ನವದೆಹಲಿ: ಗಲಭೆಯಿಂದ ಪ್ರಕ್ಷುಬ್ಧವಾಗಿದ್ದ ರಾಜಧಾನಿ ದೆಹಲಿ ನಿಧಾನಕ್ಕೆ ತಣ್ಣಗಾಗುತ್ತಿರುವ ನಡುವೆಯೇ ಮತ್ತೆ ಹಿಂಸಾಕಿಡಿ ಹೊತ್ತಿಸಲು ಉತ್ತರ ಪ್ರದೇಶದಿಂದ ಗೂಂಡಾಗಳನ್ನು ಕರೆತರುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಕೆಲವು ನಿರ್ದಿಷ್ಟ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇವರನ್ನು ನಿಯೋಜಿಸಲಾಗುತ್ತಿದ್ದು, ವಾಟ್ಸ್​ಆಪ್ ಮೂಲಕ ಗೂಂಡಾಗಳನ್ನು ಸಂಘಟಿಸಲು ಬಳಸುತ್ತಿದ್ದ 50 ಮೊಬೈಲ್ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದು ಹೊಸ ಬೆಳವಣಿಗೆ. ಮತ್ತೊಂದೆಡೆ ಗುರುವಾರ ಕೂಡ ವಿರಳವಾಗಿ ಹಿಂಸಾಚಾರ ನಡೆದಿದ್ದು, ಮೃತರ ಸಂಖ್ಯೆ 38ಕ್ಕೆ ತಲುಪಿದೆ. ಜೋಹ್ರಿಪುರ್ ಪ್ರದೇಶದಲ್ಲಿ ಎರಡು ಶವಗಳು ಚರಂಡಿಯಲ್ಲಿ ಪತ್ತೆಯಾಗಿವೆ. ಒಟ್ಟು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 48 ಎಫ್​ಐಆರ್ ದಾಖಲಾಗಿದ್ದು, 130 ಜನರನ್ನು ಬಂಧಿಸಲಾಗಿದೆ.
ಶಾಂತಿ, ಸೌಹಾರ್ದ, ಭ್ರಾತೃತ್ವ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗಲಭೆ ಪೀಡಿತ ಜಾಫ್ರಾಬಾದ್​ಗೆ ಭೇಟಿ ನೀಡಿ ಜನರೊಂದಿಗೆ ಚರ್ಚಿಸಿದ್ದು ಹಾಗೂ ಗಲಭೆಗ್ರಸ್ತ ಈಶಾನ್ಯ ದೆಹಲಿಯಲ್ಲಿ ಅರೆಸೇನಾ ಪಡೆ, ಪೊಲೀಸರ ಪಥಸಂಚಲನ, ಗಸ್ತನ್ನು ಹೆಚ್ಚಿಸಿದ್ದರಿಂದ ಘರ್ಷಣೆ ಇಳಿಮುಖವಾಗಿದೆ. ಆದರೆ, ಭಜನ್​ಪುರ, ಮೌಜಪುರ್, ಕರವಾಲ್ ನಗರ್​ಗಳಲ್ಲಿ ಹಿಂಸಾಚಾರ ಮುಂದುವರಿದಿದೆ.
ಎರಡು ಎಸ್​ಐಟಿ ರಚನೆ:ಗಲಭೆ ಸಂಬಂಧ ಪ್ರಕರಣ ಗಳ ತನಿಖೆಗೆ ಎರಡು ವಿಶೇಷ ತನಿಖಾ ತಂಡಗಳನ್ನು (ಎಸ್​ಐಟಿ) ರಚಿಸಲಾಗಿದೆ. ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಕೆ.ಸಿಂಗ್ ಈ ಎರಡೂ ತಂಡಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಘರ್ಷಣೆ ನಡೆದಿರುವ ಸ್ಥಳಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) 113 ತುಕಡಿಗಳನ್ನು ನಿಯೋಜಿಸ ಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕಾಂಗ್ರೆಸ್​ನಿಂದ ರಾಷ್ಟ್ರಪತಿ ಭೇಟಿ:ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ನಿಯೋಗವೊಂದು ರಾಷ್ಟ್ರಪತಿ ರಾಮನಾಥ ಕೋವಿಂದರನ್ನು ಗುರುವಾರ ಭೇಟಿಯಾಗಿದೆ. ಕಳೆದ ಭಾನುವಾರದಿಂದ ದೆಹಲಿ ಹೊತ್ತುರಿಯುತ್ತಿದ್ದರೂ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಮೂಕಪ್ರೇಕ್ಷಕರಾಗಿವೆ. ಇದರಿಂದ 35 ಮಂದಿ ಸಾವನ್ನಪ್ಪಿದ್ದಾರೆ. ಘರ್ಷಣೆಗೆ ಕಡಿವಾಣ ಹಾಕಿ, ಜನರ ಜೀವ ರಕ್ಷಿಸಲು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು. ‘ರಾಜಧರ್ಮ’ ಪಾಲಿಸುವಂತೆ ಸರ್ಕಾರದ ಕಿವಿಹಿಂಡಬೇಕು. ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿ ಹಲವು ಹಿರಿಯ ನಾಯಕರು ಇದ್ದರು.
ನ್ಯಾ.ಮುರಳೀಧರ್ ವರ್ಗ:ದೆಹಲಿ ಗಲಭೆ ಅರ್ಜಿ ವಿಚಾರಣೆ ನಡೆಸುತ್ತಿದ್ದ ದೆಹಲಿ ಹೈಕೋರ್ಟ್ ನ್ಯಾ.ಎಸ್.ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ಗೆ ವರ್ಗಾವಣೆ ಮಾಡಲಾಗಿದೆ. ದ್ವೇಷಭಾಷಣ ಆಪಾದನೆಗೆ ಗುರಿ ಯಾಗಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದ ಪವೇಶ್ ಶರ್ವ ಮತ್ತು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿರುದ್ಧ ಎಫ್​ಐಆರ್ ದಾಖಲಿಸಲು ಮುರಳೀಧರ್ ಸೂಚಿಸಿದ್ದರು. ದೆಹಲಿ ಘರ್ಷಣೆಯನ್ನು 1984ರ ಸಿಖ್ ಹತ್ಯಾಕಾಂಡದಂತೆ ಆಗಲು ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದರು. ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರು ಗುರುವಾರ ಯಾವುದೇ ಕಲಾಪದಲ್ಲಿ ಭಾಗಿಯಾಗಲಿಲ್ಲ. ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
ವರ್ಗಾವಣೆಗೆ ಟೀಕೆ:ನ್ಯಾ.ಮುರಳೀಧರ್ ವರ್ಗಾವಣೆ ಬಗ್ಗೆ ದೆಹಲಿ ವಕೀಲರು ಸಂಶಯ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳು ಇದು ರಾಜಕೀಯ ಕ್ರಮ, ನಾಚಿಕೆಗೇಡು ಎಂದು ಆರೋಪಿಸಿವೆ. ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಕಾನೂನು ರೀತ್ಯ 14 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ನ್ಯಾ.ಮುರಳೀಧರ್​ಗೆ ಇದನ್ನು ನೀಡಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ‘ನ್ಯಾಯಮೂರ್ತಿಗಳ ವರ್ಗಾವಣೆ ಆಡಳಿತಾತ್ಮಕ ಕ್ರಮ. ಸುಪ್ರೀಂಕೋರ್ಟ್ ಕೊಲಿಜಿಯಂ ಫೆ.12ರಂದು ಮಾಡಿದ್ದ ಶಿಫಾರಸಿನ ಹಿನ್ನೆಲೆಯಲ್ಲಿ ಈ ವರ್ಗಾವಣೆ ಆಗಿದೆ’ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಆಪ್ ಮುಖಂಡನ ವಿರುದ್ಧ ಎಫ್​ಐಆರ್:ಆಮ್ ಆದ್ಮಿ ಪಕ್ಷದ (ಆಪ್) ಮುಖಂಡ ತಾಹಿರ್ ಹುಸೇನ್ ಮನೆಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಸುವ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬೇಹುಗಾರಿಕಾ ದಳದ ಅಧಿಕಾರಿ ಅಂಕಿತ್ ಶರ್ಮಾ ಕೊಲೆ ಹಿಂದೆ ತಾಹಿರ್ ಕೈವಾಡ ಇದೆ ಎಂಬ ಆಪಾದನೆಯೂ ಕೇಳಿ ಬಂದಿದ್ದು, ದಯಾಳಪುರ್ ಠಾಣೆಯಲ್ಲಿ ಕೊಲೆ ಇನ್ನಿತರ ಕ್ರಿಮಿನಲ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಂದ್​ಬಾಗ್​ನಲ್ಲಿರುವ ತಾಹಿರ್ ಮನೆ ಮತ್ತು ಕೈಗಾರಿಕೆಯಲ್ಲಿ ಪೆಟ್ರೋಲ್ ಬಾಂಬ್, ಆಸಿಡ್, ರಾಸಾಯನಿಕಗಳು ಮತ್ತು ಕಲ್ಲುಗಳು ಪತ್ತೆಯಾಗಿದ್ದು, ಪೊಲೀಸರು ಮನೆಗೆ ಬೀಗಮುದ್ರೆ ಹಾಕಿ ರಾಸಾಯನಿಕಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮನೆಯ ತಾರಸಿಯಲ್ಲಿ ನೂರಕ್ಕೂ ಹೆಚ್ಚು ಯುವಕರ ಗುಂಪು ಕೂಡ ಇತ್ತು ಎನ್ನಲಾಗಿದೆ. ಆದರೆ ತಾಹಿರ್, ತಮ್ಮ ಮನೆಯಲ್ಲಿ ಇಂಥ ಯಾವುದೇ ವಸ್ತುಗಳು ಇಲ್ಲ ಎಂದಿದ್ದಾರೆ. ತಪ್ಪಿತಸ್ಥರು ಆಪ್ ಸೇರಿದಂತೆ ಯಾವುದೇ ಪಕ್ಷಕ್ಕೆ ಸೇರಿರಲಿ ಅಥವಾ ತಮ್ಮ ಸಂಪುಟದಲ್ಲಿ ಇದ್ದರೂ ಸರಿಯೇ ಅವರಿಗೆ ಶಿಕ್ಷೆ ಆಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಮಗನ ಹತ್ಯೆ ಹಿಂದೆ ಆಪ್ ಮುಖಂಡರ ಕೈವಾಡ ಇದೆ ಎಂದು ಅಂಕಿತ್ ತಂದೆ ರವೀಂದ್ರ ಶರ್ಮಾ ಬುಧವಾರ ಆಪಾದಿಸಿದ್ದರು. ತಾಹಿರ್ ಹುಸೇನ್​ನನ್ನು ಆಪ್ ಪಕ್ಷದಿಂದ ಅಮಾನತುಗೊಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
