ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
ಗಣಿತ ಕಂಡರೆ ಬೆಚ್ಚಿ ಬೀಳುವ ಮಕ್ಕಳ ಸಂಖ್ಯೆ ಕಮ್ಮಿಯೇನಲ್ಲ. ಕೆಲ ಮಕ್ಕಳಿಗೆ ಕಬ್ಬಿಣದ ಕಡಲೆಯಂತಿರುವ ಗಣಿತ ಬೋಧನೆ ಶಿಕ್ಷಕರಿಗೂ ಸವಾಲೇ ಆಗಿದೆ. ಆದರೆ ಈ ಸವಾಲುಗಳನ್ನು ಮೀರಿ ನಿಂತ ಪ್ರಯೋಗಶಾಲೆಯೇ ಮ್ಯಾಥ್ಸ್ ವರ್ಲ್ಡ್.
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ನಡ ಸರ್ಕಾರಿ ಪ್ರೌಢಶಾಲೆಯ ಯಾಕೂಬ್ ಎಸ್.ಕೊಯ್ಯೂರು ಅವರ ಕನಸಿನ ಕೂಸಿದು. ಕೊಯ್ಯೂರು ಗ್ರಾಮದಲ್ಲಿ ಇಸುಬು ಬ್ಯಾರಿ-ಅಲಿಮಮ್ಮ ದಂಪತಿ ಪುತ್ರನಾಗಿ ಜನಿಸಿದ ಯಾಕೂಬ್, ಚಿಮಿಣಿ ಬೆಳಕಿನಲ್ಲಿ ಓದಿ, ಇಂದು ಗಣಿತ ಶಿಕ್ಷಕರಾಗಿ ನಡ ಎಂಬ ಪ್ರದೇಶದಲ್ಲಿ ಮಾತ್ರವಲ್ಲ, ದೇಶದಲ್ಲೇ ಹೆಸರು ಪಡೆದ ಕನ್ನಡಿಗನಾಗಿ ಬೆಳೆದಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಯಾಕೂಬ್ ಕೊಯ್ಯೂರಿನ ಆದೂರು ಪೇರಾಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಆರಂಭಿಸಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಶಾಲೆಯಲ್ಲಿ ಪ್ರೌಢಶಿಕ್ಷಣ ಕಲಿತು, ಎಸ್​ಡಿಎಂ ಕಾಲೇಜಿನಲ್ಲಿ ವಿಜ್ಞಾನ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದರು. ಬಿಎಡ್​ನಲ್ಲಿ ಮಂಗಳೂರು ವಿವಿಯಿಂದ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ನಡ ಸರ್ಕಾರಿ ಪ್ರೌಢಶಾಲೆಯಲ್ಲಿ 1996ರಲ್ಲಿ ವೃತ್ತಿ ಜೀವನದಲ್ಲಿ ಆರಂಭಿಸಿದ ಯಾಕೂಬ್, ಗಣಿತದ ಕ್ಲಿಷ್ಟ ವಿಷಯವನ್ನು ಸ್ಪಷ್ಟವಾಗಿ ಮಕ್ಕಳಿಗೆ ಅರ್ಥೈಸಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಅದನ್ನು ಪ್ರೀತಿಸುವಂತೆ ಮಾಡಿದ್ದಾರೆ. ರಾತ್ರಿ ಶಾಲೆ, ರಜಾದಿನಗಳಲ್ಲಿ ಶಾಲೆ ನಡೆಸಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಡವನ್ನು ಮುಂಚೂಣಿಯಲ್ಲಿ ಬರುವಂತೆ ಮಾಡಿದವರಲ್ಲಿ ಇವರೂ ಒಬ್ಬರು. ಆದರೆ ಇವರು ಸುದ್ದಿಯಾದದ್ದು ಅಪೂರ್ವ ಎನಿಸಿದ ಗಣಿತ ಪ್ರಯೋಗಶಾಲೆಯ ರಚನೆಗೆ ಸಂಬಂಧಿಸಿ. ಗಣಿತವನ್ನು ಆಟಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವಂತೆ ಮಾಡಬೇಕೆಂಬುದೇ ಅವರ ಉದ್ದೇಶ. ಅದಕ್ಕಾಗಿ ಬೋಧನೆಯಲ್ಲಿ ವಿವಿಧತೆ ತರಲು ನಿರಂತರ ಪ್ರಯತ್ನ ನಡೆಸಿದ್ದಾರೆ.
ಗಣಿತ ನೋಟ್ಸ್, ಅನೇಕ ಮಾದರಿ ಪ್ರಶ್ನೆಪತ್ರಿಕೆಗಳು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಸಿಂಗ್ ಪ್ಯಾಕೇಜ್​ಗಳನ್ನು ಒಳಗೊಂಡ ಸಾವಿರಾರು ಪುಟಗಳ ಸಾಮಗ್ರಿಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ರಾಜ್ಯದ ಎಲ್ಲ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದ್ದಾರೆ. ತಂತ್ರಜ್ಞಾನ ಬಳಸಿ ರಚಿಸಿದ ಪಠ್ಯಾಧಾರಿತ ಕ್ವಿಜ್, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಿಂದ ಮೆಚ್ಚುಗೆ ಪಡೆದಿದೆ. ಗಣಿತಕ್ಕೆ ಸಂಬಂಧಿಸಿದ ಮುನ್ನೂರಕ್ಕೂ ಅಧಿಕ ವಿಡಿಯೋಗಳು
ಯೂಟ್ಯೂಬ್​ನಲ್ಲಿ ಲಭ್ಯವಿದ್ದು ಲಕ್ಷಾಂತರ ವಿದ್ಯಾರ್ಥಿಗಳು ಅದರ ಲಾಭ ಪಡೆದಿದ್ದಾರೆ. 2003ರಲ್ಲಿ ಇಲಾಖೆಯ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2016ರಲ್ಲಿ ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ಎ.ಶಾಮರಾವ್ ಉತ್ತಮ ಶಿಕ್ಷಕ ಪ್ರಶಸ್ತಿ, 2017ರಲ್ಲಿ ಯೇನೆಪೋಯ ಉತ್ತಮ ಶಿಕ್ಷಕ, ಪ್ರಶಸ್ತಿ, 2018ರಲ್ಲಿ ದ.ಕ. ಜಿಲ್ಲಾ ಹಾಜಿ ಬಿ.ಎ.ಮೊಯಿದ್ದೀನ್ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಯಾಕೂಬ್ ಸಾಧನೆ ಗುರುತಿಸಿದ ರಾಜ್ಯ ಸರ್ಕಾರ 2018-19ನೇ ಸಾಲಿನ ರಾಜ್ಯದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
