ವಯನಾಡು:ದೇವರ ನಾಡು ಕೇರಳದ ವಯನಾಡಿನಲ್ಲಿ ಮಂಗಳವಾರ (ಜುಲೈ 30) ಭಾರಿ ಮಳೆಗೆ ಸಂಭವಿಸಿದ ಬೃಹತ್​ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಸಾವಿನ ಸಂಖ್ಯೆ ಶನಿವಾರ ಬೆಳಗ್ಗೆ ಹೊತ್ತಿಗೆ 358ಕ್ಕೆ ಏರಿಕೆಯಾಗಿದ್ದು, ಇನ್ನೂ ಮಣ್ಣಿನಡಿ ಹಾಗೂ ಕಟ್ಟಡಗಳಲ್ಲಿ ಸಿಲುಕಿರುವ ಹಾಗೂ ಬದುಕುಳಿದಿರುವವರ ಪತ್ತೆಗಾಗಿ ನಿರಂತರವಾಗಿ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ.
ರಕ್ಷಣಾ ಪಡೆಗಳು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಅವಶೇಷಗಳ ಅಡಿಯಲ್ಲಿ ಮತ್ತು ಕುಸಿದ ಮನೆಗಳಲ್ಲಿ ಸಿಲುಕಿರುವ ಬದುಕುಳಿದವರನ್ನು ಹುಡುಕುವ ಪ್ರಯತ್ನದಲ್ಲಿ ರಾಡಾರ್‌ಗಳನ್ನು ಬಳಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೀಪ್ ಸರ್ಚ್ ರಾಡಾರ್‌ಗಳನ್ನು ಕಳುಹಿಸುವಂತೆ ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ನಾರ್ತ್​ ಕಮಾಂಡ್‌ನಿಂದ ಒಂದು ಕ್ಸೇವರ್ ರಾಡಾರ್ ಮತ್ತು ದೆಹಲಿಯ ತಿರಂಗಾ ಮೌಂಟೇನ್ ರೆಸ್ಕ್ಯೂ ಆರ್ಗನೈಸೇಶನ್‌ನಿಂದ ನಾಲ್ಕು ರೀಕೋ ರಾಡಾರ್‌ಗಳನ್ನು ವಾಯುಪಡೆಯ ವಿಮಾನದಲ್ಲಿ ಶನಿವಾರ ವಯನಾಡಿಗೆ ತರಲಾಯಿತು.
ಭಾರತೀಯ ಸೇನೆ, ಕೇರಳ ಪೊಲೀಸ್ ಮತ್ತು ತುರ್ತು ಸೇವಾ ಘಟಕಗಳ ನೇತೃತ್ವದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಶೋಧ ಮತ್ತು ಪಾರುಗಾಣಿಕಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಖಾಸಗಿ ಕಂಪನಿಗಳು ಮತ್ತು ಸ್ವಯಂಸೇವಕರು ಕೂಡ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸುಮಾರು 200 ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದು, ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
1,300ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ನಾಶವಾದ ಕಟ್ಟಡಗಳಲ್ಲಿ ಭಾರಿ ಯಂತ್ರೋಪಕರಣಗಳು ಮತ್ತು ಅತ್ಯಾಧುನಿಕ ಉಪಕರಣಗಳೊಂದಿಗೆ ಅವಶೇಷಗಳ ಅಡಿಯಲ್ಲಿ ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಇಂದು ವಯನಾಡಿಗೆ ತಲುಪಲಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿರುವ ಮೋಹನ್ ಲಾಲ್ ಅವರು ಸೇನಾ ಶಿಬಿರವನ್ನು ತಲುಪಿ ರಕ್ಷಣಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಮೃತರ ಡಿಎನ್‌ಎ ಮತ್ತು ಹಲ್ಲಿನ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಶವಗಳು ಅಂತ್ಯಸಂಸ್ಕಾರ ಸೇರಿದಂತೆ ಮಾರ್ಗಸೂಚಿಗಳನ್ನು ಕೇರಳ ಸರ್ಕಾರ ಹೊರಡಿಸಿದೆ. ಇದರ ಪ್ರಕಾರ, ಪ್ರತಿ ದೇಹ ಅಥವಾ ದೇಹದ ಭಾಗಕ್ಕೆ ಗುರುತಿನ ಸಂಖ್ಯೆಯನ್ನು ನಿಗದಿಪಡಿಸಬೇಕು. ಅಲ್ಲದೆ, ಮೃತದೇಹಗಳ ಎಲ್ಲ ಮಾದರಿಗಳು, ಛಾಯಾಚಿತ್ರಗಳು ಅಥವಾ ವಿಡಿಯೋಗಳು ಮತ್ತು ಮೃತದೇಹಕ್ಕೆ ಸಂಬಂಧಿಸಿದ ವಸ್ತುಗಳ ದಾಖಲೆಗಳಲ್ಲಿ ಗುರುತಿನ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ಕಲ್ಪೆಟ್ಟಾದ ಸಾರ್ವಜನಿಕ ಚಿತಾಗಾರದಲ್ಲಿ ಮೂರು ಅಪರಿಚಿತ ಶವಗಳನ್ನು ಸುಟ್ಟು ಹಾಕಲಾಗಿದೆ. ವಯನಾಡು ಭೂಕುಸಿತದ ಹಿನ್ನೆಲೆಯಲ್ಲಿ ಶವಗಳ ಅಂತ್ಯಸಂಸ್ಕಾರ ಅಥವಾ ಅಂತ್ಯಕ್ರಿಯೆಗಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಭಾಗವಾಗಿ ಅಂತ್ಯಕ್ರಿಯೆಯನ್ನು ಮಾಡಲಾಗಿದೆ. ಗುರುವಾರ ಮತ್ತು ಶುಕ್ರವಾರ ವಯನಾಡಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಯನಾಡಿನಲ್ಲಿ ಭೂಕುಸಿತದಂತಹ ವಿನಾಶಕಾರಿ ದುರಂತವನ್ನು ಕೇರಳ ಎಂದಿಗೂ ಕಂಡಿಲ್ಲ ಎಂದು ಹೇಳಿದ್ದಾರೆ. ಈ ವಿಚಾರವನ್ನು ಕೇರಳ ಸರ್ಕಾರ ಮತ್ತು ಕೇಂದ್ರದ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದರು. ಅಲ್ಲದೆ, ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಕಾಂಗ್ರೆಸ್ 100 ಮನೆಗಳನ್ನು ನಿರ್ಮಿಸಲಿದೆ ಎಂದು ರಾಹುಲ್ ಗಾಂಧಿ ಘೋಷಿಸಿದರು.
ವಯನಾಡಿನಲ್ಲಿ ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಎಂಟು ಗಂಟೆಗಳ ಕಾರ್ಯಾಚರಣೆಯ ನಂತರ ದೂರದ ಬುಡಕಟ್ಟು ವಸಾಹತು ಪ್ರದೇಶದಿಂದ ಆರು ಮಕ್ಕಳನ್ನು ರಕ್ಷಿಸಿದ್ದಾರೆ. ವಿಪತ್ತಿನ ಕಾರಣದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಮುಂಡಕ್ಕೈನಲ್ಲಿರುವ ಅವರ ಮನೆಯಿಂದ ನಾಲ್ಕು ಜನರ ಕುಟುಂಬವನ್ನು ರಕ್ಷಿಸಲಾಗಿದೆ.
ವಯನಾಡಿನಲ್ಲಿ ಶನಿವಾರ ಮತ್ತು ಭಾನುವಾರ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಯಲ್ಲೋ ಎಚ್ಚರಿಕೆ ನೀಡಿದೆ. ಆಗಸ್ಟ್ 6 ರವರೆಗೆ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.(ಏಜೆನ್ಸೀಸ್​)
ವಯನಾಡು ಭೂಕುಸಿತ: ಸೇನಾ ಸಮವಸ್ತ್ರದಲ್ಲಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ ಮೋಹನ್​ಲಾಲ್​

ಮುಖ್ಯ ಕೋಚ್​​ ಆದ ನಂತ್ರ ನಡೆದ ಮೊದಲ ಏಕದಿನ ಪಂದ್ಯವೇ ಟೈ: ಗಂಭೀರ್​ ಪ್ರತಿಕ್ರಿಯೆ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − two =
Remember me
