ಬೆಂಗಳೂರು:ದೇಶದಲ್ಲಿ ಮಹಿಳಾ ಕೇಂದ್ರಿತ ರಾಜಕಾರಣಕ್ಕೆ ಪ್ರಬಲವಾದ ನೆಲೆ ಸಿಗುವ ಲಕ್ಷಣಗಳು ಗೋಚರವಾಗುತ್ತಿರುವ ಹೊತ್ತಿನಲ್ಲೇ ರಾಜ್ಯದ ಮಹಿಳಾ ಮತದಾರರಿಗೆ ಸಂಬಂಧಿಸಿದ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. 224 ವಿಧಾನಸಭೆ ಕ್ಷೇತ್ರ ಹೊಂದಿರುವ ಕರ್ನಾಟಕದಲ್ಲಿ ಅರ್ಧಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಸಂಗತಿ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಿಂದ ಬಹಿರಂಗವಾಗಿದೆ.
ಲೋಕಸಭೆ, ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಗೆ ಸಂಸತ್ ಅನುಮೋದನೆ ದೊರೆತಿ ರುವುದು ದೊಡ್ಡ ಬದಲಾವಣೆಯ ಕುರುಹು. ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಭಾರತ ಜನಗಣತಿ 2021ರಲ್ಲೇ ಆರಂಭವಾಗಬೇಕಿತ್ತು, ವಿವಿಧ ಕಾರಣದಿಂದ ಮುಂದೂಡಲ್ಪಟ್ಟಿದ್ದು, ಲೋಕಸಭಾ ಚುನಾವಣೆ ಬಳಿಕ ಆ ಪ್ರಕ್ರಿಯೆಗೂ ಚಾಲನೆ ಸಿಗಬಹುದು. ಇದರ ನಡುವೆ ಮತದಾರರ ಗಣತಿ ರೂಪದ ಕರಡು ಮತದಾರರ ಪಟ್ಟಿಯಲ್ಲಿ ಮಹಿಳಾ ಮತದಾರರ ಪ್ರಮಾಣ ಗಣನೀಯವಾಗಿ ವೃದ್ಧಿಯಾಗಿರುವುದು ಮತ್ತು ಹೆಚ್ಚಿನ ಪ್ರಮಾಣದ ಕ್ಷೇತ್ರದಲ್ಲಿ ಅವರ ಸಂಖ್ಯೆಯೇ ಹೆಚ್ಚಿರುವುದು ಸ್ಪಷ್ಟವಾಗಿದೆ.
ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ರಾಜ್ಯದ 224 ಕ್ಷೇತ್ರಗಳಲ್ಲಿ ಜ.1ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಆರಂಭಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ಇದಲ್ಲದೆ, 115 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಸಂಗತಿಯನ್ನು ಖಚಿತಪಡಿಸಿದರು. ಕರಡು ಮತದಾರರ ಪಟ್ಟಿಯಲ್ಲಿನ ಕೆಲವು ವಿಶೇಷ ಸಂಗತಿ ಹಂಚಿಕೊಂಡರು. 2011ರ ಜನಗಣತಿ ಪ್ರಕಾರ ಲಿಂಗಾನುಪಾತವು 973 ಆಗಿತ್ತು. ಅಂದರೆ ಒಂದು ಸಾವಿರ ಪುರುಷರಿಗೆ ಪ್ರತಿಯಾಗಿ 973 ಮಹಿಳೆಯರ ಸಂಖ್ಯೆ ಇತ್ತು. 2019ರ ಮತದಾರರ ಅಂತಿಮ ಪಟ್ಟಿ ಪ್ರಕಾರ 979 ಮಹಿಳೆಯರ ಅನುಪಾತವಿದ್ದು, 2023ರ ಅಂತಿಮ ಪಟ್ಟಿಯಲ್ಲಿ 983ಕ್ಕೆ ಏರಿಕೆ ಕಂಡಿತ್ತು. ಆದರೆ, 2023ರ ವಿಧಾನಸಭೆ ಚುನಾವಣೆ ವೇಳೆ ನಡೆದ ಪರಿಷ್ಕರಣೆ ಸಂದರ್ಭದಲ್ಲಿ ಈ ಅನುಪಾತ 990ಕ್ಕೆ ಏರಿಕೆ ಕಂಡಿತ್ತು. ಅಂತಿಮವಾಗಿ 2024ರ ಕರಡು ಪಟ್ಟಿಯಲ್ಲಿ ಇದು 991ಕ್ಕೆ ವಿಸ್ತರಣೆಯಾಗಿದೆ. ಇದನ್ನು ಗಮನಿಸಿದರೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಮಹಿಳೆಯರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಈ ಮೂಲಕ ಅವರೇ ನಿರ್ಣಾಯಕರಾಗುವತ್ತ ದಾಪುಗಾಲಿಟ್ಟಿರುವುದು ಗೋಚರಿಸುತ್ತದೆ.
| ರಾಜ್ಯದ ಮುಖ್ಯ ಚುನಾವಣಾಧಿಕಾರಿ ವೆಬ್​ಸೈಟ್​ನಲ್ಲಿ ಪಿಡಿಎಫ್ ಸ್ವರೂಪದಲ್ಲಿ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿದೆಯೇ ಎಂದು ವೀಕ್ಷಿಸುವುದು.
| ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ದರೆ ನಮೂನೆ 6ರನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಸಾಗರೋತ್ತರ ಮತದಾರರಾದರೆ ನಮೂನೆ 6ಎಯನ್ನು ನೀಡಬೇಕು.
| ವಿಳಾಸ ಬದಲಾವಣೆ ಅಥವಾ ತಿದ್ದುಪಡಿಗಳಿದ್ದರೆ, ಬದಲಿ ಮತದಾರರ ಗುರುತಿನ ಚೀಟಿ ನಮೂನೆ- 8 ಬಳಸಬೇಕು.
| ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಪ್ರಸ್ತಾಪಿತ ಸೇರ್ಪಡೆಗೆ ಆಕ್ಷೇಪಣೆಗಾಗಿ, ಹೆಸರು ರದ್ದುಪಡಿಸಲು ನಮೂನೆ-7 ಸಲ್ಲಿಸಿ
| ಅರ್ಜಿಯನ್ನು ಪ್ರತಿ ವಿಧಾನಸಭಾ ಕ್ಷೇತ್ರದ ಅಧಿಸೂಚಿತ ನೋಂದಣಾಧಿಕಾರಿ ಅಥವಾ ಸಹಾಯಕ ನೋಂದಣಾಧಿಕಾರಿಗೆ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
| ಮತದಾರರ ಸೇವಾ ಪೋರ್ಟಲ್ ಅಥವಾ ವೋಟರ್ ಹೆಲ್ಪ್​ಲೈನ್ ಮೊಬೈಲ್ ಅಪ್ಲಿಕೇಶನ್ ಬಳಸಿ ಆನ್​ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಮತದಾನ ಕೇಂದ್ರ ಹೆಚ್ಚಳ:2023ರ ಅಂತಿಮ ಮತದಾರರ ಪಟ್ಟಿ ಪ್ರಕಾರ 58,282 ಮತದಾನ ಕೇಂದ್ರಗಳನ್ನು ಗುರುತಿಸಲಾಗಿತ್ತು, 2024ರ ಕರಡು ಮತದಾರರ ಪಟ್ಟಿ ಪ್ರಕಾರ 58,834 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಅಂದರೆ 845 ಹೊಸ ಮತಗಟ್ಟೆ ಸೇರಿಸಿದ್ದು, 293 ಮತಗಟ್ಟೆ ವಿಲೀನಗೊಳಿಸಲಾಗಿದೆ. ಒಟ್ಟಾರೆ 552 ಮತಗಟ್ಟೆ ಹೆಚ್ಚಳವಾಗಿದೆ.
ಅಕ್ರಮ ಮತದಾರರಿದ್ದರೆ ದೂರು ಕೊಡಿ!:ರೋಹಿಂಗ್ಯ ಸೇರಿ ಅನ್ಯ ದೇಶದವರು ನಕಲಿ ದಾಖಲೆ ಸೃಷ್ಟಿಸಿ ಮತದಾನದ ಹಕ್ಕು ಪಡೆದಿರುವ ಬಗ್ಗೆ ಒಂದು ದೂರು ಬಂದಿದ್ದು ಕ್ರಮಕೈಗೊಳ್ಳಲಾಗಿದೆ. ನಿರ್ದಿಷ್ಟ ದೂರುಗಳಿದ್ದರೆ ಸಲ್ಲಿಸಬಹುದು, ಆಯೋಗ ಸೂಕ್ತ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಿದೆ. ಚುನಾವಣೆ ಬಳಿಕ ನಡೆದ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ 12 ಲಕ್ಷ ಎಪಿಕ್ ಕಾರ್ಡ್​ಗಳನ್ನು ನ.15ರ ವೇಳೆಗೆ ಕಳಿಸಲಾಗುತ್ತದೆ ಎಂದು ಮೀನಾ ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಚುನಾವಣೆ ಅಕ್ರಮ ಸಂಬಂಧ 1900 ಪ್ರಕರಣ ದಾಖಲಾಗಿದ್ದು, ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಹೆಬ್ಬಾಳದಲ್ಲಿ ಇತ್ತೀಚೆಗೆ ಕಂಪ್ಯೂಟರ್ ಸೆಂಟರ್​ನಲ್ಲಿ ಸರ್ಕಾರದ ಐಡಿ ಕಾರ್ಡ್ ನಕಲಿ ಸೃಷ್ಟಿ ಮಾಡಲಾಗುತ್ತಿತ್ತು, ಅದರಲ್ಲಿ ವೋಟರ್ ಐಡಿ ಕೂಡ ಇತ್ತು. ಪೊಲೀಸರ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿರಬೇಕು ಹಾಗೂ ಚುನಾವಣೆ ಆಯೋಗದಿಂದಲೇ ಎಪಿಕ್ ಕಾರ್ಡ್ ನೇರವಾಗಿ ಇಂಡಿಯನ್ ಪೋಸ್ಟ್ ಮೂಲಕ ಕಳಿಸಿಕೊಡಲಾಗುತ್ತದೆ.
ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಕೂಡಲೇ ಪರಿಶೀಲಿಸಬೇಕು.| ಮನೋಜ್ ಕುಮಾರ್ ಮೀನಾ ಮುಖ್ಯ ಚುನಾವಣಾಧಿಕಾರಿ
ಎಲ್ಲಿ ಹೆಚ್ಚು?:ಮಂಗಳೂರು ದಕ್ಷಿಣ ಕ್ಷೇತ್ರ ಕ್ಷೇತ್ರದಲ್ಲಿ ಒಂದು ಸಾವಿರ ಪುರುಷ ಮತದಾರರಿಗೆ 1092 ಮಹಿಳಾ ಮತದಾರರಿದ್ದಾರೆ. ಮಹದೇವಪುರದಲ್ಲಿ ಮಹಿಳಾ ಮತದಾರರ ಸಂಖ್ಯೆ ಬಹಳ ಕಡಿಮೆ ಇದೆ. ಜಿಲ್ಲಾವಾರು ಗಮನಿಸುವುದಾದರೆ ಬಾಗಲಕೋಟೆ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರಲ್ಲಿ ಮಹಿಳಾ ಮತದಾರರು ಅಧಿಕವಾಗಿದ್ದಾರೆ.
5,33 ಕೋಟಿ ಮತದಾರರು:2023ರ ಅಂತಿಮ ಮತದಾರರ ಪಟ್ಟಿ ಪ್ರಕಾರ ರಾಜ್ಯದಲ್ಲಿ 5,08,53,845 ಮತದಾರರಿದ್ದರು. 2024ರ ಕರಡು ಮತದಾರರ ಪಟ್ಟಿ ಪ್ರಕಾರ ಸಾಮಾನ್ಯ ಮತದಾರರ ಸಂಖ್ಯೆ 5,33,77,162. ಇವರಲ್ಲಿ 2,68,02,838 ಪುರುಷ ಹಾಗೂ 2,65,69,429 ಮಹಿಳಾ ಮತದಾರರಿದ್ದಾರೆ. 4,896 ಇತರೆ ಮತದಾರರು ಹಾಗೂ 47,172 ಸೇವಾ ಮತದಾರರು ಇದರಲ್ಲಿ ಸೇರಿದ್ದಾರೆ. 224 ವಿಧಾನಸಭೆ ಕ್ಷೇತ್ರಗಳ ಪೈಕಿ ಬೆಂಗಳೂರು ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರವು ಅತಿ ಹೆಚ್ಚು ಅಂದರೆ 7,06,207 ಮತದಾರರನ್ನು ಹೊಂದಿದ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ (1,66,907) ಮತದಾರರಿದ್ದಾರೆ.
ಡಿ.9ರವರೆಗೆ ಹೆಸರು ಸೇರ್ಪಡೆ:ಮತದಾರರ ಪಟ್ಟಿಗೆ ಆಕ್ಷೇಪಣೆ ಮತ್ತು ಹೊಸದಾಗಿ ಹೆಸರು ಸೇರಿಸಲು ಡಿಸೆಂಬರ್ 9ರವರೆಗೂ ಅವಕಾಶವಿರಲಿದೆ. ಅದೇ ರೀತಿ ಶನಿವಾರ ಭಾನುವಾರಗಳಂದು ವಿಶೇಷ ಅಭಿಯಾನ ಕೂಡ ನಡೆಸಲಾಗುತ್ತಿದೆ. 2024ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.
1.27 ಲಕ್ಷ ಮತದಾರರ ಮರಣ:2023ರ ಚುನಾವಣಾ ಪಟ್ಟಿಯಿಂದ 2024ರ ಕರಡು ಪಟ್ಟಿಯವರೆಗೆ 18,88,243 ಅರ್ಜಿಗಳನ್ನು ಚುನಾವಣಾ ಆಯೋಗ ಸ್ವೀಕರಿಸಿತ್ತು. ಅದರಲ್ಲಿ 16,31,547 ಅರ್ಜಿ ಅನುಮೋದಿಸಿದ್ದು, 1,71,964 ಅರ್ಜಿ ತಿರಸ್ಕರಿಸಲಾಗಿದೆ. 6,02,199 ಹೊಸದಾಗಿ ಮತದಾರರ ಪಟ್ಟಿಗೆ ಸೇರಿದವರಿದ್ದಾರೆ. ಇನ್ನು 1,27,703 ಮಂದಿ ಮರಣದ ಕಾರಣ, 2,38,617 ಮಂದಿ ಸ್ಥಳಾಂತರಗೊಂಡಿದ್ದಕ್ಕೆ, 21,480 ಮತದಾರರು ಒಂದಕ್ಕಿಂತ ಹೆಚ್ಚು ಕಡೆ ಹೆಸರು ದಾಖಲಾಗಿದ್ದ ಪ್ರಕರಣ, ಹಾಗೂ 1,553 ಇತರೆ ಕಾರಣಗಳಿದ್ದವು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
