ಬೆಂಗಳೂರು:ಪಕ್ಷದ ಸಂಘಟನೆ, ಚುನಾವಣಾ ತಂತ್ರಗಾರಿಕೆ ಭಾಗವಾಗಿ ಪ್ರತಿ ತಿಂಗಳಿಗೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆ ತರಲು ಪ್ರಯತ್ನಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪಕ್ಷದ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕವಾದ ಹಿನ್ನೆಲೆಯಲ್ಲಿ ‘ಕಾವೇರಿ’ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಆದಿಯಾಗಿ ಪಕ್ಷದ ಹಲವು ನಾಯಕರ ಜತೆಗೂಡಿ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಯಾವುದೇ ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ. ಆದರೂ ದೊಡ್ಡ ಜವಾಬ್ದಾರಿ ನೀಡಿದ್ದು ವಿನಮ್ರವಾಗಿ ಸ್ವೀಕರಿಸುವೆ. ಕ್ರಿಯಾಶೀಲ ಕಾರ್ಯಕರ್ತನನ್ನು ಪಕ್ಷ ಎಂದಿಗೂ ಕೈಬಿಡುವುದಿಲ್ಲ ಎನ್ನುವುದಕ್ಕೆ ನನ್ನ ನೇಮಕವೇ ನಿದರ್ಶನವೆಂದು ಸಂತಸ ವ್ಯಕ್ತಪಡಿಸಿದರು.
ನಂಬಿಕೆ ಉಳಿಸಿಕೊಳ್ಳುವೆ:ವರಿಷ್ಠರು ತೆಗೆದುಕೊಂಡ ನಿರ್ಧಾರದಿಂದ ಆನೆ ಬಲ ಬಂದಂತಾಗಿದ್ದು, ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವೆ. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಸ ಮಾಡಿ ಪಕ್ಷದ ಸಂಘಟನೆ ಬಲಪಡಿಸುವ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸದ ಕುರಿತು ಪ್ರಧಾನಿ ಮೋದಿ ಜತೆ ಮಾತನಾಡಿದ್ದೆ. ಅವರು ದಕ್ಷಿಣ ಭಾರತದ ಕಡೆಗೆ ಗಮನ ನೀಡಬೇಕು ಎಂದಿದ್ದರು. ಅದರಂತೆಯೇ ದೊಡ್ಡ ಜವಾಬ್ದಾರಿ ನೀಡಿದ್ದು, ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವೆ. ಮುಂದಿನ 10 ವರ್ಷಗಳಲ್ಲಿ ಕೈ, ಕಾಲು ಗಟ್ಟಿಯಿರುವ ತನಕ ರಾಜ್ಯ ಸುತ್ತುವೆ. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪಕ್ಷದ ಬೆಳವಣಿಗೆಗೆ ಶ್ರಮಿಸುವೆ. ವರಿಷ್ಠರು ನನ್ಮ ಮೇಲಿಟ್ಟಿರುವ ವಿಶ್ವಾಸದಂತೆ ಕೆಲಸ ಮಾಡಿ ತೋರಿಸುವೆ ಎಂದು ಬಿಎಸ್​ವೈ ಉಮೇದಿಯಿಂದ ಹೇಳಿದರು.
ನಿರಾಸೆ ಕಟ್ಟಿಟ್ಟಬುತ್ತಿ:ಈಗಾಗಲೆ ಅಧಿಕಾರಕ್ಕೆ ಬಂದೇ ಬಿಟ್ಟೆವು. ಸಿಎಂ ಆಗಿದ್ದೇನೆ ಎಂಬ ಭ್ರಮೆಯಲ್ಲಿರುವವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ತಿವಿದರು. ರಾಜ್ಯ ಸುತ್ತಾಡಿ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಜನರ ಮನ ಗೆಲ್ಲುತ್ತೇವೆ. ಕಾರ್ಯಕರ್ತರ ದೊಡ್ಡ ಬಲವೇ ಜತೆಗಿದ್ದು, ಸಾಮೂಹಿಕ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವ ಕಾರಣ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ನಿರ್ವಹಿಸಲಿದ್ದು, ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ವರಿಷ್ಠರು ನನ್ನನ್ನು ಓಲೈಸುವುದಕ್ಕಾಗಿ ಈ ಸ್ಥಾನಮಾನ ನೀಡಿದ್ದಾರೆ ಎಂಬುದು ಅರ್ಥಹೀನ ಎಂದರು.
‘ಕಾವೇರಿ’ಯಲ್ಲಿ ಸಂಭ್ರಮ, ಸಡಗರ:ಮಾಜಿ ಸಿಎಂ ಬಿಎಸ್​ವೈಗೆ ಪಕ್ಷದ ವರಿಷ್ಠರು ಪ್ರಮುಖ ಸ್ಥಾನಮಾನ ಕಲ್ಪಿಸಿರುವುದು ರಾಜ್ಯಕ್ಕೆ ಮಹತ್ವದ ಸಂದೇಶ ರವಾನಿಸಿದ್ದು, ಕಮಲಪಡೆಯಲ್ಲಿ ಸಂಚಲನ ಮೂಡಿಸಿದೆ. ಬಿಎಸ್​ವೈ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಬುಧವಾರ ಸಡಗರ, ಸಂಭ್ರಮ, ಸಂತಸದ ವಾತಾವರಣ. ಪಕ್ಷದ ಹಿರಿಯ ನಾಯಕನೊಂದಿಗೆ ಆನಂದ ಹಂಚಿಕೊಳ್ಳಲು ರಾಜ್ಯ ನಾಯಕರ ದೊಡ್ಡ ದಂಡು ಆಗಮಿಸಿತ್ತು. ಬೊಮ್ಮಾಯಿಗೆ ಬಿಎಸ್​ವೈ ಸಿಹಿ ತಿನ್ನಿಸಿ ಅವರ ಸಂತಸದಲ್ಲಿ ಭಾಗಿಯಾಗಿದೆ. ಇದೇ ಸಂದರ್ಭದಲ್ಲಿ ಬಿಎಸ್​ವೈಗೆ ಬೊಮ್ಮಾಯಿ ಸನ್ಮಾನಿಸಿ ಗೌರವಿಸಿದರೆ, ಉಳಿದ ನಾಯಕರು ಜತೆಯಾದರು. ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಗೋವಿಂದ ಕಾರಜೋಳ, ಕೆ.ಗೋಪಾಲಯ್ಯ, ರಾಜ್ಯಸಭೆ ಸದಸ್ಯ ಲೆಹರ್​ಸಿಂಗ್ ಸಿರೋಯ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಎಂ.ಪಿ.ಕುಮಾರಸ್ವಾಮಿ, ಬಿಎಸ್​ವೈ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಸಂಭ್ರಮದಲ್ಲಿ ಮಿಂದೆದ್ದರು.
ಕೇಶವ ಕೃಪಾಕ್ಕೆ ಭೇಟಿ:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ‘ಕೇಶವ ಕೃಪಾ’ಕ್ಕೆ ಮಾಜಿ ಸಿಎಂ ಬಿಎಸ್​ವೈ, ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಸಂಜೆ ಭೇಟಿ ನೀಡಿದರು.
ಯಾವುದೇ ಸ್ಥಾನಮಾನ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ ಎಂಬುದು ವರಿಷ್ಠರಿಗೆ ಗೊತ್ತಿದ್ದು, ಈಗ ಜವಾಬ್ದಾರಿ ನೀಡಿದ್ದಾರೆ. ಆ ಹೊಣೆಗಾರಿಕೆ ನಾನು ನಿರ್ವಹಿಸಬೇಕೆಂಬ ಅಪೇಕ್ಷೆ ವರಿಷ್ಠರಲ್ಲಿದೆ. ಅವರ ಆಶಯದಂತೆ ಈ ಜವಾಬ್ದಾರಿ ನಿರ್ವಹಿಸುತ್ತೇನೆ. ರಾಜ್ಯವಿಡೀ ಬದಲಾವಣೆ ಗಾಳಿ ಬೀಸಲಿದ್ದು, ಪ್ರವಾಸದ ವೇಳೆ ಇದು ಗೊತ್ತಾಗಲಿದೆ. ಅಷ್ಟೇ ಅಲ್ಲ, ಇತರ ಪಕ್ಷಗಳಲ್ಲಿನ ಸಿಎಂ ಹುದ್ದೆ ಪೈಪೋಟಿ ನಿಲ್ಲಲಿದೆ.
|ಬಿ.ಎಸ್.ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
ಪಕ್ಷದ ಸಂಸದೀಯ ಮಂಡಳಿಗೆ ಬಿಎಸ್​ವೈ ಅವರನ್ನು ಸದಸ್ಯರನ್ನಾಗಿ ನೇಮಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶ ಹೊರಡಿಸುವ ಮುನ್ನ ಬಿಎಸ್​ವೈ ಜತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದಷ್ಟೇ ಅಲ್ಲ, ದಕ್ಷಿಣ ಭಾರತದ ರಾಜ್ಯಗಳಲ್ಲೂ ಪ್ರವಾಸ ಮಾಡಿ ಪಕ್ಷ ಬಲಪಡಿಸಬೇಕು. ಗುರುತರ ಜವಾಬ್ದಾರಿ ಒಪ್ಪಿಕೊಳ್ಳಬೇಕು ಎಂದು ಬಿಎಸ್​ವೈಗೆ ಮೋದಿ ತಿಳಿಸಿ, ಮನದ ಇಂಗಿತವನ್ನು ತಿಳಿದುಕೊಂಡಿದ್ದಾರೆ. ಯಾವುದೇ ಸ್ಥಾನಮಾನ ನೀಡದಿದ್ದರೂ ಪಕ್ಷಕ್ಕಾಗಿ ದುಡಿಯಲು ಸಿದ್ಧವೆಂದ ಬಿಎಸ್​ವೈ, ಒಪ್ಪಿಸಿದ ಜವಾಬ್ದಾರಿ ನಿರ್ವಹಿಸಲು ಸಿದ್ಧವೆಂದು ಹೇಳಿದ ನಂತರವೇ ಮೋದಿ ಸೂಚನೆಯಂತೆ ಸಂಸದೀಯ ಮಂಡಳಿ ಪುನಾರಚನೆ ಆದೇಶ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಮೋದಿಯವರು ಮಾತನಾಡಿದ್ದು, ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜತೆಗೆ ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂಬ ಸಲಹೆ ನೀಡಿದ್ದನ್ನು ಬಿಎಸ್​ವೈ ಸುದ್ದಿಗಾರರಿಗೆ ಖಚಿತಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಈ ಮೂಲಕ ಪಕ್ಷ ಹಿರಿಯ ನಾಯಕನಿಗೆ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ. ಯಡಿಯೂರಪ್ಪ ಈ ಹುದ್ದೆಗೆ ಏರಿರುವುದರಿಂದ ಕರ್ನಾಟಕ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. 2023ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ನಿಶ್ಚಿತ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ರೈತನಾಯಕ ಬಿಎಸ್ ಯಡಿಯೂರಪ್ಪ ಬಿಜೆಪಿಯ ನೀತಿ ನಿರೂಪಕ ಅಂಗವಾದ ಸಂಸದೀಯ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿರುವುದು ನಾಡಿನ ಜನತೆಗೆ ಮತ್ತು ವೈಯಕ್ತಿಕವಾಗಿ ನನಗೆ ಅತೀವ ಹರ್ಷ ತಂದಿದೆ. ಜನನಾಯಕ ಯಡಿಯೂರಪ್ಪನವರು ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಾರೆ ಎಂಬ ವಿಶ್ವಾಸ ನನ್ನದು.
|ಗೋವಿಂದ ಕಾರಜೋಳಜಲಸಂಪನ್ಮೂಲ ಸಚಿವ
ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಪಕ್ಷವನ್ನು ಚುನಾವಣೆಗೆ ಸಿದ್ಧಪಡಿಸುವ ಮಹತ್ಕಾರ್ಯ ಯಡಿಯೂರಪ್ಪ ಅವರಂಥ ಧುರೀಣರ ಹೆಗಲಿಗೇರಿರುವುದು ರಾಜ್ಯದ ಲಕ್ಷಾಂತರ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ಶ್ರಮವರಿಯದ ಸೇನಾನಿಯಾಗಿ ಪಕ್ಷಕ್ಕಾಗಿ ಅಂದಿಗೂ-ಇಂದಿಗೂ ಸೇವೆ ಸಲ್ಲಿಸುತ್ತಿರುವ ಯಡಿಯೂರಪ್ಪ ನಾಯಕತ್ವ ಗುಣ ಹಾಗೂ ಅನುಭವ ಪಕ್ಷದ ಪಾಲಿಗೆ ಅತಿದೊಡ್ಡ ಶಕ್ತಿಯಾಗಿ ಪರಿಣಮಿಸಲಿದೆ.
|ಸಿ.ಟಿ. ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ನೀಡಿರುವುದು ಬಹಳ ಸಂತೋಷ. ಅವರನ್ನು ಆ ಪಕ್ಷದಲ್ಲಿ ಗುರುತಿಸಿರುವುದು ಸಂತೋಷದ ವಿಚಾರ.
|ಸಿದ್ದರಾಮಯ್ಯಪ್ರತಿಪಕ್ಷ ನಾಯಕ
ನವದೆಹಲಿ:ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ, ಅಸ್ಸಾಂನ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್ ಮತ್ತು ಮಾಜಿ ಸಂಸದ ಸತ್ಯನಾರಾಯಣ್ ಜಟಿಯಾ ಸೇರಿ ಹಲವು ಹೊಸ ಮುಖಗಳಿಗೆ ಬಿಜೆಪಿಯ ಪುನರ್ ರಚಿತ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಿಕ್ಕಿದೆ. ಜಾತಿ ಮತ್ತು ಪ್ರದೇಶವಾರು ಲೆಕ್ಕಾಚಾರಗಳನ್ನು ಹಾಕಿ ಮಹತ್ವದ ತೀರ್ಮಾನ ಕೈಗೊಂಡಿರುವ ಬಿಜೆಪಿ ನಾಯಕರು, ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ ದೇವೆಂದ್ರ ಫಡ್ನವಿಸ್​ಗೆ ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿದ್ದಾರೆ.
ಈ ನಡುವೆ ಮುಂಬರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಸಿಎಂ ಅಭ್ಯರ್ಥಿ ಬದಲಾವಣೆಯಾಗಬೇಕು ಎಂಬ ಕೂಗು ಕೇಳಿ ಬರುತ್ತಿರುವ ಮಧ್ಯೆ ಶಿವರಾಜ್ ಸಿಂಗ್ ಚೌಹಾಣ್ ಬದಲಿಗೆ ಮಧ್ಯಪ್ರದೇಶ ಬಿಜೆಪಿ ಹಿರಿಯ ನಾಯಕ ಸತ್ಯನಾರಾಯಣ ಜಟಿಯಾಗೆ ವರಿಷ್ಠರು ಆದ್ಯತೆ ನೀಡಿರುವುದು ಗಮನಾರ್ಹ ಬೆಳವಣಿಗೆ. ನಿತಿನ್ ಗಡ್ಕರಿಯವರನ್ನು ದೂರವಿಟ್ಟಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಮಾಜಿ ಐಪಿಎಸ್ ಅಧಿಕಾರಿ ಇಕ್ಬಾಲ್ ಸಿಂಗ್ ಲಾಲ್ಪುರ, ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ಅಧ್ಯಕ್ಷ ಕೆ ಲಕ್ಷ್ಮಣ್, ರಾಷ್ಟ್ರೀಯ ಕಾರ್ಯದರ್ಶಿ ಸುಧಾ ಯಾದವ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಸಂಸದೀಯ ಮಂಡಳಿಯ ಇತರೆ ಸದಸ್ಯರು. ಸಂಸದೀಯ ಮಂಡಳಿ 11 ಮತ್ತು ಚುನಾವಣಾ ಸಮಿತಿ 15 ಸದಸ್ಯರನ್ನು ಹೊಂದಿದೆ. ಚುನಾವಣೆಗಳಿಗೆ ತಯಾರಾಗುತ್ತಿರುವ ತೆಲಂಗಾಣ, ಹರ್ಯಾಣ, ರಾಜಸ್ಥಾನದ ನಾಯಕರಿಗೂ ಅವಕಾಶ ಕಲ್ಪಿಸಲಾಗಿದೆ. ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್, ಓಂ ಮಾಥುರ್ ಮತ್ತು ಸುಧಾ ಯಾದವ್, ಭೂಪೇಂದ್ರ ಯಾದವ್​ರಂತಹ ನಾಯಕರಿಗೆ ಪಕ್ಷದ ಟಿಕೆಟ್ ಅಂತಿಮಗೊಳಿಸುವ ಸಮಿತಿಯಲ್ಲಿ ಅವಕಾಶ ಸಿಕ್ಕಿದೆ.
ಜಾತಿ ಲೆಕ್ಕಾಚಾರ:ಸೋನೋವಾಲ್ ಬುಡಕಟ್ಟು ಸಮುದಾಯದವರಾಗಿದ್ದರೆ, ಸತ್ಯನಾರಾಯಣ್ ಜಟಿಯಾ ಪರಿಶಿಷ್ಟ ಜಾತಿ, ಕೆ.ಲಕ್ಷ್ಮಣ್ ಮತ್ತು ಸುಧಾ ಯಾದವ್ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ್ದಾರೆ. ಕೇಂದ್ರದ ಮಾಜಿ ಸಚಿವ ಶಹನವಾಜ್ ಹುಸೇನ್ ಬದಲಿಗೆ, ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ಆಯ್ಕೆ ಮಾಡಲಾಗಿದೆ. 75 ವರ್ಷ ಮೇಲ್ಪಟ್ಟವರನ್ನು ರಾಜಕೀಯದಿಂದ ನಿವೃತ್ತಿಗೊಳಿಸಲು ಅಥವಾ ಅವರಿಗೆ ಚುನಾವಣಾ ಟಿಕೆಟ್ ನೀಡಬಾರದೆಂಬ ಅಲಿಖಿತ ನಿರ್ಧಾರವಿದ್ದರೂ ಯಡಿಯೂರಪ್ಪ (79) ಮತ್ತು 76 ವರ್ಷದ ಜಟಿಯಾ ಅವರನ್ನು ಮಂಡಳಿಯಲ್ಲಿ ಸೇರಿಸಲಾಗಿದೆ.
ಬೆಂಗಳೂರು:ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ’ ಪ್ರಗತಿ ವರದಿ ’ (ರಿಪೋರ್ಟ್ ಕಾರ್ಡ್) ಜನರು ಮುಂದಿಡಲು ಉದ್ದೇಶಿತ ದೊಡ್ಡಬಳ್ಳಾಪುರದ ಜನೋತ್ಸವ ದಿನಾಂಕ ಬದಲಾಗುವ ಸಾಧ್ಯತೆಗಳಿವೆ. ತಾತ್ಕಾಲಿಕ ಗೊತ್ತುಪಡಿಸಿದ ಆ.28ರಂದು ಈ ಕಾರ್ಯಕ್ರಮ ಸಂಘಟಿಸಲು ಸಾಧ್ಯವಾಗದಿದ್ದರೆ ಸೆ.11ಕ್ಕೆ ಆಯೋಜಿಸಲು ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಆರ್​ಎಸ್​ಎಸ್ ಬೈಠಕ್:ಆ.28ರಂದು ಜನೋತ್ಸವ ಏರ್ಪಡಿಸಲು ತಾತ್ಪೂರ್ತಿಕವಾಗಿ ನಿರ್ಧರಿಸಿ ಅಗತ್ಯ ಸಿದ್ಧತೆಗಳಿಗೆ ಸಿಎಂ ಬೊಮ್ಮಾಯಿ ಗ್ರೀನ್ ಸಿಗ್ನಲ್ ನೀಡಿದ್ದರು. ಅದೇ ದಿನ ಮಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಬೈಠಕ್ ನಿಗದಿಯಾಗಿದೆ. ಜನೋತ್ಸವಕ್ಕೆ ಯಾರಾದರೂ ಒಬ್ಬರು ರಾಷ್ಟ್ರೀಯ ನಾಯಕರು ಭಾಗವಹಿಸುವಂತೆ ಒಪ್ಪಿಸುವುದಕ್ಕೂ ಸಮಾಯಾವಕಾಶ ಸಾಲದು ಎಂಬ ಅಭಿಪ್ರಾಯ ವ್ಯಕ್ತವಾಗಿವೆ. ಸಿಎಂ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಬೈಠಕ್ ಜತೆಗೆ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಒಬ್ಬರಾದರೂ ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಕಾಲಾವಕಾಶ ಅಗತ್ಯವೆಂಬ ನಿಲುವು ತಳೆದಿದೆ. ಮುಂದಿನ ದಿನಾಂಕ ಹಾಗೂ ರಾಷ್ಟ್ರೀಯ ನಾಯಕರನ್ನು ಕರೆ ತರುವ ನಿರ್ಧಾರ ಸಿಎಂ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ವಿವೇಚನೆಗೆ ಬಿಡಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.
ಸಂಘದ ಕಚೇರಿಗೆ ದಿಢೀರ್ ಭೇಟಿ:ಸಂಘದ ಕಚೇರಿ ಕೇಶವ ಕೃಪಾಕ್ಕೆ ಸಿಎಂ ಬೊಮ್ಮಾಯಿ ಮಂಗಳವಾರ ರಾತ್ರಿ ದಿಢೀರ್ ಭೇಟಿ ನೀಡಿ, ಸಂಘದ ಪ್ರಮುಖ ಮುಕುಂದ್ ಜತೆಗೆ ರ್ಚಚಿಸಿದ್ದು, ಸಚಿವ ಆರ್.ಅಶೋಕ್ ಸಾಥ್ ನೀಡಿದ್ದಾರೆ. ರಾಜ್ಯದ ಇತ್ತೀಚಿನ ವಿದ್ಯಮಾನ, ಸಚಿವರ ವಿಭಿನ್ನ ಹೇಳಿಕೆ ಬಗ್ಗೆ ಚರ್ಚೆಯಾಗಿವೆ. ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪ್ರಸ್ತಾಪವಾಗಿದ್ದು, ರಾಷ್ಟ್ರೀಯ ನಾಯಕರ ಲಭ್ಯತೆ ಖಚಿತಪಡಿಸಿಕೊಳ್ಳದೆ ದಿನಾಂಕ ಪ್ರಕಟಿಸಿದ್ದರ ಬಗ್ಗೆ ಮುಕುಂದ್ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.ದಿನಾಂಕ ಬದಲಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಸಮಜಾಯಿಷಿ ನೀಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜತೆಗೆ ರ್ಚಚಿಸಿ ಒಪ್ಪಿಗೆ ಪಡೆಯಲಾಗುವುದು. ಆ.28ಕ್ಕೆ ಸಾಧ್ಯವಾಗದಿದ್ದರೆ ಸೆಪ್ಟಂಬರ್ 11ಕ್ಕೆ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.
ಇನ್ನೂ ಅಂತಿಮವಾಗಿಲ್ಲ:ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಬಿಂಬಿಸಲು ಉದ್ದೇಶಿತ ರಾಜ್ಯಮಟ್ಟದ ಜನೋತ್ಸವ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲೇ ನಡೆಯಲಿದೆ. ಆದರೆ ದಿನಾಂಕ ಇನ್ನೂ ಫೈನಲ್ ಆಗಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸಿಎಂ ಅಧ್ಯಕ್ಷತೆಯಲ್ಲಿ ಜನೋತ್ಸವ ಪೂರ್ವಭಾವಿ ಸಭೆಯಾಗಿದೆ. ಪಕ್ಷದ ರಾಷ್ಟ್ರೀಯ ನಾಯಕರ ಒಪ್ಪಿಗೆ ಪಡೆದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆಗೆ ಮತ್ತೊಬ್ಬ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಚಿಂತನೆಯಿದೆ. ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರು ಈ ಬಗ್ಗೆ ರಾಷ್ಟ್ರೀಯ ನಾಯಕರ ಜತೆಗೆ ರ್ಚಚಿಸಿ, ಒಂದೆರಡು ದಿನಗಳಲ್ಲಿ ದಿನಾಂಕ ಫೈನಲ್ ಮಾಡಲಿದ್ದಾರೆ ಎಂದರು.
ಜನತಾ ಕೋರ್ಟ್ ತೀರ್ಪು:ಕಳೆದ ಮೂರು ವರ್ಷಗಳ ಪ್ರಗತಿ ವರದಿ ಮಂಡನೆ, ಫಲಾನುಭವಿಗಳ ಸಮಾವೇಶ ಹಾಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕಿರುವ ಶಕ್ತಿ ಪ್ರದರ್ಶಿಸುವುದು ಜನೋತ್ಸವದ ಉದ್ದೇಶವಾಗಿದೆ. ರಿಪೋರ್ಟ್ ಕಾರ್ಡ್ ಬಗ್ಗೆ ಪ್ರತಿಪಕ್ಷಗಳು ಏನೇ ಟೀಕೆ- ಟಿಪ್ಪಣಿ ಮಾಡಲಿ. 2023ರ ವಿಧಾನಸಭೆ ಚುನಾವಣೆಯಲ್ಲಿ ಜನತಾ ಕೋರ್ಟ್ ಅಂತಿಮ ತೀರ್ಪು ನೀಡಲಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು. ರಾಜ್ಯ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಹೇಳಬೇಕಾಗಿದೆ. ಈ ಕಾರಣಕ್ಕೆ ಜನೋತ್ಸವ ನಡೆಯಲಿದ್ದು, ಕಾರ್ಯಕರ್ತ ರಲ್ಲಿ ಹುರುಪು, ಶಕ್ತಿ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು:‘ಅಧಿಕಾರಿಗಳ ಅಸಡ್ಡೆ ಮನೋಭಾವ ಹಾಗೂ ನಿರ್ಲಕ್ಷ್ಯದ ಧೋರಣೆ ಇದೇ ರೀತಿಯಲ್ಲಿ ಮುಂದುವರೆದರೆ ಸರ್ಕಾರದ ಇಮೇಜ್ ವೃದ್ಧಿ ಹೇಗೆ ಸಾಧ್ಯ?’ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯಲ್ಲಿ ಕೆಲ ಸಚಿವರು ವ್ಯಕ್ತಪಡಿಸಿರುವ ತೀವ್ರ ಆಕ್ರೋಶ ಇದಾಗಿದೆ.
ಜನೋತ್ಸವವನ್ನು ಅದ್ದೂರಿಯಾಗಿ ಹಾಗೂ ಕಾಂಗ್ರೆಸ್​ನ ಇತ್ತೀಚಿನ ಸಮಾವೇಶಗಳಿಗೆ ಪರ್ಯಾಯವಾಗಿ ನಡೆಸಬೇಕೆಂದು ಬೊಮ್ಮಾಯಿ ಕೆಲ ಸಚಿವರ ಬಳಿಯಲ್ಲಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಸಚಿವರಿಂದ ಅಧಿಕಾರಿಶಾಹಿ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಸಚಿವರೇ ಅಧಿಕಾರಿಗಳ ವಿರುದ್ಧ ದೂರು ನೀಡಿರುವುದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವಾಗ ಅಧಿಕಾರಿಗಳು ಸರ್ಕಾರದ ವೇಗಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ. ಯಾವುದೇ ಕಡತಗಳಿಗೆ ವೇಗವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ, ಅನುದಾನ ಬಿಡುಗಡೆಯ ಕಡತಗಳಿಗೆ ಅನುಮೋದನೆ ನೀಡಲು ತಡ ಮಾಡುತ್ತಿದ್ದಾರೆ. ಇಲಾಖೆಯ ಕಾರ್ಯ ಚಟುವಟಿಕೆಗಳು ಜನರಿಗೆ ತಿಳಿಸಲು ಪ್ರಚಾರವನ್ನೇ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾಹೀರಾತುಗಳನ್ನು ನೀಡಲು, ಇಲಾಖೆಯ ಕಾರ್ಯ ಚಟುವಟಿಕೆಗಳ ಹೋರ್ಡಿಂಗ್​ಗಳನ್ನು ಹಾಕಲು ಅನುದಾನ ಬಿಡುಗಡೆಯಾಗುತ್ತಿಲ್ಲ. ಈ ರೀತಿಯಾದರೆ ಸರ್ಕಾರದ ಇಮೇಜ್ ವೃದ್ಧಿ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಸಚಿವರೇ ಅಧಿಕಾರಿಗಳ ವಿರುದ್ಧ ದೂರು ಹೇಳಿದ ನಂತರ ಆತಂಕಕ್ಕೆ ಒಳಗಾದ ಬಸವರಾಜ ಬೊಮ್ಮಾಯಿ, ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆಗೂ ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಸರ್ಕಾರದ ಇಮೇಜ್ ವೃದ್ಧಿಯಾಗುವ ಕಾರ್ಯಕ್ರಮಗಳಿಗೆ ಅನುದಾನ ಕಡಿತ ಮಾಡದಿರುವಂತೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.
ಬೆಂಗಳೂರು:ಮಾಧ್ಯಮಗಳಿಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವ ಬಸನಗೌಡ ಯತ್ನಾಳ್ ಮತ್ತು ಸಚಿವ ಶ್ರೀರಾಮುಲು ಅವರಿಗೆ ಬಿಜೆಪಿ ಲಗಾಮು ಹಾಕಿದೆ. ಚುನಾವಣೆ ಹತ್ತಿರವಿರುವ ಹೊತ್ತಿನಲ್ಲಿ ಈ ರೀತಿ ಮನಸೋಯಿಚ್ಛೆ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಇನ್ನು ಮುಂದೆ ಆಕ್ಷೇಪಾರ್ಹ ಮಾತುಗಳನ್ನು ಆಡಿದರೆ ಪಕ್ಷ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಪಕ್ಷದ ಕಚೇರಿಗೆ ಯತ್ನಾಳ್ ಮತ್ತು ಶ್ರೀರಾಮುಲು ಅವರನ್ನು ಕರೆಸಿಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷರು, ಇಬ್ಬರ ಹೇಳಿಕೆಗಳನ್ನು ಮುಂದಿಟ್ಟು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ನಡೆ ಮತ್ತೆ ಮುಂದುವರಿದರೆ ನಿಮ್ಮಗಳ ಮೇಲೆ ಶಿಸ್ತು ಕ್ರಮಕ್ಕೆ ರಾಜ್ಯದಿಂದ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
