ನವದೆಹಲಿ:ದೇಶದ ಪ್ರತಿಯೊಬ್ಬ ಪ್ರಜೆಯ ಹಸಿವನ್ನು ನೀಗಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ ಕರೊನಾ ಕಾಲದಲ್ಲಿ ಸಂಕಷ್ಟದಲ್ಲಿರುವವರನ್ನು ತಲುಪದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಸುಪ್ರೀಂಕೋರ್ಟ್ ಜು.31ರೊಳಗೆ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಆದೇಶಿಸಿದೆ. ಕರೊನಾ ನಿಮೂಲನೆ ಆಗುವವರೆಗೆ ವಲಸೆ ಕಾರ್ವಿುಕರಿಗೆ ಅನುಕೂಲ ವಾಗುವಂತೆ ಎಲ್ಲ ರಾಜ್ಯಗಳಲ್ಲೂ ‘ಸಾಮೂಹಿಕ ಪಾಕಶಾಲೆ’ ಸ್ಥಾಪಿಸುವಂತೆ ನಿರ್ದೇಶನ ನೀಡಿದೆ.
ಕರ್ನಾಟಕ ಸಹಿತ ದೇಶದ 24 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಯೋಜನೆ ಜಾರಿಗೊಂಡು ಯಶಸ್ವಿಯಾಗಿದೆ ಯಾದರೂ ಕೆಲವು ರಾಜ್ಯಗಳಲ್ಲಿ ಜಾರಿಯಾಗಿಲ್ಲ. ಜತೆಗೆ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಯಿಂದಾಗಿ ಲಾಕ್​ಡೌನ್ ಸಂದರ್ಭದಲ್ಲಿ ವಲಸೆ ಕಾರ್ವಿುಕರು ಹಸಿವಿನಿಂದ ಕಂಗೆಡುವಂತಾಗಿದೆ. ಇದೇ ವೇಳೆ ವಲಸೆ ಕಾರ್ವಿುಕರ ನೋಂದಣಿಗೆ ಅನುಕೂಲವಾಗುವ ಪೋರ್ಟಲ್ ಅನ್ನು ಕೂಡಲೇ ರಚಿಸುವಂತೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್. ಷಾ ಅವರ ದ್ವಿಸದಸ್ಯ ಪೀಠ ಸೂಚಿಸಿತು.
ಕೋವಿಡ್-19 ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ವಲಸೆ ಕಾರ್ವಿುಕರು ಅನುಭವಿಸುತ್ತಿರುವ ಬವಣೆ ಹಾಗೂ ಪರಿಹಾರ ಕುರಿತ ವಿಚಾರಣೆಯನ್ನು ಸವೋನ್ನತ ನ್ಯಾಯಾಲಯ ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡಿದೆ.
ಈ ವಿಚಾರದಲ್ಲಿ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯದ ಅಸಡ್ಡೆ ಕ್ಷಮಿಸಲಾಗದು ಎಂದು ಹೇಳಿದೆ. 1979ರ ಅಂತಾರಾಜ್ಯವಲಸೆ ಕಾರ್ವಿುಕರ ಉದ್ಯೋಗ ಮತ್ತು ಸೇವಾ ಪರಿಸ್ಥಿತಿ ನಿಯಂತ್ರಣ ಕಾನೂನು ಅನ್ವಯ ಎಲ್ಲ ಸಂಸ್ಥೆಗಳು ಮತ್ತು ಗುತ್ತಿಗೆದಾರರ ನೋಂದಣಿ ಮಾಡುವಂತೆ ಸೂಚಿಸಿದೆ.
ಅಂಜಲಿ ಭಾರದ್ವಾಜ್, ಹರ್ಷ ಮಂದೇರ್ ಮತ್ತು ಜಗದೀಪ್ ಛೋಕರ್ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆಯನ್ನೂ ಕೋರ್ಟ್ ನಡೆಸಿದೆ. ಹಲವು ರಾಜ್ಯಗಳಲ್ಲಿ ಮತ್ತೆ ಲಾಕ್​ಡೌನ್ ವಿಧಿಸಿದ್ದರಿಂದ ವಲಸೆ ಕಾರ್ವಿುಕರ ಸಂಕಷ್ಟ ಬಿಗಡಾಯಿಸಿದೆ. ಹೀಗಾಗಿ ಅವರಿಗೆ ಆಹಾರ ಭದ್ರತೆ ಖಾತರಿ ಪಡಿಸಬೇಕು, ನಗದು ಹಣ ವರ್ಗಾಯಿಸಬೇಕು ಹಾಗೂ ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು. ಪೀಠ ಜೂನ್ 11ರಂದು ತೀರ್ಪು ಕಾಯ್ದಿರಿಸಿತ್ತು.
ಕರೊನಾ ಸಾಂಕ್ರಾಮಿಕತೆ ನಿಯಂತ್ರಣಕ್ಕೆ 2020ರಲ್ಲಿ ಮೊದಲ ಬಾರಿಗೆ ದೇಶವ್ಯಾಪಿ ಲಾಕ್​ಡೌನ್ ಹೇರಿದ್ದರಿಂದ ದೇಶದ ವಿವಿಧ ಭಾಗಗಳ ಲಕ್ಷಾಂತರ ವಲಸೆ ಕಾರ್ವಿುಕರು ನೂರಾರು ಕಿಲೋಮೀಟರ್ ದೂರ ನಡೆದೇ ತಮ್ಮ ತಮ್ಮ ಊರುಗಳನ್ನು ತಲುಪಿದ್ದು, ಅನ್ನ-ಆಹಾರವಿಲ್ಲದೆ ಬಳಲಿದ್ದು, ಹಲವು ಸಾವುಗಳು ಸೇರಿದಂತೆ ಅವರು ಅನುಭವಿಸಿದ ಅಪಾರ ಯಾತನೆ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು.
2019ರ ಯೋಜನೆ:ರಾಷ್ಟ್ರೀಯ ಆಹಾರ ಭದ್ರತಾ ಕಾನೂನು (ಎನ್​ಎಫ್​ಎಸ್​ಎ) ವ್ಯಾಪ್ತಿಗೆ ಬರುವ ಎಲ್ಲ ಪಡಿತರ ಚೀಟಿದಾರರು ಅಥವಾ ಫಲಾನುಭವಿಗಳು ‘ಒಂದು ದೇಶ-ಒಂದು ಪಡಿತರ ಕಾರ್ಡ್’ ಯೋಜನೆ ಅನ್ವಯ ದೇಶದ ಎಲ್ಲೇ ಇದ್ದರೂ ತಮ್ಮ ಪಾಲಿನ ಪಡಿತರ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು. 2019ರಲ್ಲಿ ಅಂದಿನ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಪೈಲಟ್ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆ ಪ್ರಕಾರ ಎಲ್ಲ ರೇಷನ್ ಕಾರ್ಡ್​ಗೆ ಫಲಾನುಭವಿಗಳ ಆಧಾರ್ ಸಂಖ್ಯೆ ಜೋಡಿಸಬೇಕು.
ರಾಜ್ಯಗಳ ನ್ಯಾಯ ಬೆಲೆ ಅಂಗಡಿಗಳ ಅಟೋಮೇಷನ್ ಮಾಡಬೇಕು. ಆಧುನಿಕ ತಂತ್ರಜ್ಞಾನ ಆಧಾರಿತ ಈ ಯೋಜನೆಯು ಕಾರ್ವಿುಕರು, ದಿನಗೂಲಿಗಳು, ಚಿಂದಿ ಆಯುವವರು, ಬೀದಿ ಬದಿ ವಾಸಿಸುವವರು, ಸಂಘಟಿತ ಮತ್ತು ಅಸಂಘಟಿತ ವಲಯಗಳ ತಾತ್ಕಾಲಿಕ ಕೆಲಸಗಾರರು, ಮನೆಗೆಲಸದವರು ಮುಂತಾದ ನಗರ ಪ್ರದೇಶಗಳ ಬಡವರು ದೇಶದ ಯಾವ ಭಾಗದಲ್ಲಿದ್ದರೂ ತಮ್ಮ ಪಡಿತರ ಸಾಮಗ್ರಿಗಳನ್ನು ಪಡೆಯುವ ಅನುಕೂಲ ಇದರಲ್ಲಿದೆ. ಜತೆಗೆ ನಕಲಿ ಪಡಿತರ ಕಾರ್ಡ್​ಗಳಿಗೆ ಕಡಿವಾಣವೂ ಬೀಳಲಿದೆ. ಪಡಿತರ ಚೀಟಿಗೆ ಆಧಾರ್ ಜೋಡಣೆಯು ಶೇ. 80 ಆಗಿದೆ. ಕೆಲ ರಾಜ್ಯಗಳಲ್ಲಿ ಮಾತ್ರ ಆಗಬೇಕಿದೆ ಎಂದು ಆಹಾರ ಪೂರೈಕೆ ಸಚಿವಾಲಯದ ಮೂಲಗಳು ತಿಳಿಸಿವೆ.
ಉದ್ದೇಶವೇನು?:ವ್ಯಕ್ತಿಯ ಭೌತಿಕ ಸ್ಥಳ ಲೆಕ್ಕಿಸದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬರುವ ಎಲ್ಲ ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸುವುದು.
24 ರಾಜ್ಯಗಳಲ್ಲಿ ಜಾರಿ:ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ದಾದ್ರ ಮತ್ತು ನಗರ್ ಹವೇಲಿ ಹಾಗೂ ಡಮನ್ ಮತ್ತು ದಿಯು, ಗೋವಾ, ಗುಜರಾತ್, ಹರಿಯಾಣ, ಹಿ.ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ. ಮಹಾರಾಷ್ಟ್ರ, ಮಣಿಪುರ, ಮಿಝೋರಾಂ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ರಾಜಸ್ಥಾನ್, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ.
ಹೇಗೆ ಪಡಿತರ ವಿತರಣೆ?:ಸಾಮಾನ್ಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್​ದಾರರಿಗಾಗುವಷ್ಟು ಪಡಿತರ ಸಂಗ್ರಹಿಸಿಡಲಾಗಿರುತ್ತದೆ. ಹೀಗಾಗಿ ವಲಸಿಗರು ಏಕಾಏಕಿ ಬಂದರೆ ಅವರಿಗೆ ಪಡಿತರ ಹೊಂದಿಸುವುದೇಗೆಂಬ ಪ್ರಶ್ನೆ ಕಾಡುವುದು ಸಹಜ. ಆದರೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ವಿವಿಧ ಕಾರಣಗಳಿಂದಾಗಿ 10-15 ಫಲಾನುಭವಿಗಳು ರೇಷನ್ ಪಡೆಯುವುದಿಲ್ಲ. ಆ ರೇಷನ್​ಗಳನ್ನೇ ವಲಸಿಗರಿಗೆ ನೀಡಲಾಗುತ್ತದೆ. ಒಂದೊಮ್ಮೆ ವಲಸಿಗರಿಗೆ ನೀಡುವ ಮುನ್ನ ಅಥವಾ ನೀಡಿದ ಬಳಿಕ ಪಡಿತರ ಖಾಲಿ ಆದಲ್ಲಿ ತಕ್ಷಣ ಹಂಚಿಕೆ ಮಾಡುವಂತೆ ಆಹಾರ ಇಲಾಖೆಗೆ ಮಾಲೀಕರು ಮನವಿ ಮಾಡುತ್ತಾರೆ. ಒಂದರೆಡು ದಿನದಲ್ಲಿ ರೇಷನ್ ಬಂದ ಬಳಿಕ ಯಾರ್ಯಾರಿಗೆ ರೇಷನ್ ಸಿಕ್ಕಿಲ್ಲವೋ ಅವರಿಗೆ ಹಂಚಿಕೆ ಮಾಡಲಾಗುತ್ತದೆ.
ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
