ಬೆಂಗಳೂರು:ಅರಣ್ಯ ನಾಶದಿಂದ ಜೀವ ವೈವಿಧ್ಯ ಕ್ಷೀಣಿಸುತ್ತಿದೆ, ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಮಾನವ ಪ್ರಾಣಿ ಸಂಘರ್ಷಗಳು ಮಿತಿ ಮೀರುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸರ ಸಮತೋಲನ ಹಾಗೂ ಸುಸ್ಥಿರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ವಾರ್ಷಿಕ ಶೇ.1 ರಿಂದ 2ರಷ್ಟು ಹಸಿರು ವೃದ್ಧಿಗೆ ನಿರ್ಧರಿಸಿದೆ. ಅದಕ್ಕಾಗಿ ಗ್ರಾಮ ಅರಣ್ಯ ಸಮಿತಿಗಳ ಪುನಶ್ಚೇತನ ಹಾಗೂ ಜೀವ ವೈವಿಧ್ಯ ಸಮಿತಿಗಳನ್ನು ರಚಿಸಲು ಮುಂದಾಗಿದೆ.
ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಈ ವಿಷಯ ತಿಳಿಸಿದರು. ಅರಣ್ಯ ನಾಶದಿಂದ ಪರಿಸರ ಚಕ್ರ ವ್ಯತ್ಯಾಸವಾಗುತ್ತಿದೆ. ಇದು ಇಡೀ ಮಾನವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಈ ಸಮಸ್ಯೆಗೆ ಪರಿಹಾರೋಪಾಯವಾಗಿ ಅರಣ್ಯ ಪ್ರದೇಶ ಹೆಚ್ಚಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಜು.1 ರಿಂದ 7ರವರೆಗೆ ವನ ಮಹೋತ್ಸವ ನಡೆದಿದ್ದು, 5 ಕೋಟಿ ಸಸಿ ನೆಡುವ ಗುರಿ ಹಾಕಿಕೊಳ್ಳಲಾಗಿತ್ತು. ಜು.7 ರ ವರೆಗೆ 1.22 ಕೋಟಿ ಸಸಿ ನೆಡಲಾಯಿತು. ಈವರೆಗೆ 2 ಕೋಟಿ ಸಸಿ ನೆಟ್ಟಿದ್ದು, ಆಗಸ್ಟ್ ಒಳಗೆ 5 ಕೋಟಿಗೂ ಹೆಚ್ಚು ಸಸಿ ನೆಡುತ್ತೇವೆ. ಬರೀ ಸಸಿ ನೆಡುವುದಷ್ಟೇ ಅಲ್ಲ, ಅವುಗಳ ನಿರ್ವಹಣೆಗೆ ಜಿಯೋ ಟ್ಯಾಗ್ ಸೇರಿದಂತೆ ನಾನಾ ರೀತಿಯ ಉಪಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆಗಳು ಸಸಿ ನೆಡುತ್ತಿವೆ. ಅವುಗಳಿಗೂ ಜವಾಬ್ದಾರಿ ಕೊಡಲು ತೀರ್ಮಾನ ಮಾಡಿದ್ದೇವೆ. ಜತೆಗೆ ಕಾಲಕಾಲಕ್ಕೆ ನೆಟ್ಟ ಸಸಿಗಳ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಮಾಡಲಾಗುತ್ತದೆ. ಈ ಸಂಬಂಧ ಆದೇಶ ಕೂಡ ಹೊರಡಿಸಲಾಗಿದೆ. ಸಸಿ ಬೆಳೆಸುವುದನ್ನು ಪ್ರೋತ್ಸಾಹಿಸಲು ಸಸಿಗಳ ಬೆಲೆ ಜಾಸ್ತಿ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪರಿಭಾವಿತ ಅರಣ್ಯ:ರಾಜ್ಯದಲ್ಲಿ ನಾಲ್ಕು ಲಕ್ಷ ಎಕರೆ ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ) ಇದೆ. ಈ ಅರಣ್ಯವನ್ನು ಸಂರಕ್ಷಿತ ಅರಣ್ಯವನ್ನಾಗಿ ಮಾಡಬೇಕೆಂಬ ಬಗ್ಗೆ ನಮಗೆ ಯಾವುದೇ ವರದಿ ಬಂದಿಲ್ಲ. ವನ್ಯಜೀವಿಗಳ ಹಾವಳಿಯಿರುವ ಅರಸಿಕೆರೆಯಲ್ಲಿ ಮೂರುಸಾವಿರ ಎಕರೆ ಜಾಗವಿದ್ದು, ಅದನ್ನು ಅರಣ್ಯ ಇಲಾಖೆಯೇ ಖರೀದಿಸಲಿ ಎಂದು ರೈತರು ಒತ್ತಾಯಿಸಿದ್ದಾರೆ. ಗಣಿಗಾರಿಕೆಗೆ ಇಂಥ ಅರಣ್ಯ ಭೂಮಿ ಕೊಟ್ಟಾಗ ಪರ್ಯಾಯ ಭೂಮಿ ಬಳಸಲು ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.
ಜೀವ ವೈವಿಧ್ಯ ಸಮಿತಿ ರಚನೆ:ಗ್ರಾಮ ಮಟ್ಟದಿಂದಲೇ ಜೀವ ವೈವಿಧ್ಯತೆ ಸಂರಕ್ಷಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಗ್ರಾಮ ಮಟ್ಟದಲ್ಲಿ ಜೀವ ವೈವಿಧ್ಯ ಸಮಿತಿ ರಚಿಸಲು ಚಿಂತಿಸಲಾಗಿದೆ. ಕಂದಾಯ, ಅರಣ್ಯ, ಪಂಚಾಯತ್ ರಾಜ್ ಇಲಾಖೆಗಳ ಸಮನ್ವಯತೆಯಲ್ಲಿ ಈ ಕೆಲಸ ಮಾಡುತ್ತೇವೆ. 15 ದಿನಕ್ಕೊಮ್ಮೆ ಜಂಟಿ ಸಭೆ ನಡೆಸಿ ಪ್ರಗತಿ ಪರಿಶೀಲಿಸುವ ಆಲೋಚನೆಯೂ ಇದೆ. ಗ್ರಾಮ ಅರಣ್ಯ ಸಮಿತಿಗಳು ಒಳ್ಳೆಯ ಕೆಲಸ ಮಾಡುತ್ತಿವೆ. ಕೆಲವೆಡೆ ಈ ಸಮಿತಿ ಇರುವುದೇ ಅನೇಕರ ಅರಿವಿಗಿಲ್ಲ. ಹೀಗಾಗಿ ಅವುಗಳನ್ನು ಪುನಃಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಖಂಡ್ರೆ ವಿವರಿಸಿದರು.
ತೇಗ, ಶ್ರೀಗಂಧಕ್ಕೆ ಪ್ರೋತ್ಸಾಹ:ತೇಗ (ಸಾಗವಾನಿ), ಶ್ರೀಗಂಧ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಹಸಿರೀಕರಣ ಹೆಚ್ಚಾಗಲಿದೆ. ಇನ್ನೊಂದೆಡೆ, ಅರಣ್ಯ ವ್ಯಾಪ್ತಿಯ ರಸ್ತೆ ದುರಸ್ತಿ ಮಾಡಲು ಯಾವುದೇ ಪರವಾನಗಿ ಅವಶ್ಯಕತೆ ಇಲ್ಲ. ವಿಸ್ತರಣೆಗೆ ಪರವಾನಗಿ ತೆಗೆದುಕೊಳ್ಳಬೇಕು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚನೆ ಕೊಡಲಾಗುವುದು ಎಂದು ಹೇಳಿದರು.
ಸಸಿ ಬೆಳೆಯಲು ಉತ್ತೇಜನ:ನರೇಗಾದಲ್ಲಿ ಐದರಿಂದ ಹತ್ತು ಕೋಟಿ ಸಸಿಗಳನ್ನು ಸಾಮಾಜಿಕ ಅರಣ್ಯದಡಿ ಬೆಳೆಸಲು ನೀಡಲಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ಸಸಿ ತಯಾರು ಮಾಡಿಕೊಟ್ಟರೆ ಅರಣ್ಯ ಹೆಚ್ಚಲಿದೆ. ಈ ವರ್ಷ ಸಭೆ ಮಾಡಿ, ಸೂಚನೆ ಕೊಡಲಾಗಿದೆ. ಅವಶ್ಯಕತೆ ಇರುವ ಸಸಿಗಳನ್ನು ಮಾತ್ರ ಬೆಳೆದು ಮಾರಾಟ ಮಾಡುವಂತೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
5 ವರ್ಷದ ಅರಣ್ಯ ಅಭಿವೃದ್ಧಿ ಆಡಿಟ್:5 ವರ್ಷದಲ್ಲಿ ಎಷ್ಟು ಅರಣ್ಯ ಬೆಳೆಸಲಾಗಿದೆ ಎಂಬುದನ್ನು ಆಡಿಟ್ ಮಾಡಲಾಗುತ್ತದೆ. ಮಲೆನಾಡು ಪ್ರದೇಶದಲ್ಲಿ ಶೇ. 70 ರಷ್ಟು ಸಸಿ ಉಳಿದಿದೆ. ಬಿಸಿಲು ಇರುವ ಕಡೆ ಶೇ.50ರಷ್ಟು ಉಳಿಯುತ್ತಿದೆ. ಐದು ವರ್ಷದಲ್ಲಿ ಏನಾಗಿದೆ ಎಂಬುದನ್ನು ಮೂರನೇ ವ್ಯಕ್ತಿಗಳಿಂದ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆೆ ಎಂದರು.
ದೆಹಲಿ ಸ್ಥಿತಿ ಪಾಠವಾಗಲಿ:ದೆಹಲಿಯಲ್ಲಿನ ವಾಯು ಮಾಲಿನ್ಯದ ಸ್ಥಿತಿ-ಗತಿ, ಜನಾರೋಗ್ಯದ ಸಮಸ್ಯೆ ನಮಗೆ ಎಚ್ಚರಿಕೆ ಗಂಟೆಯಾಗಬೇಕು. ಬೆಂಗಳೂರು ಮತ್ತೊಂದು ದೆಹಲಿ ಆಗದಂತೆ ಎಚ್ಚರವಹಿಸಬೇಕಿದೆ. ಅದಕ್ಕೆ ಪೂರಕವಾಗಿ ಅರಣ್ಯೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಸಚಿವ ಖಂಡ್ರೆ ಹೇಳಿದರು.
ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಎಲ್ಲರೂ ಬೇಲಿ ಹಾರುತ್ತಿದ್ದಾರೆ ಎಂದ ಖುಷ್​​ಬೂ; ಉಡುಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 10 =
Remember me
