ಬೆಳಗಾವಿ:ಸಿದ್ದರಾಮಯ್ಯ ಸರ್ಕಾರದ ಆರು ತಿಂಗಳ ಪರೀಕ್ಷಾರ್ಥ ಅವಧಿ ಮುಕ್ತಾಯದ ಹೊತ್ತಿನಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಸೋಮವಾರ ಆರಂಭವಾಗುತ್ತಿದೆ. ಪ್ರತಿಪಕ್ಷ ನಾಯಕನಾಗಿ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕಗೊಂಡ ಬಳಿಕ ಉಭಯ ನಾಯಕರಿಗೂ ಮೊದಲ ಅಧಿವೇಶನ. ಹೀಗಾಗಿ ಒಂದಷ್ಟು ಸಾಮರ್ಥ್ಯ ಪರೀಕ್ಷೆ ನಡೆಯುವುದು ಸಹಜ.
ಬರಗಾಲ, ವರ್ಗಾವಣೆ ದಂಧೆ, ಗ್ಯಾರಂಟಿ ಹುಳುಕು, ವಿದ್ಯುತ್ ಬವಣೆ, ಪರೀಕ್ಷಾ ಅಕ್ರಮ, ಕಮಿಷನ್ ಕಿರುಕುಳ, ಡಿಸಿಎಂ ವಿರುದ್ಧ ಸಿಬಿಐ ತನಿಖೆ ವಾಪಸ್ ಪಡೆದ ನಿರ್ಣಯ… ಹೀಗೆ ಹತ್ತು ಹಲವು ವಿಷಯಗಳನ್ನು ಶಾಸನ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಕಿವಿಹಿಂಡಲು ಪ್ರತಿಪಕ್ಷ ಬಿಜೆಪಿ ತಯಾರಾಗಿದೆ. ಮೈತ್ರಿ ಪಕ್ಷ ಜೆಡಿಎಸ್ ಜತೆಗೂಡಿಯೇ ಸರ್ಕಾರದ ವಿರುದ್ಧ ತೊಡೆತಟ್ಟಲಿದೆ.
ಇದೇ ವೇಳೆ ಪ್ರತಿಪಕ್ಷಗಳ ಆರೋಪಗಳಿಗೆ ಆಗಿಂದಾಗಲೇ ಸ್ಪಷ್ಟನೆ ನೀಡುವ ಮೂಲಕ ವಿಷಯ ವಿಸ್ತಾರ ತಡೆಯುವ ತಂತ್ರಗಾರಿಕೆ ನಡೆಸಿದ ಸಿದ್ದರಾಮಯ್ಯ, ಅಧಿವೇಶನದಲ್ಲೂ ಎದುರಾಗಲಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರ ಜೋಡಿಸಿಕೊಂಡಿದ್ದಾರೆ. ಉದಾಹರಣೆಗೆ, ವರ್ಗಾವಣೆ ದಂಧೆಯನ್ನು ಪ್ರತಿಪಕ್ಷ ಪ್ರಸ್ತಾಪಿಸುವುದು ನಿಚ್ಚಳ ಆಗುತ್ತಿದ್ದಂತೆ, ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ವರ್ಗಾವಣೆಯ ಅಂಕಿಅಂಶ, ದಾಖಲೆಗಳನ್ನು ಸಂಗ್ರಹಿಸಿದ್ದು, ಪ್ರತ್ಯಸ್ತ್ರದೊಂದಿಗೆ ಸಜ್ಜುಗೊಂಡಿದ್ದಾರೆ.
ಕೇಂದ್ರದ ವಿರುದ್ಧ ಸಮರಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತಡ ಮಾಡುತ್ತಿದೆ ಎಂದು ಪದೇಪದೆ ಪತ್ರ ಬರೆದು ವಿಷಯ ಜೀವಂತ ಇಡುವ ಪ್ರಯತ್ನ ಮಾಡುತ್ತಿರುವ ಸರ್ಕಾರ, ಅಧಿವೇಶನದಲ್ಲೂ ಕೂಡ ಬಿಜೆಪಿ ನಾಯಕರ ಬಾಯಿ ಮುಚ್ಚಿಸಲು ತಯಾರಾಗಿದೆ. ಇನ್ನೊಂದೆಡೆ, ರಾಜ್ಯ ಸರ್ಕಾರದ ಕಡೆಯಿಂದ ಬೆಳೆ ಹಾನಿ ಪರಿಹಾರದ ಮೊದಲ ಕಂತು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ರೈತರ ಖಾತೆಗಳಿಗೆ ಹಣ ಜಮಾ ಮಾಡುವ ಮೂಲಕ ಪ್ರತಿಪಕ್ಷದ ಅಬ್ಬರ ತಡೆಯಲು ತಂತ್ರ ಹಣಿದಿದೆ.
ಪ್ರತಿಪಕ್ಷಕ್ಕೂ ಸವಾಲುವಿಧಾನಸಭೆಯಲ್ಲಿ ಅನುಭವಿ ಸಿದ್ದರಾಮಯ್ಯ ಎದುರು ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಜೋಡಿ ಯಾವ ರೀತಿ ಚಾಕಚಕ್ಯತೆ ಮೆರೆಯಲಿದೆ ಎಂಬ ಕುತೂಹಲ ಆಡಳಿತ, ಪತಿಪಕ್ಷದ ಶಾಸಕರಲ್ಲಿದೆ. ಶಾಸಕರಾಗಿದ್ದುಕೊಂಡು ಪ್ರತಿಪಕ್ಷದ ಸಾಲಿನಲ್ಲಿ ಕುಳಿತು ಸರ್ಕಾರವನ್ನು ಎಚ್ಚರಿಸುವುದು ಒಂದು ಹಂತವಾದರೆ, ಪ್ರತಿಪಕ್ಷ ನಾಯಕನಾಗಿ ಸರ್ಕಾರವನ್ನು ಎಚ್ಚರಿಸುವುದು ದೊಡ್ಡ ಜವಾಬ್ದಾರಿ. ಸಿದ್ದರಾಮಯ್ಯ ಹಾವಭಾವ, ಪೂರ್ವ ತಯಾರಿಗೆ ಸರಿಸಮಾನವಾಗಿ ಸಿದ್ಧತೆ ಮಾಡಿಕೊಂಡು ಬರುವ ಸವಾಲು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರಿಗಿದೆ. ಇದೇ ವೇಳೆ ಎಚ್.ಡಿ. ಕುಮಾರಸ್ವಾಮಿ ನೆರವು ಸಿಗುವುದು ಅವರ ಪಾಲಿನ ಪ್ಲಸ್​ಪಾಯಿಂಟ್.
ಉ.ಕ ಚರ್ಚೆಗೆ ಮಹತ್ವಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆಯಾಗಲ್ಲ ಎಂಬ ಅಪವಾದಕ್ಕೆ ಕೊನೆ ಹಾಡಲು ಈ ಬಾರಿ ಅಧಿವೇಶನದಲ್ಲಿ ಆರಂಭದಲ್ಲೇ ಎರಡು ದಿನ ಉತ್ತರ ಕರ್ನಾಟಕದ ವಿಚಾರ ಕುರಿತು ಆದ್ಯತೆ ನೀಡಲು ಸಭಾಧ್ಯಕ್ಷರು ತೀರ್ವನಿಸಿದ್ದಾರೆ. ವಿಧಾನಸಭೆಯಲ್ಲಿ ಯಾವ ವಿಷಯ ಕೈಗೆತ್ತಿಕೊಳ್ಳಬೇಕೆಂಬ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ವನಿಸಲಾಗುತ್ತದೆ.
ಸ್ಪೀಕರ್ ಪ್ಯಾನಲ್ ರೆಡಿಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕಲಾಪ ನಡೆಸಲು ಆರು ಸದಸ್ಯರ ಒಂದು ಪ್ಯಾನಲ್ ರಚಿಸಲಾಗಿದೆ. ಸಿ.ಎಸ್. ನಾಡಗೌಡ, ಶಿವಾನಂದ ಕೌಜಲಗಿ, ಕೆ.ಎಂ. ಶಿವಲಿಂಗೇಗೌಡ, ಎಚ್.ಡಿ. ರಂಗನಾಥ್, ಅರವಿಂದ ಬೆಲ್ಲದ ಹಾಗೂ ಶಾರದಾ ಪೂರ್ಯಾ ನಾಯ್್ಕ ಪಟ್ಟಿಯಲ್ಲಿದ್ದಾರೆ.
ವಿಧೇಯಕ ಮಂಡನೆವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ರದ್ದು, ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ತಿದ್ದುಪಡಿ ಸೇರಿದಂತೆ ಪ್ರಮುಖ ವಿಧೇಯಕಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಮೂರು ವಿಧೇಯಕಗಳು ಈಗಾಗಲೇ ಸುಗ್ರೀವಾಜ್ಞೆ ರೂಪದಲ್ಲಿ ಜಾರಿಯಲ್ಲಿದ್ದು, ಶಾಸನ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ಸೆಲೆಕ್ಟ್ ಕಮಿಟಿ ಅಂಗಳ ದಲ್ಲಿದ್ದು ಈ ಅಧಿವೇಶನದಲ್ಲಿ ಅದು ಮತ್ತೆ ಪರಿಷತ್​ನಲ್ಲಿ ಪರಾಮರ್ಶೆಗೆ ಒಳಗಾಗಲಿದೆ.
ಡಿ.6ರಂದು ಸಿಎಲ್ಪಿಅಧಿವೇಶನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಡಿ.6ರಂದು ಬೆಳಗಾವಿ-ಕೊಲ್ಲಾಪುರ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್​ನಲ್ಲಿ ಹಮ್ಮಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಶಾಸಕರ ಒಗ್ಗಟ್ಟು ಪ್ರದರ್ಶನ, ಪ್ರತಿಪಕ್ಷದ ವೇಗ ತಗ್ಗಿಸುವುದು, ವಿಧೇಯಕಗಳ ವೇಳೆ ಕಡ್ಡಾಯ ಹಾಜರಿ, ಲೋಕಸಭೆ ಚುನಾವಣೆ ಸೇರಿ ವಿವಿಧ ವಿಚಾರಗಳು ಈ ವೇಳೆ ಚರ್ಚೆಗೆ ಬರಲಿದೆ.
ಸಂಸತ್ ಕಲಾಪವೂ ಶುರುನವದೆಹಲಿ: ಇಂದಿನಿಂದ ಲೋಕಸಭಾ ಚಳಿಗಾಲದ ಅಧಿವೇಶನವೂ ನಡೆಯಲಿದೆ. 22ರವರೆಗೆ ನಡೆಯಲಿರುವ ಕಲಾಪದಲ್ಲಿ ಒಟ್ಟು 21 ಮಸೂದೆಗಳು ಮಂಡನೆಯಾಗಲಿವೆ. ಗೃಹ ಸಚಿವಾಲಯದಿಂದ ಮಂಡನೆಯಾಗಲಿರುವ ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮಗಳು ಪ್ರಮುಖವಾಗಿವೆ. ಕೇಂದ್ರೀಯ ವಿವಿ ಕುರಿತಾದ ತಿದ್ದುಪಡಿ ಮಸೂದೆಯೂ ಮಂಡನೆಯಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ. ಸಂಸದ ಸ್ಥಾನದಿಂದ ಟಿಎಂಸಿಯ ಮಹುವಾ ಮೊಹಿತ್ರಾ ಅನರ್ಹಗೊಳಿಸುವ ವಿಚಾರವೂ ವಾಗ್ವಾದಕ್ಕೆ ಕಾರಣವಾಗಲಿದೆ. ಅಧಿವೇಶನಕ್ಕೂ ಮುನ್ನ ಶನಿವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ 23 ಪಕ್ಷಗಳ 30 ನಾಯಕರು ಪಾಲ್ಗೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 20 =
Remember me
