ಹೌದು, ಸದ್ಯದ ದೆಹಲಿ ಬೆಳವಣಿಗೆಗಳು ಅದೇ ಸುಳಿವು ನೀಡುತ್ತಿವೆ! ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಇದೇ ಕಾರಣಕ್ಕಾಗಿ ಸೆ.18ರಿಂದ 22ರ ತನಕ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ಉದ್ದೇಶಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಈ ಭರವಸೆ ನೀಡಲಾಗಿದ್ದು, 2024ರ ಲೋಕಸಭೆ ಚುನಾವಣೆಗೆ ಮುನ್ನ ಈ ಭರವಸೆ ಈಡೇರಿಸಲು ಸರ್ಕಾರ ತೀರ್ವನಿಸಿದಂತಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಧಿವೇಶನದ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆಯೇ ಇದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದಲ್ಲದೆ, ಹಲವು ರೀತಿಯ ಚರ್ಚೆಗಳಿಗೂ ಎಡೆಮಾಡಿಕೊಟ್ಟಿದೆ. ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಛತ್ತೀಸ್​ಗಢ ಮತ್ತು ಮಿಜೋರಾಂ ಚುನಾವಣೆಗಳಿರುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಈ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದ ಒಂದು ದೇಶ ಒಂದು ಚುನಾವಣೆ’ ಕುರಿತ ವಿಧೇಯಕ ಮಂಡಿಸಬಹುದು ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ಜತೆಗೆ, ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡನೆ ಬಗ್ಗೆಯೂ ಚರ್ಚೆಗಳಾಗಿವೆ.
ಆದರೆ, ಉನ್ನತ ಮೂಲಗಳಿಂದ ವಿಜಯವಾಣಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ‘ಒಂದು ದೇಶ ಒಂದು ಚುನಾವಣೆ’, ಏಕರೂಪ ನಾಗರಿಕ ಸಂಹಿತೆ ವಿಧೇಯಕ ಪರಿಚಯಿಸುವ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ಗಂಭೀರ ಚಿಂತನೆ ನಡೆದಿದ್ದು, ಈ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ನಿರೀಕ್ಷಿಸಬಹುದು ಎಂದು ತಿಳಿಸಿವೆ.
2008ರಲ್ಲಿ ಮಂಡನೆಯಾಗಿತ್ತು: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2008ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮಸೂದೆಯನ್ನು ಮಂಡಿಸಿತ್ತು. 2010ರ ಮಾ.9ರಂದು ರಾಜ್ಯಸಭೆ ಮಸೂದೆಯನ್ನು ಅನುಮೋದಿಸಿತ್ತು. ಆದರೆ, ಮಸೂದೆಯನ್ನು ಲೋಕಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಲಿಲ್ಲ. ಯುಪಿಎ ಸರ್ಕಾರದಲ್ಲಿದ್ದ ಬಿಹಾರದ ರಾಷ್ಟ್ರೀಯ ಜನತಾದಳ ಮತ್ತು ಉತ್ತರಪ್ರದೇಶದ ಸಮಾಜವಾದಿ ಪಕ್ಷಗಳು ಮಹಿಳಾ ಮೀಸಲಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ ಸಿಕ್ಕಿರಲಿಲ್ಲ. ಜೆಡಿಯು ನಾಯಕರಾಗಿದ್ದ ಶರದ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿ, ಸಣ್ಣ ಕೂದಲಿನ ಮಹಿಳೆಯರು (ನಗರದವರು) ನಮ್ಮ ಮಹಿಳೆಯರನ್ನು (ಗ್ರಾಮೀಣ ಪ್ರದೇಶದ ಮಹಿಳೆಯರು) ಹೇಗೆ ಪ್ರತಿನಿಧಿಸಬಹುದು ಎಂದು ಪ್ರಶ್ನಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಭರವಸೆ ನೀಡಿತ್ತು ಮತ್ತು 2019ರ ಪ್ರಣಾಳಿಕೆಯಲ್ಲೂ ಸೇರಿಸಿತ್ತು.
ಮಹಿಳಾ ಮೀಸಲು ಮಸೂದೆಯನ್ನು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಯುನೈಟೆಟ್ ಫ್ರಂಟ್ ಸರ್ಕಾರ 1996ರ ಸೆಪ್ಟೆಂಬರ್​ನಲ್ಲಿ ಸಂವಿಧಾನದ 81ನೇ ತಿದ್ದುಪಡಿ ಮಸೂದೆಯಾಗಿ ಲೋಕಸಭೆಯಲ್ಲಿ ಮೊದಲು ಪರಿಚಯಿಸಿತ್ತು. ಆದರೆ, ಮಸೂದೆಯು ಸದನದ ಅನುಮೋದನೆಯನ್ನು ಪಡೆಯುವಲ್ಲಿ ವಿಫಲವಾಯಿತು. ನಂತರ, ಈ ವಿಚಾರವನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಯಿತು. ಸಮಿತಿ 1996ರ ಡಿಸೆಂಬರ್​ನಲ್ಲಿ ಲೋಕಸಭೆಗೆ ವರದಿ ಸಲ್ಲಿಸಿತು. ಆದರೆ, ಲೋಕಸಭೆ ವಿಸರ್ಜನೆಯೊಂದಿಗೆ ಮಸೂದೆಯು ನಿಷ್ಕ್ರಿಯವಾಯಿತು.
ಮೂರ್ನಾಲ್ಕು ದಿನದಲ್ಲಿ ಮಾಹಿತಿ: 2014ರಲ್ಲಿ ಅಧಿಕಾರಕ್ಕೆ ಬಂದಂದಿನಿಂದಲೂ ಮಹಿಳೆಯರ ಪರ ಧ್ವನಿ ಮೊಳಗಿಸಿರುವ ಪ್ರಧಾನಿ ಮೋದಿ, ತ್ರಿವಳಿ ತಲಾಖ್ ನಿಷೇಧ ಸೇರಿದಂತೆ ಹಲವು ಉಪಕ್ರಮಗಳ ಮೂಲಕ ಮಹಿಳಾ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷಾಂತ್ಯದ 5 ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆ ಮುನ್ನ ಮಹಿಳೆಯರ ಪರ ಮತ್ತೊಂದು ಐತಿಹಾಸಿಕ ಘೊಷಣೆ ಮೂಲಕ ಕ್ರಾಂತಿಕಾರಕ ಹೆಜ್ಜೆಯಿಡಲು ಮುಂದಡಿ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಅಧಿವೇಶನದ ಅಜೆಂಡಾ ಬಗ್ಗೆ ತಿಳಿಸಲಾಗುವುದು. ಅದಕ್ಕೂ ಮುನ್ನ ಪ್ರಧಾನಮಂತ್ರಿಗಳು ಸಂಬಂಧಪಟ್ಟ ಸಚಿವರೊಂದಿಗೆ ಸಭೆ ಕರೆಯಲಿದ್ದಾರೆ ಎಂದು ಮೂಲಗಳು ವಿಜಯವಾಣಿಗೆ ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
