ಬೆಂಗಳೂರು:ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್​ಗಳ ಪೈಕಿ ಒಂದೆನಿಸಿದ್ದ ಯೆಸ್ ಬ್ಯಾಂಕ್ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಾವಿರಾರು ಗ್ರಾಹಕರು ಶುಕ್ರವಾರ ಬೆಳಗ್ಗೆಯಿಂದಲೇ ಹಣ ಹಿಂಪಡೆಯಲು ಬ್ಯಾಂಕ್​ನ ಶಾಖೆಗಳ ಎದುರು ಸರದಿ ಸಾಲಿನಲ್ಲಿ ನಿಂತಿದ್ದರು.
ನಗರದಲ್ಲಿರುವ 38 ಶಾಖೆಗಳ ಎದುರು ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಕಂಡುಬಂದರು. ತಮ್ಮ ಠೇವಣಿಗಳ ಬಗ್ಗೆ ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಿಮ್ಮ ಹಣ ಭದ್ರವಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ಭರವಸೆ ನೀಡುತ್ತಿದ್ದರು. ಆದರೂ ನಂಬದ ಗ್ರಾಹಕರು ತಮ್ಮ ಹಣ ಹಿಂಪಡೆಯಲು ಮುಗಿಬೀಳುತ್ತಿದ್ದರು.
ಯೆಸ್ ಬ್ಯಾಂಕ್​ನಿಂದ ಠೇವಣಿದಾರರು ಗರಿಷ್ಠ 50 ಸಾವಿರ ರೂ. ಮಾತ್ರ ಹಿಂಪಡೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಮಿತಿ ಹೇರಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಹಿಂಪಡೆಯಲು ಸಾಧ್ಯವಾಗದೆ ಗ್ರಾಹಕರು ಕಂಗಾಲಾದರು. ಕಸ್ತೂರಬಾ ರಸ್ತೆಯಲ್ಲಿರುವ ಬ್ಯಾಂಕ್​ನ ಪ್ರಧಾನ ಶಾಖೆಯ ಬಳಿ ಜಮಾಯಿಸಿದ್ದ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ತಾಸುಗಟ್ಟಲೆ ನಿಂತಲ್ಲೇ ನಿಂತು ಸುಸ್ತಾದ ಕೆಲ ಗ್ರಾಹಕರು ಬ್ಯಾಂಕ್ ಅಧಿಕಾರಿಗಳಿಗೆ ಶಾಪ ಹಾಕಿ ಮರಳುವುದು ಕಂಡುಬಂದಿತು.
ಎಟಿಎಂ ವಿತ್​ಡ್ರಾ ಸಾಧ್ಯವಿಲ್ಲ:ಯೆಸ್ ಬ್ಯಾಂಕ್​ನ ಎಟಿಎಂ ಕಾರ್ಡ್​ಗಳಿಂದ ಹಣ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಗ್ರಾಹಕರು ಕಸ್ತೂರಬಾ ರಸ್ತೆ, ಕನ್ನಿಂಗ್​ಹ್ಯಾಮ್ ರಸ್ತೆ, ರಾಜಾಜಿನಗರ, ಜಯನಗರ ಸೇರಿ ನಗರದ ವಿವಿಧೆಡೆ ಇರುವ ಬ್ಯಾಂಕ್​ನ ಶಾಖೆಗಳಿಗೆ ತೆರಳಿ ಹಣ ಪಡೆಯಲು ಮುಂದಾಗುತ್ತಿದ್ದಾರೆ.
ವೇತನ ಪಡೆಯಲು ಪರದಾಟ
ನಗರದ ಅನೇಕ ಪ್ರತಿಷ್ಠಿತ ಐಟಿ ಕಂಪನಿಗಳು, ಆಟೋಮೊಬೈಲ್ ಸಂಸ್ಥೆಗಳು, ಕಾರ್ಖಾನೆಗಳು, ರಿಯಲ್​ಎಸ್ಟೇಟ್ ಸಂಸ್ಥೆಗಳು ತಮ್ಮ ಸಿಬ್ಬಂದಿಯ ವೇತನ ಖಾತೆಯನ್ನು ಯೆಸ್ ಬ್ಯಾಂಕ್​ನಲ್ಲಿ ತೆರೆದಿವೆ. ಅವರೆಲ್ಲರ ವೇತನವನ್ನು ಆ ಖಾತೆ ಜಮೆ ಮಾಡಲಾಗುತ್ತದೆ. ಇದೀಗ ತಿಂಗಳ ವೇತನ ಜಮೆಯಾಗಿದ್ದರೂ ಹಿಂಪಡೆಯಲು ಸಾಧ್ಯವಾಗದೆ ಆ ಎಲ್ಲ ಕಂಪನಿಗಳ ಸಿಬ್ಬಂದಿ ಪರದಾಡುತ್ತಿದ್ದಾರೆ.
ಡಿಜಿಟಲ್ ಸೇವೆ ರದ್ದು
ಯೆಸ್ ಬ್ಯಾಂಕ್​ನ ಡಿಜಿಟಲ್ ವ್ಯವಹಾರಗಳು ಸ್ಥಗಿತಗೊಂಡಿವೆ. ಆನ್​ಲೈನ್ ವ್ಯವಸ್ಥೆಯೊಂದಿಗೆ ಜೋಡಣೆಗೊಂಡಿರುವ ಫೋನ್​ಪೇ, ಗೂಗಲ್​ಪೇ , ಪೇಟಿಎಂನಂಥ ಸೇವೆಗಳೂ ಸ್ಥಗಿತಗೊಂಡಿವೆ. ಸ್ವಿಗ್ಗಿ, ಫ್ಲಿಪ್​ಕಾರ್ಟ್, ಅಮೆಜಾನ್, ಜಬಾಂಗ್​ನಂಥ ಅನ್​ಲೈನ್ ಸೇವೆ ಸಂಸ್ಥೆಗಳಿಗೆ ಇದರಿಂದ ಭಾರಿ ಹಿನ್ನಡೆಯಾಗಿದೆ. ಏಕಾಏಕಿ ಈ ರೀತಿ ಕ್ರಮ ಕೈಗೊಂಡಿರುವುದರಿಂದ ಸಾಲ ತೀರುವಳಿ ಮತ್ತಿತರ ಆರ್ಥಿಕ ಜವಾಬ್ದಾರಿ ನಿರ್ವಹಣೆ ಕುರಿತು ಗ್ರಾಹಕರು ಚಿಂತಿತರಾಗಿದ್ದಾರೆ.
ಬಿಡುವು ಮಾಡಿಕೊಂಡು ವೇತನದ ಹಣ ಪಡೆಯಲು ಬ್ಯಾಂಕ್​ಗೆ ಬರುವ ಅನಿವಾರ್ಯತೆ ಉಂಟಾಗಿದೆ. ಬ್ಯಾಂಕ್​ನ ಮುಂದಿನ ನಡೆ ಏನು ಎಂಬುದು ನೋಡಬೇಕು.
| ಅಮಿತ್ ಸಾಫ್ಟ್​ವೇರ್ ಇಂಜಿನಿಯರ್
ಬ್ಯಾಂಕ್​ನ ಆರ್ಥಿಕ ಮುಗ್ಗಟ್ಟು ಪರಿಹಾರ ವಾದ ಬಳಿಕ ಹಣ ಪಡೆಯಲು ಅವಕಾಶಗಳಿವೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ.
| ವಾಸು ಸಾಫ್ಟ್​ವೇರ್ ಇಂಜಿನಿಯರ್
ನಿಮ್ಮ ಹಣ ಭದ್ರವಾಗಿದೆ ಎಂದು ಆರ್​ಬಿಐ ಆಶ್ವಾಸನೆ ನೀಡಿದೆ. ಈ ಬಗ್ಗೆ ನಮಗೆ ನಂಬಿಕೆಯಿದೆ. ಆದರೆ. ತುರ್ತು ಹಣ ಸಿಗದಿರುವುದು ಸಮಸ್ಯೆಯಾಗಿದೆ.
| ಕಾರ್ತಿಕ್ ಖಾಸಗಿ ಕಂಪನಿ ಉದ್ಯೋಗಿ
ನಾನು 20 ಲಕ್ಷ ರೂ. ಹೂಡಿಕೆ ಮಾಡಿದ್ದೇನೆ. ಬ್ಯಾಂಕ್ ಸಿಬ್ಬಂದಿ ಆತಂಕ ಪಡಬೇಡಿ ಎನ್ನುತ್ತಿದ್ದಾರೆ.
| ಅಮರೇಶ್ ಖಾಸಗಿ ಕಂಪನಿ ಉದ್ಯೋಗಿ
ನನ್ನ ವೇತನ ಯೆಸ್ ಬ್ಯಾಂಕ್​ಗೆ ಜಮೆಯಾಗಿದೆ. ಬ್ಯಾಂಕ್​ಗೆ ಬಂದಿರುವ ಹಣವನ್ನು ಹಿಂಪಡೆಯಲು ತೊಂದರೆಯಾಗುತ್ತಿದೆ.
| ದುರ್ಗದನ್ ದೇವಡ್ಕರ್ ಖಾಸಗಿ ಕಂಪನಿ ಉದ್ಯೋಗಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
