ಮುಂಬರುವ ವಿಧಾನಸಭಾ ಚುನಾವಣೆಗೆ ಯಾದಗಿರಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಿವೆ. ಹಿರಿಯ ಕಾಂಗ್ರೆಸ್ಸಿಗ, ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ, ವರ್ಣರಂಜಿತ ರಾಜಕಾರಣಿ ಎಂಎಲ್ಸಿ ಬಾಬುರಾವ್ ಚಿಂಚನಸೂರ್, ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ಅವರಂಥ ಘಟಾನುಘಟಿ ನಾಯಕರಿಗೆ ರಾಜಕೀಯ ಜನ್ಮ ನೀಡಿದ ಜಿಲ್ಲೆ ಇದಾಗಿದೆ. 2018ರ ಚುನಾವಣೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಸುರಪುರ, ಯಾದಗಿರಿ ಬಿಜೆಪಿ ವಶವಾದರೆ, ಶಹಾಪುರ ಕಾಂಗ್ರೆಸ್ ಹಾಗೂ ಗುರುಮಠಕಲ್​ನಲ್ಲಿ ಜೆಡಿಎಸ್ ಗೆದ್ದಿವೆ. ಸದ್ಯ ಗುರುಮಠಕಲ್ ಬಿಟ್ಟರೆ ಉಳಿದೆಡೆ ಬಿಜೆಪಿ-ಕಾಂಗ್ರೆಸ್ ಟಕ್ಕರ್ ಇದೆ. ಚುನಾವಣೆಯತ್ತ ಚಿತ್ತ ಹರಿಸಿರುವ ಹಾಲಿ ಶಾಸಕರು, ಆಕಾಂಕ್ಷಿಗಳು ಕ್ಷೇತ್ರ ಪರ್ಯಟನೆಗೆ ಸೈ ಎಂದಿದ್ದಾರೆ. ಶಾಸಕರಿಗೆ ಅವರವರ ಪಕ್ಷದ ಟಿಕೆಟ್ ಪಕ್ಕಾ. ಆದರೆ ಎದುರಾಳಿಗಳು ಯಾರೆಂಬುದು ಖಚಿತತೆ ಇಲ್ಲ. ಹೀಗಾಗಿ ಪ್ರಬಲ ಆಕಾಂಕ್ಷಿಗಳಿಂದ ಟಿಕೆಟ್ ಪಡೆಯುವ ಲಾಬಿ ಶುರುವಾಗಿದೆ. ಒಣಪ್ರತಿಷ್ಠೆ, ವ್ಯಕ್ತಿಪೂಜೆ ಬಿಜೆಪಿ-ಕಾಂಗ್ರೆಸ್​ನಲ್ಲಿ ಮುಂದುವರಿದ ಕಾರಣ ಉಭಯ ಪಕ್ಷಗಳ ನಿಷ್ಠ ಕಾರ್ಯಕರ್ತರಲ್ಲಿ ಅಸಮಾಧಾನದ ಬೇಗುದಿ ಇದೆ. ಕೈ ಪಡೆಯಲ್ಲಿ ನಾಯಕತ್ವದ ಕೊರತೆಯಿಂದ ಗೊಂದಲ ಎದ್ದಿವೆ. ಜೆಡಿಎಸ್​ಗೆ ಗುರುಮಠಕಲ್ ಮಾತ್ರ ಆಶಾಕಿರಣವಾಗಿದೆ.
|ಲಕ್ಷ್ಮಿಕಾಂತ್ ಕುಲಕರ್ಣಿಯಾದಗಿರಿ
ಗುರುಮಠಕಲ್​ನಲ್ಲಿ ಕಂದಕೂರ ಹವಾ:ತೆಲಂಗಾಣದ ಗಡಿಗೆ ಅಂಟಿಕೊಂಡ ಗುರುಮಠಕಲ್ ಕ್ಷೇತ್ರ 40 ವರ್ಷದಿಂದ ಕಾಂಗ್ರೆಸ್ ವಶದಲ್ಲಿತ್ತು. 2018ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಜಯ ದಾಖಲಿಸಿ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿದೆ. ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಜೀವನ ಉಜ್ವಲಗೊಳಿಸುವ ಜತೆಗೆ ದೆಹಲಿ ನಾಯಕತ್ವದ ಹಾದಿ ತೋರಿಸಿದ್ದೇ ಈ ಕ್ಷೇತ್ರ. ಹಾಲಿ ಶಾಸಕ ನಾಗನಗೌಡ ಕಂದಕೂರ ಅಥವಾ ಅವರ ಪುತ್ರ ಶರಣಗೌಡ ಕಂದಕೂರ ಜೆಡಿಎಸ್​ನಿಂದ ಸ್ಪರ್ಧಿಸುವುದು ನಿಶ್ಚಿತ. ಕೋಲಿ ಸಮಾಜದ ಮತ ನಿರ್ಣಾಯಕವಾಗಿರುವ ಕಾರಣ ಬಿಜೆಪಿಯಿಂದ ಹಾಲಿ ಎಂಎಲ್ಸಿ ಬಾಬುರಾವ್ ಚಿಂಚನಸೂರ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ ಟಿಕೆಟ್ ನನಗೆ ಪಕ್ಕಾ ಎಂದು ಚಿಂಚನಸೂರ್ ಖುದ್ದು ಹೇಳಿಕೆ ನೀಡಿದ್ದಾರೆ. ಅದೇ ಸಮುದಾಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿರುವ ಅರುಣ್​ಕುಮಾರ್ ಸಹ ಸ್ಪರ್ಧೆಗೆ ಮುಂದಾಗಿದ್ದಾರೆ. ಪ್ರಮುಖರಾದ ನಾಗರತ್ನ ಕುಪ್ಪಿ, ಸಾಯಿಬಣ್ಣ ಬೋರಬಂಡ ಸಹ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್​ನಿಂದ ಶರಣಪ್ಪ ಮಾನೇಗಾರ, ಬಸರಡ್ಡಿ ಅನಪುರ, ಶರಣಿಕಕುಮಾರ ದೋಕಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಮುದ್ನಾಳ್​ಗೆ ಮಾಲಕರಡ್ಡಿ ಕೊಡುವರೇ ಟಕ್ಕರ್!:ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಮತ್ತೆ ಬಿಜೆಪಿ ಅಭ್ಯರ್ಥಿ ಆಗುವುದು ಫಿಕ್ಸ್. ನೇರ ಮಾತುಗಳಿಂದಲೇ ಜನರಿಗೆ ಹತ್ತಿರ ಆಗಿದ್ದು, ಸರಳ ವ್ಯಕ್ತಿತ್ವ ಇವರಿಗೆ ಪ್ಲಸ್. ಹೀಗಾಗಿ ಮುದ್ನಾಳ್​ಗೆ ಟಕ್ಕರ್ ಕೊಡುವುದು ಕಾಂಗ್ರೆಸ್​ಗೆ ಸವಾಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಚಂದ್ರಶೇಖರಗೌಡ ಮಾಗನೂರ, ವೆಂಕಟರಡ್ಡಿ ಅಬ್ಬೆತುಮಕೂರು, ಇತರರು ಆಕಾಂಕ್ಷಿ ಗಳಾಗಿದ್ದಾರೆ. 2019ರಲ್ಲಿ ಕಾಂಗ್ರೆಸ್​ನಿಂದ ಡಾ. ಎ.ಬಿ.ಮಾಲಕರಡ್ಡಿ ಬಿಜೆಪಿ ಸೇರಿದ ಬಳಿಕ ಕೈ ಪಕ್ಷ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಒಣ ಪ್ರತಿಷ್ಠೆ ಹೆಚ್ಚಾದ ಕಾರಣ ಸಮರ್ಥ ನಾಯಕರಿಲ್ಲ. ಹೀಗಾಗಿ ಹೊರಗಿನ ಹಲವರು ಕ್ಷೇತ್ರದ ಮೇಲೆ ಕಣ್ಣಿಟ್ಟರೆ, ಡಾ.ಮಾಲಕರಡ್ಡಿ ಮತ್ತೊಮ್ಮೆ ಕಾಂಗ್ರೆಸ್ ಸೇರುವ ಚಿಂತನೆಯಲ್ಲಿದ್ದಾರೆ ಎಂಬ ಚರ್ಚೆ ನಡೆದಿರುವುದು ಗಮನಾರ್ಹ. ಖ್ಯಾತ ವೈದ್ಯ ಡಾ.ಶರಣಬಸವಪ್ಪ ಕಾಮರಡ್ಡಿ ಬಂಡೆಬೆಂಬಳಿ ಎರಡು ವರ್ಷದಿಂದ ಕೈ ಟಿಕೆಟ್ ಮೇಲೆ ಕಣ್ಣಿಟ್ಟು ನಾನಾ ಕೆಲಸಗಳಲ್ಲಿ ತೊಡಗಿದ್ದಾರೆ. ಜೆಡಿಎಸ್​ನಲ್ಲಿದ್ದ ಹನಮೇಗೌಡ ಬೀರನಕಲ್ ಆಪ್ ಪಕ್ಷ ಸೇರುವ ಚಿಂತನೆಯಲ್ಲಿದ್ದಾರೆ.
ಸುರಪುರದಲ್ಲಿ ನಾಯಕರ ಕುಸ್ತಿ:ದೊರೆಗಳ ನಾಡೆನಿಸಿದ ಸುರಪುರ ಕ್ಷೇತ್ರ(ಎಸ್​ಟಿ ಮೀಸಲು)ದಿಂದ ಹಾಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಬಿಜೆಪಿಯಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ. ಸುರಪುರ ಅತೀ ಸೂಕ್ಷ್ಮ ಕ್ಷೇತ್ರವಾಗಿದೆ. ಅಭಿವೃದ್ಧಿ ಕಾಮಗಾರಿಗಳ ಮೂಲಕ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ್ದು, ಚುನಾವಣೆ ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಓಡಾಟ ಹೆಚ್ಚು ಮಾಡಿದ್ದಾರೆ. ಇವರ ರೇಸ್​ಗೆ ಬ್ರೇಕ್ ಹಾಕಲು ಕೈ ಪಾಳಯವು ಇನ್ನಿಲ್ಲದ ಕಸರತ್ತು ಆರಂಭಿಸಿದೆ. 4 ಸಲ ಶಾಸಕ, ಒಮ್ಮೆ ಸಂಸದರಾಗಿ ಅನುಭವ ಹೊಂದಿರುವ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್​ನಿಂದ ಕಣಕ್ಕಿಳಿಯುವುದು ಬಹುತೇಕ ಖಚಿತ. ಕಳೆದ ಸಲದಂತೆಯೇ ಈಗಲೂ ನಾಯಕರ ನಡುವಿನ ಕುಸ್ತಿಗೆ ಅಖಾಡ ಸಜ್ಜಾಗುತ್ತಿದೆ.
ಶರಣನಿಗೆ ಜೈ ಅನ್ನುವರೋ ಗುರುವಿನ ಕೈಹಿಡಿಯುವರೋ?:ಶಹಾಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತೆ ಕಾಂಗ್ರೆಸ್​ನಿಂದ ಸ್ಪರ್ಧೆಗಿಳಿಯುವುದು ಪಕ್ಕಾ. ಪಕ್ಷ ಅಧಿಕಾರದಲ್ಲಿ ಇರದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಕಾರಣಕ್ಕೆ ಜನರ ಒಲವು ಇವರ ಪರ ಇದೆ. ಇದು ಕ್ಷೇತ್ರ ಕೈವಶ ಮಾಡಿಕೊಳ್ಳುವ ತವಕದಲ್ಲಿರುವ ಬಿಜೆಪಿಗೆ ಬಿಗ್ ಚಾಲೆಂಜ್ ಎನಿಸಿದೆ. ಕಮಲ ಪಡೆ ಈ ಕ್ಷೇತ್ರದಲ್ಲಿ ಗೆಲ್ಲಲು ಎಲ್ಲಿಲ್ಲದ ಪ್ಲ್ಯಾನ್ ಮಾಡುತ್ತಿದೆೆ. ಹೀಗಾಗಿ ದರ್ಶನಾಪುರಗೆ ಬಿಗ್​ಫೈಟ್ ನೀಡುವವರ ಶೋಧ ನಡೆದಿದೆ. ಮಾಜಿ ಶಾಸಕ ಗುರು ಪಾಟೀಲ್ ಮತ್ತೊಮ್ಮೆ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗಿಳಿಯಬಹುದು ಎನ್ನಲಾಗುತ್ತಿದೆ. ಆದರೆ ಕ್ಷೇತ್ರದ ಜನ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಒಡನಾಟ ಕಡಿಮೆ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರು ಪಾಟೀಲ್ ಗುರಿಯಾಗಿದ್ದಾರೆ. ಜೆಡಿಎಸ್​ನಿಂದ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಅಮೀನರಡ್ಡಿ ಯಾಳಗಿ ಇತರರು ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + thirteen =
Remember me
