ಕರೊನಾ ಬೇರೆಲ್ಲ ಚಟುವಟಿಕೆಗಳನ್ನು ಥಂಡಾ ಹೊಡೆಸಿದರೂ ರಾಜಕೀಯ ಹಗ್ಗ-ಜಗ್ಗಾಟಗಳಿಗೇನೂ ಕೊರತೆ ಇರಲಿಲ್ಲ. ಸುರಕ್ಷಾ ಕ್ರಮಗಳೊಂದಿಗೆ ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದವು. ಅಂಥ ಚೇತರಿಕೆ ಕಾಣದ ಕಾಂಗ್ರೆಸ್, ಆಂತರಿಕ ಸಮಸ್ಯೆಗಳಿಗೂ ಸಾಕ್ಷಿಯಾಯಿತು. ಬಿಜೆಪಿ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಣೆಗೊಂಡಿತು. ಬಿಹಾರದ ಗೆಲುವು ಎನ್​ಡಿಎ ವಿಶ್ವಾಸ ಹೆಚ್ಚಿಸಿತು.
ಬಿಜೆಪಿ 2019ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿ ಬಂದ ಉತ್ಸಾಹದಲ್ಲೇ 2020ರಲ್ಲಿ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಎದುರಿಸಿತು. ಬಿಹಾರದಲ್ಲಿ ‘ದೊಡ್ಡಣ್ಣ’ನಾಗಿ ಬಡ್ತಿ ಪಡೆದು, ಮೇಲುಗೈ ಸಾಧಿಸಿತು. ಮಧ್ಯಪ್ರದೇಶದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆಯನ್ನೂ ಪ್ರತಿಷ್ಠೆಯಾಗಿ ಸ್ವೀಕರಿಸಿ, ಅಬ್ಬರದ ಪ್ರಚಾರ ನಡೆಸಿತು. ಪರಿಣಾಮ, ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿತು. ನಟಿಯರಾದ ಖುಷ್ಬೂ, ವಿಜಯಶಾಂತಿ ಕಮಲಪಾಳಯ ಸೇರಿದರು.
2019ರ ಸೋಲಿನ ಆಘಾತದಿಂದ ಕಾಂಗ್ರೆಸ್ ಇನ್ನೂ ಹೊರಬಂದಿಲ್ಲ. ನಾಯಕತ್ವ ಬದಲಾವಣೆ ಕೂಗು ಪಕ್ಷದೊಳಗೇ ವ್ಯಾಪಕವಾಗುತ್ತಿದ್ದು, ಹಿರಿಯ ನಾಯಕರು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರ ಭಾರಿ ವಿವಾದ ಸೃಷ್ಟಿಸಿತು. ಕೆಲ ರಾಜ್ಯಗಳ ಸಂಘಟನೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದರೂ, ಕಾಂಗ್ರೆಸ್ ಪುಟಿದೇಳಲು ಹರಸಾಹಸ ಪಡುತ್ತಿದೆ.
ಗುಜರಾತ್, ಮಧ್ಯಪ್ರದೇಶ, ಕರ್ನಾಟಕದಲ್ಲಿ ಹಲವು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿತು, ಮಹಾರಾಷ್ಟ್ರದಲ್ಲಿ ಮುಗ್ಗರಿಸಿತು. ಒಟ್ಟಾರೆ ವರ್ಷವನ್ನು ಅವಲೋಕಿಸಿದರೆ ಬಿಜೆಪಿಯ ಸಂಘಟನಾ ಬೇರು ಮತ್ತಷ್ಟು ವಿಸ್ತರಣೆಯಾಗಿದ್ದರೆ, ಕಾಂಗ್ರೆಸ್ ಹಾನಿ ಅನುಭವಿಸಿದೆ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮುಂದುವರಿದಿದೆ.
ದಾಖಲೆ ಸೃಷ್ಟಿಸಿದ ಮೋದಿ:ನರೇಂದ್ರ ಮೋದಿ ಆಗಸ್ಟ್ 13ಕ್ಕೆ ಎರಡು ದಾಖಲೆಗಳನ್ನು ಸೃಷ್ಟಿಸಿದರು. ದೇಶದಲ್ಲಿ ದೀರ್ಘಾವಧಿ ಆಡಳಿತ ನಡೆಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಟಲ್ ಬಿಹಾರಿ ವಾಜಪೇಯಿ ಮೂರೂ ಅವಧಿ ಸೇರಿ 2,272 ದಿನ ಪ್ರಧಾನಿ ಆಗಿದ್ದರು. ಮೋದಿ ಈ ದಾಖಲೆ ಹಿಂದಿಕ್ಕಿದರು.
ಸುಸ್ತಾದ ಸಚಿನ್:ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದರೂ, ನಿರ್ಧಾರದಿಂದ ಹಿಂದೆ ಸರಿದರು. ಹಲವು ದಿನಗಳ ಕಾಲ ನಡೆದ ಬಿಕ್ಕಟ್ಟಿನ ವೇಳೆ ಕೇಂದ್ರ ನಾಯಕರು ಮಧ್ಯಪ್ರವೇಶಿಸಿ ರಾಜಿ, ಸಂಧಾನ ಮಾಡಿದರು. ಅದರ ಬೆನ್ನಲ್ಲೇ, ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಸಚಿನ್ ದೈಹಿಕವಾಗಿಯೂ ಬಳಲಿದರು.
ಕೇಜ್ರಿ ಹವಾ:ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೆ ಸ್ಪಷ್ಟ ಬಹುಮತ ಪಡೆದುಕೊಂಡಿತು. ಎಎಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಬಿಜೆಪಿ ತಂತ್ರಗಳು ಫಲ ನೀಡಲಿಲ್ಲ. ಅರವಿಂದ ಕೇಜ್ರಿವಾಲ್ 3ನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಫೆಬ್ರವರಿ ಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಭಾರತ ಭೇಟಿಗೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದಿನಲ್ಲಿ ಆಯೋಜಿಸಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಿಂದ ಭಾರಿ ಪ್ರಭಾವಿತಗೊಂಡರು. ತಮಗೆ ದೊರೆತ ಭಾವಪೂರ್ಣ ಸ್ವಾಗತದ ಕುರಿತು ಟ್ರಂಪ್ ಹಲವು ಬಾರಿ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದರು.
ಮಧ್ಯಪ್ರದೇಶದ ಪ್ರಭಾವಿ ಧುರೀಣ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ನಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಬಂಡಾಯವೆದ್ದರು. ಬೆಂಬಲಿತ ಶಾಸಕರೊಂದಿಗೆ ಸಿಂಧಿಯಾ ಬಿಜೆಪಿ ಸೇರಿದ 15 ತಿಂಗಳ ನಂತರ ಬಿಜೆಪಿ ಅಧಿಕಾರಕ್ಕೆ ಮರಳಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ತರುವ ಮೂಲಕ, ಶಿವರಾಜ್ ಸಿಂಗ್ ಚೌಹಾಣ್ ಕುರ್ಚಿ ಭದ್ರವಾಯಿತು. ಸಿಂಧಿಯಾ ಸದ್ಯ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದು, ಸಂಪುಟ ಸೇರುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ 2021ರಲ್ಲಿ ನಡೆಯಲಿದ್ದರೂ, ರಾಜಕೀಯ ಜಿದ್ದಾಜಿದ್ದಿ ಮಾತ್ರ ಹಲವು ತಿಂಗಳು ಮೊದಲೇ ಆರಂಭವಾಯಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಸಂಘರ್ಷವನ್ನೇ ಸಾರಿದ್ದು, ಅಸಹಕಾರ ನೀತಿ ಅನುಸರಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ರಾಜ್ಯದಲ್ಲಿ ಪಡೆದ ಸ್ಥಾನಗಳಿಂದ ಉತ್ಸಾಹ ಹೆಚ್ಚಿಸಿಕೊಂಡಿದ್ದು, ಅಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸುತ್ತಿದೆ. ಗೃಹ ಸಚಿವ ಅಮಿತ್ ಷಾ ಈಗಾಗಲೇ ಎರಡು ಸುತ್ತಿನ ಪ್ರವಾಸ ಕೈಗೊಂಡಿದ್ದು, ಮಮತಾ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದ ಸುವೇಂದು ಅಧಿಕಾರಿ ಸಮೇತ ಕೆಲ ಹಾಲಿ ಶಾಸಕರು ಕಮಲ ಪಾಳಯ ಸೇರಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅವರ ಬೆಂಗಾವಲು ಪಡೆ ಮೇಲೆ ಕಲ್ಲುತೂರಾಟ ನಡೆದ ಘಟನೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.
ಬಿಹಾರದಲ್ಲಿ ಎನ್​ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದರೂ, ಈ ಹಾದಿ ಭಾರಿ ಸವಾಲಿನಿಂದ ಕೂಡಿತ್ತು. ರಾಷ್ಟ್ರೀಯ ಜನತಾದಳದ ಮುಖಂಡ ತೇಜಸ್ವಿ ಯಾದವ್ ಪ್ರಚಾರಸಭೆಯಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದುದನ್ನು ಕಂಡು ಪ್ರತಿಪಕ್ಷಗಳು ಬೆವತು ಹೋಗಿದ್ದವು. ನಿರೀಕ್ಷೆಯಂತೆ ಆರ್​ಜೆಡಿ ಭಾರಿ ಸ್ಪರ್ಧೆಯೊಡ್ಡಿತು. ಚುನಾವಣಾ ಫಲಿತಾಂಶವಂತೂ ಕ್ರಿಕೆಟ್ಟಿನ 20-20 ಪಂದ್ಯದಂತೆ ರೋಚಕವಾಗಿತ್ತು. 243 ಸದಸ್ಯಬಲದ ವಿಧಾನಸಭೆಯಲ್ಲಿ, ಎನ್​ಡಿಎ 125 ಸ್ಥಾನಗಳನ್ನು ಪಡೆದುಕೊಂಡರೆ, ಮಹಾಮೈತ್ರಿಕೂಟ 110 ಸ್ಥಾನಗಳಿಗೆ ಸೀಮಿತವಾಯಿತು. ಜೆಡಿಯುಗಿಂತ (43) ಬಿಜೆಪಿ (74) ಹೆಚ್ಚು ಸ್ಥಾನ ಪಡೆದಿದ್ದರಿಂದ, ಸಿಎಂ ಹುದ್ದೆ ಬಿಜೆಪಿ ಪಾಲಾಗಲಿದೆ ಎಂಬ ಚರ್ಚೆಯೂ ನಡೆಯಿತು. ಆದರೆ, ನವೆಂಬರ್ 20ರಂದು ನಿತೀಶ್ ಕುಮಾರ್ 6ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ಸುಶೀಲ್ ಕುಮಾರ್ ಮೋದಿ ಬಿಹಾರದಿಂದ ರಾಜ್ಯಸಭೆಗೆ ಕಳುಹಿಸಲ್ಪಟ್ಟರು. ಬಿಜೆಪಿಯಿಂದ ಇಬ್ಬರು ಡಿಸಿಎಂ ಆದರು.

ಬಹುತೇಕ 2020ರ ವರ್ಷವಿಡೀ ಜಗತ್ತು ಕರೊನಾ ಹಾವಳಿಯಿಂದಾಗಿ ನಾನಾ ಸಂಕಷ್ಟ ಅನುಭವಿಸಬೇಕಾಗಿ ಬಂತು. ಹೀಗಾಗಿ ಕರೊನಾ ಪರಿಗಣನೆಯಿಲ್ಲದೆ ಯಾವ ರಂಗವನ್ನೂ ಅವಲೋಕಿಸುವಂತಿಲ್ಲ. ಈಗಲೂ ಕಷ್ಟಪರಂಪರೆ ಮುಗಿದಿಲ್ಲ. ಲಸಿಕೆ ಬಂದು ವ್ಯಾಪಕವಾಗಿ ಜನರಿಗೆ ನೀಡಿದ ನಂತರದಲ್ಲಿ ಪರಿಸ್ಥಿತಿ ಸುಧಾರಿಸಬಹುದು. ಕರೊನಾ ನಿಯಂತ್ರಣದ ಸಲುವಾಗಿ ಲಾಕ್ ಡೌನ್ ವಿಧಿಸಿದ್ದರಿಂದಾಗಿ ಇಡೀ ಜನಜೀವನ ಸ್ತಬ್ಧವಾಯಿತು. ಎಲ್ಲ ಬಗೆಯ ಕೈಗಾರಿಕೆಗಳು ತೊಂದರೆಗೆ ಸಿಲುಕಿದವು. ನಿರುದ್ಯೋಗ ಪ್ರಮಾಣ ಏರಿತು. ಜತೆಗೆ, ಉದ್ಯೋಗನಷ್ಟವೂ ಆಯಿತು. ಬರಲಿರುವ ವರ್ಷದಲ್ಲಿ ಪರಿಸ್ಥಿತಿ ಸುಧಾರಿಸುವ ಆಶಾವಾದ ವ್ಯಕ್ತವಾಗಿರುವುದೊಂದೇ ಸಮಾಧಾನದ ಊರುಗೋಲು.
ಬರಹ: ರವೀಂದ್ರ ಎಸ್. ದೇಶಮುಖ್
‘ಬೆಳಗೆದ್ದು..’ ಹಳೇದನ್ನೆಲ್ಲ ನೆನಪಿಸಿಕೊಂಡರು ನಟಿ ರಶ್ಮಿಕಾ!

ಮಗನನ್ನು ನೋಡಿಕೊಳ್ಳುವುದು ತುಂಬಾ ಕಷ್ಟವಾಗುತ್ತಿತ್ತು, ಅದಕ್ಕೇ ಕೊಂದು ಬಿಟ್ಟೆ! ತಪ್ಪೊಪ್ಪಿಕೊಂಡ ತಾಯಿ

ವಧು ಎಂದು ನಂಬಿಸಿ ಕೆಲಸದವಳನ್ನೇ ಮದುವೆ ಮಾಡಿಸಿದಳು! ಹೆಂಡತಿಗೆ ಗಿಫ್ಟ್​ ಕೊಟ್ಟಿದ್ದ ಮೊಬೈಲ್​ನಿಂದಲೇ ಬಯಲಾಯಿತು ಸತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
