ಉತ್ತರಪ್ರದೇಶದ ಗ್ರಾಮವೊಂದರ ನಿವಾಸಿ ಕೋಮಲ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದಳು. ತಮ್ಮ ಒಬ್ಬಳೇ ಮಗಳಾಗಿದ್ದ ಅವಳನ್ನು ಐ.ಎ.ಎಸ್ ಅಧಿಕಾರಿಯನ್ನಾಗಿ ಮಾಡಬೇಕೆಂಬುದು ಕೋಮಲ್ ತಂದೆ-ತಾಯಿಯ ಕನಸಾಗಿತ್ತು. ಹೀಗಾಗಿ ಅವರು ಅವಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟರು. ಉತ್ತಮ ವಿದ್ಯಾರ್ಥಿನಿಯಾಗಿದ್ದ 19 ವರ್ಷ ವಯಸ್ಸಿನ ಕೋಮಲ್, ಹತ್ತಿರದ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಎರಡನೇ ಪಿ.ಯು.ಸಿ ಓದುತ್ತಿದ್ದಳು.
ಕೋಮಲ್​ಗೆ ಪಕ್ಕದ ಗ್ರಾಮದ ಶೀತಲ್ ಸಹಪಾಠಿಯಾಗಿದ್ದಲ್ಲದೆ ಆಪ್ತಗೆಳತಿಯೂ ಆಗಿದ್ದಳು. ಆದರೆ ಶೀತಲ್​ಗೆ ಓದಿನಲ್ಲಿ ಸ್ವಲ್ಪವೂ ಆಸಕ್ತಿಯಿರಲಿಲ್ಲ. ಆಕೆ ತರಗತಿಗಳಿಗೆ ಹಾಜರಾಗದೆ ತನ್ನ ಬಾಯ್ಫ್ರೆಂಡ್ ಜತೆ ಸಿನಿಮಾಗಳು ಮತ್ತು ಪಾರ್ಕಗಳಲ್ಲಿ ವೇಳೆ ಕಳೆಯುತ್ತಿದ್ದಳು. ಸದಾಕಾಲವೂ ಮೊಬೈಲ್​ನಲ್ಲಿ ಸಿನಿಮಾಗಳನ್ನು ನೋಡುತ್ತ ತಾನೊಬ್ಬ ಸಿನಿಮಾ ತಾರೆಯಾಗಬೇಕೆಂದು ಕನಸು ಕಾಣುತ್ತಿದ್ದಳು.
ಈ ನಡುವೆ ಪಿಯುಸಿ ಅಂತಿಮ ಪರೀಕ್ಷೆ ಬಂದಿತು. ತನ್ನ ಮೊದಲೆರಡು ಪೇಪರ್​ಗಳನ್ನು ಸಮಾಧಾನಕರ ರೀತಿಯಲ್ಲಿಯೇ ಮುಗಿಸಿದ್ದ ಕೋಮಲ್, ಮೂರನೆಯ ಪೇಪರ್ ಇದ್ದ ದಿನ ಎಷ್ಟು ಹೊತ್ತಾದರೂ ಮನೆಗೆ ಮರಳಲಿಲ್ಲ. ಚಿಂತೆಗೊಂಡ ಅವಳ ತಂದೆ ಅವಳ ಕಾಲೇಜಿಗೆ ಹೋದರು. ರಾತ್ರಿಯಾದ್ದರಿಂದ ಕಾಲೇಜು ಮುಚ್ಚಿತ್ತು. ಶೀತಲ್ ತನ್ನ ಮಗಳ ಸ್ನೇಹಿತೆ ಎಂದು ಅರಿತಿದ್ದ ಅವರು ಅವಳ ಮನೆಗೆ ಹೋಗಿ ವಿಚಾರಿಸಿದರು. ‘ಅಂಕಲ್, ಅವಳು ಪರೀಕ್ಷೆ ಮುಗಿಸಿದ ನಂತರ ತನಗೆ ಬೇರೆ ಕೆಲಸವಿದೆ ಎಂದು ಹೇಳಿ ಹೊರಟು ಹೋದಳು. ಎಲ್ಲಿಗೆ ಹೋದಳೋ ಗೊತ್ತಿಲ್ಲ’ ಎಂದಳು ಆಕೆ.
ಮಾರನೆಯ ದಿನ ಬೆಳಗ್ಗೆಯೂ ಕೋಮಲ್ ಮನೆಗೆ ಬರಲಿಲ್ಲ. ಅವಳ ತಂದೆ ಕಾಲೇಜಿಗೆ ಹೋಗಿ ವಿಚಾರಿಸಿದಾಗ ತಮಗೇನೂ ತಿಳಿದಿಲ್ಲವೆಂದು ಪ್ರಿನ್ಸಿಪಾಲ್ ಹೇಳಿದರು. ಪೊಲೀಸ್ ಠಾಣೆಗೆ ಹೋಗಿ ದೂರನ್ನಿತ್ತರು. ಕಾಣೆಯಾದ ಪ್ರಕರಣ ದಾಖಲಾಯಿತು. ತಂದೆ ಪೊಲೀಸ್ ಠಾಣೆಯಿಂದ ಹೊರಬರುತ್ತಿರುವಂತೆಯೇ ಅಪರಿಚಿತ ಯುವತಿಯ ಶವವೊಂದು ಪಟ್ಟಣದ ಹೊರಗಿರುವ ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಮಾಹಿತಿ ಆ ಠಾಣೆಗೆ ಬಂದಿತು. ಆಗ ಪೊಲೀಸರು ಕೋಮಲ್​ಳ ತಂದೆಯನ್ನೂ ಅಲ್ಲಿಗೆ ತಮ್ಮೊಡನೆ ಕರೆದುಕೊಂಡು ಹೋದರು.
ಅಲ್ಲಿ ಶವದ ಮೇಲಿನ ಬಟ್ಟೆಗಳಿಂದ ದೂರದಿಂದಲೇ ಅದನ್ನು ಮಗಳದೆಂದು ಅನುಮಾನಿಸಿದ ಕೋಮಲ್​ಳ ತಂದೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ಶವದ ಹತ್ತಿರ ಹೋಗಿ ನೋಡಿದಾಗ ಅನುಮಾನ ಖಾತ್ರಿಯಾಯಿತು. ಶವದ ಎಡತೋಳಿನ ಮೇಲೆ ಇದ್ದ ಹಚ್ಚೆಯ ಗುರುತಿನಿಂದ ಅದು ಕೋಮಲ್​ಳದೆಂದೇ ಗುರುತಿಸಿದರು. ಕೋಮಲ್​ಳ ತಲೆ, ಕೈ, ಕಾಲು ಮತ್ತು ಎದೆಗೆ ಹರಿತವಾದ ಆಯುಧದಿಂದ ಹಲವಾರು ಬಾರಿ ಹೊಡೆದಿದ್ದುದು ಗೋಚರಿಸಿತು.
ಕೋಮಲ್ ಪರೀಕ್ಷೆ ಬರೆದ ನಂತರ ಅರಣ್ಯಪ್ರದೇಶಕ್ಕೆ ಏಕೆ ಹೋದಳು, ಅವಳಿಗೆ ಯಾರಾದರೂ ವೈರಿಗಳಿದ್ದರೇ? ಮುಂತಾದ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದ್ದವು. ಏತನ್ಮಧ್ಯೆ ಶವದ ಮೇಲೆ ಮರಣೋತ್ತರ ಪರೀಕ್ಷೆಯಾಯಿತು. ಮೃತಳ ಮೇಲೆ 17 ಇರಿತದ ಗಾಯಗಳಾಗಿದ್ದು, ಅವುಗಳಿಂದ ಉಂಟಾದ ರಕ್ತಸ್ರಾವದಿಂದಾಗಿಯೇ ಸಾವು ಸಂಭವಿಸಿದೆಯೆಂದು ತಿಳಿಸಿದ ವೈದ್ಯರು ಕೋಮಲ್​ಳ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ವರದಿ ನೀಡಿದರು. ಸಾವು ಸಂಭವಿಸಿ 24 ಗಂಟೆಗಳಾಗಿವೆ ಎಂದರು.
ಕೋಮಲ್​ಳ ದೇಹದ ಮೇಲೆ ಅಷ್ಟೊಂದು ಇರಿತದ ಗಾಯಗಳಾಗಿರಬೇಕಾದರೆ ಅವಳ ಮೇಲೆ ತೀವ್ರ ದ್ವೇಷವನ್ನಿಟ್ಟುಕೊಂಡಿರುವವರೇ ಹೀಗೆ ಮಾಡಲು ಸಾಧ್ಯ ಎಂದು ರ್ತಸಿದ ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದರು. ಆದರೆ ತನಿಖಾಧಿಕಾರಿ ಯಾರನ್ನೇ ವಿಚಾರಿಸಿದರೂ ಅವರು ಕೋಮಲ್ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ನೀಡಿ ಅವಳನ್ನು ಯಾರೂ ತೀವ್ರವಾಗಿ ದ್ವೇಷಿಸುವ ಸಾಧ್ಯತೆಯೇ ಇಲ್ಲ ಎಂದರು. ಕೋಮಲ್​ಳ ಸೆಲ್​ಫೋನ್ ಏನಾದರೂ ಸುಳಿವು ಕೊಡಬಹುದೇನೋ ಎಂದು ನೋಡಿದರೆ ಅವಳ ಬಳಿ ಸೆಲ್​ಫೋನ್ ಇರಲೇ ಇಲ್ಲ. ತನಿಖೆ ಡೆಡ್​ಎಂಡ್ ತಲುಪಿದಾಗ ಪೊಲೀಸರು ಕೋಮಲ್​ಳ ಸಂಬಂಧಿಕರು, ಮಿತ್ರರು ಮತ್ತು ಸಹಪಾಠಿಗಳನ್ನು ವಿಚಾರಿಸತೊಡಗಿದರು. ಶೀತಲ್​ಳನ್ನೇ ಮೊದಲಿಗೆ ಪ್ರಶ್ನಿಸಲಾಯಿತು. ಪೊಲಿಸರು ಕೇಳಿದ ಯಾವ ಪ್ರಶ್ನೆಗೂ ಆಕೆ ಸಮರ್ಪಕ ಉತ್ತರ ಕೊಡಲಿಲ್ಲ. ಹೀಗಾಗಿ ಅವಳ ಮೇಲೆ ಅನುಮಾನ ಮೂಡಿತು. ಹಾಗಾಗಿ ಪೊಲೀಸರು ಅವಳ ಮೊಬೈಲ್ ಫೋನನ್ನು ವಶಕ್ಕೆ ಪಡೆದು, ಕಾಲ್ ಡೀಟೇಲ್ಸ್​ಗಳನ್ನು ಪರಿಶೀಲಿಸಿದರು. ಕೋಮಲ್ ಕಾಣೆಯಾದ ದಿನ ಅಪರಾಹ್ನ 12 ಗಂಟೆಯಿಂದ ಸಂಜೆ 6ರವರೆಗೆ ಶೀತಲ್ ಒಂದೇ ನಂಬರಿಗೆ ಹತ್ತು, ಹದಿನೈದು ಕರೆಗಳನ್ನು ಮಾಡಿದ್ದಳು.
ಆ ನಂಬರ್ ಯಾರದೆಂದು ಚೆಕ್ ಮಾಡಿದಾಗ ಅದು ಆದಿತ್ಯ ಎನ್ನುವವನದಾಗಿತ್ತು. ಅವನನ್ನು ಠಾಣೆಗೆ ಕರೆಸಿದಾಗ ಆತ ಶೀತಲ್​ಳ ಹಿರಿಯಣ್ಣನೆಂದು ತಿಳಿಯಿತು. ಆತ ಅಂಗಡಿಯೊಂದರಲ್ಲಿ ಸೇಲ್ಸ್ ಮನ್ ಆಗಿದ್ದ. ‘ನಿನ್ನ ಸೋದರಿ ಆ ದಿನ ನಿನಗೇಕೆ ಅಷ್ಟೊಂದು ಕರೆಗಳನ್ನು ಮಾಡಿದ್ದಾಳೆ? ಅಂತಹ ತುರ್ತು ಪರಿಸ್ಥಿತಿ ಯಾವುದಿತ್ತು?’ ಎಂದು ವಿಚಾರಿಸಿದಾಗ ಆತ ಸೂಕ್ತ ಉತ್ತರ ಕೊಡಲಿಲ್ಲ. ಪೊಲೀಸರು ಶೀತಲ್​ಳನ್ನೂ ಠಾಣೆಗೆ ಕರೆಸಿ, ‘ನೀನೇಕೆ ನಿನ್ನ ಅಣ್ಣನಿಗೆ ಅಷ್ಟೊಂದು ಕರೆಗಳನ್ನು ಮಾಡಿರುವೆ? ತುರ್ತು ಪರಿಸ್ಥಿತಿ ಏನಿತ್ತು?’ ಎಂದು ಎಡಬಿಡದೇ ಪ್ರಶ್ನಿಸತೊಡಗಿದರು. ಐದಾರು ನಿಮಿಷಗಳಾದ ನಂತರ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಶೀತಲ್, ಹೀಗೆಂದಳು:
‘ನಾನು ಪಿಯುಸಿ ಎರಡನೇ ವರ್ಷದ ಉತ್ತರಾರ್ಧಕ್ಕೆ ಬಂದಾಗ ನಮ್ಮ ಕಾಲೇಜಿನ ಬಳಿ ಅಂಗಡಿಯಿಟ್ಟುಕೊಂಡಿದ್ದ ಸಮೀರ್​ನನ್ನು ಪ್ರೇಮಿಸತೊಡಗಿದೆ. ನಾನು ತರಗತಿಗೆ ಹಾಜರಾಗದೆ ಅವನ ಜೊತೆ ಸಿನಿಮಾ, ನಾಟಕ, ಪಾರ್ಕ್ ಮುಂತಾದ ಕಡೆ ಹೋಗುತ್ತಿದ್ದೆ. ಕೋಮಲ್​ಗೆ ಈ ವಿಷಯ ತಿಳಿದಾಗ ಆಕೆ ನನಗೆ ಬುದ್ಧಿವಾದ ಹೇಳತೊಡಗಿದಳು. ಅಭ್ಯಾಸ ಮಾಡುವುದನ್ನು ಬಿಟ್ಟು ಹೀಗೆ ಮಾಡಬೇಡ ಎಂದು ಪ್ರತಿದಿನ ತಾಕೀತು ಮಾಡತೊಡಗಿದಳು. ಆದರೆ ನಾನು ಅವಳ ಮಾತುಗಳತ್ತ ಗಮನ ಹರಿಸಲಿಲ್ಲ.
ಒಂದು ಮಧ್ಯಾಹ್ನ ನಾನು ತರಗತಿಗೆ ಹೋಗದೆ ಸಮೀರ್ ಜೊತೆ ಹತ್ತಿರದಲ್ಲಿದ್ದ ಪಾರ್ಕ್ ಒಂದಕ್ಕೆ ಹೋಗಿ ಅವನೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆ. ಅದೇ ಸಮಯಕ್ಕೇ ಕೋಮಲ್ ಆ ರ್ಪಾಗೆ ಇಬ್ಬರು ಗೆಳತಿಯರೊಡನೆ ಬಂದಳು. ನಮ್ಮಿಬ್ಬರನ್ನೂ ನೋಡಿ ಗಾಬರಿಯಾಗಿ ಓಡಿಹೋದಳು. ಮಾರನೆಯ ದಿನ ನನ್ನ ನಡೆಯನ್ನು ಟೀಕಿಸಿದ ಕೋಮಲ್, ನನಗೆ ಉತ್ತಮ ನಡತೆಯ ಉಪದೇಶ ಮಾಡಿದಾಗ ನಾನು ಕೋಪಗೊಂಡು ನನಗೆ ಇಷ್ಟಬಂದಂತೆ ಮಾಡುತ್ತೇನೆ, ನನಗೆ ಬುದ್ಧಿ ಹೇಳಲು ನೀನು ಯಾರು ಎಂದು ಅವಳೊಡನೆ ಜಗಳವಾಡಿದೆ.
ಆಗವಳು, ನೀನು ಸಮೀರ್ ಜತೆ ಸಂಬಂಧ ಮುಂದುವರಿಸಿದರೆ ನಿನ್ನ ಸೋದರರಿಗೆ ಈ ವಿಷಯ ತಿಳಿಸುತ್ತೇನೆ ಎಂದಳು. ನನಗೆ ಗಾಬರಿಯಾಯಿತು. ಏಕೆಂದರೆ ನನ್ನ ಸೋದರರಿಬ್ಬರೂ ತೀವ್ರ ಮುಂಗೋಪಿಗಳು. ಅವರಿಗೇನಾದರೂ ಈ ವಿಷಯ ತಿಳಿದರೆ ಅವರು ನನ್ನನ್ನು ಸಮೀರ್​ನ ಜತೆಗೇ ಮುಗಿಸುವುದು ಖಚಿತ ಎಂದು ಹೆದರಿದೆ. ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದಾಗ, ಒಂದು ವೇಳೆ ಕೋಮಲ್​ಳನ್ನು ತೀವ್ರವಾಗಿ ಬೆದರಿಸಿದರೆ ಅವಳು ಸುಮ್ಮನಾಗಬಹುದೆಂದು ನನಗನಿಸಿತು.
ಅವಳನ್ನು ಬೆದರಿಸಲು ನನ್ನ ಸೋದರರೇ ಸೂಕ್ತ ವ್ಯಕ್ತಿಗಳು ಎಂದು ಭಾವಿಸಿದ ನಾನು ಅವರಿಬ್ಬರನ್ನು ಕರೆದು ಕೋಮಲ್ ನನ್ನ ಚಾರಿತ್ರ್ಯದ ಬಗ್ಗೆ ಕಾಲೇಜಿನಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾಳೆ. ನಾನು ಯಾರೊಡನೆಯೋ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದೇನೆ ಎಂದು ಹೇಳಿ ನಮ್ಮ ಕುಟುಂಬದ ಮಾನ ತೆಗೆಯುತ್ತಿದ್ದಾಳೆ ಎಂದು ದೂರಿದೆ. ಇದನ್ನು ಕೇಳಿದ ಕೂಡಲೇ ನನ್ನ ಸೋದರರು ಉದ್ರಿಕ್ತಗೊಂಡು ನಾಳೆಯೇ ಅವಳಿಗೆ ಬುದ್ಧಿ ಕಲಿಸುತ್ತೇವೆ. ಅವಳನ್ನು ಊರ ಹೊರಗಿರುವ ಅರಣ್ಯದ ಬಳಿ ಕರೆದುಕೊಂಡು ಬಾ ಎಂದರು. ಮಾರನೆಯ ದಿನ ಪರೀಕ್ಷೆ ಮುಗಿದ ನಂತರ ಕೋಮಲ್​ಳಿಗೆ ನಾನು ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಗಳನ್ನು ಬರೆದಿಲ್ಲ, ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೆನಿಸಿದೆ ಎಂದು ಹೇಳಿದೆ. ಅವಳು ಗಾಬರಿಯಾಗಿ ನನಗೆ ಸಾಂತ್ವನ ಮಾಡತೊಡಗಿದಳು. ಹಾಗೆಯೇ ಮಾತನಾಡುತ್ತ ಅವಳನ್ನು ನಮ್ಮ ಕಾಲೇಜಿನಿಂದ ಒಂದೇ ಕಿ.ಮೀ. ದೂರದಲ್ಲಿದ್ದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋದೆ. ಇಲ್ಲಿ ಐದು ನಿಮಿಷ ವಿಶ್ರಮಿಸೋಣ ಎನ್ನುತ್ತ ಅವಳ ಜೊತೆ ಅಲ್ಲಿ ಕುಳಿತೆ. ನಾವು ಅಲ್ಲಿಗೆ ಬಂದ ಬಗ್ಗೆ ನನ್ನ ಸೋದರನಿಗೆ ಮಿಸ್ಡ್​ಕಾಲ್ ಕೊಟ್ಟೆ.
ಕೆಲವೇ ನಿಮಿಷಗಳ ನಂತರ ನನ್ನ ಸೋದರರು ಅಲ್ಲಿಗೆ ಬಂದರು. ಅವರನ್ನು ನೋಡಿದ ಕೂಡಲೇ ನಾನು ಕೋಮಲ್​ಳಿಗೆ, ನನ್ನ ಅಣ್ಣಂದಿರು ಬಂದಿದ್ದಾರೆ, ನನ್ನ ವಿರುದ್ಧ ಏನು ಹೇಳಬೇಕೋ ಅವರಿಗೆ ಹೇಳು, ಎನ್ನುತ್ತ ದೂರ ಸರಿದೆ. ನನ್ನ ಸೋದರರಿಬ್ಬರೂ ಕೋಮಲ್​ಳ ಮೇಲೆ ಮುಗಿಬಿದ್ದು ಅವಳನ್ನು ಮಚ್ಚಿನಿಂದ ಹೊಡೆಯತೊಡಗಿದರು. ಹೆದರಿದ ನಾನು ನನ್ನ ಮನೆಗೆ ಮರಳಿದೆ. ಮುಂದೇನಾಯಿತೋ ತಿಳಿದಿಲ್ಲ’.
ಆದಿತ್ಯ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ. ನಂತರ ಅವನನ್ನು ಮತ್ತು ಅವನ ಸೋದರ ಸೂರಜ್​ನನ್ನು ಪೊಲೀಸರು ಬಂಧಿಸಿದರು. ಅವರ ಹೇಳಿಕೆ ಮೇರೆಗೆ ಅವರು ಅಡಗಿಸಿಟ್ಟಿದ್ದ ರಕ್ತಸಿಕ್ತ ಬಟ್ಟೆಗಳು ಮತ್ತು ಮಚ್ಚುಗಳನ್ನು ಜಪ್ತಿ ಮಾಡಲಾಯಿತು. ಮಚ್ಚುಗಳ ಮೇಲಿದ್ದ ರಕ್ತದ ಕಲೆ ಕೋಮಲ್​ಳ ರಕ್ತದೊಂದಿಗೆ ಹೊಂದಿಕೆಯಾಯಿತು. ಮುಂದೆ ಶೀತಲ್ ಸೇರಿ ಮೂರು ಜನರ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ನ್ಯಾಯಾಲಯವು ಮೂರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತು. ತನ್ನ ಬಗ್ಗೆ ದೂರುವೆನೆಂದು ಹೆದರಿಸಿದ ಕಾರಣಕ್ಕೇ ಪ್ರೀತಿಯ ಗೆಳತಿಯ ಹತ್ಯೆ ಮಾಡಿಸಿದ ಶೀತಲ್​ಳಂತಹವರ ಬಗ್ಗೆ ಡಿ.ವಿ.ಜಿ ಹೀಗೆನ್ನುತ್ತಾರೆ: ‘ಭೌತವಿಜ್ಞಾನಿ ರವಿತಾರೆಧರೆಗಳ ಚಲನ, ರೀತಿ ವೇಗವನಳೆದು ಶಕ್ತಿಗಳ ಗುಣಿಪನ್, ಪ್ರೀತಿರೋಷಗಳನವನಳೆವನೇನ್? ಅವ್ಯಕ್ತ, ಚೇತನವನರಿವನೇಂ? ಮಂಕುತಿಮ್ಮ’. ಇದರರ್ಥ ನಭೋಮಂಡಲದಲ್ಲಿನ ಗ್ರಹತಾರೆಗಳ ಚಲನವನ್ನರಿಯುವ ವಿಜ್ಞಾನಿಗೂ ಮಾನವ ಸಂಬಂಧಗಳ ಪ್ರೀತಿ, ರೋಷಗಳನ್ನಳೆಯಲು ಸಾಧ್ಯವಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
