ಗೃಹಿಣಿಯನ್ನೇ ಗೃಹವೆನ್ನುವುದು – ಎಂಬೀ ನುಡಿಮುತ್ತು ಮಹಾ ಭಾರತದಲ್ಲಿಯೂ ಪಂಚತಂತ್ರದಲ್ಲಿಯೂ ಇದೆ. ಪಂಚತಂತ್ರದಲ್ಲಿ ಎರಡು ಬಾರಿಯಿದೆ! : ಗೃಹಿಣೀ ಗೃಹಮುಚ್ಯತೇ ಗೋಡೆ-ಕುರ್ಚಿ ಮುಂತಾದುವುಗಳ ರಾಶಿಯನ್ನೇ ಮನೆಯೆನ್ನುವರೇ? ಮನೆಯ ಲ್ಲೊಬ್ಬಳು ಗೃಹಿಣಿಯೆಂಬುವವಳಿಲ್ಲದಿದ್ದರೆ ಮನೆಯು ಕಾಡೇ -ಎಂದು ಹೇಳುವ ಮಾತುಗಳುಂಟು. ಮನೆಯ ಶೋಭೆಯೇ ಗೃಹಿಣಿ.
ವಿವಾಹಪೂರ್ವಕಾಲದಲ್ಲಿ ಯುವತಿಯೆಂದಷ್ಟೇ ಕರೆಸಿಕೊಂಡವಳು, ವಿವಾಹೋತ್ತರಕಾಲದಲ್ಲಿ ಗೃಹಿಣೀ – ಎನಿಸಿಕೊಳ್ಳುತ್ತಾಳೆ -ಎಂಬುದು ಕಾಳಿದಾಸನ ಶಾಕುಂತಲ ನಾಟಕದ ಮಾತು.
ಸಾಕುಮಗಳಾದ ಶಕುಂತಲೆಯನ್ನು ಪತಿಗೃಹಕ್ಕೆ ಕಳುಹಿಸಿ ಕೊಡುವಾಗ ಕಣ್ವಮಹರ್ಷಿಗಳು ಕೆಲವು ಹಿತವಚನಗಳನ್ನು ಹೇಳುತ್ತಾರೆ. ಹೇಗಿದ್ದಲ್ಲಿ ಅವಳು ಗೃಹಿಣೀ? ಹೇಗಿದ್ದರಲ್ಲ? – ಎಂಬುದನ್ನು ಸ್ಮರಣೀಯಸೂಕ್ತಿಗಳಿಂದ ಸೂಚಿಸುತ್ತಾರೆ. ಗೃಹಿಣಿಯೆಂಬುದು ಹಿರಿದಾದ ಒಂದು ಸ್ಥಾನ. ಗೃಹಿಣಿಯೆಂದು ಕರೆಸಿಕೊಳ್ಳಲು ಅನರ್ಹಳಾದಲ್ಲಿ, ಅಂತಹವಳು ಕುಲಕ್ಕೇ ಆಧಿಯಾಗುವಳು – ಎನ್ನುತ್ತಾರೆ. (ಶರೀರವನ್ನು ಬಾಧಿಸುವ ರೋಗವು ವ್ಯಾಧಿಯಾದರೆ ಮನಸ್ಸನ್ನು ಪೀಡಿಸುವ ರೋಗವು ಆಧಿ.) ಅಂತಹವಳಿಂದ ಅದೆಷ್ಟು ಮಂದಿಗೆ ಕ್ಲೇಶವೋ ಹೇಳಲಾಗದು.
ವಿವಾಹವನ್ನು ಮಾಡಿಕೊಂಡವನು ಗೃಹೀ; ಅವನಿಗೇನು ಕಡಿಮೆ ಜವಾಬ್ದಾರಿಗಳಿಲ್ಲ. ಅವನ ಜೊತೆಗಾರ್ತಿಯಾದ ಗೃಹಿಣಿಗೆ ತೋರಿಸಿರುವ ಸ್ಥಾನವೆಂತಹುದು? ಅತ್ತೆ-ಮಾವಂದಿರ ಮೇಲೂ ನೀನು ಸಮ್ರಾಜ್ಞಿ (ಅರಸಿ)ಯಾಗಿರು! – ಎಂದೇ ವೇದಮಂತ್ರಗಳಲ್ಲಿಯ ಆಶೀರ್ವಾದ. ಅದೇನು ಬರೀ ಬಾಯಿಮಾತಿಗೇ? ತೋರಿಕೆಗೇ? ಅದರ ಆಶಯವನ್ನರಿತು ಆಚರಿಸಬೇಕಷ್ಟೆ?
ಗೃಹಿಣಿಯೇ ಗೃಹ ಹೇಗಾದಾಳು? ಹಲವು ಬಗೆಗಳಲ್ಲಿ:ಮನೆಯು ಚೆನ್ನಾಗಿ ನಡೆದುಕೊಂಡು ಹೋಗಬೇಕೆಂದರೆ ಅವಳ ಪಾತ್ರವೇ ಮುಖ್ಯವಾಗುತ್ತದೆ. ಇನ್ನು ದೇಶಕ್ಕೆ ಆಸ್ತಿಮಾಡುವಲ್ಲಂತೂ ಅವಳದ್ದೇ ಹಿರಿದಾದ ಪಾತ್ರ. ಏಕೆ? ದೇಶದ ದೊಡ್ಡ ಆಸ್ತಿಯೆಂದರೆ ಸತ್ಪ್ರಜೆಗಳೇ; ಬರೀ ಪ್ರಜೆಗಳಲ್ಲ. ಜನಿಸುವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆ. ಜೀವಕಾರುಣ್ಯವೆಂಬುದು ತಾಯಿಯಲ್ಲೇ ಸಹಜವಾಗಿ ಉಕ್ಕುವುದು. ಶಿಶುವಿಗೆ ಅದೆಷ್ಟು ಪೋಷಕವೂ ಕೋಮಲವೂ ಆದ ಶಯ್ಯೆಯನ್ನು ಗರ್ಭದಲ್ಲಿ ಪ್ರಕೃತಿಯೇ ಸೃಷ್ಟಿಸಿಟ್ಟಿದೆ! ಜನಿಸುವ ಶಿಶುವಿಗೆ ತಾಯಿಯೇ ಮೊದಲ ಮನೆ; ಜನಿಸಿದ ಮಗುವಿಗೆ ತಾಯಿಯೇ ಮೊದಲ ಗುರು! ತಾಯಿಯೆಂಬುದೂ ಸಂಸ್ಕೃತಪದವೇ. ‘ತಾಯೃ ಸಂತಾನ-ಪಾಲನಯೋಃ’ ಎಂದು ಧಾತುಪಾಠವೇ ಇರುವುದನ್ನು ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿದ್ದರು.
ಸಾಂಖ್ಯದರ್ಶನದಲ್ಲಿ ಪ್ರಕೃತಿ-ಪುರುಷ ಎಂಬ ಎರಡು ಪದಗಳನ್ನು ವಿಶೇಷಾರ್ಥದಲ್ಲಿ ಬಳಸುತ್ತಾರೆ. ಪುರುಷ ಎನ್ನುವುದು ಚೈತನ್ಯ; ಪ್ರಕೃತಿ ಎನ್ನುವುದು ಅದಕ್ಕೆ ಆಸರೆ. ಎಲ್ಲ ಜೀವಿಗಳೂ ಪುರುಷರೇ. ಧರ್ಮ- ಅರ್ಥ- ಕಾಮ-ಮೋಕ್ಷಗಳಿಗೆ ಪುರುಷಾರ್ಥವೆಂಬ ಹೆಸರಿದೆ. ಸ್ತ್ರೀಯರಿಗೆ ಅವೇನು ಬೇಡವೆಂದೇ?: ಎಂದೇ, ಜೀವ ಎಂಬ ಅರ್ಥದಲ್ಲಿ ಸ್ತ್ರೀಯರೂ ಪುರುಷರೇ.
ಬರೀ ಚೈತನ್ಯವು ಕೆಲಸ ಮಾಡಲಾಗದಲ್ಲವೇ? ಅದಕ್ಕೊಂದು ಆಧಾರ ಬೇಕು, ಆಕಾರ ಬೇಕು. ಚೈತನ್ಯವು ಹೀಗೆ ಮೈತಾಳಿದಾಗಲೇ ಮುಂದಕ್ಕೆ ವ್ಯವಹಾರ. ಮೈಯನ್ನು ತಾಳುವುದೇ, ಮೂರ್ತಿಯನ್ನು ಸ್ವೀಕರಿಸು ವುದು; ಹೀಗೆ ಮೂರ್ತವಾಗುವುದೇ ಹುಟ್ಟುವುದೆಂಬುದೂ.
ಹಿರಿಯರ ವಿಷಯದಲ್ಲಿ ಉಕ್ಕುವ ಗೌರವ-ಪ್ರೀತಿಗಳ ಮಧುರ ಮೇಳನವೇ ಭಕ್ತಿಯೆನಿಸಿಕೊಳ್ಳುವುದು. ಪ್ರೀತಿಯ ಪುತ್ಥಳಿಯಾದ ಶಿಶುವನ್ನು ಕಾಪಿಟ್ಟುಕೊಳ್ಳುವ ಎಡೆಯು ಗರ್ಭವಾದರೆ, ಉಕ್ಕುವ ಭಕ್ತಿಯಿಂದ ಭಗವಂತನನ್ನು ಕಾಪಿಟ್ಟುಕೊಳ್ಳುವ ಎಡೆಯು ಗರ್ಭಗುಡಿಯೆನಿಸುತ್ತದೆ. ಕುಟಿಯೆಂದರೆ ಮನೆಯೇ; ಕುಟಿಯೇ ಗುಡಿಯಾಗಿದೆ. ಹೀಗಾಗಿ ಮೈತಾಳುವುದೆಂದರೆ ಮನೆಯೊಂದರಲ್ಲಿ ವಾಸ ಮಾಡುವುದೆಂದೇ!. ದೇಹವೇ ಮೊದಲ ಗೇಹ. ಮುಂದಕ್ಕೆ ಬೇರೆ ವಾಸಸ್ಥಾನಗಳೂ ಉಂಟು. ನಮ್ಮ ವಸತಿಯಾದ ಊರೇ ನನ್ನ ಮನೆ; ಭಾರತವೇ ಮಾತೃಭೂಮಿ; ವೇದವಂತೂ ಪೃಥ್ವೀ ಮಾತಾ- ಇಡೀ ಭೂಮಿಯೇ ತನ್ನ ತಾಯಿ ಎನ್ನುತ್ತದೆ: ಇದಿಷ್ಟೂ ಹೊರನೋಟದ ಮನೆಗಳು. ಇನ್ನು ಒಳನೋಟದವು: ಶರೀರವು ಗೃಹ; ಅದಕ್ಕೂ ಹಿಂದಿರುವ ಮನಸ್ಸು ಗೃಹವಲ್ಲವೇ?; ಸಾಂಖ್ಯವು ಹೇಳುವ ಬುದ್ಧಿ-ಅಹಂಕಾರ ಗಳೂ, ಇವಕ್ಕೂ ಮೂಲವೆನಿಸುವ ಪ್ರಕೃತಿತತ್ತ್ವವೂ ಮನೆಯೇ.
ಪ್ರಕೃತಿಯ ಮೂರ್ತರೂಪವೇ ಆಗಿರುವ ಗೃಹಿಣಿಯೇ ಅತ್ಯಂತ ಮುಖ್ಯವೆನಿಸುವ ಗೃಹ. ಬೇರೆಲ್ಲೂ ದೊರೆಯದ ತುಷ್ಟಿ-ಪುಷ್ಟಿಗಳು ಮನೆಯಲ್ಲಿ ದೊರೆಯುತ್ತದೆ. ಮತ್ತೆಲ್ಲೂ ದಕ್ಕದ ನೆಚ್ಚಿಕೆ-ನೆಮ್ಮದಿಗಳು, ಪಾಲನೆ-ಪೋಷಣೆಗಳು ಗೃಹಿಣಿಯಿಂದ ಲಭ್ಯವಾಗುವವು. ಕಡುಬಡತನದಿಂದಾಗಿ ಮರದ ಬುಡದಲ್ಲಿ ವಾಸಮಾಡಬೇಕಾಗಿ ಬಂದರೂ, ಮನಸಾರೆ ಪ್ರೀತಿಸುವ ಮಡದಿಯೊಡನಿದ್ದಲ್ಲಿ, ಮರದ ಬುಡವೂ ಸದನವೇ-ಎನ್ನುತ್ತದೆ ಸುಭಾಷಿತ. ಗೃಹವಸ್ತು-ಗೃಹಕೃತ್ಯಗಳೆಲ್ಲಕ್ಕೂ ಸೇರಿ ಒಟ್ಟಿನ ಹೆಸರು ಗೃಹ. ಅವೆಲ್ಲವನ್ನೂ ಅಚ್ಚುಕಟ್ಟಾಗಿ ಅಣಿಮಾಡುವವಳೇ ಗೃಹಿಣಿ. ಒಡತಿಯಿಲ್ಲದ ಬೀಡು ಕಾಡಿಗಿಂತಲೂ ಕೇಡು-ಎಂಬುದು ಹಿಂದೆಷ್ಟೋ ಮುಂದೂ ಅಷ್ಟೇ ಸತ್ಯ-ಪತಿಪತ್ನಿಯರು ತಮ್ಮ ತಮ್ಮ ಪಾತ್ರಗಳನ್ನು ಯಥಾವತ್ತಾಗಿ ಅರಿತು ನಡೆಸಿಕೊಂಡಲ್ಲಿ!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − 11 =
Remember me
