|ರಮೇಶ ದೊಡ್ಡಪುರಬೆಂಗಳೂರು
ನಗರೀಕರಣ ಹಾಗೂ ಕೈಗಾರಿಕೀಕರಣದಿಂದ ದೇಶದ ಬಹುದೊಡ್ಡ ಸಂಖ್ಯೆಯ ಯುವಕರು ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಕರೊನಾ ಸಂಕಷ್ಟದ ಕಾಲಘಟ್ಟದಲ್ಲಿ ದೊರಕಿರುವ ಚಿನ್ನದ ಅವಕಾಶವನ್ನು ಸರ್ಕಾರಗಳು ಕೈಚೆಲ್ಲಿವೆ. ಕರೊನಾ ಕಾರಣ ಹಾಗೂ ವರ್ಕ್ ಫ್ರಂ ಹೋಮ್ ವ್ಯವಸ್ಥೆಯೇ ಶಾಶ್ವತ ವಾಗುತ್ತಿರುವ ಸನ್ನಿವೇಶದಲ್ಲಿ, ಹಳ್ಳಿಗಳಲ್ಲಿ ಅಪ್ಪ- ಅಮ್ಮನ ಜತೆಗಿದ್ದುಕೊಂಡೇ ವೃತ್ತಿ ಕನಸು ಈಡೇರಿಸಿಕೊಳ್ಳುವ ಲಕ್ಷಾಂತರ ಯುವಕರ ಆಸೆಗೆ ಗ್ರಾಮೀಣ ಪ್ರದೇಶದ ದೂರಸಂಪರ್ಕ ಸಮಸ್ಯೆ ತಣ್ಣೀರೆರೆಚಿದೆ.
ಜನತಾ ಕರ್ಫ್ಯೂ, ಲಾಕ್​ಡೌನ್ ಸಂದರ್ಭದಲ್ಲಿ ಲ್ಯಾಪ್​ಟಾಪ್ ಸಹಿತ ಗ್ರಾಮಗಳಿಗೆ ತೆರಳಿದ್ದ ಯುವಕರು ಕರೊನಾ ತೀವ್ರತೆ ಇಳಿದ ಬಳಿಕ ನಗರಕ್ಕೆ ಮರಳುವ ಆತುರದಲ್ಲಿದ್ದಾರೆ. ಕಾರಣ ಮೊಬೈಲ್ ನೆಟ್​ವರ್ಕ್ ಮತ್ತು ಇಂಟರ್ನೆಟ್ ಸಮಸ್ಯೆ. ಇದರಿಂದ ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗಷ್ಟೇ ಅಲ್ಲದೆ, ಆನ್​ಲೈನ್ ತರಗತಿ, ಆನ್​ಲೈನ್ ಕೌಶಲ ತರಬೇತಿ, ಪಡಿತರ ವಿತರಣೆ, ಆರೋಗ್ಯ ವ್ಯವಸ್ಥೆ ಸೇರಿ ಹಲವು ಸೇವೆಗಳನ್ನು ಪಡೆಯುವುದು ಹಳ್ಳಿಗಳಲ್ಲಿ ದುಃಸ್ಸಾಧ್ಯವಾಗಿದೆ. ಹೀಗಾಗಿ ಹಳ್ಳಿಗಳು ಮತ್ತೆ ವೃದ್ಧಾಶ್ರಮದಂತಾಗುವ ಅಪಾಯ ಎದುರಾಗಿದೆ.
ಅಗಾಧ ವ್ಯತ್ಯಾಸ:ರಸ್ತೆ, ಚರಂಡಿಯಂತಹ ಮೂಲಸೌಕರ್ಯದಲ್ಲಿ ಗ್ರಾಮ ಹಾಗೂ ನಗರಗಳ ನಡುವೆ ಇರುವ ಹತ್ತು ಪಟ್ಟು ಕಂದಕ ಡಿಜಿಟಲ್ ಮೂಲಸೌಕರ್ಯದಲ್ಲಿದೆ. 2020ರ ಫೆಬ್ರವರಿವರೆಗೆ ದೇಶದಲ್ಲಿದ್ದ 5.89 ಲಕ್ಷ ಮೊಬೈಲ್ ಟವರ್ ಪೈಕಿ ಕರ್ನಾಟಕದಲ್ಲಿ 38,410 ಟವರ್ ಇದ್ದವು. ಮಹಾರಾಷ್ಟ್ರ (45,758), ಆಂಧ್ರಪ್ರದೇಶವಷ್ಟೆ (44,736) ಅಲ್ಲದೆ ಮಧ್ಯಪ್ರದೇಶ (43,372) ಹಾಗೂ ಬಿಹಾರಕ್ಕಿಂತಲೂ (43,308) ಕಡಿಮೆ ಸಂಖ್ಯೆಯ ಟವರ್ ಕರ್ನಾಟಕದಲ್ಲಿದೆ. ದೇಶದ ನಗರ ಪ್ರದೇಶದಲ್ಲಿ ಇಂಟರ್ನೆಟ್ ಸಂರ್ಪತ ಮೊಬೈಲ್ ಗ್ರಾಹಕರ ಪ್ರಮಾಣ ಶೇ.93 ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ಕೇವಲ 29.3. ಕಳೆದೊಂದು ವರ್ಷದಲ್ಲಿ ಈ ಮೂಲಸೌಕರ್ಯ ಕ್ಷೇತ್ರಕ್ಕೆ ವಿಶೇಷ ಗಮನಹರಿಸಿ ಅಭಿವೃದ್ಧಿಪಡಿಸಿದ್ದರೆ ಅನೇಕ ಯುವಕರು ಗ್ರಾಮಗಳಲ್ಲಿ ವಾಸಿಸುವ ಹಾಗೂ ಗ್ರಾಮೀಣ ಆರ್ಥಿಕತೆ ಉತ್ತಮಪಡಿಸುವ ಅವಕಾಶವಿತ್ತು.
10 ನಿಮಿಷದಲ್ಲಿ ತಡವಾದ್ರೆ ಅಪಾಯವಾಗುತ್ತಿತ್ತು!:ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲ್ಲೂಕಿನ ಕಾಡುಗಳ ನಡುವೆ ಇರುವ ಕೊತ್ತನೂರಿನಲ್ಲಿ ಇಂಟರ್ನೆಟ್ ಸಮಸ್ಯೆ ಇಲ್ಲ. ಏಕೆಂದರೆ ಅಲ್ಲಿ ಮೊಬೈಲ್ ನೆಟ್​ವರ್ಕೆ ಸಿಗುವುದಿಲ್ಲ. ಇಂಟರ್ನೆಟ್ ಕೇಳುವವರೇ ಇಲ್ಲ ಎನ್ನುತ್ತಾರೆ ಗ್ರಾಮದ ಅರುಣ್. ಇತ್ತೀಚೆಗೆ ಮನೆಯವರಿಗೆ ಕರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿರಾಳವಾಗಿದ್ದೆವು. ಇದ್ದಕ್ಕಿದ್ದಂತೆ ತಂದೆಯವರಿಗೆ ತೀವ್ರ ಹೃದಯಾಘಾತವಾಗಿದೆ. ತಾಯಿ ತಕ್ಷಣವೇ ಮೊಬೈಲ್ ಹಿಡಿದು, ಊರಿನಲ್ಲಿ ನೆಟ್​ವರ್ಕ್ ಸಿಕ್ಕುವ ಒಂದು ಸ್ಥಳಕ್ಕೆ ತೆರಳಿ ಕರೆ ಮಾಡಿದರು. ನಾವೆಲ್ಲ ತಕ್ಷಣವೇ ತೆರಳಿ ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡೆವು. ಆದರೆ ತಾಯಿ ಈ ಕರೆ ಮಾಡಿ 10 ನಿಮಿಷದಲ್ಲೆ ಊರಿನಲ್ಲಿ ಕರೆಂಟ್ ಹೋಗಿದೆ. ಟವರ್​ಗಳಿಗೆ ಜನರೇಟರ್ ಬಳಸುವುದಿಲ್ಲವಾದ್ದರಿಂದ, ಕರೆಂಟ್ ಕೈಕೊಟ್ಟರೆ ದೂರವಾಣಿಯೂ ಇಲ್ಲ. ಕೇವಲ 10 ನಿಮಿಷ ತಡವಾಗಿದ್ದರೆ ಜೀವಕ್ಕೇ ಅಪಾಯವಿತ್ತು. ಈ ಹಿಂದೆ ಊರಿಗೆ ಟವರ್ ಅಳವಡಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆಯಲಾಗಿತ್ತು. ಆದರೆ ತಾಂತ್ರಿವಾಗಿ ಸಾಧ್ಯವಿಲ್ಲ ಎಂಬ ಉತ್ತರ ಬಿಎಸ್​ಎನ್​ಎಲ್​ನಿಂದ ಬಂದಿದೆ. ವಾಣಿಜ್ಯ ಕಾರಣಗಳಿಗೆ ಖಾಸಗಿ ಕಂಪನಿಯವರು ಟವರ್ ಅಳವಡಿಸುವುದು ಸಾಧ್ಯವಿಲ್ಲದೆ ಇರಬಹುದು, ಆದರೆ ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ಅವರು.
ಕೆಲವೇ ಜಿಲ್ಲೆಗಳಿಗೆ ಸೀಮಿತ:ಸರ್ಕಾರಗಳು ಹೇಳುವ ಡಿಜಿಟಲ್ ಕ್ರಾಂತಿ ಕೇವಲ ನಗರ ಪ್ರದೇಶಗಳಿಗೆ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದವರೆಗೆ ಮಾತ್ರ ತಲುಪಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಉತ್ತಮ. ಆದರೆ, ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ತಾಲ್ಲೂಕು ಕೇಂದ್ರದಿಂದ ಐದಾರು ಕಿ.ಮೀ. ತೆರಳಿದರೂ ನೆಟ್​ವರ್ಕ್ ಕೈಕೊಡುತ್ತದೆ. ವಿದ್ಯಾರ್ಥಿಗಳು ಆನ್​ಲೈನ್ ತರಗತಿ ಮತ್ತು ಆನ್​ಲೈನ್ ಪರೀಕ್ಷೆಗಳನ್ನು ವಿರೋಧಿಸುತ್ತಿರುವುದು ಕೂಡ ಇಂಥ ನೆಟ್​ವರ್ಕ್ ಸಮಸ್ಯೆಯ ಕಾರಣಕ್ಕೆ.
ಪಡಿತರ ಪರದಾಟ:ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಪಡೆಯಲು ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರತಿ ತಿಂಗಳು ನೆಟ್​ವರ್ಕ್ ಸಮಸ್ಯೆಯಿಂದ ಬಯೋಮೆಟ್ರಿಕ್ ಕೆಲಸ ಮಾಡದೆ ಪಡಿತರದಾರರು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ಕನ್ನಡದ ಕಡಬ ತಾಲ್ಲೂಕಿನ ಕೆಂಜಾಳ ಗ್ರಾಮದಲ್ಲಿ ಪಡಿತರ ನೀಡಲು ನೆಟ್​ವರ್ಕ್ ಸಿಗದೆ ಅಧಿಕಾರಿಗಳು ಲ್ಯಾಪ್​ಟಾಪ್ ಹಿಡಿದು ಬೆಟ್ಟದ ಮೇಲೆ ಕುಳಿತರೂ ನೆಟ್​ವರ್ಕ್ ಸಿಗದೆ ಬರಿಗೈಲಿ ಹಿಂದಿರುಗುವಂತಾಯ್ತು.
ಆನ್​ಲೈನ್ ಪೇಮೆಂಟ್:ಡಿಮಾನಿಟೈಸೇಷನ್, ಕರೊನಾ ನಂತರ ನಗರದಲ್ಲಿ ಸಾಮಾನ್ಯವಾಗಿರುವ ಆನ್​ಲೈನ್ ಪಾವತಿ ವ್ಯವಸ್ಥೆ ಗ್ರಾಮೀಣ ಪ್ರದೇಶದಲ್ಲಿ ಕಾಣುವುದೇ ಇಲ್ಲ. ಅದೇ ರೀತಿ ವಿದ್ಯಾವಂತರು ತಮ್ಮ ಮೊಬೈಲ್ ಮೂಲಕವೇ ನಡೆಸಬಹುದಾದ ಬ್ಯಾಂಕಿಂಗ್ ವಹಿವಾಟಿಗೂ ನೆಟ್​ವರ್ಕ್ ಅಡ್ಡವಾಗಿದೆ.
ಊರಿನಲ್ಲಿ ಇರುವಂತಿಲ್ಲ:ಕಳೆದ ವರ್ಷ ಲಾಕ್​ಡೌನ್ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ ಅವಕಾಶ ಲಭಿಸಿದ್ದರಿಂದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ರಾಘವ್ ಹಳ್ಳಿಗೆ ಮರಳಿದ್ದರು. ಆದರೆ ಅಲ್ಲಿ ಇಂಟರ್ನೆಟ್ ಇರಲಿ, ಮೊಬೈಲ್ ನೆಟ್​ವರ್ಕ್ ಕೂಡ ಇರಲಿಲ್ಲ. ಊರಿನಿಂದ 5 ಕಿ.ಮೀ. ದೂರದಲ್ಲಿರುವ ಪಟ್ಟಣದಲ್ಲಿ ರೂಂ ಮಾಡಿಕೊಂಡು ಕೆಲಸ ಆರಂಭಿಸಿದರು. ಆದರೆ ಅಲ್ಲಿ ಕರೆಂಟ್ ಇದ್ದರೆ ಮಾತ್ರ ಮೊಬೈಲ್ ಟವರ್ ಕೆಲಸ ಮಾಡುತ್ತಿತ್ತು. ಜನರೇಟರ್ ಬಳಸಿದರೆ ಆರ್ಥಿಕವಾಗಿ ವರ್ಕೌಟ್ ಆಗುವುದಿಲ್ಲ ಎಂಬುದು ನಿರ್ವಾಹಕರ ಸಮಸ್ಯೆ. ಒಂದೇ ತಿಂಗಳಿಗೆ ರೂಮ್ ಖಾಲಿ ಮಾಡಿ ತಾಲ್ಲೂಕು ಕೇಂದ್ರ ಸಿದ್ದಾಪುರದಲ್ಲಿ ರೂಂ ಮಾಡುವುದು ಅನಿವಾರ್ಯವಾಯಿತು. ಅಲ್ಲಿಗೆ ಹಳ್ಳಿಗೆ ಮರಳಿ ಏನು ಉಪಯೋಗ ಎನ್ನುವುದು ಅವರ ಪ್ರಶ್ನೆ.
ಆನ್​ಲೈನ್ ತರಗತಿ, ತರಬೇತಿ:ಶಾಲೆಗಳ ಜತೆಗೆ ಕಾಲೇಜುಗಳಲ್ಲಿ ಆನ್​ಲೈನ್ ತರಗತಿಗಳೇ ನಡೆಯುತ್ತಿವೆ. ತಮ್ಮ ಗ್ರಾಮದಲ್ಲಿ ನೆಟ್​ವರ್ಕ್ ಇಲ್ಲದೆ ಅನೇಕರು ಕಾಲೇಜಿಗೆ ಗೈರಾಗಿದ್ದರೆ, ಕೆಲವರು ನಗರದಲ್ಲಿರುವ ಸ್ನೇಹಿತರ, ಕುಟುಂಬಸ್ಥರ ಮನೆಯಲ್ಲಿದ್ದು ಹಾಜರಾಗುವಂತಾಗಿದೆ.
ವ್ಯಾಕ್ಸಿನ್ ಹಾಕಿಸಿಕೊಂಡವರು 2 ವರ್ಷದಲ್ಲಿ ಸಾಯುತ್ತಾರೆ ಎಂಬ ಸಂದೇಶ ಫೇಕ್; ಅದನ್ನು ನಂಬಬೇಡಿ..

ಆಕಾಶ ನೋಡಲು ರೆಡಿಯಾಗಿ: ಸೂಪರ್‌ಮೂನ್, ರೆಡ್‌ಮೂನ್, ಚಂದ್ರಗ್ರಹಣ ಎಲ್ಲಾ ಒಂದೇ ದಿನ

ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − six =
Remember me
