ವಯನಾಡು:ದೇವರ ನಾಡು ಕೇರಳದ ವಯನಾಡಿನಲ್ಲಿ ಭಾರಿ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. 100ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣ ತಂಡ ಸೇರಿದಂತೆ ಎಲ್ಲ ರಕ್ಷಣಾ ಏಜೆನ್ಸಿಗಳು ಸ್ಥಳದಲ್ಲಿ ಬೀಡುಬಿಟ್ಟು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಕೇರಳ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮತ್ತಷ್ಟು ಭೂಕುಸಿತ ಹಾಗೂ ಪ್ರವಾವ ಭೀತಿ ಎದುರಾಗಿದೆ. ವಯನಾಡು, ಇಡುಕ್ಕಿ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಭೂಕುಸಿತದ ವರದಿಯಾಗಿದೆ.
ವಯನಾಡಿನಲ್ಲಿ ಮುಂಡಕ್ಕಯ್ಯಿಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, 24 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನೂರಾರು ಮಂದಿ ಮಣ್ಣಿನಡಿ ಸಿಲುಕಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಭೂಕುಸಿತದಿಂದ ಅಟ್ಟಮಾಲ ಮತ್ತು ಮುಂಡಕ್ಕಯ್ಯಿಲ್ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಉಳಿದ ಭಾಗಗಳ ಸಂಪರ್ಕ ಕಡಿತಗೊಂಡಿವೆ. ಪಾಲಕ್ಕಾಡ್‌ನಲ್ಲಿ ಗುಡ್ಡಗಾಡು ಪ್ರದೇಶದ ಮೂರು ಸ್ಥಳಗಳಲ್ಲಿ ಮಂಗಳಂ ಅಣೆಕಟ್ಟು ಕುಸಿದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಚರ್ಚಸಿ, ಸರ್ಕಾರಕ್ಕೆ ಅಗತ್ಯವಾಗಿ ಬೇಕಾದ ಎಲ್ಲ ನೆರವು ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಕೊಳ್ಳಲು ಸೂಚನೆ ನೀಡುವಂತೆ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಕೇಳಿದ್ದಾರೆ. ಈ ಸಂಬಂಧ ಕೇರಳದ ಬಿಜೆಪಿಯ ಏಕೈಕ ಸಂಸದ, ಕೇಂದ್ರ ಸಚಿವ ಸುರೇಶ್ ಗೋಪಿ ಅವರೊಂದಿಗೂ ಪ್ರಧಾನಿ ಮೋದಿ ಮಾತನಾಡಿದ್ದಾರೆಂದು ತಿಳಿದುಬಂದಿದೆ.
ವಯನಾಡಿನ ಕೆಲವು ಪ್ರದೇಶಗಳು ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಸಾಂತ್ವಾನ ಹೇಳುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ನಾನು ಸಂತಸ್ತರ ಕುಟುಂಬದ ಪರವಾಗಿ ನಿಲ್ಲುತ್ತೇನೆ. ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಹಾಯ ಮಾಡಲು ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದೇನೆ. ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯ ಮಾಡುತ್ತೇವೆ ಎಂದು ಎಕ್ಸ್‌ ಖಾತೆಯಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ಮೋದಿ ಕಾರ್ಯಾಲಯ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ 50,000 ನೀಡಲಾಗುತ್ತದೆ.
ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲ ರಕ್ಷಣಾ ಸಂಸ್ಥೆಗಳು ಸೇರಿಕೊಂಡಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯದ ಸಚಿವರು ರಕ್ಷಣಾ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡು ಸಂಸದ ರಾಹುಲ್ ಗಾಂಧಿ ಕೂಡ ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆ ತೀವ್ರವಾದ ನೋವನ್ನುಂಟುಮಾಡಿದೆ. ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇನೆ. ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವಾನ ಹೇಳುತ್ತೇನೆ. ಮಣ್ಣಿನಡಿ ಇನ್ನೂ ಸಿಕ್ಕಿಬಿದ್ದಿರುವವರನ್ನು ಶೀಘ್ರದಲ್ಲೇ ಸುರಕ್ಷಿತ ಸ್ಥಳಕ್ಕೆ ಕರೆತರಲಾಗುವುದು ಎಂದು ನಾನು ಭಾವಿಸುತ್ತೇನೆ. ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಅಂತ ಭರವಸೆ ನೀಡಿದ್ದಾರೆ ಎಂದು ರಾಹುಲ್​ ಗಾಂಧಿ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕಯ್ಯಿಲ್ ಪಟ್ಟಣದಲ್ಲಿ ಭಾರಿ ಮಳೆ ಸುರಿದ ಪರಿಣಾಮ ತಡರಾತ್ರಿ 1 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದೆ. ಪ್ರಸ್ತುತ ಉಪಗ್ರಹ ಮತ್ತು ರಾಡಾರ್ ಸೂಚನೆಗಳ ಪ್ರಕಾರ, ಕೇರಳದಲ್ಲಿ ಮುಂದಿನ 24 ಗಂಟೆಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ವಯನಾಡು ಜಿಲ್ಲೆಯಲ್ಲಿ ಮಳೆ ಮತ್ತು ಭೂಕುಸಿತಕ್ಕೆ ಪ್ರತಿಕ್ರಿಯೆಯಾಗಿ, ಆರೋಗ್ಯ ಇಲಾಖೆ-ರಾಷ್ಟ್ರೀಯ ಆರೋಗ್ಯ ಮಿಷನ್, ನಿಯಂತ್ರಣ ಕೊಠಡಿಯನ್ನು ತೆರೆದಿದ್ದು, ತುರ್ತು ಸಹಾಯಕ್ಕಾಗಿ, 9656938689 ಅಥವಾ 8086010833 ಗೆ ಕರೆ ಮಾಡಲು ಸೂಚಿಸಿದೆ.(ಏಜೆನ್ಸೀಸ್​)
ಭಾರಿ ಮಳೆಗೆ ಕೇರಳದ ವಯನಾಡಿನಲ್ಲಿ ಭೂಕುಸಿತ: 8 ಮಂದಿ ದುರ್ಮರಣ, ಮಣ್ಣಿನಡಿ ಸಿಲುಕಿದ ನೂರಾರು ಜನ

ದಯವಿಟ್ಟು​ ಶುಭಮನ್ ಗಿಲ್​​ ಜತೆ ಆತನನ್ನು ತಂಡಕ್ಕೆ ಸೇರಿಸಿಕೊಳ್ಳಿ! ಕನ್ನಡಿಗ ರಾಬಿನ್​ ಉತ್ತಪ್ಪ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
