|ಡಾ. ಶಶಿಕಾಂತ್ ಜೈನ್
ಪ್ರಾಚೀನ ಕಾಲದಿಂದಲೂ ಭರತಖಂಡವು ಯೋಗಿಗಳ ನಾಡು ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಯೋಗ -ಸಾಧನೆ ಈ ದೇಶದ ಮಂತ್ರವಾಗಿತ್ತು. ಸಾಧು ಸಂತರು ತಮ್ಮ ಆಧ್ಯಾತ್ಮಿಕ ಜೀವನದ ಮಹತ್ತರ ಸಾಧನೆಗೆ ಯೋಗವನ್ನು ಪ್ರಧಾನ ಸಾಧನವನ್ನಾಗಿ ಮಾಡಿಕೊಂಡಿದ್ದರು ಎಂಬುದು ಯೌಗಿಕ ಗ್ರಂಥಗಳ ಅಧ್ಯಯನದಿಂದ ತಿಳಿದುಬರುತ್ತದೆ. ಆದರೆ ಯೋಗ ಸಾಧನೆಯು ಆಧ್ಯಾತ್ಮಿಕ ಸಿದ್ಧಿಯ ಸಾಧನ ಮಾತ್ರವಾಗಿರದೆ ದೈಹಿಕ ಸಾಮರ್ಥ್ಯ ವೃದ್ಧಿಗೂ, ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದ ವೃದ್ಧಿಗೂ ಸಹಕಾರಿಯಾಗಿದೆ. ಇಷ್ಟುಮಾತ್ರವೇ ಅಲ್ಲದೆ ಅನೇಕಾನೇಕ ಶಾರೀರಿಕವಾದ ಕುಂದುಕೊರತೆಗಳನ್ನು ನೀಗಿಸುವುದಕ್ಕೆ ಸಮರ್ಥವಾಗಿದೆ. ರೋಗನಿರೋಧಕ ಶಕ್ತಿವೃದ್ಧಿಯೂ ಯೋಗದಿಂದ ಸಾಧ್ಯವಾಗಿದೆ.
ದೈಹಿಕ ಆರೋಗ್ಯ, ಮನಃಶಾಂತಿ ಮತ್ತು ಆಧ್ಯಾತ್ಮ ಸಾಧನೆಯ ಸಾಧನವಾದ ಯೋಗ ಜಗತ್ತಿಗೆ ಭಾರತೀಯರು ನೀಡಿರುವ ಮಹತ್ತರವಾದ ಕೊಡುಗೆ. ಯೋಗವು ಅನಾದಿಕಾಲದಿಂದಲೂ ಭಾರತೀಯರು ಆಚರಿಸಿಕೊಂಡು ಬಂದ ವಿದ್ಯೆಯಾಗಿರುವುದೆಂದು ಅನೇಕ ಶಾಸ್ತ್ರ ಪುರಾಣಗಳಿಂದ ತಿಳಿದುಬರುತ್ತದೆ. ಯೋಗವನ್ನು ಭಾರತೀಯರು ಅಭ್ಯಸಿಸಿ, ದೇವತ್ವವನ್ನು ಪಡೆದ ನಿದರ್ಶನಗಳು ದೊರೆಯುತ್ತದೆ. ಹಿಂದೆ ಭಾರತ ದೇಶದ ಮೂಲೆಮೂಲೆಗಳಲ್ಲಿಯೂ ಯೋಗ ಸಾಧನೆಯನ್ನು ಮಾಡುವವರು ಅಧಿಕವಾಗಿದ್ದರು. ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಚತುರ್ವಿಧ ಪುರುಷಾರ್ಥ ಸಾಧನೆಗೆ ಯೋಗಶಾಸ್ತ್ರವು ಸಾಧನವಾಗಿತ್ತು. ಆದ್ದರಿಂದಲೇ ಭಾರತದೇಶವನ್ನು ಯೋಗಭೂಮಿ ಎಂದು ಕರೆದರು. ಇದಕ್ಕೆ ವಿರುದ್ಧವಾದ ಪಾಶ್ಚಾತ್ಯ ಜಗತ್ತನ್ನು ಭೋಗಭೂಮಿ ಎಂದು ಕರೆಯಲಾಗುತ್ತಿದೆ. ಏಕೆಂದರೆ ಅಲ್ಲಿ ಭೋಗ ವಿಷಯಗಳನ್ನೇ ಜೀವನದ ಲಕ್ಷ್ಯವಾಗಿರಿಸಿಕೊಂಡಿರುವ ಲೌಕಿಕ ಸಂಸ್ಕೃತಿ ಅಲ್ಲಿಯದು.
ಇಂದು ಮನುಷ್ಯನ ಆರೋಗ್ಯವು ದುರ್ಬಲವಾದ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಜೊತೆಗೆ ಮಾನಸಿಕ ಹಾಗೂ ಭಾವನಾತ್ಮಕ ಸ್ತರಗಳಲ್ಲಿ ನಾವು ಸಂಪೂರ್ಣ ಸೋಲನ್ನು ಒಪ್ಪಿಕೊಳ್ಳುವ ಹಂತದಲ್ಲಿದ್ದೇವೆ.ಇದಕ್ಕೆ ಕಾರಣ? ನಮ್ಮ ಜೀವನಶೈಲಿ ಸಂಪೂರ್ಣ ಬದಲಾಗಿದೆ. ನಾವು ತುಂಬಾ ಉನ್ನತವಾದ ಜೀವನದ ರೀತಿನೀತಿಗಳನ್ನು ಪಾಲಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಇದ್ದೇವೆ. ನಮ್ಮ ಆಹಾರ-ವಿಹಾರ ಬದಲಾಗಿದೆ. ವ್ಯಾಧಿಗಳು ನಮ್ಮನ್ನು ಅಣಕಿಸುವಂತೆ ಮುನ್ನುಗ್ಗುತ್ತಿವೆ. ಒಂದು ಅಪೇಕ್ಷೆಯಿಂದ ಭೌತಿಕವಾಗಿ ಬೆಳವಣಿಗೆ ಹೊಂದಿದ್ದರೂ ಮನುಷ್ಯನು ಮಾನಸಿಕವಾಗಿ ತೀವ್ರವಾಗಿ ಜರ್ಜರಿತನಾಗಿದ್ದಾನೆ. ಇದರಿಂದ ತನ್ನ ಅಂತರಂಗದ ಕುರುಹನ್ನೇ ಮರೆಯುವ ಹಂತಕ್ಕೆ ತಲುಪಿದ್ದಾನೆ. ಹಾಗಾಗಿ ಅರಿವಿನ ಬದಲು ಅಜ್ಞಾನವೇ ಅವನನ್ನು ಆಳುತ್ತಿದೆ. ದ್ವಂದ್ವಗಳ ಸುಳಿಗೆ ಸಿಲುಕಿರುವ ಮನುಷ್ಯ ಶಾರೀರಿಕವಾಗಿ ಮತ್ತು ಮಾನಸಿಕವಾಗಿಯೂ ಅಶಾಂತ ಸ್ಥಿತಿಗೂ ಆತನೇ ಕಾರಣನಾಗಿದ್ದಾನೆ. ಈಗಂತೂ ಜಾಗತೀಕರಣದಿಂದಾಗಿ ಸಂಸ್ಕೃತಿಗಳ ವಿನಿಮಯವು ವೇಗವಾಗಿ ನಡೆಯುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಭಾರತೀಯ ಸಮಾಜವು ಆಕರ್ಷಿತವಾಗುತ್ತಿದೆ. ಭಾರತೀಯರು ತಮ್ಮ ಜೀವನದ ಅಮೂಲ್ಯ ಲಕ್ಷ್ಯವನ್ನು ಮರೆತು ಇಂದ್ರಿಯ ಸುಖದ ಹಿಂದೆ ಬೀಳುತ್ತಿದ್ದಾರೆ. ಅತಿಯಾದ ಇಂದ್ರೀಯ ಸುಖಕ್ಕೆ ದಾಸರಾದ ಜನರು ಅದರಿಂದ ಹೆಚ್ಚು ಹೆಚ್ಚು ಶಾರೀರಿಕ, ಮಾನಸಿಕ ಸಂಕಷ್ಟಗಳಿಗೆ ಗುರಿಯಾಗುತ್ತಿದ್ದಾರೆ. ರಾಗದ್ವೇಷಗಳ ಪ್ರಾಬಲ್ಯದಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಜನರಲ್ಲಿ ಮನಸ್ಸಿನ ನೆಮ್ಮದಿ ಕ್ಷೀಣಗೊಳ್ಳುತ್ತಿದೆ. ಇಂದು ಜಗತ್ತಿನೆಲ್ಲೆಡೆ ಜನರು ವ್ಯಾಯಾಮದ ಕೊರತೆ, ಮಾನಸಿಕ ಒತ್ತಡ, ರಾಜಸಿಕ ಮತ್ತು ತಾಮಸಿಕ ಆಹಾರ ಸೇವನೆ, ದುಶ್ಚಟಗಳು, ಪಾಶ್ಚಾತ್ಯ ಜೀವನ ಪದ್ಧತಿ, ಇವುಗಳಿಂದ ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂದ್ರಿಯ ಸುಖ ನಶ್ವರವಾಗಿರುತ್ತದೆ. ಆತ್ಮಸುಖವೇ ನಿಜವಾದ ಮತ್ತು ಶಾಶ್ವತ ಸುಖವಾಗಿರುತ್ತದೆ ಎಂಬ ಗುರುಹಿರಿಯರ ಮಾತನ್ನು ಅಲಕ್ಷಿಸಲಾಗಿದೆ.
ಆದರೆ ಇತ್ತೀಚೆಗೆ ಕೆಟ್ಟಮೇಲೆ ಬುದ್ದಿ ಎನ್ನುವಂತೆ ವಿಷಯ ಸುಖದ ಹಿಂದೆ ಬಿದ್ದ ಪರಿಣಾಮವನ್ನು ಅನುಭವಿಸಿ ಬೇಸತ್ತ ಜನರು ಪುನಃ ಯೋಗದಂತಹ ವಿಷಯಗಳಲ್ಲಿ ವಿಶೇಷ ಆಸಕ್ತಿ ತಳೆಯುತ್ತಿದ್ದಾರೆ. ಇತ್ತೀಚೆಗೆ ಅಮೇರಿಕಾ ಮತ್ತು ಇತರ ಪಾಶ್ಚಾತ್ಯ ದೇಶಗಳಲ್ಲಿ ಯೋಗದ ಬಗ್ಗೆ ಹೆಚ್ಚಿನ ಒಲವು ಕಂಡುಬರುತ್ತದೆ. ಅಮೆರಿಕನ್ನರು ಶಾಲಾಕಾಲೇಜುಗಳಲ್ಲಿ ಯೋಗವನ್ನು ಪಠ್ಯ ವಿಷಯವಾಗಿಯೂ ಭೋದಿಸುತ್ತಿದ್ದಾರೆ. ಭಾರತೀಯರ ಸಂಸ್ಕೃತಿಯಾದ ಯೋಗಾಭ್ಯಾಸದ ಬಗ್ಗೆ ಇತರ ಪಾಶ್ಚಾತ್ಯ ದೇಶಗಳಲ್ಲೂ ಉತ್ತಮ ಸದ್ಭಾವನೆ ಮೂಡಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ.
ಯಾಂತ್ರೀಕೃತ ಜೀವನದಿಂದ ಚಿತ್ತಶಾಂತಿಯನ್ನು ಕಳೆದುಕೊಂಡ ಪ್ರಪಂಚದ ಜನರನ್ನು ಪಾರುಮಾಡಲು ಯೋಗ ಒಂದು ಉತ್ತಮ ಸಾಧನೆಯಾಗಿದೆ. ಈ ಅವಶ್ಯಕತೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ಮನಗಂಡಿದ್ದ ನಮ್ಮ ಪೂರ್ವಾಚಾರ್ಯರು ತಮ್ಮ ಅಮೂಲ್ಯ ಗ್ರಂಥಗಳಲ್ಲಿ ಯೋಗ ವಿಧಿ-ವಿಧಾನಗಳನ್ನು ಬರೆದಿಟ್ಟಿದ್ದಾರೆ. ಆಸನ, ಪ್ರಾಣಾಯಾಮಗಳ ಅಭ್ಯಾಸ ಮಾಡಿದರೆ ದೇಹವು ಮಾರ್ದವವಾಗಿ ಅವರಿಗೆ ಎಂದೆಂದಿಗೂ ರೋಗಾದಿಗಳ ಬಾಧೆಗಳು ಬರಲಾರದು.
ದೇಹೇಂದ್ರಿಯಾದಿಗಳು ದೃಢವಾಗಿ, ಆಯಸ್ಸು ವೃದ್ಧಿಯಾಗಿ ದೇಹಕ್ಕೆ ನವಚೈತನ್ಯವು ದೊರೆಯುವುದು, ಯೋಗಾಭ್ಯಾಸ ಮಾಡಿದರೆ ರೋಗಿಯ ರೋಗವು ದುರ್ಬಲನ ದೌರ್ಬಲ್ಯವೂ ನಾಶವಾಗಿ ಸಶಕ್ತನೂ, ನಿರೋಗಿಯೂ ಆಗುತ್ತಾನೆ. ಇಂದ್ರಿಯಗಳು ಮತ್ತು ಮನಸ್ಸು ಹತೋಟಿಗೆ ಬರುತ್ತದೆ. ಮನಸ್ಸು ನಿರ್ಮಲವಾಗಿ ಸತ್ವಗುಣವೇ ಪ್ರಧಾನವಾಗಿ ನಿಂತು ಮೇಧಾಶಕ್ತಿಯನ್ನು ವೃದ್ಧಿಸುತ್ತದೆ. ಹಾಗೆಯೇ ಯೋಗಶಾಸ್ತ್ರದಲ್ಲಿ ಹೇಳಿರುವ ಆಹಾರಪದ್ಧತಿಯುಕ್ತವಾದ ಜೀವನ ಪದ್ಧತಿ ಇತ್ಯಾದಿಗಳು ಬಹಳ ಪ್ರಯೋಜನಕಾರಿಯಾಗಿದೆ.
ಯೋಗಾಸನಗಳನ್ನು ಮಾಡುವುದರಿಂದ ದೇಹದ ಅಂಗಾಂಗಗಳು ಬಲಿಷ್ಠವಾಗಿ ಜಡತ್ವ ದೂರವಾಗುತ್ತದೆ. ಅದೇರೀತಿ ಪ್ರಾಣಾ ಯಾಮಗಳ ಅಭ್ಯಾಸವು ಉಸಿರಾಟದ ಸಮತೋಲನ ಹಾಗೂ ಮಾನಸಿಕ ನೆಮ್ಮದಿಯ ವೃದ್ಧಿಗೆ ಸಹಕಾರಿ ಯಾಗಲಿದೆ. ಯೋಗ ಸೂತ್ರದಲ್ಲಿ ತಿಳಿಸಿರುವಂತೆ ‘ಮೈತ್ರೀ ಕರುಣಾ ಮುದಿತೋಪೇಕ್ಷಾಣಾಂ ಸುಖ ದುಃಖ ಪುಣ್ಯಾಪುಣ್ಯ ವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್ ಸುಖವನ್ನು ಅನುಭವಿಸುತ್ತಿರುವ ಸಮಸ್ತ ಪ್ರಾಣಿಗಳಲ್ಲಿಯೂ ಮೈತ್ರಿಯನ್ನು ಬೆಳೆಸಿಕೊಳ್ಳಬೇಕು. ಹೀಗೆಯೇ ದುಃಖಿಗಳಲ್ಲಿ ಕರುಣೆಯನ್ನು, ಪುಣ್ಯಾತ್ಮರಲ್ಲಿ ಹರ್ಷವನ್ನು, ಪಾಪಾತ್ಮರಲ್ಲಿ ಉದಾಸೀನತೆಯನ್ನು ಬೆಳೆಸಿಕೊಳ್ಳಬೇಕು. ಇಂತಹ ಭಾವನೆಗಳನ್ನು ಬೆಳೆಸಿಕೊಳ್ಳಲು ಯೋಗವು ತುಂಬ ಪರಿಣಾಮಕಾರಿಯಾದ ಅಸ್ತ್ರವಾಗಿದೆ. ಜೂನ್ 21 ರಂದು ವಿಶ್ವದಾದ್ಯಂತ 7ನೇ ವಿಶ್ವ ಯೋಗ ದಿನಾಚರಣೆಯನ್ನು ನಾವೆಲ್ಲ ಆಚರಿಸಲಿದ್ದೇವೆ. ಬರಿ ಆಚರಣೆಗೋಸ್ಕರ ಸೀಮಿತವಾಗದೆ ನಮ್ಮ ದಿನನಿತ್ಯ ಬದುಕಿನ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳೋಣ.
(ಲೇಖಕರು ಯೋಗ ನಿರ್ದೇಶಕರು, ಶಾಂತಿವನ ಟ್ರಸ್ಟ್ (ರಿ) ಧರ್ಮಸ್ಥಳ)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + twenty =
Remember me
