ಕಾರವಾರ: ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು (80) ಇನ್ನಿಲ್ಲ. ಅವರು ಲಿವರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಕೆಲ ದಿನಗಳಿಂದ ತಮ್ಮ ಆಪ್ತ ಸೋಂದಾ ಹಳೆಯೂರಿನ ಶ್ರೀಪಾದ ಜೋಶಿ ಅವರ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ವಿಧಿವಶರಾದರು. ಯಕ್ಷಗಾನ ಕೃತಿರಚನೆ, ಅಧ್ಯಯನ, ಅಧ್ಯಾಪನ, ಭಾಗವತಿಕೆ, ನೃತ್ಯ ಹೀಗೆ ಕಲೆಗಾಗಿಯೇ ಇಡೀ ಜೀವನ ಮುಡಿಪಾಗಿರಿಸಿದ್ದ ಮಂಜುನಾಥ ಭಾಗವತರು ಕೆಲ ವರ್ಷಗಳಿಂದ ಅಂಕೋಲಾ ತಾಲೂಕಿನ ಅಚವೆ ಸಮೀಪದ ಮೋತಿಗುಡ್ಡ ಎಂಬಲ್ಲಿ ಕುಟೀರವೊಂದನ್ನು ಕಟ್ಟಿಕೊಂಡು ಋಷಿಯಂತೆ ಬದುಕುತ್ತಿದ್ದರು. ಅವರಿಗೆ ಇಬ್ಬರು ಸಹೋದರರು, ಸಹೋದರಿ, ಅಪಾರ ಶಿಷ್ಯವೃಂದ, ಅಭಿಮಾನಿಗಳು ಇದ್ದಾರೆೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹನುಮಂತಿ ಸಮೀಪದ ಹೊಸ್ತೋಟದ ಬಡ ಕುಟುಂಬದಲ್ಲಿ 1940 ರ ಫೆ. 15 ರಂದು ಜನಿಸಿದ್ದ ಮಂಜುನಾಥ ಭಟ್ಟ ಅವರ ತಂದೆ ಗಣಪತಿ ಭಟ್ಟ , ತಾಯಿ ಮಹಾದೇವಿ. ಯಕ್ಷಗಾನದಿಂದಾಗಿ ಅವರ ಹೆಸರಿನ ಜತೆ ಭಾಗವತ ಸೇರಿಕೊಂಡಿತು. ಕಲಿತಿದ್ದು ಕೇವಲ 4 ನೇ ತರಗತಿ. ಆದರೆ, ಸ್ವತಃ ಕಲಿತಿದ್ದು ಬೆಟ್ಟದಷ್ಟು. 300 ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. 75 ಸ್ಥಳಗಳಲ್ಲಿ ನೂರಾರು ಶಿಬಿರಗಳನ್ನು ಆಯೋಜಿಸಿ 1300 ಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನದ ಹೆಜ್ಜೆ, ತಾಳ ಕಲಿಸಿದ್ದಾರೆ. ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿರುವ ಅದೆಷ್ಟೋ ಕಲಾವಿದರು ಅವರ ಶಿಷ್ಯರು. 1990ರಲ್ಲಿ ಶಿವಮೊಗ್ಗದ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿದ ಕೀರ್ತಿ ಅವರದ್ದು. ಅಂಧರ ತಂಡ ಕಂಸವಧೆ ಪ್ರಸಂಗವನ್ನು 200ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶಿಸಿದೆ. ಹೆಣ್ಣು ಮಕ್ಕಳಿಗೆ ಯಕ್ಷ ಹೆಜ್ಜೆ ಹಾಕುವುದನ್ನು ಅವರು ಹೇಳಿಕೊಟ್ಟರು.
ಎಲ್ಲವನ್ನೂ ಬಲ್ಲ ಪರಿಣತರು: ಯಕ್ಷಗಾನದ ಎಲ್ಲ ಅಂಗಗಳಲ್ಲೂ ಮಂಜುನಾಥರು ಪರಿಣಿತರು. ಯಕ್ಷಗಾನ ಕೃತಿ ರಚನೆ, ಭಾಗವತಿಕೆ, ಅರ್ಥಧಾರಿಕೆ, ನೃತ್ಯ, ಚಂಡೆ, ಮದ್ದಳೆ ಎಲ್ಲವನ್ನೂ ಕರಗತ ಮಾಡಿಕೊಂಡ ಸವ್ಯಸಾಚಿ. ಅಕ್ಷರಶಃ ಯಕ್ಷ ಭೀಷ್ಮ. ಕೆರೆಮನೆ ಶಿವರಾಮ ಹೆಗಡೆ ಅವರ ಅಭಿಮಾನಿಯಾಗಿದ್ದ ಅವರು ಬಾಲ್ಯದಿಂದ ಅವರ ಗರಡಿಯಲ್ಲೇ ಬೆಳೆದರು. ಕೆರೆಮನೆ ಮೇಳದ ಭಾಗವಾಗಿ ಮಹಾಬಲ ಹೆಗಡೆ, ಶಿವರಾಮ ಹೆಗಡೆ ಅವರೊಂದಿಗೆ ಸಾಕಷ್ಟು ಪ್ರಸಿದ್ಧ ಪ್ರಸಂಗಗಳನ್ನು ನೀಡಿದರು. ಗಣಿತ ಸೂತ್ರಗಳನ್ನು ಯಕ್ಷಗಾನಕ್ಕೆ ಅಳವಡಿಸಿ ಕಲಿಸಿದರೆ ಯಾವ ಕಾಲಕ್ಕೂ ತಾಳ ತಪ್ಪುವುದಿಲ್ಲ ಎಂಬುದು ಭಾಗವತರ ಸಂಶೋಧನೆ. ಈ ಸಂಬಂಧ ಪುಸ್ತಕವನ್ನೂ ಬರೆದಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಮಟ್ಟುಗಳ ಅಧ್ಯಯನ ಮಾಡಿದರು. ವಿಶೇಷವಾಗಿ ಕನ್ನಡ ಸಾಹಿತ್ಯ ಹಾಗೂ ಛಂದಸ್ಸುಗಳನ್ನು ಅಭ್ಯಸಿಸಿದ್ದರು. ಕೆಳದಿ ವಸ್ತು ಸಂಗ್ರಹಾಲಯಕ್ಕೆ ತೆರಳಿ ತಾಳೆ ಗರಿಯಲ್ಲಿನ ಯಕ್ಷಗಾನ ಪ್ರಸಂಗಗಳ ಅಧ್ಯಯನ ನಡೆಸಿದ್ದರು.
ಯಕ್ಷಗಾನದಲ್ಲಿ ಅಧ್ಯಾತ್ಮ ಕಂಡರು
ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬ ಋಷಿಯಾದ ಅಪರೂಪದ ಕಥೆ ಮಂಜುನಾಥ ಭಾಗವತರದ್ದು. ಅವರೂ ಮಹಾಭಾರತದ ಭೀಷ್ಮನಂತೆ ಅವಿವಾಹಿತರು. ಅಧ್ಯಾತ್ಮದತ್ತ ಮುಖ ಮಾಡಿದರು. ಕಾರವಾರದ ರಾಮಕೃಷ್ಣಾಶ್ರಮಕ್ಕೆ ತೆರಳಿ ‘ಅಭಯ ಚೈತನ್ಯ’ ಎಂಬ ನಾಮಾಂಕಿತದೊಂದಿಗೆ ಪರಿವ್ರಾಜಕತ್ವ ಸ್ವೀಕರಿಸಿದರು. ನಂತರ ಯಕ್ಷಗಾನವೇ ಅಧ್ಯಾತ್ಮ ಕಾಣುವ ಕ್ಷೇತ್ರವೆಂದು ಆಯ್ದುಕೊಂಡರು. ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಾಗಿ ಯಕ್ಷಗಾನದ ಸರ್ವಾಂಗವನ್ನು ಕಲಿತರು.
ಅಭಿಮಾನಿಗಳೇ ನೋಡಿಕೊಂಡರು
ಯಕ್ಷಗಾನವೇ ಭಾಗವತರ ಕುಟುಂಬ ವಾಗಿತ್ತು. ಅವರ ಕಡೆಯ ಕಾಲದಲ್ಲಿ ಯಕ್ಷಗಾನ ಕುಟುಂಬವೇ ಅವರನ್ನು ಕಾಳಜಿಯಿಂದ ನೋಡಿಕೊಂಡಿದೆ. ಉಡುಪಿಯಲ್ಲಿ ಯಕ್ಷಗಾನ ಕಲಾ ರಂಗದ ಮುರಳಿ ಕಡೆಕಾರ್ ಚಿಕಿತ್ಸೆ ಕೊಡಿಸಿದ್ದಾರೆ. ಸುಬ್ರಾಯ ಹೆಗಡೆ ಕೆರೆಕೊಪ್ಪ ತಮ್ಮ ಮನೆಯಲ್ಲಿ ಇಟ್ಟುಕೊಂಡು ಆರೈಕೆ ಮಾಡಿದ್ದಾರೆ. ರೋಟರಿ ಆಸ್ಪತ್ರೆಯಲ್ಲಿ ಇದ್ದಾಗ ರಾಮಕೃಷ್ಣಾಶ್ರಮದ ಶಿಷ್ಯರು, ಅವರ ಅಭಿಮಾನಿಗಳು ಕಾಳಜಿ ವಹಿಸಿದರು. ಕೊನೆಯ ದಿನಗಳಲ್ಲಿ ಭಾಗವತರನ್ನು ಸೋಂದಾ ಬಾಡಲಕೊಪ್ಪದ ಶ್ರೀಪಾದ ಜೋಶಿ ಶುಶ್ರೂಷೆ ಮಾಡಿದರು.
ಭಾಗವತರ ಹೆಸರಲ್ಲಿ ಟ್ರಸ್ಟ್ ರಚನೆ
ಹೊಸ್ತೋಟ ಮಂಜುನಾಥ ಭಾಗವತರ ಕೊನೆಯ ಆಸೆಯಂತೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅವರ ಹೆಸರಿನಲ್ಲಿ ಟ್ರಸ್ಟ್ ನೋಂದಣಿ ಮಾಡಲಾಗಿದೆ. ಭಾಗವತರು ಬರೆದ ಪ್ರಸಂಗಗಳ ಮುದ್ರಣ, ಧ್ವನಿಮುದ್ರಣ ಮುಂತಾದ ಕಾರ್ಯಗಳನ್ನು ಟ್ರಸ್ಟ್ ಮಾಡಲಿದೆ.
ಬಿರುದು, ಸಮ್ಮಾನ
ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ (2016), ಕನ್ನಡ ರಾಜ್ಯೋತ್ಸವ ಪ್ರಶಸ್ತಿ(1987), ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ (2012), ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ(2012), ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ (2014) ಸೇರಿ ಹಲವು ಸನ್ಮಾನಗಳು ಅವರನ್ನು ಅರಸಿ ಬಂದಿವೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದರು. ಹಲವು ಯಕ್ಷಗಾನ ಸಪ್ತಾಹಗಳನ್ನು ನಿರ್ದೇಶಿಸಿದ್ದಾರೆ. ಅವರ ಕುರಿತು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಿಂದ ಅಭಿನಂದನಾ ಸಮಿತಿ ರಚಿಸಿ, ಯಕ್ಷ ಋಷಿ ಎಂಬ ಅಭಿನಂದನಾ ಗ್ರಂಥ ಹೊರ ತರಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
