ಬೆಂಗಳೂರು:ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಚ್ಚಿನ ಮಾತು ವಿಧಾನಮಂಡಲದ ಉಭಯ ಸದನಗಳ ಒಂದು ದಿನ ಕಾರ್ಯಕಲಾಪವನ್ನು ಆಪೋಶನ ಪಡೆದುಕೊಂಡಿದೆ.
ಹಿರಿಯರಾದ ದೊರೆಸ್ವಾಮಿ ವಿರುದ್ಧ ಯತ್ನಾಳ್ ಮಾಡಿರುವ ಟೀಕೆ ವಿಚಾರ ಮುಂದಿಟ್ಟುಕೊಂಡು, ಸ್ವಾತಂತ್ರ್ಯ ಹೋರಾಟಗಾರರನ್ನು ಬಿಜೆಪಿ ಅವಮಾನಿಸುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ವಿಧಾನಸಭೆ ಹಾಗೂ ವಿಧಾನಪರಿಷತ್​ನಲ್ಲಿ ಧರಣಿ ನಡೆಸಿದವು. ಹೀಗಾಗಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಅಂಗೀಕಾರ ಮತ್ತು ಮುಖ್ಯಮಂತ್ರಿಯವರ ಉತ್ತರ ಗದ್ದಲದಲ್ಲೇ ಮುಗಿದುಹೋಯಿತು. ಜತೆಗೆ ಎಂಟು ವಿಧೇಯಕಗಳ ಮಂಡನೆಯೂ ಆಗಿಹೋಯಿತು.
ವಿಧಾನಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ತಿನಲ್ಲಿ ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿ ಸುಗಮ ಕಲಾಪ ನಡೆಸಲು ಮಾಡಿದ ಪರಿಪರಿಯ ಪ್ರಯತ್ನ ಫಲಕಾರಿಯಾಗಲಿಲ್ಲ, ಎರಡೆರಡು ಬಾರಿ ಕಲಾಪ ಮುಂದೂಡಿದರೂ ಪರಿಸ್ಥಿತಿ ತಿಳಿಯಾಗಲಿಲ್ಲ. ಸ್ಪೀಕರ್ ಕೊಠಡಿಯಲ್ಲಿ ಕರೆದ ಸಭಾ ನಾಯಕರ ಸಭೆ ಕೂಡ ಫಲಕಾರಿಯಾಗಲಿಲ್ಲ.
ಈ ನಡುವೆ ವಿಧಾನಸಭೆಯಲ್ಲಿ ಬೆಳಗ್ಗೆ ಸಂತಾಪ ಸೂಚಕ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಾರ್ವಜನಿಕ ಮಹತ್ವದ ವಿಚಾರವೊಂದಿದ್ದು ಅದನ್ನು ಪ್ರಸ್ತಾಪಿಸಲು ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು. ನಿಯಮಾವಳಿ ಪ್ರಕಾರ ನೋಟಿಸ್ ನೀಡಿ ವಿಷಯ ಪ್ರಸ್ತಾಪಿಸಿ ಎಂದು ಸ್ಪೀಕರ್ ಸೂಚಿಸಿದರು.
ಜತೆಗೆ ಕಾರ್ಯಕಲಾಪಗಳ ಪಟ್ಟಿ ಪ್ರಕಾರ ನಿಗದಿಯಾಗಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು.
ಒಂದೆಡೆ ಸ್ಪೀಕರ್ ಆಸನದ ಮುಂಭಾಗ ನಿಂತಿದ್ದ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿ ವಿರುದ್ಧ ಘೋಷಣೆ ಹಾಕುತ್ತಲೇ ಇದ್ದರು. ಇತ್ತ ಬಿಎಸ್​ವೈ ಜಗ್ಗದೇ ಭಾಷಣ ಓದಿ ಮುಗಿಸಿದರು. ನಂತರ ವಂದನಾ ನಿರ್ಣಯ ಅಂಗೀಕರಿಸುವ ಪ್ರಸ್ತಾಪ ಮಾಡಿದರು. ಸ್ಪೀಕರ್ ಕೂಡ ಸದನದ ಒಪ್ಪಿಗೆ ಪಡೆದಿರುವುದಾಗಿ ಘೋಷಿಸಿದರು. ಕಾಂಗ್ರೆಸ್ ಸದಸ್ಯರು ಮಾತ್ರ ಘೋಷಣೆ ಹಾಕುತ್ತಲೇ ಇದ್ದರು. ಯಾವುದೇ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲು ನಿಯಮಾವಳಿ ಪ್ರಕಾರ ನೋಟಿಸ್ ಕೊಡಬೇಕು. ಏಕಾಏಕಿ ಒಂದು ವಿಚಾರ ಮಾತನಾಡುತ್ತೇನೆಂದು ಮುಂದಾಗುವುದು ಶೋಭೆ ತರಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಪಕ್ಷ ನಾಯಕರನ್ನು ಕುಟುಕಿದರು.
ಸಚಿವ ಸಿ.ಟಿ.ರವಿ ಮತ್ತು ಕೆಲವು ಆಡಳಿತ ಪಕ್ಷದ ಸದಸ್ಯರು, ವೀರ ಸಾವರ್ಕರ್​ಗೆ ನೀವು ಏನು ಬೇಕಾದರೂ ಹೇಳಬಹುದೇ ಎಂದು ಪ್ರತಿಪಕ್ಷವನ್ನು ಪ್ರಶ್ನಿಸಿದರು. ದರೆ, ಸದನದ ಹೊರಗೆ ಆಡಿರುವ ಮಾತಿನ ಬಗ್ಗೆ ಇಲ್ಲಿ ತುರ್ತು ಚರ್ಚೆ ಮಾಡುವ ಅಗತ್ಯವೇನಿದೆ ಎಂದರು. ಈ ನಡುವೆ, ಸದನಕ್ಕೆ ಅಗೌರವ ತೋರುವ ಸದಸ್ಯರನ್ನು ಅಮಾನತು ಮಾಡಬೇಕೆಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿತ್ತು.
ಆ ತೀರ್ಪನ್ನು ಆಧಾರವಾಗಿಟ್ಟುಕೊಂಡು ಯತ್ನಾಳ್​ರನ್ನು ಅಮಾನತು ಮಾಡುವಂತೆ ಸಭಾಧ್ಯಕ್ಷರಲ್ಲಿ ಒತ್ತಾಯ ಮಾಡಿದ್ದೇವೆ. ನಮಗೆ ಮಾತನಾಡಲು ಅವಕಾಶವನ್ನೇ ನೀಡದಿರುವ ಸಭಾಧ್ಯಕ್ಷರ ವರ್ತನೆ ಸರಿ ಅಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಬಸನಗೌಡ ಪಾಟೀಲ್ ಯತ್ನಾಳ್ ಬೆನ್ನಿಗೆ ನಿಂತ ಬಿಜೆಪಿ
ಆಡಳಿತ ಪಕ್ಷದ ಹಲವು ಸಚಿವರು ಮತ್ತು ಶಾಸಕರು ಯತ್ನಾಳ್ ಬೆನ್ನಿಗೆ ನಿಂತಿದ್ದು, ಅವರು ಹೇಳಿದ್ದರಲ್ಲಿ ತಪ್ಪಿಲ್ಲ ಎಂದು ದನಿಗೂಡಿಸಿದ್ದಾರೆ. ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಎಚ್.ಎಸ್.ದೊರೆಸ್ವಾಮಿ ಬಗ್ಗೆ ನೀಡಿರುವ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಖಚಿತ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ದೊರೆಸ್ವಾಮಿ ಹೋರಾಟದ ಬಗ್ಗೆ ತನಿಖೆಯಾಗಲಿ. ಅವರು ಬ್ರಿಟಿಷ್ ಲಾಠಿಯ ಬೂಟಿನ ಏಟು ತಿಂದಿದ್ದಾರೆಯೇ? ಕಾಲಾಪಾನಿ ಶಿಕ್ಷೆ ಎಷ್ಟು ಬಾರಿ ಅನುಭವಿಸಿದ್ದಾರೆ? ಎಷ್ಟು ಸಲ ಜೈಲಿಗೆ ಹೋಗಿ ಬಂದಿದ್ದಾರೆ? ಎಂಬುದು ಗೊತ್ತಾಗಲಿ ಎಂದರು. ಈ ನಡುವೆ ಉಭಯ ಸದನಗಳಲ್ಲಿ ಪ್ರತಿಪಕ್ಷ ಸದಸ್ಯರು ಯತ್ನಾಳ್ ವಿರುದ್ಧ ಪ್ರತಿಭಟಿಸುತ್ತಿರುವುದು ಬಿಜೆಪಿಯನ್ನು ಅಡಕತ್ತರಿಗೆ ಸಿಲುಕಿಸಿದೆ.
ಚಂದನದಲ್ಲಿ ಸ್ಪೀಕರ್ ಭಜನೆ!
ಕಲಾಪದ ವರದಿಗೆ ಸರ್ಕಾರಿ ಚಾನಲ್ ಚಂದನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರದ ಋಣದಲ್ಲಿರುವ ಆ ಚಾನಲ್ ವಿರೋಧ ಪಕ್ಷಗಳ ಸದಸ್ಯರ ಮುಖಗಳನ್ನು ಮರೆಮಾಚಿ, ಕೇವಲ ಸಭಾಧ್ಯಕ್ಷರ ಮುಖಾರವಿಂದ ತೋರಿಸಿ ಭಜನೆ ಮಾಡುತ್ತಿರುವುದು ವಿಷಾದನೀಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಟಿವಿ ಚಾನಲ್ ಕ್ಯಾಮರಾಗಳಿಗೆ ಏಕಪಕ್ಷೀಯವಾಗಿ ನಿರ್ಬಂಧ ಹೇರಿರುವ ಸಭಾಧ್ಯಕ್ಷರ ಮಾಧ್ಯಮ ವಿರೋಧಿ ನಡವಳಿಕೆಯ ವಿರುದ್ಧ ಮಾಧ್ಯಮ ಮಿತ್ರರು ನಡೆಸುವ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ.
ನಾನು ಸಿಎಂ ಆಗಿದ್ದಾಗಲೂ ಮಾಧ್ಯಮ ಕ್ಯಾಮರಾಗಳನ್ನು ನಿರ್ಬಂಧಿಸುವಂತೆ ಕೆಲವರು ಒತ್ತಾಯಿಸಿದ್ದರು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ನಾನು ಒಪ್ಪಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಸದನದೊಳಗೆ ನಿಮ್ಮ ಸದಸ್ಯರು ನೀಲಿಚಿತ್ರ ನೋಡುತ್ತಾರೆಂಬ ಭಯ ಬಿಜೆಪಿಗೆ ಇದ್ದರೆ ಅವರಿಗೆ ಬುದ್ದಿ ಹೇಳಬೇಕೇ ಹೊರತು, ಮಾದ್ಯಮಗಳ ಕ್ಯಾಮರಾ ನಿರ್ಬಂಧಿಸುವುದಲ್ಲ ಎಂದಿದ್ದಾರೆ.
ಮೇಲ್ಮನೆಯಲ್ಲೂ ಮೇಲಾಟ
ದೊರೆಸ್ವಾಮಿ ಕುರಿತು ಯತ್ನಾಳ್ ನೀಡಿದ ಹೇಳಿಕೆ ಮೇಲ್ಮನೆಯಲ್ಲೂ ಪ್ರತಿಧ್ವನಿಸಿ, ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಸಭಾಪತಿ ಪೀಠದ ಮುಂದೆ ಪ್ರತಿಭಟನೆಗೆ ಇಳಿದ ಪ್ರತಿಪಕ್ಷಗಳು, ಮುಖ್ಯಮಂತ್ರಿ ಸದನಕ್ಕೆ ಬಂದು ಉತ್ತರಿಸಬೇಕು, ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.
ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಯತ್ನಾಳ್ ಹೇಳಿಕೆ ಸ್ವಾತಂತ್ರ್ಯ ಚಳವಳಿ, ದೇಶಕ್ಕೆ ಮಾಡಿದ ಅಪಮಾನ ಹಾಗೂ ಸಂವಿಧಾನಕ್ಕೆ ಚ್ಯುತಿಯಾಗಿದೆ ಎಂದು ಕಿಡಿಕಾರಿದರು. ಈ ಮಾತಿಗೆ ಸ್ವಪಕ್ಷ ಹಾಗೂ ಜೆಡಿಎಸ್ ಸದಸ್ಯರು ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಯಾವ ನಿಯಮದಡಿ ಈ ವಿಷಯ ಪ್ರಸ್ತಾಪಿಸಿ ಸಭಾಪತಿ ಅನುಮತಿ ಪಡೆಯಲಾಗಿದೆ ಎಂದು ಕೇಳಿದರು.
ಇದನ್ನು ಬೆಂಬಲಿಸಿ ಬಿಜೆಪಿ ಸದಸ್ಯರು ಮೊದಲಿಗೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆಡಳಿತ ಹಾಗೂ ಪ್ರತಿಪಕ್ಷಗಳ ಮಾತಿನ ಚಕಮಕಿ ಮಧ್ಯೆಯೇ ಬಿಜೆಪಿಯ ಹಲವರು, ಪಾಕಿಸ್ತಾನ ಜಿಂದಾಬಾದ್ ಎಂದ ಅಮೂಲ್ಯ ಜತೆಗೆ ದೊರೆಸ್ವಾಮಿ ಇದ್ದ ಫೋಟೋ ಪ್ರದರ್ಶಿಸಿದರು. ಮಾತಿನ ಕಲಹದ ಮಧ್ಯೆ ವಿರೋಧ ಪಕ್ಷಗಳನ್ನು ಕೋಟ ಶ್ರೀನಿವಾಸ ಪೂಜಾರಿ ಕೆಣಕಿದ ಪ್ರಸಂಗವೂ ನಡೆಯಿತು.
ಆಗ ನಿಯಮ ಎಲ್ಲಿತ್ತು?:ನಿಯಮದಂತೆ ನೋಟಿಸ್ ಕೊಟ್ಟು ಸಭಾಪತಿ ಅನುಮತಿ ಪಡೆಯಬೇಕೆಂದು ಕೋಟ ಹೇಳಿದಾಗ ಎಸ್.ಆರ್.ಪಾಟೀಲ್ ಕೆರಳಿ, ಹಿಂದೆ ಕೆ.ಎಸ್.ಈಶ್ವರಪ್ಪ ನಿಯಮದ ಬುಕ್ ಹರಿದು ಹಾಕಿ ಎಂದದ್ದು ನೆನಪಿಲ್ಲವೆ? ಎಂದು ಜರಿದರು. ಹಿರಿಯರ ಸದನವಿದು, ಕೆಟ್ಟ ಮೇಲ್ಪಂಕ್ತಿ ಹಾಕಬಾರದು ಎಂದ ಬಿಜೆಪಿಯ ಆಯನೂರು ಮಂಜುನಾಥ್, ಮೇಲ್ಮನೆ ಸದಸ್ಯರಲ್ಲದವರ ಬಗ್ಗೆ ಪ್ರಸ್ತಾಪ ಮಾಡುವುದು ಕ್ರಿಯಾಲೋಪವಾಗುತ್ತದೆ ಎಂದರು.
ಇದನ್ನು ಒಪ್ಪದ ಬಸವರಾಜ ಹೊರಟ್ಟಿ, ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದವರ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದು ಮಾತು ಮುಂದುವರಿಸಿದ್ದಾಗ ಸಭಾಪತಿ ಕಲಾಪ ಮುಂದಕ್ಕೆ ಹಾಕಿದರು. ಸಂಜೆ ಮತ್ತೆ ಸೇರಿದ 2 ನಿಮಿಷಗಳಲ್ಲೇ ಮಂಗಳವಾರಕ್ಕೆ ಮುಂದೂಡಿದರು.
ಸರ್ಕಾರ ಚರ್ಚೆಗೆ ಸಿದ್ಧವಿದೆ. ನಿಯಮದ ಪ್ರಕಾರ ಕಾಂಗ್ರೆಸ್ ನಡೆದುಕೊಳ್ಳುತ್ತಿಲ್ಲ. ಚರ್ಚೆ ಮಾಡಬೇಕಾದ ವಿಷಯವನ್ನು ಯಾವ ನಿಯಮದಡಿ ಚರ್ಚೆಗೆ ಅವಕಾಶಬೇಕೆಂದು ಸ್ಪೀಕರ್ ಬಳಿ ಕೇಳಲಿ.
| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿರುವುದು ಸಂವಿಧಾನ, ಸದನಕ್ಕೆ ಮಾಡಿರುವ ಅವಮಾನ. ಇಂತಹ ದೇಶದ್ರೋಹಿಗಳ ಜತೆ ಕಲಾಪದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ. ಅವರನ್ನು ಸಭಾಧ್ಯಕ್ಷರು ತಕ್ಷಣ ಅಮಾನತು ಮಾಡಬೇಕು.
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 11 =
Remember me
