ಮಹಿಳೆಯರ ಸುರಕ್ಷತೆಯ ಬಗ್ಗೆ ಈಗ ಎಲ್ಲೆಲ್ಲೂ ಆತಂಕ ಶುರುವಾಗಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ವಯಸ್ಸಿನ ಮಿತಿಯಿಲ್ಲದೇ ಹಸುಗೂಸಿನಿಂದ ಹಿಡಿದು ವೃದ್ಧೆಯರ ಮೇಲೂ ಅತ್ಯಾಚಾರಗಳು ನಡೆಯುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಸನ್ನದ್ಧರಾಗಿ ನಿಂತಿವೆ ಮಹಿಳಾ ಖಾಕಿ ಪಡೆ. ಏನಿದು ಪಡೆ? ಇವರ ಕೆಲಸವೇನು? ಇಲ್ಲಿದೆ ವಿವರ.
ಯಾವುದ್ಯಾವುದೋ ಕಾರಣಗಳಿಗೆ ಪ್ರತಿಭಟನೆ, ಹಿಂಚಾಸಾರ, ಕೋಮುಗಲಭೆ ಸೃಷ್ಟಿ… ಇತ್ಯಾದಿಗಳು ಇಂದು ಬೆಂಗಳೂರಿನಲ್ಲಿ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಮೌನವಾಗಿ ಪ್ರತಿಭಟನೆ ಮಾಡಲು ಬಂದರೂ, ಶಾಂತಿಯುತವಾಗಿ ಹಬ್ಬ- ಹರಿದಿನಗಳನ್ನು ಆಚರಿಸುತ್ತಿದ್ದರೂ ರಾಜಕೀಯ ದ್ವೇಷಕ್ಕಾಗಿ ದೊಂಬಿ ಸೃಷ್ಟಿ ಮಾಡುವುದಕ್ಕಾಗಿಯೇ ಒಂದಿಷ್ಟು ಜನರ ಗುಂಪು ರೆಡಿಯಾಬಿಟ್ಟಿದೆ. ಇಂಥ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾದ ಅನಿವಾರ್ಯತೆ ಇಂದಿನದು. ಇನ್ನೊಂದೆಡೆ, ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು… ಇವುಗಳಿಗೆ ಕಡಿವಾಣ ಹಾಕಲು ಇಷ್ಟು ವರ್ಷ ಪುರುಷ ಪೊಲೀಸರಷ್ಟೇ ಶ್ರಮಿಸುತ್ತಿದ್ದರೆ, ಈಗ ಗಲಭೆಕೋರರಿಗೆ, ಅಪರಾಧಿಗಳಿಗೆ ಸವಾಲು ಹಾಕುತ್ತಿದ್ದಾರೆ ಮಹಿಳಾ ಪೊಲೀಸರು. ಗಣೇಶ- ಬಕ್ರಿದ್ ಆಚರಣೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ರ್ಯಾಲಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರ್ಯಾಲಿ, ಪ್ರತಿಭಟನೆ ವೇಳೆ ಮುಂಚೆಯೇ ಮಾಹಿತಿ ಸಂಗ್ರಹಿಸಿ ಮತೀಯ ಗಲಭೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನಿರ್ವಹಿಸಿದ್ದೇ ಮಹಿಳಾ ಪೊಲೀಸರ ದಕ್ಷತೆಗೆ ಸಾಕ್ಷಿಯಾಗಿದೆ.
ಬೆಂಗಳೂರು ನಗರ ಗುಪ್ತಚರ ವಿಭಾಗದ ಡಿಸಿಪಿ ಡಾ.ಎಂ. ಅಶ್ವಿನಿ, ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್, ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಸಪೇಟ್ ಸೇರಿದಂತೆ ಹಲವು ಮಹಿಳಾ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದನ್ನು ಕಾಣಬಹುದಾಗಿದೆ.
ಇನ್ನು ಮುಂದೆ ಇಂಥ ಶೌರ್ಯ ಸಾಹಸವನ್ನು ಪ್ರದರ್ಶಿಸಲಿದೆ ಮಹಿಳಾ ಪೊಲೀಸರ ಪಡೆಗಳು. ಹೆಣ್ಣು ಮಕ್ಕಳಿಗೆ ಸ್ವ-ರಕ್ಷಣೆಗೆ ಕುರಿತು ತರಬೇತಿ ನೀಡಲು ‘ವೀರ ವನಿತೆ’ ತಂಡ ರಚನೆ ಆಗಿದ್ದರೆ, ಎಂಟು ಮಹಿಳಾ ಪೇದೆಗಳು ಒಳಗೊಂಡ ‘ಓಬವ್ವ ಪಡೆ’ ಅಪರಾಧ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರ ಸುರಕ್ಷತೆಗೆ ನೆರವಾಗುತ್ತಿ್ತೆ.
ವೀರ ವನಿತೆ ಪಡೆ:ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಆಸಕ್ತ 15 ಮಹಿಳಾ ಪೊಲೀಸರನ್ನು ಆಯ್ಕೆ ಮಾಡಿ ಈ ಪಡೆ ರಚಿಸಿದ್ದಾರೆ. ಇವರಿಗೆ 6 ತಿಂಗಳ ಕಾಲ ಸ್ವ-ರಕ್ಷಣೆ ಕುರಿತು ವಿವಿಧ ಕಲೆಯಲ್ಲಿ ಪರಿಣಿತ ತಂಡದಿಂದ ವಿಶೇಷ ತರಬೇತಿ ಕೊಡಿಸಿದ್ದಾರೆ. ಇದೀಗ ‘ವೀರ ವನಿತೆ’ಯರು ಸಂಪೂರ್ಣ ತರಬೇತಿ ಮುಗಿಸಿದ್ದು, ಶೀಘ್ರದಲ್ಲೇ ತಮ್ಮ ಕಾರ್ಯ ಆರಂಭಿಸಲಿದ್ದಾರೆ.
ಬೆಂಗಳೂರಿನ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ‘ವೀರ ವನಿತೆ’ಯರ ತಂಡಗಳು ತೆರಳಿ ವಿದ್ಯಾರ್ಥಿನಿಯರಿಗೆ ಮಾರ್ಷಲ್ ಕಲೆ, ಕರಾಟೆ ಸೇರಿದಂತೆ ವಿವಿಧ ಸ್ವ-ರಕ್ಷಣೆ ಕುರಿತು ತರಬೇತಿ ನೀಡಲಿವೆೆ. ದುಷ್ಕರ್ವಿುಗಳು ದಾಳಿ ನಡೆಸಿದಾಗ ಅವರಿಂದ ತಪ್ಪಿಸಿಕೊಳ್ಳಲು ಹೋರಾಟದ ಕಲೆ ಮತ್ತು ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕುರಿತು ಜಾಗೃತಿ ಮೂಡಿಸುತ್ತಾರೆ.
ಮಾದಕ ದ್ರವ್ಯ ಮತ್ತು ಲೈಂಗಿಕ ದೌರ್ಜನ್ಯ ತಡೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಬೀದಿ ನಾಟಕದ ಮೂಲಕ ತಂಡ ಹಮ್ಮಿಕೊಳ್ಳಲಿದೆ. ಕೆಲ ಕಡೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಜಾಗೃತಿ ಮೂಡಿಸಲಾಗುವುದು.
ಓಬವ್ವ ಪಡೆ:ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದ ರವಿ ಡಿ. ಚೆನ್ನಣ್ಣನವರ್ ಅವರು ರಚಿಸಿದ ಮಹಿಳಾ ಪೊಲೀಸ್ ಪಡೆ ಇದು. ಕೆಂಪೇಗೌಡ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ನಿಲ್ದಾಣ, ನಮ್ಮ ಮೆಟ್ರೋ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಓಬವ್ವ ಪಡೆ ಗಸ್ತು ತಿರುಗುತ್ತಿದೆ.
ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ ರಚಿಸಿರುವ ಮಹಿಳಾ ಪೊಲೀಸರ ಓಬವ್ವ ಪಡೆಯು ತಮ್ಮ ವಿಭಾಗದ ಜನನಿಬಿಡ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಾ ಮಹಿಳೆಯರಿಗೆ ಕಿರುಕುಳ ನೀಡುವುದಾಗಲೀ, ದೌರ್ಜನ್ಯವೆಸಗುವುದಾಗಲಿ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳುತ್ತಿದೆ.
ಯುವತಿಯರು ಮಹಿಳೆಯರಿಗೆ ಕಿರುಕುಳ ಕೊಡುವುದು ಚುಡಾಯಿಸುವುದು ದೌರ್ಜನ್ಯ ಎಸಗುವ ಕಾಮುಕರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ನಿಲ್ದಾಣದಲ್ಲಿ ಓಡಾಡುವ ಕಾಲೇಜು ಹುಡುಗಿಯರಿಗೆ ಕೀಟಲೆ ಮಾಡುವ ಹುಡುಗರಿಗೆ, ಕ್ಯಾಬ್​ನಲ್ಲಿ ಚಾಲಕರ ದುರ್ವರ್ತನೆಗೆ ಲಗಾಮು ಹಾಕುತ್ತಿದ್ದಾರೆ. ಇಷ್ಟೇ ಅಲ್ಲದೇ, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್​ನಲ್ಲಿ ಐಪಿಎಸ್ ದರ್ಜೆ ಅಧಿಕಾರಿಯಿಂದ ಸಾಮಾನ್ಯ ಕಾನ್​ಸ್ಟೆಬಲ್​ವರೆಗೂ ಮಹಿಳಾ ಪೊಲೀಸ್ ಪಡೆ ಖಾಕಿ ತೊಟ್ಟು ಹಗಲುರಾತ್ರಿ ದುಡಿಯುತ್ತಿದ್ದಾರೆ. ಕಮಿಷನರೇಟ್ ವ್ಯಾಪ್ತಿಯಲ್ಲಿ 18 ಐಪಿಎಸ್ ದರ್ಜೆ ಅಧಿಕಾರಿಗಳ ಪೈಕಿ 8 ಮಹಿಳಾ ಐಪಿಎಸ್​ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ, ಸಂಚಾರ, ಆಡಳಿತ, ಗುಪ್ತಚರ ಮತ್ತು ಮೀಸಲು ಪಡೆಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇನ್ನೂ ಎಸಿಪಿ, ಇನ್​ಸ್ಪೆಕ್ಟರ್, ಪಿಎಸ್​ಐ, ಎಎಸ್​ಐ ಮತ್ತು ಪೇದೆಗಳ ದೊಡ್ಡ ಪಡೆಯೇ ನಗರದಲ್ಲಿದೆ.
ಹೆಣ್ಣು ಮಕ್ಕಳು ಸುರಕ್ಷತೆಗೆ ಹಾಗೂ ಸಬಲೀಕರಣಕ್ಕೆ ಜಾಗೃತಿ ಮೂಡಿಸಲು ಸಬ್​ಇನ್​ಸ್ಪೆಕ್ಟರ್ ಪ್ರಶೀಲಾ ನೇತೃತ್ವದಲ್ಲಿ 16 ಮಹಿಳಾ ಪಿಎಸ್​ಐಗಳ ಪಡೆಯನ್ನು ಸಜ್ಜುಗೊಳಿಸಲಾಗಿದೆ. ಇತ್ತೀಚೆಗೆ ‘ವಿ ಫಾರ್ ವಿಮೆನ್’ ಎಂಬ ಘೋಷಣೆಯೊಂದಿಗೆ ಬೈಕ್​ನಲ್ಲಿ ರ‍್ಯಾಲಿ ನಡೆಯಿತು. ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರೇ ಬೈಕ್ ಚಲಾಯಿಸುವ ಮೂಲಕ ಸಾಥ್ ನೀಡಿದ್ದು, ಪ್ರಶಂಸೆಗೆ ಪಾತ್ರವಾಯಿತು. ಮಹಿಳೆಗೆ ಭದ್ರತೆ ಒದಗಿಸಲು ಮಹಿಳಾ ಪೊಲೀಸ್ ಪಡೆ ಇರುವುದಾಗಿ ಭರವಸೆ ತುಂಬುವುದು ಇದರ ಉದ್ದೇಶವಾಗಿತ್ತು. 16 ಪಿಎಸ್​ಐಗಳ ಪೈಕಿ ಮೂವರು ಹಿರಿಯ ಪಿಎಸ್​ಐಗಳನ್ನು ಹೊರತುಪಡಿಸಿದರೆ ಉಳಿದ 13 ಮಂದಿ ಇತ್ತೀಚೆಗೆ ಇಲಾಖೆಗೆ ಸೇರಿದವರು. ಇದೇ ರೀತಿ ಇಲಾಖೆಗೆ ಸೇರುವ ಹೊಸ ಮಹಿಳಾ ಅಧಿಕಾರಿ, ಸಿಬ್ಬಂದಿಗೆ ಧೈರ್ಯ ತುಂಬುವುದು ಮತ್ತು ಇಲಾಖೆಯ ಗಸ್ತು ಬೈಕ್​ಗಳನ್ನು ಚಲಾಯಿಸಿಕೊಂಡು ಮಹಿಳೆಯರಿಗೆ ಸುರಕ್ಷತೆ ಬಗ್ಗೆ ಭರವಸೆ ಮೂಡಿಸುವುದು ಮುಖ್ಯ ಧ್ಯೇಯವಾಗಿದೆ ಎಂದು ಪಿಎಸ್​ಐ ಪ್ರಶೀಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು, 3 ವರ್ಷ 4 ತಿಂಗಳ ಕಾಲ ಡಿಜಿ-ಐಜಿಪಿ ಆಗಿ ಸೇವೆ ಸಲ್ಲಿಸಿದ್ದು, ಜನವರಿ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಉತ್ತರಾಖಂಡ ಮೂಲದ ನೀಲಮಣಿ ಎನ್. ರಾಜು, 1983ನೇ ಸಾಲಿನ ಐಪಿಎಸ್ ಅಧಿಕಾರಿ. 33 ವರ್ಷಗಳ ಕಾಲ ಪೊಲೀಸ್ ಸೇವೆ ಸಲ್ಲಿಸಿದ ಇವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. 2017ರ ಅಕ್ಟೋಬರ್ 31ರಂದು ಡಿಜಿ-ಐಜಿಪಿ ಆಗಿ ಅಧಿಕಾರ ಸ್ವೀಕರಿಸುವ ಮೂಲಕ 150 ವರ್ಷಗಳ ಇತಿಹಾಸ ಇರುವ ಪೊಲೀಸ್ ಇಲಾಖೆಯಲ್ಲಿ ಪ್ರಥಮ ಮಹಿಳಾ ಡಿಜಿ-ಐಜಿಪಿ ಎಂಬ ಇತಿಹಾಸ ನಿರ್ವಿುಸಿದರು. ಲೋಕಸಭೆ, ವಿಧಾನ ಸಭೆ ಚುನಾವಣೆ, ಟಿಪು್ಪ ಜಯಂತಿ, ಭಯೋತ್ಪಾದಕ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ತಮ್ಮ ಅವಧಿಯಲ್ಲಿ ಕಾಂಗ್ರೆಸ್, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರ ಆಡಳಿತವನ್ನು ಸಮತೋಲನವಾಗಿ ನಿಭಾಯಿಸಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.
| ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
