ನವದೆಹಲಿ: ಕರೊನಾ ಸೋಂಕು ತಗಲಿದ್ದ ಇಟಲಿಯ 69 ವರ್ಷ ಪ್ರಾಯದ ವ್ಯಕ್ತಿಯೊಬ್ಬ ರಾಜಸ್ಥಾನದ ಜೈಪುರದಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ಇದರೊಂದಿಗೆ ಭಾರತದಲ್ಲಿ ಕರೊನಾ ಸಾವಿನ ಸಂಖ್ಯೆ ಐದಕ್ಕೇರಿದೆ. ರಾಜಸ್ಥಾನದಲ್ಲಿ ಇದು ಮೊದಲ ಸಾವಾಗಿದ್ದು ವಿದೇಶಿ ಪ್ರಜೆಯೊಬ್ಬ ಭಾರತದಲ್ಲಿ ಬಲಿಯಾಗಿರುವ ಮೊದಲ ಪ್ರಕರಣವೂ ಆಗಿದೆ.
ದೇಶದ ವಿವಿಧ ಭಾಗಗಳಿಂದ ಶುಕ್ರವಾರ ಇನ್ನೂ 30 ಸೋಂಕಿತರ ಮಾಹಿತಿ ಲಭ್ಯವಾಗಿದ್ದು, ದೇಶದಲ್ಲಿ ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದು ಇದೇ ಮೊದಲ ಸಲವಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ 223ಕ್ಕೇರಿದೆ. ಕರೊನಾ ಜಾಗತಿಕ ಸಾವಿನ ಸಂಖ್ಯೆ 10 ಸಾವಿರ ದಾಟಿದ್ದು ಇಟಲಿಯಲ್ಲಿ ಚೀನಾಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ.
2ನೇ ಹಂತದಲ್ಲಿ ಭಾರತ: ಭಾರತ, ಕರೊನಾ ಮಹಾಮಾರಿ ವಿಸ್ಪೋಟದ ಎರಡನೇ ಹಂತದಲ್ಲಿದೆ. ಅಂದರೆ ಸ್ಥಳೀಯವಾಗಿ ಸೋಂಕು ತಗಲುವ ಮೂಲಕ ಮಾತ್ರವೇ ಅದು ಹರಡುತ್ತಿದೆ. ಸಾಮುದಾಯಿಕವಾಗಿ ಸೋಂಕು ಹರಡುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ, ವಾಟ್ಸ್​ಆಪ್ ಮೈಗವ್ ಕರೊನಾ ಎಂಬ ಹೆಲ್ಪ್​ಡೆಸ್ಕ್ ನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
ಚೀನಾವನ್ನು ಹಿಂದಿಕ್ಕಿದ ಇಟಲಿ: ಕರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಇಟಲಿಯು ರೋಗ ಮೂಲವಾದ ಚೀನಾವನ್ನು ಹಿಂದಿಕ್ಕಿದೆ. ಒಂದೆಡೆ ಚೀನಾ ಗುರುವಾರ ಒಂದೇ ಒಂದು ಹೊಸ ಪ್ರಕರಣದ ವರದಿಯಿಲ್ಲದೆ ಆಶಾವಾದದ ಬೆನ್ನು ಹತ್ತಿದ್ದು ಇತ್ತ ಇಟೆಲಿಯಲ್ಲಿ 427 ಜನರು ಮೃತಪಟ್ಟರು. ಇದರೊಂದಿಗೆ, ಯುರೋಪ್ ದೇಶ ಇಟಲಿಯಲ್ಲಿ ಮೃತಪಟ್ಟವರ ಸಂಖ್ಯೆ 3,405ಕ್ಕೆ ಏರಿದೆ. ಚೀನಾದಲ್ಲಿ ಇದುವರೆಗೆ 3,245 ಜನರು ಬಲಿಯಾಗಿದ್ದಾರೆ. ಜಾಗತಿಕವಾಗಿ ಮೃತರ ಸಂಖ್ಯೆ 9 ಸಾವಿರ ದಾಟಿದೆ. ಸೋಂಕು ಮೊದಲಿಗೆ ಕಾಣಿಸಿಕೊಂಡ ವುಹಾನ್ ನಗರದಲ್ಲಿ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದ್ದೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಚೀನಾದಲ್ಲಿ ಸೋಂಕು ಹರಡುವುದು ಬಹಳಷ್ಟು ನಿಯಂತ್ರಣಕ್ಕೆ ಬಂದಿದೆ. ಆದರೆ ಕ್ಷಿಪ್ರವಾಗಿ ಜಗತ್ತಿನ ಇತರ ಭಾಗಗಳಲ್ಲಿ ಅದು ಕಬಂಧಬಾಹು ಚಾಚುತ್ತಿದೆ. ಆದರೆ ಆಘಾತಕಾರಿ ಸುದ್ದಿಯೇನೆಂದರೆ, ವಿದೇಶಗಳಿಂದ ಬಂದಿರುವವರಲ್ಲಿನ ಸೋಂಕಿನ ಕಾರಣದಿಂದ ಏಷ್ಯಾದಲ್ಲಿ ಇನ್ನೊಂದು ಸುತ್ತಿನ ಮಹಾಘಾತ ಉಂಟಾಗಲಿದೆ.
ಮಹಾರಾಷ್ಟ್ರ ನಾಲ್ಕು ನಗರಗಳು ಸ್ತಬ್ಧ
ಮಹಾರಾಷ್ಟ್ರದಲ್ಲಿ ಕರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಬಹುತೇಕ ರಾಜ್ಯಕ್ಕೆ ರಾಜ್ಯವೇ ಸ್ತಬ್ಧಗೊಳ್ಳುವ ಸ್ಥಿತಿ ನಿರ್ವಣವಾಗುತ್ತಿದೆ. ಖಾಸಗಿ ಕಚೇರಿಗಳ ಸಹಿತ ಅತ್ಯವಶ್ಯವಲ್ಲದ ಎಲ್ಲ ಕಚೇರಿಗಳನ್ನು ಮುಚ್ಚುವಂತೆ ಸರ್ಕಾರ ಶುಕ್ರವಾರ ಆದೇಶಿಸಿದೆ. ಮುಂಬೈ ಮಹಾನಗರವಲ್ಲದೆ ಪುಣೆ, ಪಿಂಪ್ರಿ ಚಿಂಚವಾಡ್ ಮತ್ತು ನಾಗ್ಪುರಗಳಲ್ಲಿ ಈ ತಿಂಗಳ ಕೊನೆವರೆಗೆ ಬಹುತೇಕ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆಯೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೂರದರ್ಶನ ಭಾಷಣದಲ್ಲಿ ಹೇಳಿದರು. ಶುಕ್ರವಾರ ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬರುತ್ತದೆ. ದಿನಸಿ, ಹಾಲಿನ ಅಂಗಡಿಗಳು,ಬ್ಯಾಂಕ್​ಗಳಿಗೆ ನಿಷೇಧದಿಂದ ವಿನಾಯತಿ ನೀಡಲಾಗಿದೆ. ಅವು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕ ಸ್ಥಳಗಳು, ರೈಲು, ಬಸ್​ಗಳಲ್ಲಿ ಹೆಚ್ಚು ಜನರು ಸೇರದಂತೆ ಸಿಎಂ ಮನವಿ ಮಾಡಿದರು. ರೈಲು ಮತ್ತು ಬಸ್​ಗಳ ಸಂಚಾರ ನಿಷೇಧಿಸಲು ಕೂಡ ಸರ್ಕಾರಕ್ಕೆ ಅಧಿಕಾರವಿದೆ. ಆದರೆ ಹಾಗೆ ಮಾಡಿದರೆ ವೈದ್ಯರು, ಬೃಹನ್ಮುಂಬಯಿ ಮಹಾನಗರಪಾಲಿಕೆ ಸಿಬ್ಬಂದಿ ಮತ್ತು ವೈರಸ್ ವಿರುದ್ಧ ಕಾರ್ಯಾಚರಣೆಗೆ ಅಗತ್ಯವಾದ ಇತರ ಸಿಬ್ಬಂದಿ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ರೈಲು ಮತ್ತು ಬಸ್ ಸಂಚಾರ ನಿರ್ಬಂಧಿಸುವುದಿಲ್ಲ ಎಂದರು. ‘ಸಾಮಾಜಿಕ ಚಟುವಟಿಕೆಗಳಿಂದ ದೂರವಿರುವುದು ಬಿಟ್ಟರೆ ಈ ವೈರಸ್ ಹೆಮ್ಮಾರಿ ಎದುರಿಸಲು ನಮ್ಮ ಮುಂದೆ ಬೇರಾವುದೇ ಅಸ್ತ್ರವಿಲ್ಲ. ಹೀಗಾಗಿ ಈ ಕ್ರಮ ಕೈಗೊಂಡಿದ್ದೇವೆ. ಮುಂದಿನ 15 ದಿನ ನಮಗೆ ನಿರ್ಣಾಯಕವಾಗಲಿದೆ’ ಎಂದು ಠಾಕ್ರೆ ಹೇಳಿದರು. ರಾಜ್ಯದಲ್ಲಿ ಒಂದರಿಂದ ಎಂಟನೇ ತರಗತಿ ವರೆಗಿನ ಪರೀಕ್ಷೆಗಳನ್ನು ರದ್ದು ಪಡಿಸಲಾಗಿದೆ ಎಂದು ಶಿಕ್ಷಣ ಸಚಿವರಾದ ವರ್ಷಾ ಗಾಯಕ್ವಾಡ್ ಪ್ರಕಟಿಸಿದ್ದಾರೆ.
ಚೀನಾವನ್ನು ದೂರಿದ ಟ್ರಂಪ್
ಕರೊನಾ ಬಿಕ್ಕಟ್ಟು ಎದುರಿಸಲು ಕ್ಷಿಪ್ರ ಹಾಗೂ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ದೇಶದ ಜನರ ತೀವ್ರ ಟೀಕೆಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೋಂಕು ಇತರೆಡೆ ಹಬ್ಬಲು ಚೀನಾವೇ ಕಾರಣವೆಂದು ದೂಷಿಸಿದ್ದಾರೆ.ಚೀನಾದಲ್ಲಿ ಪಾರದರ್ಶಕತೆ ಇಲ್ಲದಿರುವುದರಿಂದ ಜಗತ್ತು ಅದಕ್ಕೆ ದೊಡ್ಡ ಬೆಲೆ ತೆರುತ್ತಿದೆ. ಹೊಸ ಕರೊನಾ ವೈರಸ್ ಪತ್ತೆಯಾದ ಆರಂಭದಲ್ಲಿ ಹಲವು ವಾರ ಏನನ್ನೂ ಹೇಳದೆ ಉಲ್ಬಣಗೊಂಡ ನಂತರವಷ್ಟೆ ಚೀನಾ ಅದನ್ನು ಜಗತ್ತಿಗೆ ತಿಳಿಸಿದ್ದರಿಂದ ಎಲ್ಲೆಡೆ ಮಹಾಮಾರಿಯಾಗಿ ಪರಿಣಮಿಸಿದೆ ಎನ್ನುವುದು ಟ್ರಂಪ್ ವಿಶ್ಲೇಷಣೆ.
VEDIO | ಕರೊನಾ ವೈರಸ್​ ಸೋಂಕು: ಕೊಡಗಿನ ವಿರಾಜಪೇಟೆಗೆ ದಿಗ್ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + seven =
Remember me
