ಬೀಜಿಂಗ್:ಚೀನಾದಲ್ಲಿ ಈ ವಾರದಲ್ಲಿ ಒಂದೇ ದಿನ 37 ಮಿಲಿಯನ್ (3.7 ಕೋಟಿ) ಜನರು ಕೋವಿಡ್ ಸೋಂಕಿಗೆ ಒಳಗಾಗಿರುವ ಸಾಧ್ಯತೆಯಿದೆ. ಈ ತಿಂಗಳ ಮೊದಲ 20 ದಿನಗಳಲ್ಲಿ ಒಟ್ಟು 248 ಮಿಲಿಯನ್ (24.8 ಕೋಟಿ) ಜನರು, ಅಂದರೆ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡ 18 ಮಂದಿ ಸೋಂಕಿತರಾಗಿರುವ ಸಾಧ್ಯತೆಯಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್​ಎಚ್​ಸಿ) ಮೂಲಗಳು ಹೇಳಿವೆ.
ಒಂದು ಅಂದಾಜು ಪ್ರಕಾರ 37 ಮಿಲಿಯನ್ ಜನರು ಒಂದೇ ದಿನ ಸೋಂಕಿತರಾಗಿದ್ದು ಇದು ಈ ವಿಚಾರದಲ್ಲಿ ಜಗತ್ತಿನಲ್ಲೇ ಅಧಿಕ ಸಂಖ್ಯೆಯಾಗಿದೆ. ಬುಧವಾರ ನಡೆದ ಆಯೋಗದ ಸಭೆಯಲ್ಲಿ ಈ ವಿಚಾರಗಳು ಪ್ರಸ್ತಾಪಗೊಂಡವು ಎಂದು ಮೂಲಗಳು ಹೇಳಿವೆ. ಈ ಅಂಕಿಸಂಖ್ಯೆಗಳು ನಿಖರವಾಗಿ ದ್ದಲ್ಲಿ ಹಿಂದಿನ ದೈನಿಕ ಸೋಂಕಿನ ದರ ತೀರಾ ಕಡಿಮೆ ಎನಿಸುತ್ತದೆ. 2022ರ ಜನವರಿಯಲ್ಲಿ ದೈನಿಕ ಸೋಂಕು ಪ್ರಮಾಣ 4 ಮಿಲಿಯನ್ (40 ಲಕ್ಷ) ಆಗಿತ್ತು.
ಸಂಕಷ್ಟದ ಹಾದಿಯಲ್ಲಿ ಚೀನಾ: ಮೂರು ವರ್ಷದ ಹಿಂದೆ ಮೊದಲ ಬಾರಿಗೆ ಚೀನಾದಲ್ಲಿ ತಲೆಯೆತ್ತಿದ ಕರೊನಾ ವೈರಸ್ ಇದೀಗ ಕಾಡ್ಗಿಚ್ಚಿನಂತೆ ಹರಡುತ್ತಿದ್ದು 140 ಕೋಟಿ ಜನಸಂಖ್ಯೆಯ ದೇಶದ ಭವಿಷ್ಯ ಕರಾಳವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ‘ಶೂನ್ಯ-ಕೋವಿಡ್’ ಧೋರಣೆ ಫಲ ನೀಡಿಲ್ಲವಾದರೂ ಸಾಂಕ್ರಾಮಿಕತೆ ಎದುರಿಸಲು ಸಿದ್ಧವಾಗಲು ದೇಶಕ್ಕೆ ವರ್ಷಾನುಗಟ್ಟಲೆ ಕಾಲಾವಕಾಶ ಒದಗಿಸಿದೆ. ಈ ತಿಂಗಳ ಆರಂಭದಲ್ಲಿ ಶೂನ್ಯ-ಕೋವಿಡ್ ನೀತಿಯನ್ನು ಸರ್ಕಾರ ಹಠಾತ್ತನೆ ಕೈಬಿಟ್ಟಿದ್ದರಿಂದ ಸೋಂಕು ಉಲ್ಬಣಗೊಂಡು ದೇಶ ಒದ್ದಾಡುತ್ತಿದೆ.
ಸುದೀರ್ಘ ಲಾಕ್​ಡೌನ್ ಮತ್ತಿತರ ಕಠಿಣ ನಿಯಮಗಳ ವಿರುದ್ಧ ಜನರು ಬಂಡೆದ್ದಿದ್ದರಿಂದ ಡಿಸೆಂಬರ್ 7ರಂದು ಸರ್ಕಾರ ಕಠಿಣ ನೀತಿಯನ್ನು ಕೈಬಿಟ್ಟಿತ್ತು. ಸದ್ಯಕ್ಕೆ ಸೋಂಕು ಉಲ್ಬಣಗೊಂಡಿರುವುದರಿಂದ ಮುಂದಿನ ವರ್ಷ 10 ಲಕ್ಷದಿಂದ 20 ಲಕ್ಷದಷ್ಟು ಜನರು ಮರಣಿಸಬಹುದೆಂದು ತಜ್ಞರು ಭವಿಷ್ಯ ನುಡಿದಿದ್ದು ಆತಂಕದ ಕಾಮೋಡ ಕವಿದಿದೆ. ಒಮಿಕ್ರಾನ್ ರೂಪಾಂತರಿಗಳು ಚೀನಾದ ಸಂಕಟವನ್ನು ಇಮ್ಮಡಿಗೊಳಿಸಿದ್ದವು.
ಕಡಿಮೆ ಲಸಿಕೆ ಪ್ರಮಾಣ:ಹಾಂಕಾಂಗ್​ಗೆ ಹೋಲಿಸಿದರೆ ಚೀನಾದ ಲಸಿಕೆ ಪ್ರಮಾಣ ಹೆಚ್ಚಿದೆಯಾದರೂ ಇಡೀ ದೇಶದ ಬೃಹತ್ ಜನಸಂಖ್ಯೆಗೆ ತುಲನೆ ಮಾಡಿದಲ್ಲಿ ಅದು ಕಡಿಮೆಯೇ ಆಗಿದೆ. ಹೀಗಾಗಿ ವಿಶೇಷವಾಗಿ ವೃದ್ಧರ ಸಹಿತ ರೋಗಕ್ಕೆ ತುತ್ತಾಗುವ ಸಾಧ್ಯತೆಯ ವಿಭಾಗದವರು ಹೆಚ್ಚಾಗಿ ಸೋಂಕಿಗೆ ಒಳಗಾಗುವ ಅಪಾಯವಿದೆ. ಸೋಂಕಿತರ ಸಂಖ್ಯೆ ಏರುಮುಖವಾಗಿರುವುದರೊಂದಿಗೆ ದೇಶದ ಹಲವು ಆಸ್ಪತ್ರೆಗಳು ಕೋವಿಡ್ ರೋಗಿಗಳೊಂದಿಗೆ ತುಂಬಿ ತುಳುಕುತ್ತಿವೆ. ಸೌಲಭ್ಯಗಳಲ್ಲದೆ ಸಿಬ್ಬಂದಿ ಕೊರತೆಯಿಂದ ಅವು ಬಳಲುತ್ತಿವೆ.
ಚೀನಾಕ್ಕೆ ಔಷಧ ರವಾನೆಗೆ ಭಾರತ ಸಿದ್ಧ:ಕೋವಿಡ್ ಸಾಂಕ್ರಾಮಿಕತೆಯ ಅಬ್ಬರದಿಂದ ನಲುಗುತ್ತಿರುವ ಚೀನಾಕ್ಕೆ ಜ್ವರದ ಔಷಧ ರಫ್ತು ಹೆಚ್ಚಿಸಲು ಭಾರತ ಸಿದ್ಧವಾಗಿದೆ. ಐಬುಪ್ರೊಫೇನ್ ಮತ್ತು ಪ್ಯಾರಾಸಿಟಮಲ್ ಕುರಿತು ಔಷಧ ತಯಾರಕರಿಂದ ಹೆಚ್ಚಿನ ಮಾರುಕಟ್ಟೆ ವಿಚಾರಣೆಗಳು ಬರುತ್ತಿವೆ ಎಂದು ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ ಸಾಹಿಲ್ ಮಂಜುಲ್ ಗುರುವಾರ ಹೇಳಿದ್ದಾರೆ. ಕಠಿಣ ಕೋವಿಡ್ ನಿಯಂತ್ರಣ ಕ್ರಮಗಳನ್ನು ಈ ತಿಂಗಳ ಆರಂಭದಲ್ಲಿ ಹಠಾತ್ತನೆ ರದ್ದುಪಡಿಸಿದ್ದರಿಂದ ಚೀನಾ ಮುಖ್ಯಭೂಮಿಯಲ್ಲಿ ಜ್ವರದ ಔಷಧಗಳು ಮತ್ತು ವೈರಲ್ ಪರೀಕ್ಷೆ ಕಿಟ್​ಗಳಿಗೆ ಬೇಡಿಕೆ ಅಪಾರವಾಗಿ ಏರಿದೆ. ಇದರಿಂದಾಗಿ ರೀಟೇಲರ್​ಗಳು ಗ್ರಾಹಕ ಖರೀದಿ ಮೇಲೆ ಮಿತಿ ಹೇರಲು ಹಾಗೂ ಫಾರ್ವಸ್ಯುಟಿಕಲ್ ಕಂಪನಿಗಳು ಉತ್ಪಾದನೆ ಹೆಚ್ಚಿಸುವ ಒತ್ತಡಕ್ಕೆ ಒಳಗಾಗಿವೆ.
ಲಸಿಕೆ ಸಂಖ್ಯೆ ಹೆಚ್ಚಳ:ಚೀನಾದಲ್ಲಿ ಕೋವಿಡ್ ಆರ್ಭಟ ಹಾಗೂ ಅಧಿಕಾರಿಗಳ ಮನವಿ ಮೇರೆಗೆ ಲಸಿಕೆಗಾಗಿ ನೋಂದಣಿ ಹಾಗೂ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆ ಡಿ.18ರಿಂದ ನಾಟಕೀಯ ಪ್ರಮಾಣ ದಲ್ಲಿ ಏರಿಕೆಯಾಗಿರುವುದು ಕೋವಿನ್ ವೆಬ್​ಸೈಟ್ ಮಾಹಿತಿ ಯಿಂದ ತಿಳಿದು ಬಂದಿದೆ. ಡಿ. 18ರಂದು ಸುಮಾರು 4,000 ಜನರು ಮುನ್ನೆಚ್ಚರಿಕೆ ಡೋಸ್ ಪಡೆದಿದ್ದು 22ರಂದು ಅದು 57 ಸಾವಿರಕ್ಕೆ ಏರಿದೆ.
ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್:ಹಲವು ದೇಶಗಳಲ್ಲಿ ಕರೊನಾ ಹಾವಳಿ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ಶುಕ್ರವಾರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು ಶನಿವಾರ ಅನುಷ್ಠಾನಕ್ಕೆ ಬರಲಿದೆ. ವಿದೇಶಗಳಿಂದ ಆಗಮಿಸುವ ಎಲ್ಲ ಪ್ರಯಾಣಿಕರು ಆಯಾ ದೇಶಗಳ ನಿಯಮಗಳನ್ವಯ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿರಬೇಕು ಎಂದು ಮಾರ್ಗಸೂಚಿ ಹೇಳಿದೆ. ವಿಮಾನ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಕೋವಿಡ್ ಲಕ್ಷಣವಿರುವ ಪ್ರಯಾಣಿಕರನ್ನು ಇತರರಿಂದ ಪ್ರತ್ಯೇಕಿಸಿ ಮುಂದಿನ ಚಿಕಿತ್ಸೆಗಾಗಿ ಐಸೊಲೇಶನ್ ಕೇಂದ್ರಗಳಿಗೆ ಕಳಿಸಲಾಗುತ್ತದೆ. ಆಗಮಿಸಿದವರಲ್ಲಿ ಶೇಕಡ ಎರಡರಷ್ಟು ಪ್ರಯಾಣಿಕರನ್ನು ಏರ್​ಪೋರ್ಟ್​ನಲ್ಲಿ ರ್ಯಾಂಡಂ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಚೀನಾದಲ್ಲಿ ಕೊರತೆ:ಬೇಡಿಕೆ ಹೆಚ್ಚಳದಿಂದಾಗಿ ಸದ್ಯಕ್ಕೆ ಚೀನಾದಲ್ಲಿ ಐಬುಪ್ರೊಫೇನ್ ಮತ್ತು ಪ್ಯಾರಾಸಿಟಮಲ್ ಕೊರತೆ ಉಂಟಾಗಿದೆ. ಭಾರತದಿಂದ ಔಷಧ ಪೂರೈಕೆ ವಿಚಾರದಲ್ಲಿ ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಚೀನಾಕ್ಕೆ ನೆರವಾಗಲು ಜಗತ್ತಿನ ಅತಿ ದೊಡ್ಡ ಜನರಿಕ್ ಔಷಧಿ (ಜನೌಷಧಿ) ತಯಾರಕ ದೇಶಗಳಲ್ಲಿ ಒಂದಾಗಿರುವ ಭಾರತ ತಯಾರಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಚೀನಾದಲ್ಲಿನ ಕೋವಿಡ್ ಪರಿಸ್ಥಿತಿ ಮೇಲೆ ಭಾರತ ಕಣ್ಣಿಟ್ಟಿದೆ ಎಂದು ಸಚಿವಾಲಯದ ವಕ್ತಾ ಅರಿಂದಂ ಬಾಗ್ಚಿ ಹೇಳಿದ್ದಾರೆ.
163 ಹೊಸ ಕೇಸ್:ಭಾರತದಲ್ಲಿ ಶುಕ್ರವಾರ ಬೆಳಗ್ಗೆ ವರೆಗಿನ ಒಂದು ದಿನದ ಅವಧಿಯಲ್ಲಿ ಕೋವಿಡ್​ನ 163 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಇದುವರೆಗೆ ಕೋವಿಡ್​ಗೆ ಒಟ್ಟು 5,30,690ಕ್ಕೆ ಏರಿದೆ. 2020 ಮಾರ್ಚ್ ನಲ್ಲಿ ಸಾಂಕ್ರಾಮಿಕತೆಗೆ ಮೊದಲ ಸಾವು ಸಂಭವಿಸಿತ್ತು. ಡಿ. 22ರವರೆಗೆ ದೇಶದಲ್ಲಿ ಒಟ್ಟು 90,96,43,076 ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕತೆ ತಡೆಯ ಲಸಿಕೆ ಅಭಿಯಾನದಲ್ಲಿ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಆಗಿ ಬಳಸಲು ಭಾರತ್ ಬಯೋಟೆಕ್​ನ ಮೂಗಿನ ಮೂಲಕ ನೀಡುವ ಲಸಿಕೆಯನ್ನು ಸೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 18 ವರ್ಷಕ್ಕಿಂತ ಮೇಲಿನವರಿಗೆ ನಾಸಿಕ ಲಸಿಕೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬೂಸ್ಟರ್ ಡೋಸ್:ಎರಡು ಹನಿಗಳ ಈ ನಾಸಿಕ ವ್ಯಾಕ್ಸಿನ್ ಒಂದು ವಿಜಾತೀಯ ಲಸಿಕೆಯಾಗಿದೆ. ಈಗಾಗಲೇ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ಪಡೆದವರು ಇದನ್ನು ವಿಜಾತೀಯ ಬೂಸ್ಟರ್ ಡೋಸ್ ಆಗಿ ಪಡೆಯಬಹುದಾಗಿದೆ.
ಎಲ್ಲೆಲ್ಲಿ ಲಭ್ಯ?:ಸೂಜಿ ರಹಿತ ನಾಸಿಕ ಲಸಿಕೆ ಯನ್ನು ಶುಕ್ರವಾರ ಸಂಜೆ ಕೋವಿನ್ ವೇದಿಕೆಯಲ್ಲಿ ಪರಿಚಯಿಸಲಾಯಿತು. ಈ ಲಸಿಕೆ ಎಲ್ಲ ಖಾಸಗಿ ಕೇಂದ್ರಗಳಲ್ಲಿ ಸಿಗುತ್ತದೆ. ಬಿಬಿವಿ154 ಅಥವಾ ಇನ್​ಕೋವ್ಯಾಕ್ ಲಸಿಕೆಗೆ ಭಾರತದ ಔಷಧಗಳ ಮಹಾ ನಿಯಂತ್ರಕರು ನವೆಂಬರ್​ನಲ್ಲಿ ಅನುಮೋದನೆ ನೀಡಿದ್ದರು.
ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six − 3 =
Remember me
