| ಮಂಜುನಾಥ ಕೆ. ಬೆಂಗಳೂರು
ರಾಜ್ಯ ಸರ್ಕಾರ ಕಳೆದ ಭಾನುವಾರ ಜಾರಿಗೊಳಿಸಿದ ‘ಶಕ್ತಿ’ ಯೋಜನೆಯಡಿ ನಾಲ್ಕು ನಿಗಮದ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು, ಇದರಿಂದ ಒಟ್ಟಾರೆ ಶೇ.32 ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ!
ಮೊದಲು ನಾಲ್ಕು ನಿಗಮದ ಬಸ್​ಗಳಲ್ಲಿ ಸರಾಸರಿ 82.51 ಲಕ್ಷ ಪ್ರಯಾಣಿಕರು ಪ್ರತಿನಿತ್ಯ ಪ್ರಯಾಣ ಮಾಡುತ್ತಿದ್ದರು. ಶಕ್ತಿ ಯೋಜನೆ ಜಾರಿ ನಂತರ ಪ್ರತಿನಿತ್ಯ 1.10 ಕೋಟಿ ಪ್ರಯಾಣಿಕರು ಬಸ್ ಹತ್ತಿಳಿಯುತ್ತಿದ್ದಾರೆ. ಸುಮಾರು 28 ಲಕ್ಷ ಮಹಿಳೆಯರು (ಶೇ.33) ಹೆಚ್ಚಾಗಿ ಪ್ರಯಾಣ ಮಾಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ವರ್ಷಕ್ಕೆ 3600 ಕೋಟಿ ರೂ. ವೆಚ್ಚ!:ಶಕ್ತಿ ಯೋಜನೆಯಲ್ಲಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರತಿನಿತ್ಯ ಸರಾಸರಿ 54 ಲಕ್ಷ ಮಂದಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇವರ ಉಚಿತ ಟಿಕೆಟ್​ಗೆ ಪ್ರತಿದಿನ 11 ರಿಂದ 12 ಕೋಟಿ ರೂ. ವರೆಗೂ ವೆಚ್ಚವಾಗುತ್ತಿದೆ. ತಿಂಗಳಿಗೆ ಸುಮಾರು 300 ಕೋಟಿ ರೂ. ವೆಚ್ಚವಾಗಲಿದೆ. ವರ್ಷಕ್ಕೆ ಸುಮಾರು 3,600 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ಸರ್ಕಾರ ಸಬ್ಸಿಡಿ ಅಥವಾ ಅನುದಾನದ ರೂಪದಲ್ಲಿ ನಿಗಮಗಳಿಗೆ ನೀಡಬೇಕಾಗುತ್ತದೆ.
ನಿತ್ಯ 23 ಕೋಟಿ ರೂ. ಆದಾಯವಿತ್ತು:ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ 40 ವಿಭಾಗಗಳು, 240 ಘಟಕಗಳಿವೆ. 23978 ವಾಹನಗಳಿದ್ದು, ಇದರಲ್ಲಿ 21574 ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ. ನಾಲ್ಕು ನಿಗಮದಲ್ಲಿ 1,04,450 ಸಿಬ್ಬಂದಿ ಇದ್ದಾರೆ. ಪ್ರತಿನಿತ್ಯ ನಾಲ್ಕು ನಿಗಮಗಳಿಂದ 23,13,32,000 ಕೋಟಿ ರೂ. ಆದಾಯ ಬರುತ್ತಿತ್ತು. 2022-23ನೇ ಸಾಲಿನಲ್ಲಿ 8946.85 ಕೋಟಿ ರೂ. ಆದಾಯ ಬಂದಿತ್ತು. 12750.49 ಕೋಟಿ ರೂ. ಕಾರ್ಯಾಚರಣೆ ವೆಚ್ಚವಾಗಿತ್ತು. ಇದೀಗ ನಿಗಮದ ಆದಾಯದಲ್ಲಿ ಅರ್ಧದಷ್ಟು ಕಡಿಮೆಯಾಗಲಿದ್ದು, ಅದನ್ನು ಸರ್ಕಾರ ತುಂಬಿಕೊಡಬೇಕಿದೆ. ಕೆಎಸ್ಸಾರ್ಟಿಸಿಯಲ್ಲಿ 40 ರಿಂದ 45 ಸಾವಿರ ಮಾಸಿಕ ಪಾಸ್ ಮಾರಾಟವಾಗುತ್ತಿತ್ತು. ಬಿಎಂಟಿಸಿಯಲ್ಲಿ 1.10 ಲಕ್ಷ ಮಾಸಿಕ ಪಾಸ್ ಮಾರಾಟವಾಗುತ್ತಿದ್ದವು.
ಉದ್ಯೋಗಸ್ಥರಿಗೆ ಹೆಚ್ಚಿನ ಅನುಕೂಲ:ಉದ್ಯೋಗಸ್ಥ ಮಹಿಳೆಯರಿಗೆ ಶಕ್ತಿ ಯೋಜನೆಯು ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಗಾರ್ವೆಂಟ್ಸ್, ಮನೆಗೆಲಸ, ಹೂ ವ್ಯಾಪಾರ, ಕೂಲಿ, ಸೇಲ್ಸ್​ಗರ್ಲ್ ಹಾಗೂ ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ಹೆಚ್ಚಿನ ಸಹಕಾರಿಯಾಗಿದೆ. ಈ ಮೊದಲು ಬಿಎಂಟಿಸಿಯಲ್ಲಿ ತಿಂಗಳಿಗೆ 1200 ರೂ. ಕೊಟ್ಟು ಮಾಸಿಕ ಪಾಸ್ ಪಡೆದು ಮಹಿಳಾ ಉದ್ಯೋಗಿಗಳು ಸಂಚಾರ ಮಾಡುತ್ತಿದ್ದರು. ಟಿಕೆಟ್ ಪಡೆದು ಪ್ರಯಾಣ ಮಾಡಿದರೆ 1500 ರೂ. ನಷ್ಟು ವೆಚ್ಚವಾಗುತ್ತಿತ್ತು. ಶಕ್ತಿ ಯೋಜನೆಯಿಂದ ನಗರಗಳಲ್ಲಿ ಮಹಿಳೆಯರಿಗೆ ತಿಂಗಳಿಗೆ ಅಂದಾಜು 1500 ರೂ. ಉಳಿತಾಯವಾಗುತ್ತಿದೆ. ಇನ್ನು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 10 ತಿಂಗಳ ಪಾಸ್​ಗೆ 150 ರೂ., ಕಾಲೇಜು ವಿದ್ಯಾರ್ಥಿಗಳಿಗೆ 1500 ರೂ. ಶುಲ್ಕವಿದೆ. ಆದರೆ ಈಗ ವಿದ್ಯಾರ್ಥಿನಿಯರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಅಷ್ಟೂ ಹಣ ಉಳಿತಾಯವಾಗಲಿದೆ.
ವಿದ್ಯಾರ್ಥಿಗಳ ಪರದಾಟ:ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿರುವುದರಿಂದ ಬಸ್​ಗಳು ಮಹಿಳಾ ಮಣಿಯರಿಂದ ತುಂಬಿ ತುಳುಕುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಬಸ್​ನಲ್ಲಿ ಜಾಗವಿಲ್ಲದೆ ಮತ್ತು ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಬಸ್​ಗಳಲ್ಲಿ ಪುರುಷರಿಗೆ ಶೇ.50 ಆಸನ, ವಿದ್ಯಾರ್ಥಿಗಳಿಗೆ ಶೇ.25 ಆಸನ ಮೀಸಲಿಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಬಸ್​ಗಳು ಓವರ್ ಲೋಡ್ ಆಗುತ್ತಿದ್ದು, ಟಿಕೆಟ್ ನೀಡಲು ನಿರ್ವಾಹಕರು ಪರದಾಡುತ್ತಿದ್ದಾರೆ.
ರೈಲು ಪ್ರಯಾಣಿಕರ ಸಂಖ್ಯೆಯಲ್ಲೂ ಕುಸಿತ:ಸಾರಿಗೆ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿ ಬಳಿಕ ರೈಲು ಪ್ರಯಾಣಿಕರ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ. ಮುಖ್ಯವಾಗಿ, ರಾಜ್ಯದೊಳಗೆ ಸಂಚರಿಸುವ ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಶೇ.10 ರಿಂದ 15 ತನಕ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಆದರೆ ಕಾಯ್ದಿರಿಸುವ ವಿಶೇಷ/ಐಷಾರಾಮಿ ಬೋಗಿಗಳಲ್ಲಿ ಪ್ರಯಾಣಿಕರ ವ್ಯತ್ಯಾಸ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸುಬ್ರಹ್ಮಣ್ಯ (ದ.ಕ.): ಕೆಎಸ್ಸಾರ್ಟಿಸಿ ಬಸ್​ನಲ್ಲಿ ಉಚಿತ ಪ್ರಯಾಣ ಅವಕಾಶ ಬಳಿಕ ಧಾರ್ವಿುಕ ಕ್ಷೇತ್ರಗಳಿಗೆ ಆಗಮಿಸುವ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದೆ.
ಶನಿವಾರ ಬೆಳಗ್ಗಿನಿಂದಲೇ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಮಹಿಳಾ ಭಕ್ತರೇ ತುಂಬಿದ್ದರು. ಈ ಬಗ್ಗೆ ‘ವಿಜಯವಾಣಿ’ ಜತೆ ಮಹಿಳೆಯೊಬ್ಬರು ಮಾತನಾಡಿ, ಉಚಿತ ಪ್ರಯಾಣದ ಅವಕಾಶ ಲಭಿಸಿದ್ದರಿಂದ ಕ್ಷೇತ್ರದ ದರ್ಶನ ಸಾಧ್ಯವಾಗಿದೆ. ಒಂದೇ ಕುಟುಂಬದ 15 ಮಂದಿ ಬಂದಿದ್ದೇವೆ. ನಮ್ಮದು ಬಡ ಕುಟುಂಬ. ಆರ್ಥಿಕವಾಗಿ ಪ್ರಯಾಣ ವೆಚ್ಚ ಭರಿಸುವುದು ಈ ಹಿಂದೆ ಕಷ್ಟವಾಗಿತ್ತು ಎಂದರು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಯೂ ಮಹಿಳೆಯರ ಸಂಖ್ಯೆ ಎಂದಿಗಿಂತ ಹೆಚ್ಚಿತ್ತು. ಭಾನುವಾರ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ.
ಬಸ್​ ಡೋರೇ ಕಿತ್ತು ಹೋಯ್ತು!; ಉಚಿತ ಪ್ರಯಾಣಕ್ಕಾಗಿ ಮಹಿಳೆಯರ ‘ಶಕ್ತಿ’ ಪ್ರಯೋಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eight =
Remember me
