ನವದೆಹಲಿ:ಕರೊನಾ ವೈರಸ್​ನ ಒಮಿಕ್ರಾನ್ ರೂಪಾಂತರಿ ಈಗ ಸಮುದಾಯದ ನಡುವೆ ಹರಡುವ (ಸಾಮುದಾಯಿಕ ಪ್ರಸರಣ) ಹಂತದಲ್ಲಿದೆ. ಅನೇಕ ಮೆಟ್ರೋ ನಗರಗಳಲ್ಲಿ ಹೊಸ ಕೇಸ್​ಗಳು ದೊಡ್ಡ ಪ್ರಮಾಣದಲ್ಲಿ ಏರುವುದರೊಂದಿಗೆ ಈ ತಳಿ ಪ್ರಮುಖ ಪ್ರಭೇದವಾಗಿ ಕಾಡುತ್ತಿದೆ ಎಂದು ಭಾರತೀಯ ಸಾರ್ಸ್ ಸಿಒವಿ-2 ಜಿನೋಮಿಕ್ಸ್ ಕನ್ಸೋರ್ಷಿಯಂ (ಇನ್ಸಾಕಾಗ್) ತಿಳಿಸಿದೆ. ಕರೊನಾ ವೈರಸ್ ದೇಶದಲ್ಲಿ ಹರಡುವಲ್ಲಿನ ವ್ಯತ್ಯಾಸವನ್ನು ಇನ್ಸಾಕಾಗ್ ಪರಿಶೀಲಿಸುತ್ತದೆ. ವೈರಸ್ ಹರಡುವ ಹಾಗೂ ವಿಕಾಸದ ಬಗೆಯನ್ನು ಕಂಡುಕೊಳ್ಳಲು ಹಾಗೂ ಆದಷ್ಟೂ ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಶಿಫಾರಸು ಮಾಡಲು ಇನ್ಸಾಕಾಗ್ ನೆರವಾಗುತ್ತದೆ. ಬಹುತೇಕ ಒಮಿಕ್ರಾನ್ ಪ್ರಕರಣಗಳು ಇದುವರೆಗೆ ಲಕ್ಷಣರಹಿತವಾಗಿವೆ ಅಥವಾ ಸೌಮ್ಯವಾಗಿವೆ. ಆದರೆ ಪ್ರಸಕ್ತ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಿಕೆ ಹಾಗೂ ಐಸಿಯು ಪ್ರಕರಣಗಳು ಹೆಚ್ಚಿದ್ದು ಅಪಾಯದ ಮಟ್ಟವೂ ಬದಲಾಗದೇ ಮುಂದುವರಿದಿದೆ ಎಂದು ಭಾನುವಾರ ಬಿಡುಗಡೆ ಮಾಡಲಾದ ಅಭಿಪ್ರಾಯಪಟ್ಟಿದೆ.
ಗುಪ್ತ ಒಮಿಕ್ರಾನ್ ಉಪ ತಳಿ:ಒಮಿಕ್ರಾನ್ ರೂಪಾಂತರಿಯ ಬಿಎ.2 ಎಂದು ಕರೆಯಲಾಗುವ ಉಪತಳಿಯೊಂದು ಯುರೋಪ್​ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಾವಳಿ ನಡೆಸುತ್ತಿದೆ. ಇದನ್ನು ‘ಗುಪ್ತ ಒಮಿಕ್ರಾನ್’ ಎಂದೂ ಹೇಳಲಾಗುತ್ತದೆ. 40ಕ್ಕೂ ಹೆಚ್ಚು ದೇಶಗಳಲ್ಲಿ ಅದರ ಉಪಟಳವಿದೆ ಎಂದು ಬ್ರಿಟನ್ ಹೇಳಿದೆ. ಬಿಎ.2 ಉಪತಳಿಯು ಆರ್​ಟಿ-ಪಿಸಿಆರ್ ಟೆಸ್ಟ್​ನಿಂದಲೂ ತಪ್ಪಿಸಿ ಕೊಳ್ಳುವ ಸಂಭಾವ್ಯತೆ ಇದೆ. ಅಂದರೆ, ಆ ವೈರಸ್ ಇದ್ದರೂ ಪರೀಕ್ಷೆಯಿಂದ ಪತ್ತೆ ಮಾಡುವುದು ಸಾಧ್ಯವಾಗದು. ಯುರೋಪ್​ನಾದ್ಯಂತ ಈ ಗುಪ್ತ ಉಪ ತಳಿಯ ಪ್ರಬಲ ಅಲೆ ಬೀಸಬಹುದು ಎಂಬ ಭಯ ಕಾಡಲು ಆರಂಭವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಪ್ರಕಾರ, ಒಮಿಕ್ರಾನ್ ವೈರಸ್ ಮೂರು ಉಪ ತಳಿ ಹೊಂದಿದೆ. ಬಿಎ.1, ಬಿಎ.2 ಮತ್ತು ಬಿಎ.3 -ಇವೇ ಆ ಉಪ ಪ್ರಭೇದಗಳು. ಬಿಎ.2 ತನಿಖಾ ಹಂತದಲ್ಲಿರುವ ತಳಿ ಎಂದು ಬ್ರಿಟನ್ ವರ್ಗೀಕರಿಸಿದೆ.
ಆರ್ ಮೌಲ್ಯ ಮತ್ತಷ್ಟು ಕುಸಿತ:ಕರೊನಾ ವೈರಸ್ ಹರಡುವಿಕೆಯ ದರವನ್ನು ಸೂಚಿಸುವ ಆರ್-ಮೌಲ್ಯದಲ್ಲಿ ಮತ್ತಷ್ಟು ಕುಸಿತವಾಗಿದೆ ಎಂದು ಐಐಟಿ ಮದ್ರಾಸ್​ನ ಪ್ರಾಥಮಿಕ ವಿಶ್ಲೇಷಣೆ ತಿಳಿಸಿದೆ. ಜನವರಿ14-21ರ ವಾರದಲ್ಲಿ 1.57ರಷ್ಟು ಆರ್ ಮೌಲ್ಯ ದಾಖಲಾಗಿದೆ ಎಂದು ಅದು ಹೇಳಿದೆ. ಮುಂದಿನ ಎರಡು ವಾರಗಳಲ್ಲಿ ಸಾಂಕ್ರಾಮಿಕತೆಯ ಮೂರನೇ ಅಲೆ ಉತ್ತುಂಗಕ್ಕೆ ತಲುಪಲಿದೆ ಎಂದು ಐಐಟಿ ತಜ್ಞರು ಹೇಳಿದ್ದಾರೆ. ಪ್ರೊ. ನೀಲೇಶ್ ಎಸ್ ಉಪಾಧ್ಯೆ ಮತ್ತು ಪ್ರೊ. ಎಸ್. ಸುಂದರ್ ನೇತೃತ್ವದ ತಂಡ ಈ ವಿಶ್ಲೇಷಣೆ ನಡೆಸಿತ್ತು.
ಜನವರಿ 7-13ರ ಆರ್ ಮೌಲ್ಯ 2.2, ಜನವರಿ 1-6ರ ನಡುವೆ 4 ಆರ್ ಮೌಲ್ಯ ದಾಖಲಾಗಿತ್ತು. ಅಂದರೆ ಆರ್ ಮೌಲ್ಯ ನಿಯಮಿತವಾಗಿ ಕಡಿಮೆಯಾಗುತ್ತಿರುವುದು ಸ್ಪಷ್ಟವಾಗಿದೆ. ಒಬ್ಬ ಸೋಂಕಿತ ವ್ಯಕ್ತಿ ವ್ಯಾಧಿಯನ್ನು ಇತರರಿಗೆ ಹರಡುವ ಸಂಖ್ಯೆಯನ್ನು ಆರ್ ಮೌಲ್ಯ ಸೂಚಿಸುತ್ತದೆ. ಈ ಮೌಲ್ಯ 1ಕ್ಕಿಂತ ಕಡಿಮೆಯಾದರೆ ಸಾಂಕ್ರಾಮಿಕತೆ ಅಂತ್ಯ ಗೊಳ್ಳುತ್ತದೆ ಎಂಬುದರ ಸೂಚನೆಯಾಗಿದೆ.
ವೆಂಕಯ್ಯ ನಾಯ್ಡು ಐಸೋಲೇಷನ್:ಕೋವಿಡ್ ಸೋಂಕು ತಗುಲಿರುವ ಕಾರಣ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಒಂದು ವಾರ ಹೋಮ್ ಐಸೋಲೇಷನ್​ಗೆ ಒಳಗಾಗಿದ್ದಾರೆ. ದೆಹಲಿಯಲ್ಲಿ ಇಳಿಕೆ: ದೆಹಲಿಯಲ್ಲಿ ಕರೊನಾದ ನಿತ್ಯದ ಪ್ರಕರಣಗಳು ಹಾಗೂ ಪಾಸಿಟಿವಿಟಿ ದರದಲ್ಲಿ ಭಾನುವಾರ ಇಳಿಕೆ ದಾಖಲಾಗಿದೆ. ದೈನಿಕ ಪಾಸಿಟಿವಿಟಿ ದರ ಶನಿವಾರದ ಶೇ.16.3ರಿಂದ ಶೇ.13.3ಕ್ಕೆ ಇಳಿದಿದೆ. ಹೊಸ 9,197 ಕೇಸ್​ಗಳು ದೃಢಪಟ್ಟಿವೆ. ಜ. 13ರಂದು 28,867 ಪ್ರಕರಣ ದಾಖಲಾಗಿತ್ತು. ಕೇಸ್​ಗಳು ಇಳಿಮುಖವಾಗುತ್ತಿವೆ.
ಭಾರತದಲ್ಲಿ 3.33 ಲಕ್ಷ ಹೊಸ ಪ್ರಕರಣಗಳು:ಭಾನುವಾರ ಬೆಳಿಗ್ಗೆವರೆಗಿನ 24 ಗಂಟೆ ಅವಧಿಯಲ್ಲಿ ಭಾರತದಾದ್ಯಂತ ಕರೊನಾ ಸೋಂಕಿನ 3,33,533 ಹೊಸ ಪ್ರಕರಣಗಳು ದೃಢಪಟ್ಟಿವೆ. 525 ರೋಗಿಗಳು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಒಟ್ಟು ಸಂಖ್ಯೆ 4,89,409ಕ್ಕೆ ತಲುಪಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 21,87,205ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದ ನಿತ್ಯದ ಸೋಂಕಿನ ದರ ಶೇಕಡ 17.78 ಆಗಿದೆ.
ಮದುವೆ ರದ್ದು ಮಾಡಿದ ನ್ಯೂಜಿಲೆಂಡ್ ಪ್ರಧಾನಿ:ಒಮಿಕ್ರಾನ್ ರೂಪಾಂತರಿಯ ಪ್ರಬಲ ಅಲೆಯ ಹಿನ್ನೆಲೆಯಲ್ಲಿ ಕಠಿಣ ಕೋವಿಡ್ ನಿಯಂತ್ರಣ ನಿಯಮಾವಳಿ ಪ್ರಕಟಿಸಿದ ಬೆನ್ನಲ್ಲೇ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡರ್ನ್ ತಮ್ಮ ಮದುವೆ ಯನ್ನೇ ರದ್ದು ಪಡಿಸಿದ್ದಾರೆ. ವಿವಾಹ ಸಮಾರಂಭ ಗಳಲ್ಲಿ ಸಂಪೂರ್ಣ ಲಸಿಕೆ ಹಾಕಿಸಿಕೊಂಡ 100 ಜನರು ಮಾತ್ರವೇ ಭಾಗವಹಿಸಬಹುದು ಎಂಬುದು ಹೊಸ ಮಾರ್ಗ ಸೂಚಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅದನ್ನು ಘೋಷಣೆ ಮಾಡಿದ ಸ್ವಲ್ಪವೇ ಹೊತ್ತಿನಲ್ಲಿ ಜೆಸಿಂಡಾ ತಮ್ಮ ವಿವಾಹ ರದ್ದತಿ ವಿಚಾರ ದೃಢಪಡಿಸಿದರು. ‘ನನ್ನ ಮದುವೆ ಸದ್ಯ ನಡೆಯುವುದಿಲ್ಲ. ಸಾಂಕ್ರಾಮಿಕತೆಯ ಕಾರಣ ದೇಶದ ಅನೇಕ ಜನರು ಮದುವೆ ರದ್ದುಪಡಿಸಿದ್ದು ನಾನೂ ಅವರ ಸಾಲಿಗೆ ಸೇರಿದ್ದೇನೆ. ಅಂಥ ಪರಿಸ್ಥಿತಿಗೆ ಒಳಗಾದವರಲ್ಲಿ ನಾನು ಕ್ಷಮೆ ಕೋರುತ್ತೇನೆ’ ಎಂದು ಹೇಳಿದ್ದಾರೆ.
ಬೈಕ್‌‌ಗೆ ಲಾರಿ ಡಿಕ್ಕಿ: ಹಿರಿಯ ಪತ್ರಕರ್ತ ಗಂಗಾಧರಮೂರ್ತಿ ವಿಧಿವಶ

‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 13 =
Remember me
