ನವದೆಹಲಿ: ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿರುವ ಕಾರ್ವಿುಕರನ್ನು ರಕ್ಷಿಸಲು ಕೇಂದ್ರ ಸರ್ಕಾರ ಸ್ಥಾಪನೆ ಮಾಡಿದ್ದ ವಿಶೇಷ ವಾರ್ ರೂಂ 408 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ 20ಕ್ಕೂ ಹೆಚ್ಚು ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಎಲ್ಲ ಏಜೆನ್ಸಿಗಳು, ಪ್ರಧಾನಿ ಕಾರ್ಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದ ಸಹಯೋಗದೊಂದಿಗೆ ತ್ವರಿತ ಗತಿಯಲ್ಲಿ ಅಗತ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದವು. ಅಮೆರಿಕದ ಡ್ರಿಲ್ ಮೆಷಿನ್ ‘ಆಗರ್’ ಅನ್ನು ಸುರಂಗಕ್ಕೆ ಇಳಿಸುವ ವಿಷಯದಿಂದ ಹಿಡಿದು, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಅಗೆಯಲು ‘ರ್ಯಾಟ್ ಮೈನರ್ಸ್’ ಸಹಾಯ ಪಡೆಯುವ ವರೆಗೆ ಅನೇಕ ಮಹತ್ವದ ನಿರ್ಧಾರಗಳನ್ನು ಕೇವಲ ಅರವತ್ತು ನಿಮಿಷಗಳ ಒಳಗೆ ಕೈಗೊಳ್ಳಲಾಗುತ್ತಿತ್ತು. ಏಜೆನ್ಸಿಗಳ ನಡುವಿನ ಸಮನ್ವಯ ಸಾಧಿಸಲಾಗಿತ್ತು.
ಇದು ಇದುವರೆಗಿನ ದೊಡ್ಡ ಕಾರ್ಯಾಚರಣೆಯಾಗಿದೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುರಂಗದ ಒಳಗೆ 41 ಜನರ ಪ್ರಾಣಕ್ಕೆ ಅಪಾಯವಿತ್ತು. ಕಾರ್ವಿುಕರು ಸುರಂಗದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ದೊರೆತಾಗ, ಪಿಎಂಒ ಮತ್ತು ಗೃಹ ಸಚಿವಾಲಯ ಸಕ್ರಿಯವಾಯಿತು. ಕೇಂದ್ರ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಇಲಾಖೆಗಳ ನಡುವೆ ಯಾವುದೇ ವಿಳಂಬವಿಲ್ಲದೆ ಸಭೆ ನಡೆಯಿತು. ಕೇವಲ 24 ಗಂಟೆಗಳಲ್ಲಿ ವಾರ್ ರೂಂ ಸಿದ್ಧವಾಯಿತು. ಇದರ ನಂತರ 41 ಕಾರ್ವಿುಕರನ್ನು ಉಳಿಸುವ ಹೋರಾಟ ಪ್ರಾರಂಭವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎನ್​ಡಿಎಂಎ ಸದಸ್ಯ ಸೈಯದ್ ಅತಾ ಹಸ್ನೇನ್, ಎನ್​ಡಿಆರ್​ಎಫ್ ಮುಖ್ಯಸ್ಥ ಮತ್ತು ಉತ್ತರಾಖಂಡ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹತ್ತಕ್ಕೂ ಹೆಚ್ಚು ಇಲಾಖೆಗಳ ಮುಖ್ಯಸ್ಥರು ವಾರ್ ರೂಂನಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ಅಡ್ಡಿ-ಆತಂಕಗಳ ಮಧ್ಯೆ ನಿರಂತರ ಕಾರ್ಯಾಚರಣೆ:ಹಲವಾರು ಅಡ್ಡಿ-ಆತಂಕಗಳ ನಡುವೆ ನಡೆಸಿದ ನಾನಾ ರೀತಿಯ ಪ್ರಯತ್ನಗಳು ಕೊನೆಗೂ ಫಲಪ್ರದವಾಗಿವೆ. ಭಾರತೀಯ ಸೇನೆ, ಎನ್​ಡಿಎಂಎ, ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ವಿದೇಶಿ ತಂತ್ರಜ್ಞರು, ವಿವಿಧ ಪರಿಣತರು, ಸ್ಥಳೀಯ ನುರಿತ ಕೆಲಸಗಾರರು ಸೇರಿದಂತೆ ದೊಡ್ಡದೊಂದು ಸಮೂಹವೇ ಈ ಬೃಹತ್ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಕಾರ್ವಿುಕರು ಸಿಲುಕಿಕೊಂಡಿದ್ದ ಸುರಂಗದ ಪ್ರದೇಶಕ್ಕೆ ತೆರಳಲು ವಿದೇಶದ ಆಗರ್ ಯಂತ್ರವನ್ನು ತರಿಸಲಾಗಿತ್ತಾದರೂ ಸುಮಾರು 42 ಮೀ. ಕೊರೆಯುವಷ್ಟರಲ್ಲಿ ಬಲವಾದ ವಸ್ತು ತಗುಲಿ ಅದರ ಬ್ಲೇಡ್​ಗಳು ಹಾನಿಗೀಡಾದವು. ಹೀಗೆ ಸಮಾನಾಂತರ ಕೊರೆಯುವಿಕೆಗೆ ಅಡ್ಡಿಯಾದ ಬಳಿಕ ಆಗರ್ ಯಂತ್ರವನ್ನು ದುರಸ್ತಿಪಡಿಸಿಕೊಳ್ಳುವ ಜತೆಜತೆಗೆ ಲಂಬ ಕೊರೆಯುವಿಕೆ ಮೂಲಕ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇದರ ಜತೆಗೆ ಒಟ್ಟ 5 ಆಯ್ಕೆಗಳಿದ್ದವು. ಮೂರು ಕಾರ್ಯಾಚರಣೆಯನ್ನು ಏಕಕಾಲದಲ್ಲಿ ಕೈಗೊಳ್ಳಲಾಗಿತ್ತು.
ಲೋಪ ಆಗಿದ್ದು ಎಲ್ಲಿ?:ಸುರಂಗ ನಿರ್ಮಾಣ ತಂಡಗಳು ನಡೆಸಿದ ಸ್ಪೋಟದಿಂದ ಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಸುರಂಗದ ನಿರ್ಮಾಣ ಯೋಜನೆ ನೀಲಿನಕ್ಷೆಯಲ್ಲಿ ತುರ್ತು ನಿರ್ಗಮನ ದ್ವಾರ ಉಲ್ಲೇಖ ಮಾಡಲಾಗಿದೆ. ಆದರೆ ಅದನ್ನು ನಿರ್ಮಾಣ ಮಾಡಿಯೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ದುರ್ಬಲವಾದ ಹಿಮಾಲಯ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಆತುರದ ಅಭಿವೃದ್ಧಿ ಯೋಜನೆ ಕೈಗೊಂಡಿರುವುದು ಘಟನೆಗೆ ಕಾರಣ ಇರಬಹುದು ಎಂದು ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರ್ನಾಲ್ಡ್ ಡಿಕ್ಸ್ ಪ್ರಾರ್ಥನೆ:ಕಾರ್ವಿುಕರ ರಕ್ಷಣಾ ಕಾರ್ಯಾಚರಣೆಗೆ ವಿದೇಶ ದಿಂದ ಬಂದಿರುವ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಕಾರ್ಯಾಚರಣೆ ಸ್ಥಳದ ಸಮೀಪ ಇರುವ ಚಿಕ್ಕ ಗುಡಿಯಲ್ಲಿ ದೇವರ ಪೂಜೆಯಲ್ಲಿ ತೊಡಗಿ ಪ್ರಾರ್ಥನೆ ಮಾಡಿಕೊಂಡಿರುವುದು ಗಮನ ಸೆಳೆದಿದೆ. ಅಲ್ಲಿನ ದೇವರ ಗುಡಿ ಮುಂದೆ ಅರ್ಚಕರ ಎದುರು ಕುಳಿತ ಅರ್ನಾಲ್ಡ್ ಧಾರ್ವಿುಕ ವಿಧಿಯಲ್ಲಿ ಪಾಲ್ಗೊಂಡ ದೃಶ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಇದ್ರೆ ಎಲ್ಲವೂ ಸಾಧ್ಯ:ಕಾರ್ಯಾಚರಣೆ ಇನ್ನೇನು ಅಂತಿಮ ಹಂತದಲ್ಲಿ ಇದೆ ಎನ್ನುವಾಗ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದರು. ಕಾರ್ಯಾಚರಣೆ ಮುಗಿಯುತ್ತ ಬಂದಾಗ ಕೆಲವರು ಭಾರತ್ ಮಾತಾ ಕೀ ಜೈ, ಮೋದಿ ಇದ್ರೆ ಎಲ್ಲವೂ ಸಾಧ್ಯ (ಮೋದಿ ಹೈ ತೊ ಮುಮ್ಕಿನ್ ಹೈ) ಎಂಬ ಘೋಷಣೆಗಳನ್ನು ಕೂಗಿದರು.
ಕೆಲಸಕ್ಕೆ ಹೋಗಲು ಬಿಡಲ್ಲ:ಸುರಂಗದಲ್ಲಿ ಸಿಲುಕಿದ್ದ ಕಾರ್ವಿುಕ, ಜಾರ್ಖಂಡ್​ನ ಅನಿಲ್ ಬೇಡಿ ಎಂಬಾತನ ತಂದೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದು, ನನ್ನ ಮಗ ನಮಗೆ ಹೇಳದೆ ಉತ್ತರಾಖಂಡಕ್ಕೆ ಕೆಲಸಕ್ಕೆ ಹೋಗಿದ್ದ. ಅವನು ವಾಪಸ್ ಬಂದ ಮೇಲೆ ಮತ್ತೆ ಅಲ್ಲಿಗೆ ಕೆಲಸಕ್ಕೆ ಹೋಗಲು ಬಿಡುವುದಿಲ್ಲ ಎಂದಿದ್ದಾರೆ.
ಕಾರ್ಯಾಚರಣೆಗೆ ಮೆಚ್ಚುಗೆ:ಸೇನೆ, ಎನ್​ಡಿಎಂಎ, ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಸೇರಿದಂತೆ ಹಲವರು 17 ದಿನಗಳ ಕಾಲ ನಿರಂತರವಾಗಿ ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಅವಿರತ ಪ್ರಯತ್ನಕ್ಕೆ ವಿವಿಧ ಪಕ್ಷ- ಕ್ಷೇತ್ರಗಳ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಬಹಳಷ್ಟು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
ಏನಿದು ಯೋಜನೆ?:4.5 ಕಿ.ಮೀ. ಉದ್ದದ ಸುರಂಗವು ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆಯ ಚಾರ್ ಧಾಮ್ ಹೆದ್ದಾರಿ ಯೋಜನೆಯ ಭಾಗವಾಗಿದೆ. ಉತ್ತರಾಖಂಡದ ನಾಲ್ಕು ಪ್ರಮುಖ ಹಿಂದು ಪುಣ್ಯಕ್ಷೇತ್ರಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ನಡುವೆ ಈ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗವು ಉತ್ತರಕಾಶಿ ಜಿಲ್ಲೆಯ ಸಿಲ್ಕಾ್ಯರಾ ಮತ್ತು ದಂಡಲ್ಗಾಂವ್ ಸಂರ್ಪಸುವ ಮಾರ್ಗದಲ್ಲಿದೆ. ಇದು ಡಬಲ್ ಲೇನ್ ಸುರಂಗವಾಗಿದ್ದು, ಅತಿ ಉದ್ದದ ಸುರಂಗವಾಗಿದೆ. ಇದು ಪೂರ್ಣಗೊಂಡ ನಂತರ ಒಟ್ಟು ಪ್ರಯಾಣದ ಸಮಯದಲ್ಲಿ ಒಂದು ಗಂಟೆ ಉಳಿತಾಯವಾಗಲಿದೆ. ಸುರಂಗ ನಿರ್ವಿುಸುವ ಯೋಜನೆಯನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ನಡೆಸುತ್ತಿದೆ.
ಸತತ 17 ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ವಿುಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ರಕ್ಷಣಾ ಸಿಬ್ಬಂದಿಗಳಿಗೆ ಧನ್ಯವಾದಗಳು. ಕೋಟ್ಯಂತರ ಭಾರತೀಯರ ಹಾರೈಕೆಗಳು, ಕಾರ್ವಿುಕರ ಕುಟುಂಬ ಸದಸ್ಯರ ಪ್ರಾರ್ಥನೆ ಈ ಕ್ಷಣ ಫಲ ನೀಡಿದೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ರಕ್ಷಿಸಲ್ಪಟ್ಟ ಯಾವ ಕಾರ್ವಿುಕರೂ ಅಪಾಯದಲ್ಲಿಲ್ಲ. ಅದಾಗ್ಯೂ ಅವರನ್ನು ವೈದ್ಯಕೀಯ ಮೇಲ್ವಿಚಾರಕರ ನಿಗಾದಲ್ಲಿರಿಸಿ ಆ ಬಳಿಕವಷ್ಟೇ ಮನೆಗೆ ಕಳುಹಿಸಿ ಕೊಡಲಾಗುವುದು. ಪ್ರತಿ ಕಾರ್ವಿುಕರಿಗೂ ಒಂದು ಲಕ್ಷ ರೂ. ಆರ್ಥಿಕ ನೆರವು, ವೇತನ ಸಹಿತ ಒಂದು ತಿಂಗಳು ರಜೆ ನೀಡಲಾಗುವುದು.
| ಪುಷ್ಕರ್​ಸಿಂಗ್ ಧಾಮಿ ಉತ್ತರಾಖಂಡ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 5 =
Remember me
