ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಾಪರ್ಟಿ ಟ್ಯಾಕ್ಸ್, ನೀರಿನ ಶುಲ್ಕ ಸಂಗ್ರಹ ಜವಾಬ್ದಾರಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ತೆರಿಗೆ ವಸೂಲಾತಿ ಹೊಣೆಯನ್ನು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವಹಿಸುವ ಮಹತ್ವದ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಮಹಿಳೆಯರು ವಸೂಲಿಗೆ ಮುಂದಾದರೆ ತೆರಿಗೆದಾರರು ತೆರಿಗೆ ಪಾವತಿಸಲು ಹಿಂದೇಟು ಹಾಕುವುದಿಲ್ಲ ಎಂಬುದು ಒಂದು ಕಾರಣವಾದರೆ, ಮಹಿಳೆಯರ ಸಬಲೀಕರಣ ಈ ನಿರ್ಧಾರದ ಹಿಂದಿರುವ ಮತ್ತೊಂದು ಆಶಯ.
ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ, ನೀರಿನ ಶುಲ್ಕ (ಹಿಂದಿನ ಬಾಕಿ ಹಾಗೂ ಪ್ರಸ್ತುತ ವರ್ಷದ) ವಸೂಲಿಗೆ ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆ ಪಡೆಯಲು ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿಯ ಮುದ್ರೆ ಬಿದ್ದಿದೆ. 2023-24ರ ಆಯವ್ಯಯದಲ್ಲಿ ಸರ್ಕಾರ ಈ ಕಾರ್ಯಕ್ರಮವನ್ನು ಘೋಷಿಸಿತ್ತು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಸ್ವಸಹಾಯ ಗುಂಪುಗಳು (ಎಸ್​ಎಚ್​ಜಿ)/ಸರ್ಕಾರೇತರ ಸಂಸ್ಥೆಗಳು / ಸ್ತ್ರೀಶಕ್ತಿ ಗುಂಪುಗಳ ಪ್ರತಿನಿಧಿಗಳ ಸೇವೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಕ್ಕೆ ವರದಿ ಕಡ್ಡಾಯ:ಜಿಲ್ಲಾವಾರು ತಂಡ ರಚಿಸಿ ನೀರಿನ ಬಾಕಿ ಬಳಕೆ ಶುಲ್ಕ ವಸೂಲಿ ಮಾಡಿರುವ ಕುರಿತು ಪ್ರತಿ ತಿಂಗಳು ಕೈಗೊಂಡ ಪ್ರಗತಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಬಳಕೆ ಶುಲ್ಕ ವಸೂಲಿ ಮಾಡದೇ ಇದ್ದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನೇ ನೇರ ಹೊಣೆಗಾರರನ್ನಾಗಿಸಲಾಗುತ್ತದೆ.
7110 ಕಿ.ಮೀ ಹಳ್ಳಿ ರಸ್ತೆ ಅಭಿವೃದ್ಧಿ:ಗ್ರಾಮೀಣ ರಸ್ತೆಗಳು ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮಾರುಕಟ್ಟೆ ಮುಂತಾದ ಅಗತ್ಯ ಸೇವೆಗಳಿಗೆ ಅವಶ್ಯವಾಗಿವೆ. ಹೀಗಾಗಿ ರಾಜ್ಯ ಸರ್ಕಾರದ ‘ಪ್ರಗತಿಪಥ’ ಯೋಜನೆಯಡಿ ರಾಜ್ಯದ 7110 ಕಿ.ಮೀ ಉದ್ದದ ರಸ್ತೆಗಳನ್ನು 5190 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆ ಸಮ್ಮತಿಸಿದೆ.
ಆದ್ಯತೆೆ ಕಾಮಗಾರಿ:‘ಪ್ರಗತಿಪಥ’ ಐದು ವರ್ಷಗಳ ವಾರ್ಷಿಕ ನಿರ್ವಹಣಾ ಯೋಜನೆಯಾಗಿದೆ. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮೂಲಕ ಆಯಾ ವಿಧಾನಸಭಾ ಕ್ಷೇತ್ರಗಳ ಆದ್ಯತೆ ಅನುಗುಣವಾಗಿ ಕೆ.ಟಿ.ಪಿ.ಪಿ ಕಾಯ್ದೆ ಅನ್ವಯ ಪಾರದರ್ಶಕವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
33 ವಿಶೇಷ ಪೊಲೀಸ್ ಠಾಣೆ:ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೊಷಿಸಲು ಹಾಗೂ ಸದರಿ ಠಾಣೆ ನಿರ್ವಹಣೆಗೆ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ ನೀಡಲು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.
ಪ್ರೋತ್ಸಾಹ ಧನ ಗಿಫ್ಟ್ :ತೆರಿಗೆ ವಸೂಲಿ ಮಾಡುವ ಗುಂಪುಗಳಿಗೆ ನೀರಿನ ಶುಲ್ಕ ಬಾಕಿ ವಸೂಲಾತಿ ಮೊತ್ತದ ಮೇಲೆ ಶೇ.5ರಷ್ಟು ಪೋ›ತ್ಸಾಹ ಧನ ನೀಡಲು ನಿರ್ಣಯಿಸಲಾಗಿದೆ.
ಆಸ್ತಿ ತೆರಿಗೆ;1860 ಕೋಟಿ : 315 ನಗರ ಸ್ಥಳೀಯ ಸಂಸ್ಥೆಗಳು, 10 ಮಹಾನಗರ ಪಾಲಿಕೆ, 61 ನಗರಸಭೆ, 114 ಪಟ್ಟಣ ಪಂಚಾಯಿತಿ, 4 ನೋಟಿಫೈಡ್ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ವಸಹಾಯ ಸಂಘಗಳಿಂದ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲು ಮಾಡಲಾಗುತ್ತದೆ. 2025ಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಜನಸಂಖ್ಯೆ 202.58 ಲಕ್ಷಕ್ಕೆ ತಲುಪಲಿದೆ. ಸುಮಾರು 51.51 ಲಕ್ಷ ಮನೆಗಳಿದ್ದು, ಅವುಗಳಲ್ಲಿ 30.05 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ. 21.46 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಬಾಕಿಯಿದೆ. ಆಸ್ತಿ ತೆರಿಗೆ ಮೊತ್ತ ರೂ.1860.17 ಕೋಟಿ ರೂ. ಆಗಲಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡರು.
ಬೆಂಗಳೂರು:ಐದು ಲಕ್ಷ ಸರ್ಕಾರಿ ನೌಕರರು, ಅಷ್ಟೇ ಸಂಖ್ಯೆಯ ಪಿಂಚಣಿದಾರರ ಮೇಲೆ ನೇರ ಪರಿಣಾಮ ಬೀರುವ ಏಳನೇ ವೇತನ ಆಯೋಗದ ವರದಿ ಜಾರಿ ವಿಚಾರದಲ್ಲಿ ಸರ್ಕಾರದಲ್ಲೇ ಗೊಂದಲ ಉಂಟಾಗಿದೆ. ವೇತನವನ್ನು ಎಷ್ಟು ಹೆಚ್ಚಳ ಮಾಡಬೇಕೆಂಬ ಬಗ್ಗೆ ಸಿಎಂ ವಿವೇಚನೆಗೆ ಬಿಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ.
ಸಚಿವಾಲಯ ನೌಕರರ ಸಂಘ, ಸರ್ಕಾರಿ ನೌಕರರ ಸಂಘ, ಸರ್ಕಾರಿ ನೌಕರರ ಒಕ್ಕೂಟಗಳ ಒತ್ತಡದ ನಡುವೆ ಗುರುವಾರ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಯಾಯಿತು. 2022ರ ಜುಲೈನಲ್ಲೇ ಆರನೇ ವೇತನ ಆಯೋಗದ ಅವಧಿ ಮುಕ್ತಾಯವಾಗಿದ್ದು, 2022ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕರಣೆ ಆಗಬೇಕೆಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿದೆ. ಹಾಗೂ ಹೀಗೂ 2024ರ ಮೇವರೆಗೂ ಎಳೆದಾಟವಾಗಿದ್ದು, 2023ರ ಜನವರಿಯಿಂದಲಾದರೂ ಅನ್ವಯವಾಗುವಂತೆ ಆರ್ಥಿಕ ಅನುಕೂಲ ಆಗಬೇಕೆಂಬುದು ಸರ್ಕಾರಿ ನೌಕರರ ಒತ್ತಾಯವಾಗಿತ್ತು. ಲೋಕಸಭೆ ಚುನಾವಣೆ ಘೋಷಣೆಗೆ ಒಂದು ದಿನ ಮೊದಲು ವೇತನ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆದರೆ, ಅನುಷ್ಠಾನ ಆದೇಶ ಹೊರಡಿಸುವ ತೀರ್ಮಾನ ಮಾಡಲು ನೀತಿಸಂಹಿತೆ ಅಡ್ಡಿಯಾಯಿತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯಲ್ಲಿ ವೇತನ ಪರಿಷ್ಕರಣೆಗಾಗಿ ಆಯೋಗ ರಚಿಸಿತ್ತು. 2023ರ ಏಪ್ರಿಲ್ ಮಾಹೆಯಿಂದ ಜಾರಿಯಾಗುವಂತೆ ಶೇ.17ರ ಮಧ್ಯಂತರ (ತಾತ್ಕಾಲಿಕ) ಪರಿಹಾರ ಘೋಷಿಸಲಾಗಿತ್ತು.
ಮಾಹಿತಿ ಪ್ರಕಾರ ವೇತನ ಹೆಚ್ಚಳದಿಂದ ಸರ್ಕಾರದ ಖಜಾನೆ ಮೇಲೆ ಮಾಸಿಕ 1.4 ಸಾವಿರ ಕೋಟಿ ರೂ. ಹೊರೆ ಬೀಳಲಿದೆ. ಅಂದರೆ ವರ್ಷಕ್ಕೆ ಸರಾಸರಿ ಹದಿನೇಳುವರೆ ಸಾವಿರ ಕೋಟಿ ರೂ. ಬೇಕಾಗುತ್ತದೆ. ಮಧ್ಯಂತರ ಪರಿಹಾರ ಹೊರತು ಇನ್ನೂ ಹೆಚ್ಚುವರಿಯಾಗಿ 10.5ರಷ್ಟು ಹೆಚ್ಚಿಸಬೇಕಾಗುತ್ತದೆ. ಆಯೋಗ ಶೇ.27.5 ಹೆಚ್ಚಳಕ್ಕೆ ಶಿಫಾರಸು ಮಾಡಿದೆ. ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ.
ಗುರುವಾರ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳ ಪ್ರಮಾಣದ ಕುರಿತು ಕೆಲವು ಸಚಿವರು ಅಭಿಪ್ರಾಯ ಮಂಡಿಸಿದ್ದಾರೆ. ಆಯೋಗದ ಶಿಫಾರಸನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಬಾರದೆಂದು ಕೆಲವರು ಅಭಿಪ್ರಾಯ ನೀಡಿದರೆನ್ನಲಾಗಿದೆ. ಆದರೆ ಸಿಎಂ ಶೇ.27 ರಷ್ಟು ಕೊಡಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಂತಿಮವಾಗಿ ಸಿಎಂ ವಿವೇಚನೆಗೆ ಬಿಡಲಾಗಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ಯಾರಾಗಬೇಕೆಂದು ಕಾಂಗ್ರೆಸ್​ ನಿರ್ಧರಿಸುತ್ತೆ: ಶರದ್​ ಪವಾರ್

ಶಿವಮೊಗ್ಗ: ಹಸಗೂಸನ್ನು ತೋಟದಲ್ಲಿ ಎಸೆದು ಹೋದ ತಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 5 =
Remember me
