|ಕೀರ್ತಿನಾರಾಯಣ ಸಿ.ಬೆಂಗಳೂರು
ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಅಧಿಕಾರಿ ಮತ್ತು ನೌಕರರ ಭ್ರಷ್ಟಾಚಾರ ಮಿತಿಮೀರಿದ್ದು, ದೇಶದಲ್ಲಿ ವಾರ್ಷಿಕ ಸರಾಸರಿ 1 ಲಕ್ಷ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ದೂರುಗಳು ದಾಖಲಾಗುತ್ತಿವೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಿಬಿಐನಲ್ಲೇ ವಾರ್ಷಿಕ 960 ಪ್ರಕರಣ ಶಿಫಾರಸ್ಸಾಗುತ್ತಿದ್ದು, ಸಾವಿರಾರು ಮಂದಿ ವಿರುದ್ಧ ಎಫ್​ಐಆರ್ ದಾಖಲಾಗುತ್ತಿದೆ. ಇದರಲ್ಲಿ ಆರೋಪ ಸಾಬೀತಾಗಿ ಶೇ.62 ತಪ್ಪಿತಸ್ಥರಿಗೆ ಜೈಲು ಶಿಕ್ಷೆಯಾದರೆ, ಶೇ.30 ಮಂದಿ ಸಾಕ್ಷ್ಯಾಧಾರಗಳ ಕೊರತೆ, ತನಿಖೆ ವಿಳಂಬ ಸೇರಿ ಬೇರೆಬೇರೆ ಕಾರಣಗಳಿಂದಾಗಿ ನ್ಯಾಯಾಲಯಗಳಲ್ಲಿ ಖುಲಾಸೆಯಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಕೇಂದ್ರ ಜಾಗೃತ ಆಯೋಗ (ಸಿವಿಸಿ)ದ ವರದಿ ಪ್ರಕಾರ, 2020-21ರಲ್ಲಿ 81,595 ಹಾಗೂ 2021-22ರಲ್ಲಿ 1,09214 ಅಧಿಕಾರಿ ಮತ್ತು ನೌಕರರ ವಿರುದ್ಧ ದೂರುಗಳು ದಾಖಲಾಗಿವೆ. ಇದರಲ್ಲಿ 2020ರಲ್ಲಿ 20,884 ಮಂದಿ ವಿರುದ್ಧ ವಿಚಾರಣೆ (ಪ್ರಾಸಿಕ್ಯೂಷನ್)ಗೆ ಅನುಮತಿ ನೀಡಲಾಗಿದೆ. ಆರೋಪ ಸಾಬೀತಾಗಿರುವ ಅಧಿಕಾರಿ ಮತ್ತು ನೌಕರರನ್ನು ವೃತ್ತಿಯಿಂದಲೇ ವಜಾ ಅಥವಾ ಕಡ್ಡಾಯ ನಿವೃತ್ತಿಯಡಿ ಬಿಡುಗಡೆ ಮಾಡಲಾಗಿದೆ. ಕೆಲವರಿಗೆ ಹಿಂಬಡ್ತಿ ಕೊಡಲಾಗಿದೆ, ಮತ್ತೆ ಕೆಲವರಿಗೆ ಮುಂಬಡ್ತಿ, ವೇತನ ಬಡ್ತಿ ತಡೆ ಹಿಡಿಯಲಾಗಿದೆ. ಕೆಲ ಪ್ರಕರಣಗಳಲ್ಲಿ ಇಲಾಖೆಗೆ ನಷ್ಟವಾಗಿರುವ ಹಣವನ್ನು ಆರೋಪಿತರಿಂದಲೇ ವಸೂಲಿ ಮಾಡಲಾಗಿದೆ.
ಸ್ವತಂತ್ರ ತನಿಖಾ ಸಂಸ್ಥೆಯಾದ ಸಿಬಿಐಗೆ ವಾರ್ಷಿಕ ಸರಾಸರಿ 960 ಪ್ರಕರಣ ಶಿಫಾರಸ್ಸು ಆಗುತ್ತಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್​ಐಆರ್​ಗಳು ದಾಖಲಾಗಿವೆ. 4,807 ಸರ್ಕಾರಿ ಅಧಿಕಾರಿ ಮತ್ತು ನೌಕರರ ವಿರುದ್ಧ ಕಳೆದ 5 ವರ್ಷದಲ್ಲಿ 2,370 ಪ್ರಕರಣಗಳು ದಾಖಲಾಗಿವೆ. ಸರ್ಕಾರಿ ಅಧಿಕಾರಿಗಳಲ್ಲದೆ 2017ರಿಂದ 2021ರವರೆಗೆ ಕರ್ನಾಟಕದ ಇಬ್ಬರು ಸೇರಿ ದೇಶದ 56 ಶಾಸಕರು ಹಾಗೂ ಸಂಸದರ ವಿರುದ್ಧ ಸಿಬಿಐನಲ್ಲಿ ಎಫ್​ಐಆರ್ ದಾಖಲಾಗಿವೆ. ಆದರೆ, ಬರೀ 22 ಪ್ರಕರಣಗಳಲ್ಲಿ ಮಾತ್ರವೇ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ.
ಸಿಬಿಐ ತನಿಖೆ ನಡೆಸುವ ಪ್ರಕರಣಗಳಲ್ಲಿ ಈವರೆಗೆ ಶೇ.62 ಕೇಸ್​ಗಳಲ್ಲಿ ಮಾತ್ರವೇ ಜೈಲು ಶಿಕ್ಷೆಯಾಗಿದೆ. ಸಿಬಿಐ ತನಿಖೆ ನಡೆಸಿರುವ 6,700ಕ್ಕೂ ಅಧಿಕ ಕೇಸ್​ಗಳು ಸಿಬಿಐ ಕೋರ್ಟ್​ಗಳಲ್ಲಿ ವಿಚಾರಣಾ ಹಂತದಲ್ಲಿವೆ. 1,939 ಕೇಸ್​ಗಳು 5 ವರ್ಷ ಹಾಗೂ 275 ಪ್ರಕರಣಗಳು ಬರೋಬ್ಬರಿ 20 ವರ್ಷಗಳಿಂದ ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲೇ ಉಳಿದಿವೆ. ತನಿಖೆ ಹಾಗೂ ವಿಚಾರಣೆ ವಿಳಂಬದಿಂದಾಗಿ ಆರೋಪಿಗಳು ಶಿಕ್ಷೆಯಿಂದ ಬಚಾವಾಗುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಪ್ರಾಸಿಕ್ಯೂಷನ್​ ವಿಳಂಬ:ಲಂಚಕ್ಕೆ ಬೇಡಿಕೆ ಸೇರಿ ವಿವಿಧ ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿಚಾರಣೆ (ಪ್ರಾಸಿಕ್ಯೂಷನ್)ಗೆ 4 ತಿಂಗಳಲ್ಲಿ ಕಡ್ಡಾಯವಾಗಿ ಅನುಮತಿ ಕೊಡಬೇಕು ಎಂದು 2022 ಅಕ್ಟೋಬರ್​ನಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಸಿಬಿಐ ತನಿಖೆ ಕೈಗೆತ್ತಿಕೊಂಡಿರುವ ಪ್ರಕರಣಗಳಲ್ಲಿ ನೂರಾರು ಪ್ರಕರಣಗಳಲ್ಲಿ ಆರೋಪಿತರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಸಿಕ್ಕಿಲ್ಲ. 2019-20ರಲ್ಲಿ 84 ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಕೇಳಿ 6 ತಿಂಗಳಾದರೂ ಸಿಕ್ಕಿಲ್ಲ. 2021-22ರಲ್ಲಿ 82 ಪ್ರಕರಣಗಳಲ್ಲಿ 350 ಅಧಿಕಾರಿಗಳ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಗೆ ಬಾಕಿ ಉಳಿದಿವೆ. ಅದೇ ರೀತಿ 2019ರಲ್ಲೂ 82 ಕೇಸ್​ಗಳಲ್ಲಿ 200 ಅಧಿಕಾರಿಗಳ ವಿರುದ್ಧದ ವಿಚಾರಣೆಗೆ ಅನುಮತಿ ಕೊಡುವುದು 3 ತಿಂಗಳಿಗೂ ಹೆಚ್ಚು ಅವಧಿ ಬಾಕಿ ಉಳಿದಿವೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
