್ಷಿದ್ ಹೇಳಿಕೆ:ಮುಜಿಬುರ್ ರೆಹಮಾನ್ ಅವರ ‘ಶಿಕ್ವಾ ಎ ಹಿಂದ್- ಭಾರತದಲ್ಲಿ ಮುಸ್ಲಿಮರ ರಾಜಕೀಯ ಭವಿಷ್ಯ’ ಎಂಬ ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಆ ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಂದು ಭವಿಷ್ಯ ನುಡಿದರು. ‘ಬಾಂಗ್ಲಾದೇಶದಲ್ಲಿ ಆದಂತೆ ಕ್ಷಿಪ್ರ ರಾಜಕೀಯ ವಿಪ್ಲವ ಭಾರತದಲ್ಲೂ ನಡೆಯಬಹುದು’ ಎಂದು ಹೇಳಿ ಭಾರತ ಮತ್ತು ಬಾಂಗ್ಲಾದೇಶದ ಆಂತರಿಕ ವಿದ್ಯಮಾನಗಳನ್ನು ಸಮೀಕರಿಸಿದರು. ನಮಗಿಲ್ಲಿ ಅಚ್ಚರಿ ಎನಿಸುವುದು ಭಾರತದಿಂದ ಪಾಕಿಸ್ತಾನ ಸಿಡಿದು ಹೋದದ್ದು. ಪಾಕಿಸ್ತಾನವನ್ನು ಸೀಳಿಕೊಂಡು ಬಾಂಗ್ಲಾ ಉದಯವಾದದ್ದರ ಇತಿಹಾಸವನ್ನು ಕಾಂಗ್ರೆಸ್ಸಿಗರು ಅದೇಕೆ ಅಷ್ಟು ಸುಲಭದಲ್ಲಿ ಮರೆಯುತ್ತಾರೆ ಎಂಬುದಕ್ಕಾಗಿ. ಇಂದಿರಾ ಅವರ ನಿಲುವನ್ನು ಕಾಂಗ್ರೆಸ್ ಧಿಕ್ಕರಿಸುತ್ತದೆಯೇ? ರಾಹುಲ್ ಮೌನ ಮತ್ತು ಖುರ್ಷಿದ್ ಮಾತುಗಳನ್ನು ಗಮನಿಸಿದರೆ ಈ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಕೂಲಂಕಷವಾಗಿ ನೋಡುವುದಾದರೆ 1970ರ ದಶಕಕ್ಕೆ ನಾವು ಹೊರಳಬೇಕಾಗುತ್ತದೆ. ಅಂದು ಪೂರ್ವ ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 162 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಶೇಖ್ ಮುಜಿಬುರ್ ರೆಹಮಾನ್ ಅವರ ಅವಾಮಿ ಲೀಗ್ ಗೆದ್ದುಕೊಂಡಿತು. ಈ ಬೆಳವಣಿಗೆ ಪಾಕ್​ನ ಆಗಿನ ಪ್ರಧಾನಿ ಜುಲ್ಪಿಕರ್ ಅಲಿ ಭುಟ್ಟೋ ಅವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಮುಜಿಬುರ್ ರೆಹಮಾನ್ ಅವರನ್ನು ಭುಟ್ಟೋ ಸೆರೆಮನೆಗೆ ಅಟ್ಟಿದರು. ಮುಜಿಬುರ್ ಪರ ದಂಗೆ ಎದ್ದ ಸಹಸ್ರಾರು ವಿದ್ಯಾರ್ಥಿಗಳು, ಬಾಂಗ್ಲಾ ವಿಮೋಚನಾ ಹೋರಾಟಗಾರರನ್ನು ಜೈಲಿಗೆ ಹಾಕಲಾಯಿತು. ಈ ಬೆಳವಣಿಗೆ ಬೆನ್ನಲ್ಲೇ ನಡೆಯುವ ಬಾಂಗ್ಲಾ ವಿಮೋಚನಾ ಯುದ್ಧಕ್ಕೆ ಭಾರತದ ಸೇನಾ ಬೆಂಬಲವನ್ನು ಘೊಷಿಸಿದ ಇಂದಿರಾ ಗಾಂಧಿ, ವಿಶ್ವ ಪರ್ಯಟನೆ ಕೈಗೊಂಡು ಬಾಂಗ್ಲಾದೇಶದ ಹುಟ್ಟಿಗೆ ಹೋರಾಟ ಮಾಡಿದರಲ್ಲದೆ, ಜೈಲುಪಾಲಾದ ಮುಜಿಬುರ್ ರೆಹಮಾನ್ ಮತ್ತು ಅವರ ಪರ ಇರುವ ಹೋರಾಟಗಾರರ ಪರ ವಿಶ್ವನಾಯಕರ ಬೆಂಬಲವನ್ನು ಕ್ರೋಢೀಕರಿಸಿದರು. ಈಗಿನಂತೆಯೇ ಚೀನಾ ಮತ್ತು ಅಮೆರಿಕ ಪಾಕಿಸ್ತಾನದ ಪರವೇ ನಿಂತವು. ಅದ್ಯಾವುದಕ್ಕೂ ಇಂದಿರಾ ತಲೆ ಕೆಡಿಸಿಕೊಳ್ಳಲಿಲ್ಲ. ಇದೆಲ್ಲದರ ಪರಿಣಾಮ ಅಂತಿಮವಾಗಿ ಮುಜಿಬುರ್ ರೆಹಮಾನ್ ಅವರ ಕನಸು ನನಸಾಗಿ 1971ರಲ್ಲಿ ಬಾಂಗ್ಲಾದೇಶದ ಉದಯಕ್ಕೆ ಇಂದಿರಾ ಗಾಂಧಿ ನೇರ ಕಾರಣಿಕರ್ತರಾದರು.
ಅದೇ ವೇಳೆ ಮತ್ತೊಂದು ಇತಿಹಾಸ ಸೃಷ್ಟಿಯಾಯಿತು. ದೇಶದ ಹಿತದ ವಿಚಾರ ಬಂದಾಗ ವಿಪಕ್ಷಗಳು ಹೇಗೆ ವರ್ತಿಸ ಬೇಕೆಂಬುದು ಆ ಇತಿಹಾಸ ಹೇಳುತ್ತದೆ. ಬಾಂಗ್ಲಾ ವಿಮೋಚನೆಯ ವಿಚಾರದಲ್ಲಿ ಇಂದಿರಾ ಗಾಂಧಿ ಅವರು ತೆಗೆದುಕೊಂಡ ನಿಲುವನ್ನು ವಿಪಕ್ಷಗಳು ಒಕ್ಕೊರಲಿಂದ ಬೆಂಬಲಿಸಿದವು, ಇಂದಿರಾ ನಿಲುವನ್ನು ಶ್ಲಾಘಿಸಿದರು. ಆಗಲೇ ಅದೇ ಕಾರಣಕ್ಕೆ ಇಂದಿರಾ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆ ಎಂದು ಕರೆದದ್ದು. ಸಲ್ಮಾನ್ ಖುರ್ಷಿದ್ ಮತ್ತು ರಾಹುಲ್ ಗಾಂಧಿ ಅವರು ಈ ಇತಿಹಾಸವನ್ನು ಮರೆಯ ಬಾರದು, ಭಾರತದ ಭವಿಷ್ಯವನ್ನು ಅಲಕ್ಷಿಸಬಾರದು.
ಬಾಂಗ್ಲಾ ಬೆಂಬಲಕ್ಕೆ ಕಾರಣ ಇದೆ:ಪಾಕಿಸ್ತಾನವು ಭಾರತದ ಪಾಲಿಗೆ ಎಂದಿದ್ದರೂ ಉಡಿಯಲ್ಲಿರುವ ಕೆಂಡವೇ ಎಂಬುದು ಇಂದಿರಾ ಮತ್ತು ಅಂದಿನ ಭಾರತದ ವಿಪಕ್ಷಗಳಿಗೆ ಸ್ಪಷ್ಟವಾಗಿ ಗೊತ್ತಿತ್ತು. ಮತಾಂಧತೆ, ಯುದ್ಧೋನ್ಮಾದದ ಪಾಶದಲ್ಲಿ ಸಿಲುಕಿದ್ದ ಪಾಕಿಸ್ತಾನವನ್ನು ಬಗ್ಗು ಬಡಿಯಲು ಪಾಕ್ ವಿಭಜನೆ ಮಾಡಿ ಬಾಂಗ್ಲಾದೇಶದ ಸೃಷ್ಟಿಯೊಂದೇ ಪರಿಹಾರ ಎಂಬುದು ಅಂದಿನ ನಾಯಕತ್ವಕ್ಕೆ ಸ್ಪಷ್ಟವಾಗಿತ್ತು. ಆದರೆ ವಿಚಿತ್ರ ಎಂದರೆ ಅಂದು ಸೋಲುಂಡಿದ್ದ ಪಾಕ್​ನ ಮತಾಂಧತೆ ಇಂದು ಮತ್ತೆ ಬಾಂಗ್ಲಾದೇಶದಲ್ಲಿ ಮೇಲುಗೈ ಸಾಧಿಸಿದೆ. ಕೇವಲ ಐವತ್ತು ವರ್ಷಗಳು ಗತಿಸುವ ಹೊತ್ತಿಗೆ ಇಂದಿರಾ ಕಾಂಗ್ರೆಸ್ ಪರಿವಾರ ಬಾಂಗ್ಲಾದೇಶ ಸೃಷ್ಟಿಯ ಕಾರಣ ಮತ್ತು ಮತ್ತದರ ಇತಿಹಾಸವನ್ನು ಮರೆತಂತೆ ಕಾಣುತ್ತಿದೆ.
ಬಾಂಗ್ಲಾದೇಶ ವಿಪ್ಲವದ ಕಾರಣ ಕರಾಳ:ಬಾಂಗ್ಲಾದೇಶ ನಿರ್ವಣದ ಕಾಲಕ್ಕೆ ಭಾರತ ಮಾಡಿದ ಸಹಾಯದ ನೆನಪನ್ನು ಬಾಂಗ್ಲಾದೇಶ ನಿರ್ವತೃ ಶೇಖ್ ಮುಜಿಬುರ್ ರೆಹಮಾನ್ ಮಾತ್ರವಲ್ಲ ಅವರ ಪುತ್ರಿ ಶೇಖ್ ಹಸೀನಾ ಕೂಡ ಎಂದೂ ಮರೆತವರಲ್ಲ. ಬಾಂಗ್ಲಾದ ಬಾಂಧವ್ಯವನ್ನು ಭಾರತದೊಂದಿಗೆ ಹಸೀನಾ ಸದಾ ಉತ್ತಮವಾಗಿ ಇಟ್ಟುಕೊಂಡವರು. ಹಸೀನಾ ಮತ್ತು ಭಾರತದ ಅನ್ಯೋನ್ಯತೆಯೂ ಹೊಸದಲ್ಲ. ಹಸೀನಾ ಕುಟುಂಬದ ಪಾಲಿಗೆ ಭಾರತವೆಂಬುದು ತವರುಮನೆ ಇದ್ದಹಾಗೆ. ಈ ಮಾತಿಗೆ ಉದಾಹರಣೆ ಎಂಬಂತೆ, 1975ರಲ್ಲಿ ಬಾಂಗ್ಲಾದೇಶದಲ್ಲಿ ತಮ್ಮ ವಿರುದ್ಧ ಆಂತರಿಕ ದಂಗೆ ಶುರುವಾದಾಗಲೂ ಹಸೀನಾ ಭಾರತದಲ್ಲೇ ತಾತ್ಕಾಲಿಕ ಆಶ್ರಯ ಪಡೆದು ವಾಪಸಾಗಿದ್ದರು. ಶೇಖ್ ಹಸೀನಾ ತಮ್ಮ ಅಧಿಕಾರದ ಉದ್ದಕ್ಕೂ ಭಾರತದ ಪರವಾಗಿ ನಿಂತುಕೊಂಡ ಗಟ್ಟಿಗಿತ್ತಿ. ಅದೇ ಈಗ ಶೇಖ್ ಹಸೀನಾ ಅವರಿಗೆ ಮುಳುವಾಗಿದೆ. ಅಂದು ಬಾಂಗ್ಲಾದೇಶದ ಪರವಾಗಿ ಇಂದಿರಾ ಮತ್ತು ವಿಪಕ್ಷಗಳು ಒಟ್ಟಾಗಿ ನಿಂತುಕೊಂಡಂತೆ ಈಗಲೂ ಭಾರತ ಸರ್ಕಾರ ಮತ್ತು ವಿಪಕ್ಷಗಳು ಒಟ್ಟಾಗಿ ನಿಂತುಕೊಳ್ಳುವ ತುರ್ತು ಇದೆ.
ಬಾಂಗ್ಲಾ ಬಂಡುಕೋರರು ಎಂಥ ಕೃತಘ್ನರು ಗೊತ್ತೇ?:ಪ್ರಸಕ್ತ ಬಾಂಗ್ಲಾದೇಶ ಬಂಡಾಯಕ್ಕೆ ಕಾರಣ ಏನು ಮತ್ತು ಏಕಾಏಕಿ ಏಕೆ ಹೀಗಾಯಿತು ಎಂಬ ಪ್ರಶ್ನೆಗಳನ್ನು ಹಲವರು ಕೇಳುವುದಿದೆ. ಮೊದಲನೆಯದಾಗಿ ಬಾಂಗ್ಲಾ ಬಂಡಾಯಕ್ಕೆ ಬಂಡುಕೋರರ ಕೃತಘ್ನತೆ ಮತ್ತು ಮತಾಂಧತೆಯೇ ಕಾರಣ. ಮತ್ತು ಈ ತಿಕ್ಕಾಟ ಬಾಂಗ್ಲಾ ಉದಯವಾದ ಮರುಕ್ಷಣದಿಂದಲೇ ಶುರುವಾದದ್ದು. ಮತಾಂಧರಿಗೆ ಬಾಂಗ್ಲಾ ಪಾಕ್​ನಿಂದ ಪ್ರತ್ಯೇಕವಾದ ನಂತರ ಲಿಬರಲ್ ಆಗುವುದು ಇಷ್ಟವಿರಲಿಲ್ಲ. ಪಾಕ್​ನಿಂದ ಪ್ರತ್ಯೇಕವಾದ ಬಾಂಗ್ಲಾ ಭಾರತದ ಸ್ನೇಹಿತ ಆಗುವುದೂ ಬೇಕಿರಲಿಲ್ಲ. ಈ ಎರಡು ಕಾರಣಗಳಿಗೆ ಆಂತರಿಕ ತಿಕ್ಕಾಟ ಬಾಂಗ್ಲಾದಲ್ಲಿ ಸತತವಾಗಿ ನಡೆದೇ ಇತ್ತು.
ಈ ತಿಕ್ಕಾಟ ಸ್ಪೋಟಗೊಂಡದ್ದು, ಬಾಂಗ್ಲಾ ವಿಮೋಚನೆಯಲ್ಲಿ ಪಾಲ್ಗೊಂಡವರ ವಂಶಸ್ಥರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಲು ಮುಂದಾದಾಗ. ಹಾಗಾದರೆ ಈಗಿನ ಬಾಂಗ್ಲಾದೇಶ ವಿದ್ಯಮಾನವನ್ನು ಸಮೀಕರಿಸುವ ಸಲ್ಮಾನ್ ಖುರ್ಷಿದ್ ಅಂಥವರು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿರುವ ಮಾಸಾಶನ ಇತ್ಯಾದಿ ಸವಲತ್ತುಗಳನ್ನೂ ಪ್ರಶ್ನಿಸಿಯಾರೆ?
ಬಾಂಗ್ಲಾ ಹಿತಾಸಕ್ತಿ ಏಕೆ ಮುಖ್ಯ?:ಭಾರತ ಸುತ್ತ ಇರುವ ನೆರೆರಾಷ್ಟ್ರಗಳ ಪೈಕಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳು ಪಕ್ಕಾ ಮತಾಂಧ ದೇಶಗಳು ಮತ್ತು ಆರ್ಥಿಕವಾಗಿ ಜರ್ಜರಿತವಾಗಿಬಿಟ್ಟಿವೆ. ಚೀನಾ ಭಾರತದ ಕಡುವಿರೋಧಿ ಮತ್ತು ಆರ್ಥಿಕವಾಗಿ ಬಲಾಢ್ಯ. ಭೂತಾನ್, ನೇಪಾಳ, ಮ್ಯಾನ್ಮಾರ್ ದೇಶಗಳು ಆರ್ಥಿಕವಾಗಿ ದುರ್ಬಲ ಮತ್ತು ಚೀನಾದ ಪ್ರಭಾವದಲ್ಲಿವೆ. ಮುಸ್ಲಿಂ ರಾಷ್ಟ್ರವಾಗಿದ್ದೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಮತ್ತು ಭಾರತ ಪರ ಸ್ನೇಹ ಮತ್ತು ಗಟ್ಟಿ ಬಾಂಧವ್ಯ ಹೊಂದಿರುವ ದೇಶವೆಂದರೇ ಬಾಂಗ್ಲಾದೇಶ ಮಾತ್ರ. ಹಾಗಾಗಿಯೇ, ಬಾಂಗ್ಲಾದಲ್ಲಿನ ಬಂಡಾಯವನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕಿದೆ.
(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)
ಆಗಸ್ಟ್​ 13ರಿಂದ 15ರವರೆಗೆ ಪೀಣ್ಯ ಇಂಡಸ್ಟ್ರೀ-ನಾಗಸಂದ್ರ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 12 =
Remember me
