ಡೆಹ್ರಾಡೂನ್:ಉತ್ತರಾಖಂಡದಲ್ಲಿ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯ ತೀವ್ರತೆ ಬುಧವಾರ ಕಡಿಮೆ ಆಗಿದೆ. ಆದರೆ, ಭೂಕುಸಿತ, ಮನೆ ಕುಸಿತ, ಪ್ರವಾಹದಿಂದ ಮೃತರ ಸಂಖ್ಯೆ 52ಕ್ಕೆ ಏರಿದೆ. ಅಲ್ಮೋರಾದಲ್ಲಿ ಏಳು ಮಂದಿ, ನೈನಿತಾಲ್ ಜಿಲ್ಲೆಯಲ್ಲಿ 28 ಜನರು, ಕುಮಾನ್ ಪ್ರದೇಶದಲ್ಲಿ ಬಹುತೇಕ ಸಾವು ಸಂಭವಿಸಿದೆ. 16 ಜನರು ಕಣ್ಮರೆ ಆಗಿದ್ದಾರೆ. 17 ಜನರಿಗೆ ಗಂಭೀರ ಗಾಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಓರ್ವ, ಸೋಮವಾರ ಆರು ಮಂದಿ ಸಾವನ್ನಪ್ಪಿದ್ದರು. ಕಳೆದ 24 ತಾಸಿನಲ್ಲಿ ಕುಮಾನ್ ವಿಭಾಗದಲ್ಲಿ 500 ಮಿಲಿಮೀಟರ್ ಮಳೆ ಸುರಿದಿದ್ದು, 124 ವರ್ಷದಲ್ಲೆ ಇದು ದಾಖಲೆಯ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಸಂಪರ್ಕ ಕಡಿತ
ಪ್ರವಾಸಿತಾಣಗಳಾದ ರಾಣಿಖೇತ್ ಹಾಗೂ ಅಲ್ಮೋರಾ ಜಲಾವೃತವಾಗಿದ್ದು, ಇಲ್ಲಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ರಾಣಿಖೇತ್​ನಲ್ಲಿ ಇಂಧನ ಕೊರತೆ ತಲೆದೋರಿದ್ದು, ತುರ್ತು ಬಳಕೆಗೆ ಮಾತ್ರ ಸಂಗ್ರಹ ಇದೆ. ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ. ಫೈಬರ್ ಆಪ್ಟಿಕಲ್ ಕೇಬಲ್ (ಒಎಫ್​ಸಿ) ಸಂಪರ್ಕ ಕಡಿತವಾಗಿರುವ ಕಾರಣ ದೂರವಾಣಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಉತ್ತರಾಖಂಡದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದ್ದ ನೈನಿತಾಲ್​ನ ಮೂರು ರಸ್ತೆಗಳ ಪೈಕಿ ಎರಡು ರಸ್ತೆಗಳಲ್ಲಿ ಸಂಪರ್ಕ ಸಾಧಿಸಲಾಗಿದೆ. ರಸ್ತೆಗಳಲ್ಲಿ ಕೆಸರು ತುಂಬಿದ್ದು, ಮನೆಗಳಿಗೂ ನುಗ್ಗಿ ಹಾನಿಯಾಗಿದೆ.
ಕೊಚ್ಚಿ ಹೋದ ವಾಹನಗಳು
ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ವಾಹನಗಳು ಕೊಚ್ಚಿಹೋಗಿವೆ. ಬಂಡೆಗಳು ಉರುಳಿ ಬಿದ್ದಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ. ಜೋಶಿಮಠದಿಂದ ಬದರಿನಾಥಕ್ಕೆ ಚಾರ್​ಧಾಮ್ ಯಾತ್ರೆ ಮರುಆರಂಭಗೊಂಡಿದೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಮೂರು ಹೆಲಿಕಾಪ್ಟರ್​ಗಳ ಪೈಕಿ ಎರಡು ನೈನಿತಾಲ್​ನಲ್ಲಿ ಇನ್ನೊಂದು ಗರ್ವಾಲ್​ನಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಿಕ್ಕಿಂನಲ್ಲಿ ಭಾರಿ ಮಳೆ
ಸಿಕ್ಕಿಂನ ವಿವಿಧೆಡೆ ಭಾರಿ ಮಳೆ ಸುರಿದಿದೆ. ಇದರಿಂದ ಭೂಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 10ರಲ್ಲಿ ಸಂಚಾರ ಸ್ಥಗಿತವಾಗಿದೆ. ರಾಜಧಾನಿ ಗ್ಯಾಂಗ್ಟಾಕ್​ಗೆ ಸಂಪರ್ಕ ಕಡಿತವಾಗಿದೆ. ರಾಂಗ್ಪೊ ಗಡಿ ಬಳಿ ಭಾರಿ ಭೂಕುಸಿತ ಸಂಭವಿ ಸಿದ್ದು, ತೀಸ್ತಾ ನದಿಯ ಪ್ರವಾಹದ ಕಾರಣ ಉಕ್ಕಿನ ಸೇತುವೆಯ ಕಂಭಕ್ಕೆ ಹಾನಿಯಾಗಿದೆ. ಹೀಗಾಗಿ ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಸೇತುವೆ ಸಿಕ್ಕಿಂನ ಹೆಬ್ಬಾಗಿಲೆಂದೆ ಪ್ರಸಿದ್ಧವಾಗಿದೆ. ಇನ್ನೊಂದು ಭೂಕುಸಿತ ಪಾನಿ ಹೌಸ್​ನಲ್ಲಿ ಉಂಟಾಗಿದೆ.
ಕೇರಳಕ್ಕೆ ರಾಜ್ಯದಿಂದ ನೆರವಿನ ಭರವಸೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅಲ್ಲಿನ ಪ್ರವಾಹ ಮತ್ತು ಭೂಕುಸಿತದಿಂದ ಸಂಭವಿಸಿರುವ ಹಾನಿಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಕೇರಳದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಈ ಬಗ್ಗೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರೊಂದಿಗೆ ಸಂಪರ್ಕದಲ್ಲಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಕೇರಳ ಜನರ ಸುರಕ್ಷತೆಗಾಗಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
15 ಸಾವಿರ ಪ್ರವಾಸಿಗರು
ದಸರಾ ಸಂದರ್ಭವಾದ ಕಾರಣ ನೈನಾ ದೇವಿ ದೇಗುಲದ ದರ್ಶನಕ್ಕೆಂದು ಬಂದಿದ್ದ 15 ಸಾವಿರ ಪ್ರವಾಸಿಗರು ಎರಡು ದಿನದಿಂದ ನೈನಿತಾಲ್​ನಲ್ಲಿ ಸಿಲುಕಿಕೊಂಡಿದ್ದರು. ಹೋಟೆಲ್​ಗಳು ಭರ್ತಿಯಾಗಿದ್ದವು. ಆಹಾರಕ್ಕೆ ಕೊರತೆ ಆಗಲಿಲ್ಲ. ಆದರೆ, ವಿದ್ಯುತ್, ನೀರು ಪೂರೈಕೆಯಲ್ಲಿ ಅಡಚಣೆ ಆಯಿತು ಎಂದು ನೈನಿತಾಲ್ ಹೋಟೆಲ್ ಅಸೋಸಿಯೇಷನ್ ಹೇಳಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
