| ರಾಘವ ಶರ್ಮ ನಿಡ್ಲೆ, ನವದೆಹಲಿಕೇಂದ್ರ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದ ರಹಸ್ಯ ಕೊನೆಗೂ ಬಯಲಾಗಿದ್ದು, ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರದ ಈ ಕ್ರಮ ದೇಶದ ಚುನಾವಣಾ ರಾಜೕಯದ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆಯಿದ್ದರೂ, 2024ರ ಲೋಕಸಭೆ ಚುನಾವಣೆಗೆ ಈ ಮೀಸಲು ನೀತಿ ಅನ್ವಯವಾಗುವುದಿಲ್ಲ. ಈ ಮಸೂದೆಯಿಂದ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಾಗಿರುವ ಸ್ಥಾನಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಮಹಿಳೆಯರ ಸಬಲೀಕರಣ ಹಾಗೂ ಬಲವರ್ಧನೆಗಾಗಿ ನಾವು ಆಯ್ಕೆಯಾಗಿದ್ದೇವೆ ಎಂದು ತಮ್ಮನ್ನು ಹಾಗೂ ಸರ್ಕಾರವನ್ನು ಸಮರ್ಥಿಸಿ ಕೊಂಡ ಪ್ರಧಾನಿ ಮೋದಿ, ಸಂಸತ್ತಿನ ಹೊಸ ಕಟ್ಟಡದಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಮಸೂದೆ ಸರ್ವಾನುಮತದಿಂದ ಅಂಗೀಕಾರಗೊಳ್ಳಲು ಸಹಕರಿಸಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಇದು ನಾರಿಶಕ್ತಿಯನ್ನು ವಂದಿಸುವ ಅಧಿನಿಯಮ ಎಂದು ಪ್ರಧಾನಿ ಮೋದಿ ವ್ಯಾಖ್ಯಾನಿಸಿದ್ದಾರೆ. ಮಹಿಳಾ ಮೀಸಲು ಮಸೂದೆಗೆ ಈ ಅಧಿವೇಶನದಲ್ಲೇ ಲೋಕಸಭೆ ಮತ್ತು ರಾಜ್ಯಸಭೆಯ ಅನುಮೋದನೆ ಸಿಗುವ ನಿರೀಕ್ಷೆಯಿದೆ. ವಿಧೇಯಕದ ಅಂಗೀಕಾರದ ನಂತರ ನಡೆಸಲಾಗುವ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಹಿಳಾ ಮೀಸಲಾತಿಯನ್ನು ಅನ್ವಯಿಸಲಾಗುತ್ತದೆ. ಅಂದರೆ, 2029ರ ಲೋಕಸಭೆ ಚುನಾವಣೆಗೆ ಮಹಿಳಾ ಮೀಸಲಾತಿ ಅನ್ವಯವಾಗುವ ಸಾಧ್ಯತೆಗಳಿವೆ. 2024ರ ಲೋಕಸಭೆ ಚುನಾವಣೆ ಬಳಿಕ ಜನಗಣತಿ ನಡೆಸುವ ಸಾಧ್ಯತೆಗಳಿದ್ದು, 2026ರಲ್ಲಿ ಕ್ಷೇತ್ರಗಳ ಮರುವಿಂಗಡನೆ ಪ್ರಕ್ರಿಯೆ ನಡೆಸುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ. ಮಹಿಳಾ ಮೀಸಲು ಮಸೂದೆಯು 15 ವರ್ಷಗಳವರೆಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುತ್ತದೆ. ಕಾಯ್ದೆಯ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಅಧಿಕಾರ ಸಂಸತ್ತಿಗೆ ಇರಲಿದೆ.
ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕ ಮಂಡನೆ ಮೂಲಕ ಬಿಜೆಪಿ ರಾಜಕೀಯ ಲಾಭವನ್ನೂ ನಿರೀಕ್ಷಿಸುತ್ತಿದೆ. ಕೆಲವೇ ತಿಂಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆಯಲಿದೆ. ಬಿಜೆಪಿಯ ಈ ಕ್ರಾಂತಿಕಾರಕ ಕ್ರಮ ಮಹಿಳಾ ಮತದಾರರನ್ನು ಸೆಳೆಯಬಲ್ಲದು ಎಂದು ಬಿಜೆಪಿ ನಂಬಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಮಹಿಳಾ ಮೀಸಲಾತಿಗೆ ಬೆಂಬಲಿಸಿರುವುದರಿಂದ ಈ ವಿಷಯದಲ್ಲಿ ಬಿಜೆಪಿ ವಿರೋಧಿ ನೀತಿ ರೂಪಿಸುವುದು ಕಷ್ಟ ಎನ್ನುವುದು ರಾಜಕೀಯ ಪಂಡಿತರ ಅಭಿಮತ. ದೇಶದ ಸುಶಿಕ್ಷಿತ ಮಹಿಳಾ ವರ್ಗದ ಎಷ್ಟೋ ವರ್ಷದ ಕನಸು ಈಗ ನನಸಾಗುತ್ತಿದೆ ಮತ್ತು ರಾಜಕೀಯಕ್ಕೆ ಬರಬೇಕು ಎಂಬ ಮಹಿಳೆಯರ ಆಕಾಂಕ್ಷೆಗೆ ಇದು ಸಹಕಾರಿಯಾಗಿದೆ. ಹಾಗಾಗಿ, ಬಿಜೆಪಿ ಲಾಭ ಸಿಗಲಿದೆ ಎನ್ನುವುದು ಹಲವರ ಅಂಬೋಣ.
ನಮ್ಮ ಹೆಣ್ಣುಮಕ್ಕಳಿಗೆ ಸಾಮರ್ಥ್ಯವಿದೆ ಮತ್ತು ಅವರಿಗೆ ಅವಕಾಶಗಳು ಸಿಗಬೇಕು. ಮಹಿಳಾಕೇಂದ್ರಿತ ಅಭಿವೃದ್ಧಿಯು ಜಿ20 ಶೃಂಗಸಭೆಯ ಚರ್ಚೆಯ ಪ್ರಮುಖ ಅಂಶವಾಗಿತ್ತು.
| ನರೇಂದ್ರ ಮೋದಿ, ಪ್ರಧಾನಮಂತ್ರಿ
181 ಮಹಿಳಾ ಸಂಸದರು!:ಲೋಕಸಭೆಯಲ್ಲಿ ಮಂಗಳವಾರ ಮಸೂದೆ ಮಂಡಿಸಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಕಾಯ್ದೆ ಜಾರಿಯಾದರೆ ಈಗಿನ 543 ಲೋಕಸಭೆ ಸದಸ್ಯರಲ್ಲಿ ಮಹಿಳಾ ಸಂಸದರ ಸಂಖ್ಯೆ 181ಕ್ಕೆ ಏರಲಿದೆ ಎಂದರು. ಪ್ರಸ್ತುತ 82 ಮಹಿಳಾ ಸಂಸದರಿದ್ದಾರೆ. ಮಹಿಳೆಯರಿಗೆ ಸ್ಥಾನ ಮೀಸಲಿಡಲು ಸಂವಿಧಾನದ ಆರ್ಟಿಕಲ್ 330(ಎ)ನಲ್ಲಿ ಕ್ಲಾಸ್ (1)ನ್ನು ಸೇರಿಸಬೇಕು ಎಂದು ಮಸೂದೆ ಹೇಳಿದೆ. ಲೋಕಸಭೆಯಲ್ಲಿ ಎಸ್ಸಿ/ಎಸ್ಟಿಗಳಿಗೆ ಮೀಸಲಾದ ಸ್ಥಾನಗಳಲ್ಲಿ 3ನೇ ಒಂದು ಭಾಗ ಈ ವರ್ಗಗಳ ಮಹಿಳೆಯರಿಗೆ ಮೀಸಲಿಡಲಾಗುತ್ತದೆ ಎಂದು ಮತ್ತೊಂದು ಕ್ಲಾಸ್ ನಲ್ಲಿ ತಿಳಿಸಲಾಗುತ್ತದೆ ಎಂದು ದಾಖಲಿಸಲಾಗಿದೆ. ಆದರೆ, ರಾಜ್ಯಸಭೆ ಅಥವಾ ವಿಧಾನ ಪರಿಷತ್ತಿಗೆ ಮಹಿಳಾ ಮೀಸಲು ನೀತಿ ಅನ್ವಯಿಸುವುದಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 4 =
Remember me
