|ಜಗನ್ ರಮೇಶ್ಬೆಂಗಳೂರು
ವಿವಾಹ ವಿಚ್ಛೇದನ ಪಡೆದು, ಶಾಶ್ವತ ಜೀವನಾಂಶ ಪಡೆದಿದ್ದರೂ ಮಾಜಿ ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಪಡಿಸಿರುವ ಹೈಕೋರ್ಟ್, ಸೇಡಿನ ಉದ್ದೇಶದಿಂದ ದಾಖಲಿಸಿರುವ ಪ್ರಕರಣ ಇದಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣ ರದ್ದುಕೋರಿ ಆಕೆಯ ಮಾಜಿ ಪತಿ, ಆತನ ತಂದೆ-ತಾಯಿ ಹಾಗೂ ಸಹೋದರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧ ಬಂಟ್ವಾಳದ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣವೇನು?:ದೂರುದಾರ ಮಹಿಳೆ ಹಾಗೂ ಮೊದಲ ಆರೋಪಿ 2009ರ ಅ.8ರಂದು ಇಸ್ಲಾಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. 2011ರ ಡಿಸೆಂಬರ್​ನಲ್ಲಿ ಅಮೆರಿಕಕ್ಕೆ ತೆರಳಿದ್ದ ದಂಪತಿ, 2016ರಲ್ಲಿ ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಪತಿ ಅಮೆರಿಕದಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಹಣದ ಅವಶ್ಯಕತೆ ಇದ್ದು, ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರು. 2017ರ ಫೆ.8ರಂದು ಮತ್ತೆ ಅಮೆರಿಕಕ್ಕೆ ತೆರಳಿದ್ದ ಮಹಿಳೆಯನ್ನು 2018ರ ಫೆ.10ರಂದು ಪತಿ ಒತ್ತಾಯಪೂರ್ವಕವಾಗಿ ಭಾರತಕ್ಕೆ ಕಳುಹಿಸಿದ್ದರು. ಅದೇ ವರ್ಷ ಮೇ 28ರಂದು ಪತಿಯ ಮನೆಗೆ ತೆರಳಿದಾಗ ಆತನ ತಂದೆ, ತಾಯಿ ಹಾಗೂ ಸಹೋದರ ಮನೆಗೆ ಸೇರಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ, ಮಹಿಳೆ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಪ್ರಕರಣ ರದ್ದುಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಮೆರಿಕದಲ್ಲೇ ವಿಚ್ಛೇದನ:ಅರ್ಜಿದಾರರ ವಿರುದ್ಧ ಔಪಚಾರಿಕವಾಗಿ ಆರೋಪ ಮಾಡಲಾಗಿದೆಯೇ ಹೊರತು ವರದಕ್ಷಿಣೆಗೆ ಬೇಡಿಕೆ ಇಟ್ಟ ಅಥವಾ ಹಲ್ಲೆ ನಡೆಸಿ, ಕಿರುಕುಳ ನೀಡಿರುವ ಬಗ್ಗೆ ನಿರ್ದಿಷ್ಟ ಆರೋಪಗಳಿಲ್ಲ. ಮೇಲಾಗಿ 2018ರ ಜ.29ರಂದೇ ದಂಪತಿ ಅಮೆರಿಕದ ಅಯೋವಾ ಕೋರ್ಟ್​ನಲ್ಲಿ ವಿಚ್ಛೇದನ ಪಡೆದಿದ್ದಾರೆ. ಮಹಿಳೆಗೆ 50 ಸಾವಿರ ಡಾಲರ್ ಶಾಶ್ವತ ಪರಿಹಾರವನ್ನೂ ಪಾವತಿಸಿ ದ್ದಾರೆ. ಹೀಗಿದ್ದರೂ, ಮಹಿಳೆ ಮಾಡಿರುವ ಆಧಾರರಹಿತ ಆರೋಪಗಳ ಆಧಾರದಲ್ಲಿ ಅರ್ಜಿದಾರರು ಮತ್ತವರ ಕುಟುಂಬ ಸದಸ್ಯರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಆರೋಪಿಯ ಪರ ವಕೀಲರು ವಾದಿಸಿದ್ದರು. ಮತ್ತೊಂದೆಡೆ, ಪತ್ನಿಗೆ ನೋಟಿಸ್ ಸಹ ನೀಡದೆ, ಮೋಸದಿಂದ ಅಮೆರಿಕ ನ್ಯಾಯಾಲಯದಿಂದ ಪತಿ ವಿಚ್ಛೇದನ ಆದೇಶ ಪಡೆದುಕೊಂಡಿದ್ದಾರೆ. ಆದ್ದರಿಂದ, ವಿಚ್ಛೇದನ ಆದೇಶಕ್ಕೆ ಪತ್ನಿ ಬದ್ಧವಾಗಿರಬೇಕಿಲ್ಲ ಎಂದು ಮಹಿಳೆಯ ಪರ ವಕೀಲರು ವಾದ ಮಂಡಿಸಿದ್ದರು
ಸಂಸಾರದ ಅಪಶ್ರುತಿಗೆ ಅಪರಾಧ ಬಣ್ಣ:ಮಹಿಳೆಯನ್ನು 2018ರ ಫೆಬ್ರವರಿಯಲ್ಲಿ ಒತ್ತಾಯಪೂರ್ವಕವಾಗಿ ಭಾರತಕ್ಕೆ ಕಳುಹಿಸಲಾಗಿದೆ ಎಂಬ ಆರೋಪವಿದೆ. ಆದರೆ, ಅಮೆರಿಕದ ಅಯೋವಾ ಕೋರ್ಟ್ ಇಬ್ಬರಿಗೂ ವಿಚ್ಛೇದನ ನೀಡಿದ್ದು, ಮಹಿಳೆಯ ಬ್ಯಾಂಕ್ ಖಾತೆಗೆ ಶಾಶ್ವತ ಪರಿಹಾರವನ್ನೂ ಜಮೆ ಮಾಡಲಾಗಿದೆ. ಇದು ಇಬ್ಬರ ಮದುವೆ ಮುರಿದುಬಿದ್ದಿರುವುದನ್ನು ಸೂಚಿಸುತ್ತದೆ. ಪತ್ನಿಗೆ ನೋಟಿಸ್ ನೀಡದೆಯೇ ಪತಿ ಮೋಸದಿಂದ ವಿಚ್ಛೇದನ ಆದೇಶ ಪಡೆದಿದ್ದಾರೆ ಎಂಬ ವಾದವನ್ನು ಈ ಅರ್ಜಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಆರೋಪಿಗಳು ವರದಕ್ಷಿಣೆಗಾಗಿ ಹೇಗೆ ಹಾಗೂ ಯಾವ ಸ್ವರೂಪದ ಕಿರುಕುಳ ನೀಡಿದರು ಎಂಬ ಬಗ್ಗೆ ನಿರ್ದಿಷ್ಟ ಆರೋಪಗಳಿಲ್ಲ. ಕೇವಲ ಪತಿ ಮತ್ತವರ ಕುಟುಂಬದವರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ದಾಂಪತ್ಯ ಉಂಟಾಗಿರುವ ವಿವಾದಕ್ಕೆ ಅಪರಾಧದ ಸ್ವರೂಪ ನೀಡಿದಂತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
‘ಕಾಂತಾರ’ ಸಿನಿಮಾ ನೋಡಿ ಹೊರಬರುತ್ತಿದ್ದಾಗ ಹೃದಯಾಘಾತ; ಚಿತ್ರಮಂದಿರದಲ್ಲೇ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 16 =
Remember me
