| ಕವಿತಾ ಆಡೂರು, (ಲೇಖಕರು ಉಪನ್ಯಾಸಕರು, ಕವಯಿತ್ರಿ)
ಋಣವ ತೀರಿಸಬೇಕು, ಋಣವ ತೀರಿಸಬೇಕು|
ಋಣವ ತೀರಿಸುತ ಜಗದಾದಿಸತ್ತ್ವವನು||
ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು|
ಮನೆಯೊಳಗೆ ಮಠ ನಿನಗೆ-ಮಂಕುತಿಮ್ಮ||628||
ಋಣವನ್ನು ತೀರಿಸಬೇಕು, ಋಣವನ್ನು ತೀರಿಸುತ್ತಾ ಜಗತ್ತಿನ ಆದಿ ಸತ್ತ್ವವನ್ನು ಜನರಲ್ಲಿ ಕಾಣುತ್ತಾ ಅದರೊಳಗೆ ಒಂದುಗೂಡಲುಬೇಕು. ಇದಕ್ಕೆ ಮನೆಯೇ ನಿನಗೆ ಮಠ ಎನ್ನುತ್ತದೆ ಈ ಕಗ್ಗ. ಮನುಷ್ಯರದು ಪರಸ್ಪರ ಅವಲಂಬಿತವಾದ ಜೀವನ. ಸೂಕ್ಷ್ಮವಾಗಿ ಗಮನಿಸಿದೆವಾದರೆ ಅನೇಕಾನೇಕ ಸ್ನೇಹ-ಸಂಬಂಧಗಳು ಜೊತೆಗೂಡಿದುದು ಹೇಗೆ ಎನ್ನುವುದೆ ಬೆರಗು. ಹುಟ್ಟಿದ ಮನೆ, ಹೆತ್ತವರು, ಕುಟುಂಬ, ಬಂಧುಗಳು, ಪರಿಚಿತರು ಹೀಗೆ ಹಲವು ನೆಪಗಳಿಂದ ಆತ್ಮೀಯವಾದ ಜೀವಗಳ ನಂಟು ಬೆಳೆದದ್ದು ಹೇಗೆ? ಹಗೆ, ಮಮತೆ, ಸ್ನೇಹ, ಮಾತ್ಸರ್ಯವೇ ಮೊದಲಾದ ವಿವಿಧ ಭಾವಗಳ ಮೂಲಕ ಬೆಸೆದುಕೊಳ್ಳುವ ಬಾಂಧವ್ಯಕ್ಕೆ ಕಾರಣವೇನು? ಜೊತೆಗೂಡಿದವರು, ದೂರವಿಟ್ಟವರು, ದೂರವಾದವರು, ನೆರವಾದವರು ಎದುರಾದದ್ದು ಹೇಗೆ? ಯಾರು ಇವನ್ನೆಲ್ಲಾ ಸಂಯೋಜಿಸಿದವರು?
ಈ ಕಾಲದಲ್ಲಿ ಆತ್ಮನನ್ನು ಮರೆತು ‘ನಾನು’ ಎಂಬ ಹಮ್ಮಿನಿಂದ ಬೀಗುತ್ತಾ ಆತ್ಮಹನನ ಮಾಡಿಕೊಳ್ಳುವವರ ಸಂಖ್ಯೆಯೆ ಅಧಿಕವಾಗಿದೆ. ಆಡಂಬರದ ಜೀವನದಲ್ಲಿ ಮುಖವಾಡಗಳನ್ನು ಧರಿಸುತ್ತಾ ಜೀವಿಸುವುದು ಸಾಮಾನ್ಯವಾಗಿದೆ. ಆದರೆ ಎಲ್ಲಾ ಆತ್ಮವು ವಿಕಸನವನ್ನು ಹೊಂದುತ್ತಾ ಪೂರ್ಣತೆಯ ಕಡೆಗೆ ಸಾಗುತ್ತಿದೆ. ಅದಕ್ಕಾಗಿಯೇ ಹಲವು ಜನುಮಗಳನ್ನು ದಾಟಿ ಮುನ್ನಡೆಯುತ್ತಿದೆ. ಈ ಪಯಣದಲ್ಲಿ ಜೀವಾತ್ಮವು ಕರ್ಮವನ್ನೆಸಗದೆ ನಿಷ್ಕ್ರಿಯವಾಗಿ ಇರುವುದಕ್ಕೆ ಸಾಧ್ಯವಿಲ್ಲ. ಅಂತೆಯೇ ಮಾಯಾಮೋಹಗಳಿಗೆ ಒಳಪಡದೆ, ತ್ರಿಗುಣಗಳ ಏರುಪೇರಿಗೆ ಸಿಲುಕದೆ ಇರಲೂ ಸಾಧ್ಯವಿಲ್ಲ. ಇದರಿಂದಾಗಿ ಅನೇಕ ಋಣದ ಎಳೆಗಳು ಅವನನ್ನು ಸುತ್ತಿಕೊಳ್ಳುತ್ತವೆ. ಋಣವೆಂದರೆ ಸಾಲ. ಹಿಂತಿರುಗಿಸಬೇಕಾದುದು. ಸಮಾಜದೊಳಗೆ ಬೆರೆತು ಬಾಳುವ ಅನಿವಾರ್ಯತೆ ಮತ್ತು ಅವಶ್ಯಕತೆಯೊಳಗೆ ವ್ಯಕ್ತಿಯು ಹಲವನ್ನು ಸಮಾಜದಿಂದ ಪಡೆಯುತ್ತಾನೆ. ಪ್ರತಿಯಾಗಿ ಕೊಡುವುದರ ಬಗೆಗೆ ಯೋಚಿಸುವುದಿಲ್ಲ. ಜೀವದೆಶೆಗೆ ಬಂದಿರುವ ಆತ್ಮವು ತನ್ನ ಪಾಶಗಳನ್ನು ಕಳಚಿಕೊಂಡು ಪೂರ್ಣತೆಯತ್ತ ಸಾಗಬೇಕಾದರೆ ಋಣದ ಬಂಧನಗಳಿಂದ ಮುಕ್ತವಾಗಬೇಕು. ಲೌಕಿಕ ಜೀವನವು ಆತ್ಮನ ಬಂಧ ವಿಮುಕ್ತಿಗೆ ಮತ್ತು ಉನ್ನತಿಗೆ ಪೂರಕವಾಗಿದ್ದಾಗ ಪೂರ್ಣತೆಯ ಸಾಕ್ಷಾತ್ಕರವು ಸುಲಭ. ಒಂದು ವೇಳೆ ಹಾಗಲ್ಲದೆ ಲೌಕಿಕದೊಳಗೆ ತೊಳಲಾಡುತ್ತಿದ್ದರೆ ಆತ್ಮೋದ್ಧಾರದ ಪಯಣವು ತಡವಾಗುತ್ತದೆ. ಜನುಮಜನುಮಾಂತರಗಳಿಂದ ಜೊತೆಯಾಗಿ ಬಂದಿರುವ ಋಣಗಳನ್ನು ತೀರಿಸುವುದೆಂತು? ಸಾಲ ಪಡೆದವನಿಗೆ ಮರಳಿ ಕೊಟ್ಟಾಗ ಋಣಸಂದಾಯವಾಯಿತು ಎನ್ನುವುದು ಲೋಕರೂಢಿ. ಆದರೆ ತೀರಿಸಲು ಅಸಾಧ್ಯವೆನ್ನಿಸುವ, ತಿಳಿಯದೆ ಪೇರಿಸಿಕೊಂಡಿರುವ ಗಂಟನ್ನು ಕರಗಿಸುವುದೆಂತು? ಮನುಷ್ಯ
ನಿಗೆ ಮುಖ್ಯವಾಗಿ ದೇವ ಋಣ, ಋಷಿ ಋಣ, ಪಿತೃ ಋಣವೆಂಬ ಮೂರು ಋಣಗಳಿವೆ. ಪರಮಾತ್ಮನನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವುದರ ಮೂಲಕ ಆತ್ಮ ಸಂಯಮವನ್ನು ಸಾಧಿಸಿದರೆ ದೇವ ಋಣವನ್ನು ತೀರಿಸಬಹುದು. ತನ್ನ ಜ್ಞಾನದಿಂದ ಸುತ್ತಲಿರುವ ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ಪಸರಿಸುವ ಮೂಲಕ ಋಷಿ ಋಣದಿಂದ ಮುಕ್ತರಾಗಬಹುದು. ಅಂತೆಯೇ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಬೆಳೆಸಿ, ವಂಶವನ್ನು ಮುನ್ನಡೆಸುವ ಮೂಲಕ ಪಿತೃಋಣದಿಂದ ಮುಕ್ತರಾಗಬಹುದು. ಈ ಮೂರು ಋಣಗಳ ಜೊತೆಗೆ ದೇಶ ಋಣವೂ ಕೂಡಾ ಪ್ರತಿಯೊಬ್ಬರ ಮೇಲಿರುತ್ತದೆ ಎನ್ನುತ್ತಾರೆ ಡಿವಿಜಿ ದೇಶದ ಋಣವನ್ನು ತೀರಿಸಲು ದೇಶದ ಐಕ್ಯತೆಯನ್ನು ಕಾಪಾಡುವ, ದೇಶಾಭಿವೃದ್ಧಿ ಮತ್ತು ಶಾಂತಿಗಾಗಿ ಶ್ರಮಿಸುವ ಕೆಲಸಗಳನ್ನು ಮಾಡಬೇಕು. ದೇಶಕ್ಕಾಗಿ ಕೆಲಸ ಮಾಡುವುದೆಂದರೆ ಉದಾರ ಮನಸ್ಸಿನ ಸೇವೆ ಎಂದು ಭಾವಿಸಬೇಕಾಗಿಲ್ಲ. ಸಮಾಜದಿಂದ ಹಲವನ್ನು ಪಡೆದಿರುವ ವ್ಯಕ್ತಿಯು ತನ್ನಿಂದ ಸಾಧ್ಯವಿರುವ ಕೆಲವನ್ನಾದರೂ ಹಿಂತಿರುಗಿಸಲು ಸೇವೆಯು ಒಂದು ಅವಕಾಶ. ಸ್ವಾರ್ಥ ರಹಿತರಾಗಿ ಲೋಕದ ಶ್ರೇಯಸ್ಸಿಗಾಗಿ ದುಡಿದರೆ ಆತ್ಮವು ಎಲ್ಲಾ ಋಣಪಾಶಗಳಿಂದಲೂ ಮುಕ್ತವಾಗಬಹುದು.
ಜೀವನವೆಂದರೆ ಲೌಕಿಕ ಸುಖ-ಭೋಗಗಳನ್ನು ಅನುಭವಿಸುವುದು ಎಂದಷ್ಟೇ ಭಾವಿಸಿರುವ ಅತ್ಯಂತ ಸಾಮಾನ್ಯರಿಗೆ ಋಣ ತೀರಿಸಬೇಕೆನ್ನುವ ವಿಚಾರವು ಅರ್ಥವಾಗುವುದಿಲ್ಲ. ಸಮಾಜದಿಂದ ಪಡೆಯುವ, ಅಥವಾ ಕಸಿಯುವ ಅಭ್ಯಾಸವನ್ನಷ್ಟೇ ರೂಡಿಸಿಕೊಂಡಿರುತ್ತಾರೆ. ಆದರೆ ತನ್ನನ್ನು ತಾನು ಅರಿಯುವುದಕ್ಕೆ ಹೊರಟವರಿಗೆ ಜಗದಗಲ ಪರಮಾತ್ಮನಿರುವ ಅನುಭವವಾಗುತ್ತದೆ. ಸುತ್ತಲಿರುವ ಜೀವರುಗಳಲ್ಲೂ ಆತ್ಮಸ್ವರೂಪವನ್ನು ಕಾಣುತ್ತಾನೆ. ಇದರಿಂದಾಗಿ ಕೋಪ, ದ್ವೇಷ, ಅಸೂಯೆ ಮುಂತಾದ ನಕಾರಾತ್ಮಕ ಭಾವಗಳಿಗೆ ಅವಕಾಶವಿಲ್ಲ ದಂತಾಗಿ ಎಲ್ಲರೊಡನೆ ಪ್ರೀತಿ-ವಿಶ್ವಾಸದಿಂದ ಬೆರೆತು ಬಾಳಲು ಸಾಧ್ಯವಾಗುತ್ತದೆ. ಹೀಗೆ ಪರತತ್ತ್ವವನ್ನು ಎಲ್ಲೆಡೆಯೂ ಕಾಣಬಲ್ಲವನಿಗೆ ಲೋಕಸಂಸಾರವೇ ದೇವನೋಲಗವಾಗುತ್ತದೆ. ಮನೆ-ಸಂಸಾರಗಳು ಆತನ ಲೀಲಾವಿನೋದವಾಗಿರುತ್ತದೆ. ಮಾಡುವ ಕೆಲಸ-ಕಾರ್ಯ ಗಳೆಲ್ಲವೂ ಈಶ್ವರಾರ್ಪಣವೆಂಬ ಭಾವವಿರುತ್ತದೆ. ಮನೆಯೇ ಮಠವಾಗಿ, ಮನವೇ ಮಂದಿರವಾಗಿರುವ ಭಕ್ತನು ಋಣದ ಜಾಲದಿಂದ ಮುಕ್ತನಾಗುತ್ತಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
