| ಗಿರೀಶ್ ಲಿಂಗಣ್ಣಭಾರತ ಜಗತ್ತಿನಾದ್ಯಂತ ವಿವಿಧ ರಾಷ್ಟ್ರಗಳ ನಾಯಕರನ್ನು ನವದೆಹಲಿಯ ಭಾರತ ಮಂಡಪಂ ಸಭಾಭವನದಲ್ಲಿ ನಡೆಯುತ್ತಿರುವ 18ನೇ ಜಿ-20 ಶೃಂಗಸಭೆಗಾಗಿ ಸ್ವಾಗತಿಸಿದೆ. ಶೃಂಗಸಭೆ ಸೆಪ್ಟೆಂಬರ್ 9 ಮತ್ತು 10ರಂದು ಜರುಗುತ್ತಿದ್ದು, ಇದರೊಡನೆ ಭಾರತದ ಒಂದು ವರ್ಷದ ಜಿ-20 ನಾಯಕತ್ವ ಕೊನೆಯಾಗಲಿದೆ.
ಸೆಪ್ಟೆಂಬರ್ 9-10ರಂದು ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಜಗತ್ತಿನ 20 ಪ್ರಮುಖ, ಬೃಹತ್ ಆರ್ಥಿಕತೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿ 19 ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟ (ಇಯು) ಸೇರಿವೆ.
ನವದೆಹಲಿಯ ಜಿ-20 ಶೃಂಗಸಭೆಗೆ ಒಂಬತ್ತು ರಾಷ್ಟ್ರಗಳಿಗೆ ಅತಿಥಿಯಾಗಿ ಆಹ್ವಾನ ನೀಡಲಾಗಿದೆ. ಅವೆಂದರೆ, ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಒಮಾನ್, ಸಿಂಗಾಪುರ, ಸ್ಪೇನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ).
ಜಿ-20 ಶೃಂಗಸಭೆಯಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಅದರಲ್ಲಿ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್), ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ), ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ), ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ), ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಹಾಗೂ ಫೈನಾನ್ಸಿಯಲ್ ಸ್ಟೆಬಿಲಿಟಿ ಬೋರ್ಡ್ (ಎಫ್ಎಸ್‌ಬಿ) ಸೇರಿವೆ.
ಪ್ರಾದೇಶಿಕ ಸಂಘಟನೆಗಳಾದ, ಹತ್ತು ಸದಸ್ಯರನ್ನೊಳಗೊಂಡ ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ (ASEAN) ಹಾಗೂ 55 ಸದಸ್ಯ ರಾಷ್ಟ್ರಗಳುಳ್ಳ ಆಫ್ರಿಕನ್ ಯೂನಿಯನ್ (ಎಯು) ಸಹ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬದಲಿಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೇ ಲವ್‌ರೊವ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ‌ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶೃಂಗಸಭೆಯಿಂದ ಗೈರಾಗಲಿದ್ದಾರೆ.
ಚೀನಾದ ವಿದೇಶಾಂಗ ಸಚಿವಾಲಯ ಕ್ಸಿ ಜಿನ್‌ಪಿಂಗ್ ಬದಲಿಗೆ ಚೀನಾದ ಪ್ರೀಮಿಯರ್ ಲಿ ಕಿಯಾಂಗ್ ಅವರು ಚೀನಾವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿಸಿದೆ.
ಭಾರತದ ಜಿ-20 ನಾಯಕತ್ವದ ಅವಧಿಯಲ್ಲಿ, ಸದಸ್ಯ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದು, ಅವುಗಳಿಗೆ ಸಾಕಷ್ಟು ಆಹಾರ, ರಸಗೊಬ್ಬರಗಳನ್ನು ಪೂರೈಸಲು ಕ್ರಮ ಕೈಗೊಂಡಿವೆ. ಅದರೊಡನೆ, ಜಾಗತಿಕ ಅಭಿವೃದ್ಧಿ ಬ್ಯಾಂಕ್‌ಗಳನ್ನು ಇನ್ನಷ್ಟು ನ್ಯಾಯಯುತವಾಗಿಸಿ, ಸಾಲ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮತ್ತು ಪಾರಿಸರಿಕ ಬದಲಾವಣೆಗಳನ್ನು ಪ್ರಚುರಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭಾರತದ ಜಿ-20 ಅಧ್ಯಕ್ಷೀಯ ಅವಧಿಯಲ್ಲಿ ‘ವಸುಧೈವ ಕುಟುಂಬಕಂ’ ಎಂಬ ಘೋಷ ವಾಕ್ಯವನ್ನು ಆರಿಸಲಾಗಿದ್ದು, ಇದು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಅರ್ಥ ನೀಡುತ್ತದೆ.
ಅಧಿಕೃತ ದಾಖಲೆಗಳ ಪ್ರಕಾರ, ಜಿ-20 ಎನ್ನುವುದು ಜಾಗತಿಕವಾಗಿ ವಿವಿಧ ರಾಷ್ಟ್ರಗಳ ಗುಂಪಾಗಿದ್ದು, ಜಾಗತಿಕ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸಲು ವಿವಿಧ ರಾಷ್ಟ್ರಗಳು ಸಹಯೋಗ ಸಾಧಿಸಿ ಕಾರ್ಯಾಚರಿಸುವ ವೇದಿಕೆಯಾಗಿದೆ.
ಜಿ-20 ಸದಸ್ಯರು ಜಗತ್ತಿನ ಆರ್ಥಿಕತೆಯ 85% ಪಾಲು ಹೊಂದಿದ್ದು, ಜಾಗತಿಕ ವ್ಯಾಪಾರದಲ್ಲಿ 75% ಪಾಲು ಹೊಂದಿವೆ. ಜಿ-20 ರಾಷ್ಟ್ರಗಳು ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಪಾಲು ಹೊಂದಿವೆ.
1999ರ ಏಷ್ಯಾದ ಆರ್ಥಿಕ ಬಿಕ್ಕಟ್ಟಿನ ಬಳಿಕ ಜಿ-20 ಸ್ಥಾಪಿಸಲಾಯಿತು. ಆರಂಭದಲ್ಲಿ ಜಿ-20 ಎನ್ನುವುದು ಆರ್ಥಿಕ ಸಚಿವರು ಮತ್ತು ಸದಸ್ಯ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳ ನಾಯಕರು ಸಭೆ ಸೇರುವ ವೇದಿಕೆಯಾಗಿತ್ತು.
2008ರಲ್ಲಿ, ಜಿ-20 ಹೆಚ್ಚು ಮಹತ್ವ ಪಡೆದುಕೊಂಡ ವೇದಿಕೆಯಾಗಿ, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ದೇಶಗಳು ಜೊತೆಯಾಗಿ ಕೆಲಸ ಮಾಡಲು ಅನುಕೂಲ ಕಲ್ಪಿಸಿತ್ತು. 2008ರ ಆರ್ಥಿಕ ಹಣಕಾಸು ಬಿಕ್ಕಟ್ಟಿನ ಬಳಿಕ ಈ ಬದಲಾವಣೆ ನಡೆಯಿತು. ನವೆಂಬರ್ 2008ರಲ್ಲಿ ಜಿ-20 ಶೃಂಗಸಭೆ ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನೆರವೇರಿತು.
ಜಿ-20ಗೆ ತನ್ನದೇ ಆದ ಶಾಶ್ವತ ಕಚೇರಿ ಇಲ್ಲ. ಅದರ ಬದಲಿಗೆ, ಪ್ರತಿ ವರ್ಷವೂ ಒಂದೊಂದು ಸದಸ್ಯ ರಾಷ್ಟ್ರ ಜಿ-20 ಅಧ್ಯಕ್ಷತೆ ವಹಿಸಿಕೊಳ್ಳುತ್ತದೆ. ಈ ವ್ಯವಸ್ಥೆಯನ್ನು ‘ಆವರ್ತನ ಅಧ್ಯಕ್ಷೀಯ’ ವ್ಯವಸ್ಥೆ ಎಂದು ಕರೆಯಲಾಗುತ್ತದೆ.
ಜಿ-20 ತನ್ನ ಸದಸ್ಯರನ್ನು ಐದು ಗುಂಪುಗಳಲ್ಲಿ ವಿಭಾಗಿಸುತ್ತದೆ. ಮೊದಲ ಗುಂಪಿನಲ್ಲಿ ಆಸ್ಟ್ರೇಲಿಯಾ, ಕೆನಡಾ, ಸೌದಿ ಅರೇಬಿಯಾ, ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿವೆ. ಎರಡನೆಯ ಗುಂಪಿನಲ್ಲಿ ಭಾರತ, ರಷ್ಯಾ, ದಕ್ಷಿಣ ಆಫ್ರಿಕಾ, ಹಾಗೂ ಟರ್ಕಿಗಳಿವೆ. ಮೂರನೆಯ ಗುಂಪಿನಲ್ಲಿ ಅರ್ಜೆಂಟೀನಾ, ಬ್ರೆಜಿಲ್, ಹಾಗೂ ಮೆಕ್ಸಿಕೋಗಳಿವೆ. ನಾಲ್ಕನೇ ಗುಂಪಿನಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ, ಹಾಗೂ ಯುನೈಟೆಡ್ ಕಿಂಗ್‌ಡಮ್ ಗಳು ಸದಸ್ಯರಾಗಿವೆ. ಅಂತಿಮವಾಗಿ ಐದನೇ ಗುಂಪಿನಲ್ಲಿ ಚೀನಾ, ಇಂಡೋನೇಷ್ಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿವೆ.
ಭಾರತದ ಅಧ್ಯಕ್ಷೀಯ ಅವಧಿಯಲ್ಲಿ, ಜಿ-20 ಅಧ್ಯಕ್ಷರಿಗೆ ‘ಟ್ರಾಯ್ಕ’ ಎಂಬ ಗುಂಪು ಬೆಂಬಲ ನೀಡುತ್ತದೆ. ಈ ಗುಂಪಿನಲ್ಲಿ ಹಿಂದಿನ ಅವಧಿಯ ಅಧ್ಯಕ್ಷ (ಇಂಡೋನೇಷ್ಯಾ), ಪ್ರಸ್ತುತ ಅಧ್ಯಕ್ಷ (ಭಾರತ) ಹಾಗೂ ಮುಂದಿನ ಅಧ್ಯಕ್ಷ (ಬ್ರೆಜಿಲ್) ಕಾರ್ಯ ನಿರ್ವಹಿಸುತ್ತವೆ.
ಜಿ-20 ಅಧ್ಯಕ್ಷರು ಪ್ರಮುಖವಾಗಿ ಚರ್ಚೆಗಳಿಗೆ ಮಾರ್ಗದರ್ಶನ ನೀಡುವುದು ಹಾಗೂ ಯೋಜನೆಗಳನ್ನು ರೂಪಿಸುವುದರ ಜವಾಬ್ದಾರಿ ಹೊಂದಿರುತ್ತಾರೆ. ಜಿ-20 ಗುಂಪು ಪ್ರಮುಖವಾಗಿ ಎರಡು ಭಾಗಗಳನ್ನು ಹೊಂದಿರುತ್ತದೆ. ಒಂದು ಭಾಗವನ್ನು ಫೈನಾನ್ಸ್ ಟ್ರ್ಯಾಕ್ ಎಂದರೆ ಇನ್ನೊಂದು ಭಾಗವನ್ನು ಶೆರ್ಪಾ ಟ್ರ್ಯಾಕ್ ಎನ್ನಲಾಗುತ್ತದೆ.
ಫೈನಾನ್ಸ್ ಟ್ರ್ಯಾಕನ್ನು ವಿವಿಧ ರಾಷ್ಟ್ರಗಳ ಅರ್ಥ ಸಚಿವರು ಹಾಗೂ ಆ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳ ಮುಖ್ಯಸ್ಥರು ಮುನ್ನಡೆಸುತ್ತಾರೆ.
ಎರಡೂ ವಿಭಾಗಗಳಡಿ, ವಿವಿಧ ಕಾರ್ಯಾತ್ಮಕ ಗುಂಪುಗಳಿರುತ್ತವೆ. ಅವುಗಳಲ್ಲಿ ವಿವಿಧ ರಾಷ್ಟ್ರಗಳ ಸಚಿವಾಲಯಗಳ ಪ್ರತಿನಿಧಿಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳಿರುತ್ತಾರೆ.
ಎರಡು ವಿಭಾಗಗಳಡಿಯಲ್ಲೂ ಹಲವಾರು ಕಾರ್ಯಾಚರಿಸುವ ಗುಂಪುಗಳಿದ್ದು, ಅದರಲ್ಲಿ ಸದಸ್ಯ ರಾಷ್ಟ್ರಗಳ ವಿವಿಧ ಸಚಿವಾಲಯಗಳ ಪ್ರತಿನಿಧಿಗಳಿರುತ್ತಾರೆ.
ಜಿ-20ಯಲ್ಲಿ ಹಲವು ‘ಎಂಗೇಜ್‌ಮೆಂಟ್ ಗುಂಪು’ಗಳಿದ್ದು, ಅವುಗಳು ನಾಗರಿಕ ಸಮಾಜ, ಉದ್ಯಮಗಳು, ಸಂಶೋಧನಾ ವಲಯದ ಹಾಗೂ ಮತ್ತಿತರ ವಲಯಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಭಾರತದ ಅಧ್ಯಕ್ಷೀಯ ಅವಧಿ ಅಧಿಕೃತವಾಗಿ ನವೆಂಬರ್ ತಿಂಗಳಲ್ಲಿ ಕೊನೆಗೊಳ್ಳಲಿದ್ದು, ಇಲ್ಲಿಯತನಕ ಭಾರತದಾದ್ಯಂತ 60 ವಿವಿಧ ನಗರಗಳಲ್ಲಿ 220ಕ್ಕೂ ಹೆಚ್ಚು ಸಭೆಗಳು ಜರುಗಿವೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಆಗಾಗ್ಗೆ ಭಾರತ ಗ್ಲೋಬಲ್ ಸೌತ್ ಕ್ಷೇಮಾಭಿವೃದ್ಧಿಯ ವಿಚಾರಗಳಿಗೆ ಒತ್ತು ನೀಡಿದೆ ಎಂದಿದ್ದಾರೆ.
ಭಾರತದ ಅಧ್ಯಕ್ಷೀಯ ಅವಧಿಯ ಆರಂಭದಲ್ಲಿ, ಭಾರತ ವಾಯ್ಸ್ ಆಫ್ ಗ್ಲೋಬಲ್ ಸೌತ್ ಎಂಬ ಡಿಜಿಟಲ್ ಸಮ್ಮೇಳನವನ್ನು ಆಯೋಜಿಸಿತ್ತು. ಇದರಲ್ಲಿ 125ಕ್ಕೂ ಹೆಚ್ಚು ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರು ಭಾಗವಹಿಸಿದ್ದರು.
ತನ್ನ ಜಿ-20 ಅಧ್ಯಕ್ಷೀಯ ಅವಧಿಯಲ್ಲಿ ಭಾರತ ಆಹಾರ ಮತ್ತು ರಸಗೊಬ್ಬರಗಳ ಪೂರೈಕೆ ವ್ಯವಸ್ಥೆ ರಾಜಕೀಯೇತರಗೊಳಿಸಬೇಕು ಎಂದು ಆಗ್ರಹಿಸಿದ್ದು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲದ ಸಮಸ್ಯೆಗಳನ್ನು ನಿಭಾಯಿಸಲು ಒಂದು ಸಾಮಾನ್ಯ ವಿಧಾನವನ್ನು ಅಳವಡಿಸಬೇಕು ಎಂದಿತ್ತು.
ನವದೆಹಲಿ ಜಾಗತಿಕ ಸಂಸ್ಥೆಗಳನ್ನು ನ್ಯಾಯಯುತವಾಗಿಸಲು ಮತ್ತು ಎಲ್ಲ ರಾಷ್ಟ್ರಗಳಿಗೂ ಸಹಾಯವಾಗುವಂತೆ ಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿತ್ತು. ಪ್ರಧಾನಿ ಮೋದಿ ಜಿ-20 ನಾಯಕರ ಬಳಿ ಆಫ್ರಿಕನ್ ಯೂನಿಯನ್ ಅನ್ನು ನವದೆಹಲಿ ಶೃಂಗಸಭೆಯಲ್ಲಿ ಪೂರ್ಣಪ್ರಮಾಣದ ಸದಸ್ಯನನ್ನಾಗಿ ಘೋಷಿಸುವಂತೆ ಆಗ್ರಹಿಸಿದ್ದರು.
ಆಫ್ರಿಕನ್ ರಾಷ್ಟ್ರಗಳು ಭಾರತದ ನಡೆಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿವೆ. ಭಾರತದ ಓರ್ವ ಆಫ್ರಿಕನ್ ರಾಯಭಾರಿ ಭಾರತವನ್ನು ಶ್ಲಾಘಿಸುತ್ತಾ, ಜಿ-20ಯಲ್ಲಿ ಯಾವ ನಾಯಕರೂ ಭಾರತದ ರೀತಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ ಧ್ವನಿ ಎತ್ತಿರಲಿಲ್ಲ ಎಂದಿದ್ದಾರೆ.
ಭಾರತದ ಅಧ್ಯಕ್ಷೀಯ ಅವಧಿಯಲ್ಲಿ, ಬಾಲಿ ಜಿ-20 ಶೃಂಗಸಭೆಯ ಅಂತಿಮ ದಾಖಲೆಗಳ ರೀತಿಯಲ್ಲಿ ಇಲ್ಲಿಯತನಕ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ.
ಈ ಬಾರಿಯ ಜಿ-20 ಶೃಂಗಸಭೆಯಲ್ಲೂ ಉಕ್ರೇನ್ ಕದನಕ್ಕೆ ಸಂಬಂಧಿಸಿದಂತೆ ರಷ್ಯಾ ಮತ್ತು ಚೀನಾಗಳು ಒಂದು ಬದಿಯಲ್ಲಿದ್ದರೆ, ಪಾಶ್ಚಾತ್ಯ ಶಕ್ತಿಗಳು ಇನ್ನೊಂದು ಬದಿಯಲ್ಲಿರುವ ಸಾಧ್ಯತೆಗಳು ಹೆಚ್ಚಾಗಿವೆ.
ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಹಾಗೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಜಿ-20 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದರಿಂದ, ಪಾಶ್ಚಾತ್ಯ ನಾಯಕರು ಉಕ್ರೇನ್ ವಿಚಾರದ ಕುರಿತು ಮುಕ್ತವಾಗಿ ಚರ್ಚಿಸುವ ಸಾಧ್ಯತೆಗಳಿವೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್ ಜೈಶಂಕರ್ ಅವರು ಉಕ್ರೇನ್ ವಿವಾದದ ಕುರಿತು ಜಿ-20 ಶೃಂಗಸಭೆಯಲ್ಲಿ ಚರ್ಚಿಸುವ ಬದಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಚರ್ಚಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಐರೋಪ್ಯ ಒಕ್ಕೂಟದ ಅಧಿಕಾರಿಯೊಬ್ಬರ ಹೇಳಿಕೆಯ ಆಧಾರದಲ್ಲಿ, ಅಮೆರಿಕಾದ ಮಾಧ್ಯಮವೊಂದು ವರದಿ ಮಾಡಿದ್ದು, ಅದರಲ್ಲಿ ಭಾರತ ಈಗಾಗಲೇ ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಆಕ್ರಮಣವನ್ನು ಖಂಡಿಸದಿರುವ ರೀತಿಯಲ್ಲಿ ಭಾರತ ಹೇಳಿಕೆಯೊಂದನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಪಾಶ್ಚಾತ್ಯ ರಾಷ್ಟ್ರಗಳು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರನ್ನು ಆಹ್ವಾನಿಸಬೇಕೆಂದು ಒತ್ತಡ ಹೇರಿದ್ದರೂ, ಭಾರತ ದೃಢವಾಗಿ ನಿಂತು, ಅವರನ್ನು ಆಹ್ವಾನಿಸದಿರಲು ತೀರ್ಮಾನಿಸಿತ್ತು. ಯಾಕೆಂದರೆ, ಜೆಲೆನ್ಸ್‌ಕಿ ಆಗಮಿಸಿದರೆ, ಆಗ ಹೆಚ್ಚಿನ ಗಮನ ಗ್ಲೋಬಲ್ ಸೌತ್‌ನ ಅಭಿವೃದ್ಧಿಯ ಕುರಿತ ಚರ್ಚೆಯ ಬದಲು ವಿಚಾರಗಳು ಹಳಿ ತಪ್ಪಬಹುದು ಎಂದು ಭಾರತ ಅಭಿಪ್ರಾಯ ಪಟ್ಟಿತ್ತು. ರಷ್ಯಾದ ವಿದೇಶಾಂಗ ಸಚಿವರಾದ ಸೆರ್ಗೇ ಲಾವ್‌ರೊವ್ ಅವರು ಒಂದು ವೇಳೆ ಜಿ-20 ಸಮ್ಮೇಳನದ ಹೇಳಿಕೆ ರಷ್ಯಾದ ಉಕ್ರೇನ್ ದಾಳಿಯ ಕುರಿತ ಅಂಶವನ್ನು ಒಳಗೊಂಡಿರದಿದ್ದರೆ ಅದಕ್ಕೆ ಶೃಂಗಸಭೆಯಲ್ಲಿ ಎಲ್ಲರ ಅನುಮೋದನೆ ಲಭಿಸುವುದು ಕಷ್ಟಕರ ಎಂದು ಅಭಿಪ್ರಾಯ ಪಟ್ಟಿದ್ದರು.
ಅವುಗಳಲ್ಲಿ ಮಹತ್ತರ ಗುರಿಗಳು ಈ ಕೆಳಗಿನಂತಿವೆ:
1. ಭಾರತ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ವೇಗವಾಗಿ ಸಾಧಿಸಲು ಯೋಜನಾ ಮಾರ್ಗವೊಂದನ್ನು ಅಳವಡಿಸಿಕೊಂಡಿವೆ
ಸುಸ್ಥಿರ ಅಭಿವೃದ್ಧಿ ಗುರಿಗಳು (ಸಸ್ಟೇನೆಬಲ್ ಡೆವಲಪ್‌ಮೆಂಟ್ ಗೋಲ್ಸ್ – SDGs) ಎಂದರೆ, ಎಲ್ಲರಿಗೂ ಹೆಚ್ಚು ಸುಸ್ಥಿರವಾದ, ಸಮಾನವಾದ ಭವಿಷ್ಯವನ್ನು ಗಳಿಸುವ ನಿಟ್ಟಿನಲ್ಲಿ, ಹಲವಾರು ಸಾಮಾಜಿಕ, ಆರ್ಥಿಕ, ಹಾಗೂ ಪಾರಿಸರಿಕ ಸವಾಲುಗಳನ್ನು ಪೂರೈಸುವ ಗುರಿಗಳಾಗಿವೆ. ಈ ಗುರಿಗಳು ಬಡತನ ನಿವಾರಣೆ, ಎಲ್ಲರಿಗೂ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ಇಂಧನ, ಹವಾಮಾನ ಬದಲಾವಣೆ ಕ್ರಮಗಳು, ಹಾಗೂ ಮತ್ತಿತರ ವಿಭಾಗಗಳನ್ನು ಒಳಗೊಂಡಿವೆ. ಆ ಮೂಲಕ ಭೂಮಿಯ ನಾಗರಿಕರ ಜೀವನವನ್ನು ಉತ್ತಮಪಡಿಸುವ ಉದ್ದೇಶ ಹೊಂದಿವೆ.
2. ಜಾಗತಿಕ ಆಹಾರ ಸಮಸ್ಯೆಯನ್ನು ಪರಿಹರಿಸಲು ‘ಡೆಕ್ಕನ್ ಹೈ ಲೆವೆಲ್ ಪ್ರಿನ್ಸಿಪಲ್ಸ್’ ಎಂಬ ನೀತಿಗಳನ್ನು ಸೃಷ್ಟಿಸಲಾಗಿದೆ.
3. ಡಿಜಿಟಲ್ ಲಿಂಗ ತಾರತಮ್ಯ ಹೋಗಲಾಡಿಸಲು ಮತ್ತು ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸಲು ಒಪ್ಪಂದಗಳನ್ನು ಕೈಗೊಳ್ಳಲಾಗಿದೆ.
4. ‘ಹಸಿರು ಜಲಜನಕ’ (ಗ್ರೀನ್ ಹೈಡ್ರೋಜನ್) ನೀತಿಗಳನ್ನು ಆರಂಭಿಸಿ, ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ (ಗ್ಲೋಬಲ್ ಬಯೋಫ್ಯುಯೆಲ್ ಅಲಯನ್ಸ್) ಆರಂಭಿಸಲಾಗಿದೆ.
5. ವ್ಯಾಪಾರ ದಾಖಲಾತಿಗಳನ್ನು ಡಿಜಿಟಲೀಕರಣಗೊಳಿಸಿ, ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸಲು ಒಪ್ಪಂದ ಮಾಡಲಾಗಿದೆ.
6. ‘ಇಂಟರ್​​ನ್ಯಾಷನಲ್​ ರೆಫರೆನ್ಸ್ ಫಾರ್ ಜಾಬ್ ಕ್ಲಾಸಿಫಿಕೇಶನ್ಸ್’ ಕುರಿತು ಕ್ರಮ
ಇಂಟರ್​​ನ್ಯಾಷನಲ್​ ರೆಫರೆನ್ಸ್ ಫಾರ್ ಜಾಬ್ ಕ್ಲಾಸಿಫಿಕೇಶನ್ಸ್ ಎಂದರೆ, ವಿವಿಧ ಮಾದರಿಯ ಉದ್ಯೋಗಗಳನ್ನು ವರ್ಗೀಕರಿಸಲು ಮತ್ತು ವಿವರಿಸಲು ಒಂದು ಸರ್ವಸಮ್ಮತವಾದ, ಜಾಗತಿಕವಾಗಿ ಒಪ್ಪಿಗೆಯಾಗಬಲ್ಲ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿದೆ. ಈ ರೀತಿಯ ವರ್ಗೀಕರಣ ವ್ಯವಸ್ಥೆ ವಿವಿಧ ಪ್ರದೇಶಗಳಲ್ಲಿ ಮತ್ತು ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗದ ಟ್ರೆಂಡ್, ಕೌಶಲಗಳು ಹಾಗೂ ಉದ್ಯೋಗಾವಕಾಶಗಳ ಮಾಹಿತಿಗಳನ್ನು ಹೋಲಿಸಲು, ವಿಶ್ಲೇಷಿಸಲು ನೆರವಾಗುತ್ತದೆ. ಇದು ನಿಯಮಾವಳಿಗಳನ್ನು ರೂಪಿಸಲು, ಉದ್ಯೋಗಿಗಳನ್ನು ಯೋಜಿಸಲು ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ಮಾರುಕಟ್ಟೆಯನ್ನು ವಿಶ್ಲೇಷಿಸಲು ಪೂರಕವಾಗಿದೆ.
ಜಿ-20 ಶೃಂಗಸಭೆಗೂ ಮುನ್ನವೇ ಮಾಧ್ಯಮಗಳ ಗಮ‌ನ ಸೆಳೆದಿದ್ದ ವಿಚಾರವೆಂದರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಜಿ-20 ಶೃಂಗಸಭೆಯಿಂದ ಗೈರುಹಾಜರಾಗುವ ಸಾಧ್ಯತೆ.
ಅಮೆರಿಕಾ ಮತ್ತು ಚೀನಾಗಳ ನಡುವೆ ಚಕಮಕಿಗಳು ಹೆಚ್ಚುತ್ತಿದ್ದು, ಭಾರತ ಮತ್ತು ಚೀನಾ ಸೇನೆಗಳ ನಡುವೆ ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಗಡಿ ಉದ್ವಿಗ್ನತೆ ಮುಂದುವರಿದಿದೆ. ಇಂತಹ ಸನ್ನಿವೇಶದಲ್ಲಿ ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಿಂದ ಕ್ಸಿ ಜಿನ್‌ಪಿಂಗ್ ದೂರವುಳಿದಿದ್ದಾರೆ.
ಆದರೆ, ಗಮನಾರ್ಹ ವಿಚಾರವೇನೆಂದರೆ ಚೀನಾ ಅಧ್ಯಕ್ಷ ಕ್ಸಿ, ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಭಾರತದ ಪ್ರಧಾನಿ ಮೋದಿ ಗ್ಲೋಬಲ್ ಸೌತ್ ಹಾಗೂ ಅವುಗಳ ಅಭಿವೃದ್ಧಿ ಗುರಿಗಳಿಗೆ ಮುಕ್ತ ಬೆಂಬಲ ಸೂಚಿಸಿದ್ದಾರೆ.
ಆದರೆ ವಿಶ್ಲೇಷಣೆಗಳ ಪ್ರಕಾರ, ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿಯ ಕಾರಣದಿಂದ ಜಿ-20 ಶೃಂಗಸಭೆಯ ಫಲಿತಾಂಶದಲ್ಲೇನೂ ಬದಲಾವಣೆ ಕಂಡುಬರಲು ಸಾಧ್ಯವಿಲ್ಲ.
ಕಜಕಿಸ್ತಾನ, ಸ್ವೀಡನ್, ಹಾಗೂ ಲ್ಯಾಟ್ವಿಯಾಗಳಿಗೆ ಭಾರತದ ರಾಯಭಾರಿಯಾಗಿದ್ದ ಅಶೋಕ್ ಸಜ್ಜನ್‌ಹಾರ್ ಪ್ರಕಾರ, ಈ ನಾಯಕರು ಈಗಾಗಲೇ ಭಾರತದ ಜಿ-20 ಅಧ್ಯಕ್ಷೀಯ ಅವಧಿಯ ಸಭೆಗಳಲ್ಲಿ ವಿವಿಧ ವಿಚಾರಗಳನ್ನು ಚರ್ಚಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ನಾಯಕರ ಅನುಪಸ್ಥಿತಿ ಜಿ-20 ಜಂಟಿ ಹೇಳಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸಜ್ಜನ್‌ಹಾರ್ ಅವರು, ಮಾರ್ಚ್ ತಿಂಗಳ ವಿದೇಶಾಂಗ ಸಚಿವರ ಸಭೆ ಸೇರಿದಂತೆ, ಎಲ್ಲ ಮಹತ್ವದ ಜಿ-20 ಸಭೆಗಳಲ್ಲಿ ಚೀನಾ ಸಕ್ರಿಯವಾಗಿ ಪಾಲ್ಗೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಿ-20 ಸದಸ್ಯ ರಾಷ್ಟ್ರಗಳು ಈಗಾಗಲೇ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಚೀನಾದ ನಿರ್ಧಾರದ ಕುರಿತು ಸ್ಪಷ್ಟತೆ ಹೊಂದಿವೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರೊಡನೆ ದೂರವಾಣಿಯ ಮೂಲಕ ಮಾತುಕತೆ ನಡೆಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಜಿ-20 ಅಜೆಂಡಾಗೆ ತನ್ನ ಪೂರ್ಣ ಬೆಂಬಲ ಸೂಚಿಸಿದ್ದಾರೆ ಎಂದು ಪ್ರಧಾನಿಗಳ ಕಾರ್ಯಾಲಯ (ಪಿಎಂಒ) ವರದಿ ಮಾಡಿದೆ.

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 × 4 =
Remember me
