ನವದೆಹಲಿ:ದೇಶದಲ್ಲಿ ಕರೊನಾ ವೈರಸ್ ಹಾವಳಿ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 18 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ 24 ತಾಸಿನಲ್ಲಿ 1,270 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 18,407ಕ್ಕೆ ಏರಿಕೆಯಾಗಿದೆ. 21 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 577ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈವರೆಗೆ 3,020 ಜನರು ಗುಣಮುಖರಾಗಿದ್ದು, ಸದ್ಯ 14,810 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಮತ್ತೆ 466 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 4,666ಕ್ಕೆ ಏರಿಕೆಯಾಗಿದೆ. ಮುಂಬೈನ ಧಾರಾವಿ ಕೊಳಗೇರೆ ಕರೊನಾ ಹಾಟ್​ಸ್ಪಾಟ್ ಆಗಿದ್ದು, ಅಲ್ಲಿ ಹೊಸದಾಗಿ 30 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 168ಕ್ಕೆ ಏರಿಕೆಯಾಗಿದ್ದು, ಇಲ್ಲಿ ಈವರೆಗೆ 11 ಜನರು ಸಾವನ್ನಪ್ಪಿದ್ದಾರೆ. ಹೊಸ 30 ಪ್ರಕರಣಗಳಲ್ಲಿ 17 ರೋಗಿಗಳು 35 ವರ್ಷದ ಒಳಗಿನವರಾಗಿದ್ದು, 2 ವರ್ಷದ ಹಾಗೂ 15 ವರ್ಷದ ಮಕ್ಕಳೂ ಕೂಡ ಸೋಂಕಿಗೆ ಒಳಗಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ 507 ಜನರು ಗುಣಮುಖರಾಗಿದ್ದು, ನಂತರ ಸ್ಥಾನಗಳಲ್ಲಿ ತಮಿಳುನಾಡು-457, ಕೇರಳ-291 ಹಾಗೂ ದೆಹಲಿ-290 ಇವೆ. ಗುಜರಾತ್​ನಲ್ಲಿ 201 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,944ಕ್ಕೆ ಏರಿಕೆಯಾಗಿದೆ. ರಾಜಸ್ಥಾನ, ತಮಿಳುನಾಡು, ಮಧ್ಯಪ್ರದೇಶದಲ್ಲಿ ತಲಾ 1,500 ಪ್ರಕರಣ ವರದಿಯಾಗಿವೆ.
ಕರೊನಾ ವಿರುದ್ಧ ಮಿಲ್ಖಾ ಸಿಂಗ್ ಪುತ್ರಿ ಹೋರಾಟ:ಅಥ್ಲೀಟ್ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ ಹಾಗೂ ಗಾಲ್ಪ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಹಿರಿಯ ಸಹೋದರಿ, ಮೊನಾ ಮಿಲ್ಖಾ ಸಿಂಗ್ ಅಮೆರಿಕದ ನ್ಯೂಯಾರ್ಕ್ ನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನ್ಯೂಯಾರ್ಕ್​ನ ಮೆಟ್ರೋಪಾಲಿಟನ್ ಆಸ್ಪತ್ರೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ನಾಲ್ಕು ಬಾರಿ ಯುರೋಪಿಯನ್ ಟೂರ್ ಚಾಂಪಿಯನ್ ಆಗಿರುವ ಜೀವ್ ತಿಳಿಸಿದ್ದಾರೆ.
ದ್ವಿಗುಣಗೊಳ್ಳುವಿಕೆ ಪ್ರಮಾಣ ಇಳಿಕೆ:ದೇಶದಲ್ಲಿ ಕರೊನಾ ಪ್ರಕರಣಗಳು ದ್ವಿಗುಣಗೊಳ್ಳುವ ಅವಧಿ ಇಳಿಕೆಯಾಗಿದೆ. ಲಾಕ್​ಡೌನ್​ಗೂ ಮುಂಚೆ 3.5 ದಿನ ಇದ್ದ ದ್ವಿಗುಣಗೊಳ್ಳುವಿಕೆ ಅವಧಿ ಈಗ 7.5 ದಿನಗಳಿಗೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಂದರೆ ಈ ಹಿಂದೆ ಒಟ್ಟು ಪ್ರಕರಣಗಳ ಸಂಖ್ಯೆ ಅದರ ದುಪ್ಪಟ್ಟಾಗಲು 3.5 ದಿನದ ಸಮಯವಕಾಶ ಹಿಡಿಯುತ್ತಿತ್ತು. ಈಗ ಈ ಅವಧಿ 7.5 ದಿನಗಳಿಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ 9.2 ದಿನ, ತೆಲಂಗಾಣದಲ್ಲಿ 9.4 ದಿನ, ಆಂಧ್ರಪ್ರದೇಶದಲ್ಲಿ 10.6 ದಿನ ಆಗಿದೆ.
ವಿದೇಶಿಗರು ವಾಪಸ್:ಇಟಲಿ ಮತ್ತು ಇಂಗ್ಲೆಂಡ್ ಪ್ರವಾಸಿಗರು ಸೋಮವಾರ ಖಾಸಗಿ ವಾಹನದ ಮೂಲಕ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ಮಂಗಳವಾರ ಬೆಳಗಿನ ಜಾವ ತಮ್ಮ ದೇಶಕ್ಕೆ ವಿಶೇಷ ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ. ಇಟಲಿಯ 12 ಮತ್ತು ಇಂಗ್ಲೆಂಡ್​ನ 3 ಪ್ರವಾಸಿಗರಿಗೆ ಮಾತ್ರ ಅವಕಾಶ ದೊರೆತಿದೆ.
ಅರ್ಧ ಭಾರತ ಕರೊನಾ ಮುಕ್ತ:ದೇಶದಲ್ಲಿ 18 ಸಾವಿರಕ್ಕಿಂತ ಹೆಚ್ಚು ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದರೂ ಭಾರತದ ಅರ್ಧದಷ್ಟು ಭಾಗ ಕರೊನಾದಿಂದ ಮುಕ್ತವಾಗಿದೆ. ಒಟ್ಟು 736 ಜಿಲ್ಲೆಗಳಲ್ಲಿ 325 ಅಂದರೆ ಶೇ. 46 ಜಿಲ್ಲೆಗಳಲ್ಲಿ ಈವರೆಗೆ ಒಂದೇ ಒಂದು ಕರೊನಾ ಸೋಂಕು ಪ್ರಕರಣ ವರದಿಯಾಗಿಲ್ಲ. ಹೀಗಾಗಿ ಸರ್ಕಾರದಕ್ಕೆ ದೇಶದ ಹೆಚ್ಚು ಭಾಗಗಳಲ್ಲಿ ನಿರ್ಬಂಧ ಸಡಿಲಿಸುವಲ್ಲಿ ಕಷ್ಟವಾಗುವುದಿಲ್ಲ ಎನ್ನಲಾಗಿದೆ. ಒಟ್ಟು 411 ಜಿಲ್ಲೆಗಳಲ್ಲಿ ಕರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 18 ಜಿಲ್ಲೆಗಳು 100ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿವೆ. ಮುಂಬೈ, ಇಂದೋರ್, ಹೈದರಾಬಾದ್, ಕೊರ್ಬಾ, ರಾಂಚಿ ಹಾಗೂ ಕುದ್ರಾ ನಗರಗಳು ಆಯಾ ರಾಜ್ಯಗಳು ಹೊಂದಿರುವ ಸೋಂಕು ಪ್ರರಕಣಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿವೆ. ಜತೆಗೆ ಎಲ್ಲ ರಾಜ್ಯಗಳಲ್ಲಿ ಕೆಲ ಹಾಟ್​ಸ್ಟಾಟ್ ಜಿಲ್ಲೆಗಳಿಂದ ಮಾತ್ರ ಕರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.
ಅಮೆರಿಕ ಸ್ಪೇನ್​ಗೆ ಸಂಕಷ್ಟ:ಅಮೆರಿಕದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 41 ಸಾವಿರಕ್ಕಿಂತ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ 8 ಲಕ್ಷದತ್ತ ಸಾಗಿದೆ. ಕರೊನಾ ಆರ್ಭಟಕ್ಕೆ ಸಾವಿನ ಪ್ರಮಾಣ ಕೇವಲ 4 ದಿನಗಳಲ್ಲಿ 30 ಸಾವಿರದಿಂದ 40 ಸಾವಿರಕ್ಕೆ ಏರಿಕೆಯಾಗಿದೆ. ನ್ಯೂಯಾರ್ಕ್ ನಗರವೊಂದರಲ್ಲೇ ಸುಮಾರು 18 ಸಾವಿರ ಜನರು ಸಾವನ್ನಪ್ಪಿದ್ದಾರೆ. ಸ್ಪೇನ್​ನಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದ್ದು, ಅಮೆರಿಕದ ನಂತರ ಅತೀ ಹೆಚ್ಚು ಸೋಂಕು ಪ್ರಕರಣಗಳು ಇಲ್ಲಿಂದ ವರದಿಯಾಗಿವೆ. ಮೃತರ ಸಂಖ್ಯೆಯೂ 20 ಸಾವಿರ ಗಡಿ ದಾಟಿದ್ದು, ವಿಶ್ವದಲ್ಲೇ ಸಾವಿನ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿದೆ. ಇಟಲಿಯಲ್ಲಿ 23 ಸಾವಿರ ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ವುಹಾನ್​ಗೆ ಪ್ರವೇಶವಿಲ್ಲ:ಕರೊನಾ ವೈರಸ್​ನ ಮೂಲದ ಬಗ್ಗೆ ತನಿಖೆ ನಡೆಸಲು ತನಿಖಾ ತಂಡಕ್ಕೆ ವುಹಾನ್​ಗೆ ಭೇಟಿ ನೀಡಲು ಅನುಮತಿ ನೀಡಬೇಕು ಎಂದು ಅಮೆರಿಕ ಮಾಡಿದ್ದ ಮನವಿಯನ್ನು ಚೀನಾ ತಿರಸ್ಕರಿಸಿದೆ. ನಾವು ಅಪರಾಧಿಗಳಲ್ಲ, ಸಂತ್ರಸ್ತರು ಎಂದು ಚೀನಾ ಹೇಳಿದೆ. ಕರೊನಾ ವೈರಸ್ ಚೀನಾದ ವುಹಾನ್​ನಲ್ಲಿರುವ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಹರಿಡಿದೆಯೇ ಎಂಬ ಬಗ್ಗೆ ಅಮೆರಿಕ ಈಗಾಗಲೇ ತನಿಖೆ ಪ್ರಾರಂಭಿಸಿದೆ.
ಸುರಕ್ಷತಾ ಉಪಕರಣಗಳಿಗೆ ಜಿಎಸ್​ಟಿ ಬೇಡ;ಕರೊನಾಗೆ ಸಂಬಂಧಿಸಿದ ಎಲ್ಲ ಉಪಕರಣಗಳನ್ನು ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್​ಟಿ) ಮುಕ್ತಗೊಳಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸ್ಯಾನಿಟೈಸರ್​ಗಳು, ಸಾಬೂನು, ಕೈಗವಸು ಹಾಗೂ ಮಾಸ್ಕ್​ಗಳಿಗೆ ಜಿಎಸ್​ಟಿ ವಿಧಿಸುವುದು ಸರಿಯಲ್ಲ ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಾಂಕ್ರಾಮಿಕ ರೋಗ ನಿರ್ವಹಿಸುವಲ್ಲಿ ಬಳಸಲಾಗುವ ಯಾವುದೇ ಉಪಕರಣಗಳಿಗೆ ಜಿಎಸ್​ಟಿ ವಿಧಿಸಬಾರದು.
ಸೋಂಕಿತರಿಗೆ ಲಕ್ಷಣವೇ ಇಲ್ಲ!ಭಾರತದಲ್ಲಿ ಕರೊನಾ ಸೋಂಕು ದೃಢಪಟ್ಟಿರುವವರ ಪೈಕಿ ಶೇ. 80 ಮಂದಿಗೆ ಈ ರೋಗದ ಗುಣಲಕ್ಷಣಗಳೇ ಗೋಚರಿಸಿಲ್ಲ. ಪರೀಕ್ಷೆ ಮಾಡಿದ ನಂತರವೇ ಪಾಸಿಟಿವ್ ಅಂಶ ಗೊತ್ತಾಗುತ್ತದೆ. ಇದು ಅತ್ಯಂತ ಆತಂಕದ ವಿಚಾರ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿಯ (ಐಸಿಎಂಆರ್) ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಸೋಂಕಿನ ಗುರುತೇ ಇರದಿದ್ದರೆ ಅಂತಹವರನ್ನು ಪತ್ತೆ ಹಚ್ಚುವುದು ಕಠಿಣ ಕೆಲಸ. ಇಂಥವರ ಸಂಪರ್ಕಕ್ಕೆ ಬಂದವರನ್ನು ಗುರುತಿಸುವುದು ಶ್ರಮದಾಯಕ. ಇಂಥ ಸನ್ನಿವೇಶದಲ್ಲಿ ಸೋಂಕು ಇದೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪರೀಕ್ಷೆಯೊಂದೇ ಮಾರ್ಗ. ಆದರೆ ಶಂಕಿತರೆಲ್ಲರನ್ನೂ ಪರೀಕ್ಷೆಗೆ ಗುರಿಪಡಿಸುವುದು ಬಹುತೇಕ ಅಸಾಧ್ಯ ಎಂದು ಡಾ. ರಮಣ ಆರ್. ಗಂಗಾಖೇಡ್ಕರ್ ತಿಳಿಸಿದ್ದಾರೆ. ಶಂಕಿತರಲ್ಲಿ ಸೋಂಕು ಗುರುತಿಸಲು ಪರ್ಯಾಯ ಮಾರ್ಗವೂ ಇಲ್ಲ. ಹಾಟ್​ಸ್ಟಾಟ್​ಗಳೆಂದು ಗುರುತಿಸಿರುವ ಕಡೆ ಇನ್​ಫ್ಲೂಂಜಾ ಮಾದರಿಯ ಪರೀಕ್ಷೆಯನ್ನು ಈಗಾಗಲೇ ಮಾಡಲಾಗುತ್ತಿದೆ. ಮೇ ಎರಡನೇ ವಾರದಲ್ಲಿ ಸೋಂಕು ಶಂಕಿತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಹೀಗಾಗಿ ದೇಶದ ಕರೊನಾ ಪರಿಸ್ಥಿತಿಯನ್ನು ಅವಲೋಕಿಸಲು ಸಾಧ್ಯ ಎಂದಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eight =
Remember me
