| ನಾಗೇಶ್ ಜಿ. ವೈದ್ಯನಷ್ಟದಲ್ಲಿರುವ ಬಿಎಸ್​ಎನ್​ಎಲ್​ನ ಪುನರುಜ್ಜೀವನಕ್ಕಾಗಿ 89,047 ಕೋಟಿ ರೂಪಾಯಿಗಳ ಮೂರನೇ ಪ್ಯಾಕೇಜನ್ನು ಸಂಸತ್ತು ಇದೀಗ ಅನುಮೋದಿಸಿದೆ. 2019ರ 69,000 ಕೋಟಿ ರೂ. ಹಾಗೂ 2022 ರ 1.64 ಲಕ್ಷ ಕೋಟಿ ರೂ. ಪ್ಯಾಕೇಜ್​ಗಳ ನಂತರ ಇದು ಮೂರನೇಯದು.
ಸೆಪ್ಟೆಂಬರ್ 2000ದಲ್ಲಿ ಜನ್ಮತಳೆದ ಬಿಎಸ್​ಎನ್​ಎಲ್, ದೈತ್ಯ ಟೆಲಿಕಾಂ ಸಂಸ್ಥೆಯಾಗಿ ಬೆಳೆದದ್ದು ಇತಿಹಾಸ. 2009ರಲ್ಲಿ ಮೊದಲ ಬಾರಿಗೆ ನಷ್ಟ ಅನುಭವಿಸುವವರೆಗೂ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಏಕಮೇವಾದ್ವಿತೀಯವಾಗಿ ಮೆರೆದ ಭವ್ಯ ಕಂಪನಿ ಈಗಲೂ ಇರುವುದು ಸಂಪೂರ್ಣ ಸರ್ಕಾರದ ಒಡೆತನದಲ್ಲಿ. ಸ್ಥಿರ ದೂರವಾಣಿ, ಮೌಲ್ಯವರ್ಧಿತ ಮೊಬೈಲ್ ಸೇವೆಗಳು, ಫೈಬರ್ ಟು ಹೋಮ್ ಇಂಟರ್​ನೆಟ್ ಮತ್ತು ಬ್ರಾಡ್​ಬ್ಯಾಂಡ್, ವೈಫೈ, ಡೇಟಾ ಸೆಂಟರ್, ಎಂಟರ್​ಪ್ರೖೆಸ್ ಡೇಟಾ ಸೇವೆಗಳನ್ನು ಒದಗಿಸುವ ಬಿಎಸ್​ಎನ್​ಎಲ್ ಈಗಲೂ ಭಾರತದ ಮನೆ, ಮನಗಳಲ್ಲಿ ನೆಲೆಸಿರುವ ಸಂಸ್ಥೆ. ಪ್ರಸ್ತುತ ಪ್ಯಾಕೇಜ್​ನಿಂದಾಗಿ ಬಿಎಸ್​ಎನ್​ಎಲ್​ಗೆ ಭಾರತದಾದ್ಯಂತ 4ಜಿ ಮತ್ತು 5ಜಿ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ವೇಗದ ಇಂಟರ್​ನೆಟ್​ಗಾಗಿ ಸ್ಥಿರ ವೈರ್​ಲೆಸ್ ಸಂಪರ್ಕ ಹಾಗೂ ಕ್ಯಾಪ್ಟಿವ್ ನಾನ್ ಪಬ್ಲಿಕ್ ನೆಟ್​ವರ್ಕ್​ಗೆ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.
ಹಿಂದಿನ ಎರಡು ಪ್ಯಾಕೇಜ್​ಗಳ ಪರಿಣಾಮವಾಗಿ ಕಂಪನಿಯಲ್ಲಿ ಸ್ಥಿರತೆ ಮೂಡಿದೆ. 2021-22ರ ಹಣಕಾಸು ವರ್ಷದಿಂದ ಬಿಎಸ್​ಎನ್​ಎಲ್, ಕಾರ್ಯಾಚರಣಾ ಲಾಭವನ್ನು ಗಳಿಸಲು ಪ್ರಾರಂಭಿಸಿದೆ. ಆದಾಯವು 19,053 ಕೋಟಿ ರೂ.ಗಳಿಂದ 20,699 ಕೋಟಿ ರೂ.ಗಳಿಗೆ ಏರಿದೆ. ಸಾಲವು ಕೂಡ 32,944 ಕೋಟಿ ರೂ.ಗಳಿಂದ 22,289 ಕೋಟಿ ರೂ.ಗಳಿಗೆ ಕುಸಿದಿದೆ. ಇದಲ್ಲದೆ, ಕಂಪನಿಯು ಹೋಮ್ ಫೈಬರ್ ವಿಭಾಗದಲ್ಲಿ ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಹೊಸ ಸಂಪರ್ಕಗಳನ್ನು ಒದಗಿಸುವಲ್ಲಿ ಸಫಲವಾಗಿದ್ದು, ಕಳೆದ ವರ್ಷ ಹೋಮ್ ಫೈಬರ್ ಒಂದರಿಂದಲೇ 2,071 ಕೋಟಿ ರೂ. ಆದಾಯ ಗಳಿಸಿದೆ. ಆದರೆ, ಕಂಪನಿಗೆ ಸಾಲು ಸಾಲು ಸವಾಲುಗಳು ಈಗಲೂ ಕಾಡುತ್ತಿವೆ.
ಕುಸಿಯುತ್ತಿರುವ ದೈತ್ಯ ಸಂಸ್ಥೆ:ಪ್ರಸ್ತುತ, ಭಾರತವು ವಿಶ್ವದ ಎರಡನೇ ಅತಿದೊಡ್ಡ ದೂರಸಂಪರ್ಕ ಮಾರುಕಟ್ಟೆಯಾಗಿದ್ದು, 117.23 ಕೋಟಿ ಚಂದಾದಾರಿಕೆಯನ್ನು ಹೊಂದಿದೆ. ಇದರಲ್ಲಿ ವೈರ್​ಲೆಸ್ ಟೆಲಿಫೋನ್ ಸಂಪರ್ಕಗಳು ಒಟ್ಟು ಸಂಪರ್ಕಗಳ ಶೇಕಡಾ 98ರಷ್ಟಿವೆ. ದೇಶದಲ್ಲಿ ಅತಿವೇಗದಿಂದ 5ಜಿ ಪ್ರವೇಶವಾಗಿದೆ. ಡಿಜಿಟಲ್ ಸೇರ್ಪಡೆಯ ಭಾಗವಾಗಿ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳು 4ಜಿ ಮತ್ತು 2 ಲಕ್ಷ ಗ್ರಾಮ ಪಂಚಾಯತಿಗಳು ಆಪ್ಟಿಕಲ್ ಫೈಬರ್​ನೊಂದಿಗೆ ಸಂಪರ್ಕ ಹೊಂದಿವೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಬಿಡುಗಡೆ ಮಾಡಿರುವ ಮಾರ್ಚ್ ಅಂಕಿ ಅಂಶಗಳ ಪ್ರಕಾರ, ಬಿಎಸ್​ಎನ್​ಎಲ್ ಮಾರುಕಟ್ಟೆ ಪಾಲು ಶೇಕಡಾ 9.06ಕ್ಕೆ ಕುಸಿದಿದ್ದು, ಇದು ಅತ್ಯಂತ ಕನಿಷ್ಠ ಮಟ್ಟವಾಗಿದೆ.
ಜಾರಿಗೊಳ್ಳದ ಶಿಫಾರಸು:ಬಿಎಸ್​ಎನ್​ಎಲ್​ನ ಪುನರುಜ್ಜೀವನಕ್ಕಾಗಿ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡಿದೆ. 2010ರಲ್ಲಿ ಸ್ಯಾಮ್ ಪಿಟ್ರೋಡಾ ನೇತೃತ್ವದ ಸಮಿತಿಯು ಕಂಪನಿಯನ್ನು ಲಾಭದಾಯಕವಾಗಿಸಲು ಖಾಸಗಿ ವೃತ್ತಿಪರರನ್ನು ನೇಮಿಸಿಕೊಳ್ಳುವುದರಿಂದಾರಂಭಿಸಿ ಟವರ್ ನಿರ್ವಹಣೆಗೆ ಪ್ರತ್ಯೇಕ ಅಂಗಸಂಸ್ಥೆ ಯನ್ನು ಸ್ಥಾಪಿಸá-ವವರೆಗೆ ಹಲವಾರು ಶಿಫಾರಸು ಮಾಡಿತು. ಅವೆಲ್ಲ ಕೇವಲ ಸಲಹೆಗಳಾಗಿಯೇ ಉಳಿದುಕೊಂಡವು, ಜಾರಿಯಾಗಲಿಲ್ಲ.
ಮೊದಲ ಪುನರುಜ್ಜೀವನ ಪ್ಯಾಕೇಜ್:2019ರಲ್ಲಿ ಸರ್ಕಾರ ಮೊದಲ ಬಾರಿಗೆ 69,000 ಕೋಟಿ ರೂ.ಗಳ ಪ್ಯಾಕೇಜನ್ನು ಘೋಷಿಸಿತು. ಯೋಜನೆಯ ಭಾಗವಾಗಿ, 50 ವರ್ಷ ದಾಟಿದ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ನೀಡಲಾಯಿತು. ಇದಕ್ಕಾಗಿ 30,000 ರೂ. ಮೀಸಲಾಗಿರಿಸಲಾಯಿತು. ಬಿಎಸ್​ಎನ್​ಎಲ್​ನ 78,000 ಉದ್ಯೋಗಿಗಳು ಸೇವಾ ನಿವೃತ್ತಿ ಪಡೆದರು. ತನ್ಮೂಲಕ, ಉದ್ಯೋಗಿ ವೆಚ್ಚವು ಅಂದಾಜು ಶೇ. 50ರಷ್ಟು ಕಡಿಮೆ ಯಾಯಿತು. ಜತೆಗೆ ಸ್ಪೆಕ್ಟ್ರಮ್ ಖರೀದಿಗೆ 20,140 ಕೋಟಿ ರೂ.ಗಳ ಬಂಡವಾಳ ಒದಗಿಸಲಾಯಿತು. ದೀರ್ಘಾವಧಿಯ ಬಾಂಡ್​ಗಳನ್ನು ಹೊಂದಲು ಸರ್ಕಾರವು ಸಾರ್ವಭೌಮ ಖಾತರಿಯನ್ನು ನೀಡಿತು.
ಎರಡನೇ ಪ್ಯಾಕೇಜ್ 2022:ಬಿಎಸ್​ಎನ್​ಎಲ್ ಪುನಶ್ಚೇತನಗೊಳಿಸಲು ಕಳೆದ ಜುಲೈನಲ್ಲಿ ಸರ್ಕಾರವು 1.64 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್​ಗೆ ಅನುಮೋದನೆ ನೀಡಿತು. ಇದರಲ್ಲಿ 4ಜಿ ತರಂಗಾಂತರಕ್ಕಾಗಿ 44,993 ಕೋಟಿ ರೂ.ಗಳು, ಬಂಡವಾಳ ವೆಚ್ಚಕ್ಕೆ 22,471 ಕೋಟಿ ರೂ., ಗ್ರಾಮೀಣ ವೈರ್​ಲೈನ್ ಸೇವೆಗಳಿಗೆ 13,789 ಕೋಟಿ ರೂ.ಗಳ ನಿಧಿ, ಬಿಎಸ್​ಎನ್​ಎಲ್​ನ ಫೈಬರ್ ನೆಟ್​ವರ್ಕ್ ವಿಸ್ತರಿಸಲು ಭಾರತ್ ಬ್ರಾಡ್​ಬ್ಯಾಂಡ್ ನಿಗಮದ ವಿಲೀನ, ಅಧಿಕೃತ ಬಂಡವಾಳವನ್ನು ರೂ.1.50 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವುದು ಹಾಗೂ ಕಾರ್ಯಾಚರಣೆಗಳ ನಿಧಿ ಒದಗಿಸುವುದು, 22,828 ಕೋಟಿ ರೂ. ಮೊತ್ತದ ದೀರ್ಘಾವಧಿ ಬಾಂಡ್​ಗಳಿಗೆ ಸಾರ್ವಭೌಮ ಖಾತರಿ ವಿಸ್ತರಿಸುವುದು, 33,404 ಕೋಟಿ ರೂ.ಗಳ ಬಾಕಿಗಳನ್ನು ಈಕ್ವಿಟಿಯಾಗಿ ಪರಿವರ್ತಿಸುವ ಮೂಲಕ, ಕಂಪನಿಯ ಬ್ಯಾಲೆನ್ಸ್ ಶೀಟ್ ಸ್ವಚ್ಛಗೊಳಿಸುವ ಹಾಗೂ ಸೇವೆಯ ಗುಣಮಟ್ಟ ಸುಧಾರಿಸುವ ಗುರಿ ಹೊಂದಿತ್ತು. ಇದರೊಂದಿಗೆ 2026-27ರಲ್ಲಿ ಕಂಪನಿಯು ಲಾಭಕ್ಕೆ ಮರಳಬಹುದೆಂಬ ನಿರೀಕ್ಷೆ ಹೊಂದಲಾಗಿದೆ.
(ಲೇಖಕರು, ನಿಕಟಪೂರ್ವ ಅಧ್ಯಕ್ಷರು, ಕೇರಳ ಗ್ರಾಮೀಣ ಬ್ಯಾಂಕ್)
· ಬಾಹ್ಯ ಹಸ್ತಕ್ಷೇಪರಹಿತ ಪಾರದರ್ಶಕ ಆಡಳಿತ
· ವೃತ್ತಿಪರ ಉದ್ಯೋಗಿಗಳ ನೇಮಕ
· ಈಗಲೂ ಪ್ರಸ್ತುತವೆನಿಸುವ ಪಿತ್ರೋಡಾ ಸಮಿತಿಯ ಶಿಫಾರಸು ಜಾರಿ, ಸಾರ್ವಜನಿಕರಿಗೆ ಷೇರು ವಿತರಣೆಯ ಮೂಲಕ ಪಾಲು ನೀಡುವುದು
· ಖಾಸಗಿ, ಸರ್ಕಾರಿ ಕಂಪನಿಗಳ ನಡುವೆ ತಾರತಮ್ಯ ನಿರ್ನಾಮ, ಖಾಸಗಿ ಕಂಪನಿಗಳಿಗೂ ಸಾಮಾಜಿಕ ಬಾಧ್ಯತೆಯ ಜವಾಬ್ದಾರಿ
· ಕಂಪನಿಯ ಅಗಾಧ ಭೂಮಿ ಸಂಪತ್ತು, ಮೊಬೈಲ್ ಟವರ್​ಗಳ ಮೌಲ್ಯ 2 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನು ಕಂಪನಿಯ ಆರೋಗ್ಯ ಸುಧಾರಣೆಗೆ ಬಳಸಿಕೊಳ್ಳಬಹುದು.
· ಮೊಬೈಲ್ ಸೇವೆಗೆ ವಿಳಂಬದ ಪ್ರವೇಶ
· ಖಾಸಗಿಯವರೊಂದಿಗೆ ಸ್ಪರ್ಧಿಸಲು ಸಂಪನ್ಮೂಲಗಳ ಕೊರತೆ
· ಕುಗ್ಗುತ್ತಿರುವ ಚಂದಾದಾರರ ಸಂಖ್ಯೆ ಯಿಂದಾಗಿ ಕುಸಿಯುತ್ತಿರುವ ಆದಾಯ
· ಹೆಚ್ಚಿನ ನಿರ್ವಹಣಾ ವೆಚ್ಚ
· ನಿಧಾನಗತಿಯ ಬ್ರಾಡ್​ಬ್ಯಾಂಡ್, ಕಳಪೆ ಗ್ರಾಹಕ ಸೇವೆ
· ನಿರಂತರ ಭ್ರಷ್ಟಾಚಾರದ ಆರೋಪಗಳು
· ಬಿಎಸ್​ಎನ್​ಎಲ್​ನ ಸಿಮ್ೆ ಜನ ಮುಗಿಬೀಳುತ್ತಿದ್ದ ಕಾಲದಲ್ಲಿ ಆಧುನೀಕರಣಕ್ಕೆ ಸಿಗದ ಅನುಮತಿ
· 3ಜಿ, 4ಜಿ ತರಂಗಾಂತರ ಖರೀದಿಯಲ್ಲೂ ಅಧಿಕಾರಶಾಹಿ ವಿಳಂಬ, ಖಾಸಗಿ ಕಂಪನಿಗಳಿಗೆ ಲಾಭ
ನಷ್ಟಕ್ಕೆ ನಾಂದಿ:2000ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಲಾಭ ಗಳಿಸುತ್ತಿದ್ದ ಭಾರತದ ಪ್ರಮುಖ ದೂರಸಂಪರ್ಕ ದೈತ್ಯ ಕಂಪನಿಯಾಗಿದ್ದ ಬಿಎಸ್​ಎನ್​ಎಲ್, 2009ರಲ್ಲಿ ಮೊದಲ ಬಾರಿಗೆ 1,822 ಕೋಟಿ ರೂ.ಗಳ ನಷ್ಟ ಅನುಭವಿಸಿತು. ಕಳೆದ 13 ವರ್ಷಗಳಲ್ಲಿ ಕಂಪನಿಯು 1.02 ಲಕ್ಷ ಕೋಟಿ ರೂ.ಗಳ ನಷ್ಟ ಅನುಭವಿಸಿದೆ. 2021-22ರಲ್ಲಿ ಕಂಪನಿಯ ನಷ್ಟ, ಹಿಂದಿನ ವರ್ಷದ 7441.12 ಕೋಟಿ ರೂ.ಗಳಿಂದ 6981.62 ಕೋಟಿ ರೂ.ಗೆ ಇಳಿದಿದೆ. ಕಳೆದ ಆರ್ಥಿಕ ವರ್ಷದಲ್ಲಿ -ಠಿ;19,052 ಕೋಟಿಗಳ ಆದಾಯ ಮತ್ತು 26,034 ಕೋಟಿ ರೂಪಾಯಿಗಳ ವೆಚ್ಚದಿಂದಾಗಿ, ಈ ನಷ್ಟ ಅನುಭವಿಸಿದೆ.
ಪುನರುಜ್ಜೀವನ ಎಷ್ಟು ಮುಖ್ಯ?:ಭಾರತದ ಉದ್ದಗಲಕ್ಕೂ ವಿಸ್ತರಿಸಿರುವ ಬಿಎಸ್​ಎನ್​ಎಲ್, ಗಡಿ ಮತ್ತು ಸೂಕ್ಷ್ಮ ವಲಯದಲ್ಲಿನ ಸೇವೆಗೆ ಹಾಗೂ ಗ್ರಾಮೀಣ ಭಾರತಕ್ಕೆ ಡಿಜಿಟಲ್ ಸೇವೆಗಳನ್ನು ಒದಗಿಸಲು ಅನಿವಾರ್ಯ. ಹಾಗೆಯೇ, ಖಾಸಗಿ ಕಂಪನಿಗಳು ಏಕಪಕ್ಷೀಯವಾಗಿ ದರ ಏರಿಕೆ ಮಾಡದಂತೆ ತಡೆಯಲು ಕೂಡ ಸರ್ಕಾರಿ ಕಂಪನಿಯು ಮಾರುಕಟ್ಟೆಯಲ್ಲಿ ಜೀವಂತವಾಗಿರಬೇಕು.
ಮೂರು ಪ್ಯಾಕೇಜ್​ಗಳ ನಂತರವೂ ಬಿಎಸ್​ಎನ್​ಎಲ್​ನ ಸವಾಲುಗಳು ಹೆಚ್ಚುತ್ತಲೇ ಇವೆ. ವಿಶ್ವದಾದ್ಯಂತ ಟೆಲಿಕಾಂ ಆಪರೇಟರ್​ಗಳು 5ಜಿ ಪರಿಚಯಿಸಲು ಸ್ಪರ್ಧೆಗಿಳಿದಿದ್ದಾರೆ. ಬಿಎಸ್​ಎನ್​ಎಲ್ ಇನ್ನೂ 4ಜಿ ಪ್ರಾರಂಭಿಸುವ ಹಂತದಲ್ಲಿದ್ದು, ಇದಕ್ಕಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹಾಗೂ ಐಟಿಐನೊಂದಿಗೆ 19,000 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಈ ಸೇವೆಯ ಪ್ರಯೋಗದ ಹಂತ ಮುಗಿಸಿದ್ದು, 4ಜಿ ನೆಟ್​ವರ್ಕ್ ಪ್ರಾರಂಭಿಸಲು ಕಂಪನಿಯು ಸಿದ್ಧತೆ ನಡೆಸಿದೆ. ಆ ಬಳಿಕ ದಿನಕ್ಕೆ ಸರಾಸರಿ 200 ಸೈಟ್​ಗಳಿಗೆ ಹೆಚ್ಚಿಸುವ ಗುರಿ ಹೊಂದಿದೆ. 1 ಲಕ್ಷ ಸೈಟ್​ಗಳನ್ನು 4ಜಿಗೆ ಪರಿವರ್ತಿಸಲು ಅಂದಾಜು ಕನಿಷ್ಠ ಒಂದೂವರೆ ವರ್ಷಗಳ ಕಾಲಾವಧಿ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ. ಆ ವೇಳೆಗೆ 4ಜಿ ಅನ್ನುವುದು ಅರ್ಥಹೀನವಾಗಲಿದೆ. ಈ ಪ್ರಕ್ರಿಯೆ ಮುಗಿದ ನಂತರವಷ್ಟೇ ಬಿಎಸ್​ಎನ್​ಎಲ್ 5ಜಿಗೆ ಹೊಗಲು ಸಾಧ್ಯ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮುಂತಾದ ಪ್ರಮುಖ ನಗರಗಳಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಈಗಾಗಲೇ 5ಜಿ ಸೇವೆಯನ್ನು ಒದಗಿಸಿದ್ದು, ವೇಗವಾಗಿ ವಿಸ್ತರಿಸುತ್ತಿವೆ. ಈ ವಿಳಂಬದಿಂದಾಗಿ ಇನ್ನಷ್ಟು ಚಂದಾದಾರರನ್ನು ಬಿಎಸ್​ಎನ್​ಎಲ್ ಕಳೆದುಕೊಳ್ಳಲು ಕಾರಣವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಅಂದಾಜು 1 ಕೋಟಿ ಚಂದಾದಾರರನ್ನು ಕಳೆದುಕೊಂಡಿರುವ ಬಿಎಸ್​ಎನ್​ಎಲ್​ನ ಪ್ರಸ್ತುತ ವೈರ್​ಲೆಸ್ ಚಂದಾದಾರರ ಸಂಖ್ಯೆ 10.35 ಕೋಟಿ ಆಗಿದ್ದು, ಇದು ಎಲ್ಲಾ ನಾಲ್ಕು ಆಪರೇಟಿಂಗ್ ಟೆಲಿಕಾಂ ಆಪರೇಟರ್​ಗಳಲ್ಲಿ ಅತ್ಯಂತ ಕಡಿಮೆಯಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
