ನವದೆಹಲಿ:ಆರು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ 56,800 ಚದರ ಕಿಲೋ ಮೀಟರ್​ಗೂ ಅಧಿಕ ಪ್ರದೇಶವನ್ನು ಪ್ರಾಕೃತಿಕವಾಗಿ ಸೂಕ್ಷ್ಮ ಪ್ರದೇಶ (ಇಎಸ್​ಎ) ಎಂದು ಘೋಷಿಸಿ ಕೇಂದ್ರ ಸರ್ಕಾರ ಜುಲೈ 31ರಂದು ಐದನೇ ಕರಡು ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶದಲ್ಲಿ, ಅನಾಹುತಕಾರಿ ಭೂಕುಸಿತ ಸಂಭವಿಸಿದ ಕೇರಳದ ವಯನಾಡು ಜಿಲ್ಲೆಯ 13 ಗ್ರಾಮಗಳೂ ಸೇರಿವೆ. ವಯನಾಡು ದುರಂತದ ಮರುದಿನವೇ ಹೊರಡಿಸಿದ ಅಧಿಸೂಚನೆಗೆ ಸಾರ್ವಜನಿಕರಿಂದ 60 ದಿನದೊಳಗೆ ಸಲಹೆ-ಆಕ್ಷೇಪಗಳನ್ನು ಸರ್ಕಾರ ಆಹ್ವಾನಿಸಿದೆ.
ಭೂಕುಸಿತ ಸಂತ್ರಸ್ತ ವಯನಾಡಿನ ಎರಡು ತಾಲೂಕುಗಳ 13 ಗ್ರಾಮಗಳನ್ನು ಒಳಗೊಂಡಂತೆ ಕೇರಳದ 9,993.7 ಚದರ ಕಿ.ಮೀ. ಪ್ರದೇಶವನ್ನು ಇಎಸ್​ಎ ಆಗಿ ಘೋಷಿಸಲು ಕರಡು ಅಧಿಸೂಚನೆ ಪ್ರಸ್ತಾಪಿಸಿದೆ. ಗುಜರಾತ್​ನ 449 ಚದರ ಕಿ.ಮೀ., ಮಹಾರಾಷ್ಟ್ರದ 17,340 ಚದರ ಕಿ.ಮೀ., ಗೋವಾದ 1,461 ಚದರ ಕಿ.ಮೀ., ಕರ್ನಾಟಕದ 20,668 ಚದರ ಕಿ.ಮೀ. ಮತ್ತು ತಮಿಳುನಾಡಿನ 6,914 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಉದ್ದೇಶಿಸಲಾಗಿದೆ.

ಗಣಿಗಾರಿಕೆ ನಿಷೇಧ:ಪ್ರಸ್ತಾಪಿತ ಪ್ರದೇಶದಲ್ಲಿ ಖನಿಜ ಗಣಿಗಾರಿಕೆ, ಕಲ್ಲು ಗಣಿಗಾರಿಕೆ (ಕ್ವಾರಿಯಿಂಗ್) ಮತ್ತು ಮರಳು ಗಣಿಗಾರಿಕೆ ಸಂಪೂರ್ಣವಾಗಿ ನಿಷೇಧಿಸುವಂತೆ ಕರಡು ಅಧಿಸೂಚನೆ ಸಲಹೆ ಮಾಡಿದೆ. ಅಂತಿಮ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಐದು ವರ್ಷದೊಳಗಡೆ ಅಥವಾ ಹಾಲಿ ಇರುವ ಗಣಿಗಾರಿಕೆ ಗುತ್ತಿಗೆ ಅವಧಿ ಮುಗಿದ ತಕ್ಷಣ, ಇವುಗಳಲ್ಲಿ ಯಾವುದು ಮೊದಲೋ ಆಗ ಹಾಲಿ ಅಸ್ತಿತ್ವದಲ್ಲಿರುವ ಗಣಿಗಳನ್ನು ಹಂತ ಹಂತವಾಗಿ ಮುಚ್ಚುವಂತೆಯೂ ಸಲಹೆ ಮಾಡಿದೆ. ಹೊಸ ಉಷ್ಣ ವಿದ್ಯುತ್ ಯೋಜನೆಗಳನ್ನೂ ಅಧಿಸೂಚನೆ ನಿಷೇಧಿಸಿದೆ. ಈಗಿರುವ ಅಂಥ ಯೋಜನೆಗಳು ಮುಂದುವರಿಯಬಹುದು; ಆದರೆ ಅವುಗಳ ವಿಸ್ತರಣೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
2010ರಲ್ಲಿ ರಚನೆ:ಪಶ್ಚಿಮ ಘಟ್ಟಗಳ ಮೇಲೆ ಜನಸಂಖ್ಯೆಯ ಒತ್ತಡ, ತಾಪಮಾನ ಬದಲಾವಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮದ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ 2010ರಲ್ಲಿ ಪರಿಸರ ತಜ್ಞ ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿತ್ತು.
| ಕಿರಣ್ ಮಾದರಹಳ್ಳಿ ಚಾಮರಾಜನಗರ
ವಯನಾಡು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಶವಗಳು ಪತ್ತೆಯಾಗುತ್ತಿದ್ದಂತೆಯೇ ಸಂಬಂಧಿಕರ ದುಃಖ ಸ್ಪೋಟಗೊಂಡಿದೆ. ಹೆತ್ತ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿಗಾಗಿ ಕಾಯುತ್ತಿದ್ದ ಮಹದೇವಮ್ಮ ಎಂಬಾಕೆಯ ಕಣ್ಣೀರ ಕಟ್ಟೆಯೊಡೆದಿದೆ. ಮೇಪ್ಪಾಡಿಯ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಶವಾಗಾರದಲ್ಲಿ ತಮ್ಮ ಕುಟುಂಬಸ್ಥರ ಶವಗಳನ್ನು ಗುರುತು ಹಿಡಿದವರ ರೋದನ ಮುಗಿಲು ಮುಟ್ಟಿತ್ತು.
ಮೂಲತಃ ತಿ.ನರಸೀಪುರದ ಉಕ್ಕಲಗೆರೆ ಗ್ರಾಮದ ಮಹದೇವಮ್ಮ ಮುಂಡಕೈನಲ್ಲಿ ನೆಲೆಸಿದ್ದರು. ಇವರ ಕುಟುಂಬದ 9 ಜನ ಭೂಕುಸಿತದಲ್ಲಿ ನಾಪತ್ತೆ ಆಗಿದ್ದರು. ಈ ಪೈಕಿ 19 ವರ್ಷದ ಮೊಮ್ಮಗಳು ಶ್ರೇಯಾ ಶವ ಮಂಗಳವಾರ ಪತ್ತೆಯಾಗಿತ್ತು, ಉಳಿದವರ ಪತ್ತೆ ಕಾರ್ಯ ಮುಂದುವರಿದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಹದೇವಮ್ಮನಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಇದೀಗ ಮಹದೇವಮ್ಮನ ಕುಟುಂಬದ 7 ಜನರ ಶವ ದೊರೆತಿದ್ದು, ಗುರುತು ಸಿಕ್ಕಿದೆ. ಮಕ್ಕಳಾದ ಗುರುಮಲ್ಲ (70), ಶಿವಣ್ಣ(45), ಸಿದ್ದರಾಜು (42), ಸೊಸೆಯಂದಿರಾದ ಸಾವಿತ್ರಿ(52), ದಿವ್ಯಾ(35), ಮೊಮ್ಮಕ್ಕಳಾದ ಅಶ್ವಿನಿ(13), ರಕ್ಷಿತ್ ಕೃಷ್ಣ(10) ಅವರ ಶವಗಳ ಗುರುತು ಪತ್ತೆಹಚ್ಚಲಾಗಿದೆ.
ಉಳಿದಂತೆ ಸವಿತಾ ಎಂಬವರ ಮೃತದೇಹದ ಹುಡುಕಾಟ ನಡೆದಿದೆ. ಈಗ ಸಿಕ್ಕಿರುವ 7 ಶವಗಳ ಅಂತ್ಯಕ್ರಿಯೆ ಮೇಪ್ಪಾಡಿಯಲ್ಲೇ ಮಾಡುತ್ತೇವೆ ಎಂದು ಸಂಬಂಧಿಕ ಗುರುಸಿದ್ದ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಸ್ನೇಹಿತರಿಂದ ಶವದ ಗುರುತು ಪತ್ತೆ: ಹುಟ್ಟಿದ 3 ತಿಂಗಳಿಗೇ ಆ ಮಗು ತಾಯಿಯನ್ನು ಕಳೆದುಕೊಂಡಿತ್ತು. ಅತ್ತೆ-ಮಾವನೇ ಮಗುವಿಗೆ ಅಪ್ಪ- ಅಮ್ಮನಾದರು. ಭುಜದೆತ್ತರಕ್ಕೆ ಸಾಕಿ ಬೆಳೆಸಿ ಓದಿಸಿದರು. ಈ ಋಣದ ಸಂದಾಯಕ್ಕಿಳಿದ ವಿಧಿ ಅವರೊಂದಿಗೆ ಹೆತ್ತಮಕ್ಕಳನ್ನು ಬಿಟ್ಟು, ಸಾಕಿದ ಮಗನನ್ನೇ ಕರೆದುಕೊಂಡು ಹೋಗಿಬಿಟ್ಟಿತು. ಧರೆ ಉರುಳಿಹೋಗಿರುವ ಕೇರಳದ ವಯನಾಡಿನ ಮುಂಡಕೈನಲ್ಲಿ ನೆಲೆಸಿದ್ದ, ಮೂಲತಃ ತಮಿಳುನಾಡಿನ ತಾಳವಾಡಿಯ ಕಾಮಯ್ಯನಪುರದ ಕನ್ನಡಿಗರಾದ ಪುಟ್ಟಸಿದ್ದಿ-ರಂಗಸ್ವಾಮಿ ಸಾವಿನೊಂದಿಗೆ ಸಾಕುಮಗ ಮಹೇಶನೂ (ಮನು)(19) ಜತೆಯಾಗಿಬಿಟ್ಟ ಎಂಬುದು ದುರಂತ.
ಕಾಮಯ್ಯಪುರದ ಸೋಮಣ್ಣ- ಮಹದೇವಮ್ಮನ ಪುತ್ರ ಮಹೇಶ್. ಈತ 3 ತಿಂಗಳ ಮಗುವಾಗಿದ್ದಾಗ ಅನಾರೋಗ್ಯಪೀಡಿತ ತಾಯಿಯನ್ನು ಕಳೆದುಕೊಂಡ. ಸೋಮಣ್ಣನ ಸಂಕಷ್ಟ ನೋಡಿ ಅಕ್ಕ ಪುಟ್ಟಸಿದ್ದಿ, ಭಾವ ರಂಗಸ್ವಾಮಿ ಮಗುವನ್ನು ಸಾಕುವುದಾಗಿ ಹೇಳಿ ಎತ್ತಿಕೊಂಡು ಮುಂಡಕೈಗೆ ಹೋಗಿದ್ದರು. ಸ್ವಂತ ಮಕ್ಕಳಾದ ರಾಜೇಶ್, ರಾಧಿಕಾ ಜತೆಗೆ ಮಹೇಶ್​ನನ್ನೂ ಬೆಳೆಸಿದ್ದರು. ರಾಜೇಶ್ ಮದುವೆಯಾಗಿ ಸುಲ್ತಾನ್​ಬತ್ತೇರಿಯಲ್ಲಿ ಇದ್ದಾನೆ. ಮಗಳು ರಾಧಿಕಾಳನ್ನು ಚಾಮರಾಜನಗರದ ಚಂದಕವಾಡಿಯ ಬಸವಣ್ಣಗೆ ವಿವಾಹ ಮಾಡಲಾಗಿತ್ತು. ಹೀಗಾಗಿ ಪುಟ್ಟಸಿದ್ದಿ ಮತ್ತು ರಂಗಸ್ವಾಮಿಗೆ ಮುಂಡಕೈನಲ್ಲಿ ರಾಜೇಶ್ ಮಾತ್ರ ಆಶ್ರಯವಾಗಿದ್ದ. ಅತ್ತೆ-ಮಾವರೇ ಅಪ್ಪ-ಅಮ್ಮನಾಗಿ ಪ್ರೀತಿ ನೀಡಿದ್ದರು. ಭೂಕುಸಿತ ಇವರ ಬಾಳನ್ನೇ ಮುಗಿಸಿಬಿಟ್ಟಿತು.
ಪ್ರವಾಹದಲ್ಲಿ ಮನೆ ಕೊಚ್ಚಿ ಹೋಯಿತು. ಇದರಲ್ಲಿ ಪುಟ್ಟಸಿದ್ದಿ, ರಂಗಸ್ವಾಮಿ, ಮಹೇಶ್ ಸಿಲುಕಿದರು. ಎರಡ್ಮೂರು ದಿನಗಳ ಬಳಿಕ ಪುಟ್ಟಸಿದ್ದಿ ಮೃತದೇಹ ಸಿಕ್ಕಿತು. ರಂಗಸ್ವಾಮಿ ಶವ ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಮಹೇಶ್​ಗಾಗಿ ಹುಡುಕಾಟ ನಡೆಯುವಾಗ ಗುರುವಾರ ಛಿದ್ರಗೊಂಡಿದ್ದ ದೇಹವೊಂದು ಸಿಕ್ಕಿತು. ಸಂಬಂಧಿಕರ್ಯಾರಿಗೂ ಗುರುತು ಪತ್ತೆ ಮಾಡಲು ಆಗಲಿಲ್ಲ. ಈತನ ಜತೆಗೆ ಓದುತ್ತಿದ್ದ ಸ್ನೇಹಿತರು ಮೃತದೇಹ ಮಹೇಶನದ್ದೇ ಎಂದು ಗುರುತು ಹಿಡಿದರು. ಮೃತದೇಹವನ್ನು ತಾಳವಾಡಿಯ ಕಾಮಯ್ಯನಪುರ ಗ್ರಾಮಕ್ಕೆ ಶುಕ್ರವಾರ ತಂದು ಅಂತ್ಯಸಂಸ್ಕಾರ ಮಾಡಲಾಯಿತು. ಮಹೇಶ್ 3 ತಿಂಗಳ ಮಗುವಾಗಿದ್ದಾಗ ತನ್ನ ಅಕ್ಕನ ಮಡಿಲಿಗೆ ಇಟ್ಟಿದ್ದ ಸ್ವಂತ ತಂದೆ ಸೋಮಣ್ಣ ಸಂಪೂರ್ಣ ದೇಹ ಮುಚ್ಚಿದ್ದ ಶವವನ್ನು ನೋಡಬೇಕಾದ ದುಸ್ಥಿತಿ ಒದಗಿತ್ತು. ಸೋಮಣ್ಣನ ಮಗಳು ಮಹೇಶ್ವರಿ ತನ್ನ ತಮ್ಮನ ಸಾವನ್ನು ಕಂಡು ರೋದಿಸಿದ್ದು ಹೃದಯ ವಿದ್ರಾವಕವಾಗಿತ್ತು.
ವಯನಾಡು:ಪ್ರಕೃತಿ ಕೆರಳಿ ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಮಹಾ ದುರಂತದಲ್ಲಿ ಮಡಿದವರ ಸಂಖ್ಯೆ 330 ಆಗಿದ್ದು, ಇನ್ನೂ 300 ಮಂದಿ ನಾಪತ್ತೆಯಾಗಿದ್ದಾರೆ. ಈ ನಡುವೆ, ಭೂಕುಸಿತದಿಂದ ತತ್ತರಿಸಿರುವ ಚೂರಲ್​ವುಲಾದಲ್ಲಿ ರಕ್ಷಣಾ ಕಾರ್ಯಾಚರಣೆ ಶುಕ್ರವಾರ ನಾಲ್ಕನೇ ದಿನ ಪ್ರವೇಶಿಸಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಭಾರಿ ಮಳೆ ಮತ್ತು ಸವಾಲಿನ ಭೂಪ್ರದೇಶವನ್ನು ಲೆಕ್ಕಿಸದೇ 40 ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ. ಭೂಕುಸಿತವಾದ ಆರು ವಲಯಗಳಾದ ಅಟ್ಟಮಲಾ ಮತ್ತು ಅರಣ್​ವುಲಾ, ಮುಂಡಕೈ, ಮುಂಚಿರಿಮಟ್ಟಂ, ವೆಲ್ಲರಿಮಲಾ ಗ್ರಾಮ, ಜಿವಿಎಚ್​ಎಸ್​ಎಸ್ ವೆಲ್ಲರಿಮಲಾ ಮತ್ತು ನದಿ ದಂಡೆ -ಹೀಗೆ ಆರು ವಲಯಗಳಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಸೇನೆ, ಎನ್​ಡಿಆರ್​ಎಫ್, ಡಿಎಸ್​ಜಿ, ಕರಾವಳಿ ಕಾವಲು ಪಡೆ, ನೇವಿ ಮತ್ತು ಎಂಇಜಿ ಒಳಗೊಂಡ ಜಂಟಿ ತಂಡಗಳ ಸಿಬ್ಬಂದಿ ಹಾಗೂ ಮೂವರು ಸ್ಥಳೀಯರು ಮತ್ತು ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿ ಶೋಧ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಚಲಿಯಾರ್ ನದಿ ದಡದಲ್ಲಿ ಮೂರು ಆಯಾಮದ ಶೋಧ ಕಾರ್ಯಾಚರಣೆಯೂ ಇದರೊಂದಿಗೆ ನಡೆಯಲಿದೆ. 40 ಕಿ.ಮೀ. ಉದ್ದದ ನದಿಗುಂಟ ಇರುವ ಎಂಟು ಪೊಲೀಸ್ ಠಾಣೆಗಳು, ಮೃತದೇಹಗಳನ್ನು ಶೋಧಿಸಲು ಸ್ಥಳೀಯ ತಜ್ಞ ಈಜುಗಾರರೊಂದಿಗೆ ಸಮನ್ವಯ ಸಾಧಿಸಲಿವೆ. ಶೋಧ ಕಾರ್ಯದಲ್ಲಿ ಒಂದು ಪೊಲೀಸ್ ಹೆಲಿಕಾಪ್ಟರ್ ಕೂಡ ಭಾಗವಹಿಸಿದೆ.
ಶನಿವಾರ ಡ್ರೋನ್ ಆಗಮನ:ಕೆಸರಿನಲ್ಲಿ ಹೂತುಹೋಗಿರುವ ಶವಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗಲು ಒಂದು ಡ್ರೋನ್ ಆಧಾರಿತ ರೇಡಾರ್ ಶನಿವಾರ ದೆಹಲಿಯಿಂದ ಆಗಮಿಸಲಿದೆ. ಆರು ನಾಯಿಗಳು ಈಗಾಗಲೇ ನೆರವಾಗುತ್ತಿದ್ದು ತಮಿಳುನಾಡಿನಿಂದ ಇನ್ನೂ ನಾಲ್ಕು ಶ್ವಾನಗಳು ಆಗಮಿಸಲಿವೆ ಎಂದು ಕಂದಾಯ ಸಚಿವ ಕೆ. ರಾಜನ್ ಹೇಳಿದ್ದಾರೆ.
ಮನೋಸಾಮಾಜಿಕ ಬೆಂಬಲ:121 ಸದಸ್ಯರ ಮಾನಸಿಕ ಆರೋಗ್ಯ ವಿಪತ್ತು ನಿರ್ವಹಣಾ ತಂಡವೊಂದು ಭೂಕುಸಿತ ದುರಂತದಲ್ಲಿ ಬದುಕುಳಿದ ಜನರಿಗೆ ಮನೋಸಾಮಾಜಿಕ ಬೆಂಬಲವನ್ನು ನೀಡಲಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಕುಟುಂಬ ರಕ್ಷಣೆ:ಪದವೆಟ್ಟಿ ಕಣ್ಣು ಪ್ರದೇಶದಲ್ಲಿ ಪ್ರವಾಹದ ಅಬ್ಬರದ ನಡುವೆ ಪ್ರತ್ಯೇಕಗೊಂಡಿದ್ದ 4 ಜನರ ಕುಟುಂಬವೊಂದನ್ನು ಶುಕ್ರವಾರ ರಕ್ಷಿಸಿ ಕಾಳಜಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ಅವರನ್ನು ಜಾನ್ ಕೆ.ಜೆ., ಜೊಮೋಲ್ ಜಾನ್, ಕ್ರಿಸ್ಟಿನೆ ಜಾನ್, ಅಬ್ರಹಾಂ ಜಾನ್ ಎಂದು ಗುರುತಿಸಲಾಗಿದೆ.
ಸುತ್ತೋಲೆ ವಾಪಸ್:ವಯನಾಡು ದುರಂತ ಸಂಬಂಧ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಿರ್ಬಂಧಿಸಿ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ವಿವಾದಾತ್ಮಕ ಟಿಪ್ಪಣಿ ವಾಪಸ್ ಪಡೆಯುವಂತೆ ಸಿಎಂ ಪಿ. ವಿಜಯನ್ ನಿರ್ದೇಶಿಸಿದ್ದಾರೆ.
ಚಹಾ ಮಾರುವಾಕೆಯಿಂದ ಸಿಎಂ ಪರಿಹಾರ ನಿಧಿಗೆ ಹಣ: ಕೊಲ್ಲಂನ ಒಂದು ಚಿಕ್ಕ ಟೀ ಸ್ಟಾಲ್ ಮಾಲಕಿ ಸುಬೇದಾ ಹಾಗೂ ಆಕೆಯ ಪತಿ ತಮ್ಮ ಅಲ್ಪ ಆದಾಯ ಮತ್ತು ಕಲ್ಯಾಣ ಯೋಜನೆಗಳಡಿ ಸಿಗುತ್ತಿರುವ ಪಿಂಚಣಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಮೇಪ್ಪಾಡಿಯ ಹೈಸ್ಕೂಲ್​ನ ಶಿಬಿರದಲ್ಲಿ ದುರಂತ ಸಂತ್ರಸ್ತರಿಗೆ ಆಹಾರ ವಿತರಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.
ಸಾಮೂಹಿಕ ಅಂತ್ಯಸಂಸ್ಕಾರ: ಪ್ರಕೃತಿ ವಿಕೋಪದಲ್ಲಿ ಮಡಿದವರ ಪೈಕಿ ಗುರುತು ಪತ್ತೆಯಾಗದ ದೇಹಗಳ ಅಂತ್ಯಕ್ರಿಯೆಯನ್ನು ಗುಡ್ಡಗಾಡು ಜಿಲ್ಲೆಯ ಸಾರ್ವಜನಿಕ ಸ್ಮಶಾನಗಳಲ್ಲಿ ನಡೆಸಲಾಗುವುದೆಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಕಲ್ಪೆಟ್ಟ ಮುನಿಸಿಪಾಲಿಟಿ, ವೈಥಿರಿ, ಮುಟ್ಟಿಲ್, ಕನಿಯಂಬತ್ತ, ಪಡಿಂಜತರ, ತೊಂಡರ್​ನಾಡ್, ಎಡವಕ ಮತ್ತು ಮುಲ್ಲನ್​ಕೊಲ್ಲಿ ಗ್ರಾಮ ಪಂಚಾಯತ್​ಗಳ ಸ್ಮಶಾನಗಳಲ್ಲಿ ಶವಗಳನ್ನು ಹೂಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಜಿಪಿಎಸ್- ಶ್ವಾನಗಳ ಬಳಕೆ: ಬದುಕುಳಿದವರನ್ನು ಪತ್ತೆ ಹಚ್ಚಲು ರಕ್ಷಣಾ ತಂಡಗಳು ಶುಕ್ರವಾರ ಜಿಪಿಎಸ್ ಕೋಆರ್ಡಿನೇಟ್​ಗಳು ಮತ್ತು ವೈಮಾನಿಕ ಡ್ರೋನ್ ಚಿತ್ರಗಳನ್ನು ಬಳಸಿವೆ. 190 ಅಡಿ ಉದ್ದದ ಬೈಲಿ ಸೇತುವೆಯನ್ನು ಸೇನೆ ಪೂರ್ಣಗೊಳಿಸಿದ ನಂತರ ಶೋಧ ಕಾರ್ಯ ತೀವ್ರಗೊಂಡಿದ್ದು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಮಣ್ಣಿನಡಿ ಹೂತಿರುವ ಜನರನ್ನು ಪತ್ತೆ ಹಚ್ಚಲು ಭಾರತೀಯ ಸೇನೆಯ ಜಾಕಿ, ಡಿಕ್ಸಿ ಮತ್ತು ಸಾರಾ ಎಂಬ ಮೂರು ಲ್ಯಾಬ್ರಡಾರ್ ನಾಯಿಗಳು ಮಳೆ ಮತ್ತು ಕೆಸರಿನ ಸವಾಲಿನ ಸನ್ನಿವೇಶದ ನಡುವೆ ದಣಿವರಿಯದೆ ಕೆಲಸ ಮಾಡುತ್ತಿವೆ.
ಶಿಮ್ಲಾ:ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟದಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರ 8ಕ್ಕೆ ಏರಿದೆ. ಈ ನಡುವೆ, ಜಲಪ್ರಳಯದಿಂದ ನಾಪತ್ತೆ ಆಗಿರುವ ಸುಮಾರು 45 ಜನರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಇನ್ನೂ ಮೂರು ಮೃತದೇಹಗಳು ಸಿಕ್ಕಿವೆ. ಇದರಿಂದ ನಿರ್ವಂದ, ಸೈಂಜ್ ಮತ್ತು ಮಲಾನಾ ಪ್ರದೇಶಗಳಲ್ಲಿ ಉಂಟಾದ ಹಠಾತ್ ನೆರೆ ಹಾವಳಿಗೆ ಬಲಿಯಾದವರ ಸಂಖ್ಯೆ ಎಂಟಕ್ಕೆ ಏರಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮತ್ತು ಶಿಕ್ಷಣ ಸಚಿವ ರೋಹಿತ್ ಠಾಕೂರ್ ಶಿಮ್ಲಾ-ಕುಲು ಜಿಲ್ಲೆಗಳ ಗಡಿ ಪ್ರದೇಶ ಸಮೇಜ್​ಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಪ್ರವಾಹ ಸಂತ್ರಸ್ತರೊಂದಿಗೆ ಮಾತುಕತೆಯನ್ನೂ ನಡೆಸಿದರು.

ಬುಧವಾರ ರಾತ್ರಿ ಹಠಾತ್ತನೆ ಧಾರಾಕಾರ ಮಳೆಯಾಗಿ ಸರ್ಪಾರ, ಗಾನ್ವಿ ಮತ್ತು ಕುರ್ಬಾನ್ ನಾಲೆಗಳಲ್ಲಿ ಪ್ರವಾಹ ಉಕ್ಕೇರಿ 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು.
ಬುಧವಾರ ರಾತ್ರಿಯ ಮೇಘಸ್ಪೋಟದಿಂದ ಉಂಟಾದ ಭಾರಿ ಮಳೆಯಿಂದಾಗಿ ಕೇದಾರನಾಥ ಯಾತ್ರೆಯ ಮಾರ್ಗದಲ್ಲಿ 500ಕ್ಕೂ ಅಧಿಕ ಮಂದಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲು ಭಾರತೀಯ ವಾಯುಸೇನೆಯ ಚಿನೂಕ್ ಮತ್ತು ಎಂಐ17 ಹೆಲಿಕಾಪ್ಟರ್​ಗಳನ್ನು ಬಳಸಿ ಶುಕ್ರವಾರ ಕಾರ್ಯಾಚರಣೆ ನಡೆಸಲಾಗಿದೆ. ಮೊದಲ ಸುತ್ತಿನಲ್ಲಿ ಹತ್ತು ಮಂದಿಯನ್ನು ಏರ್​ಲಿಫ್ಟ್ ಮಾಡಲಾಗಿದೆ. ಛತ್ತೀಸ್​ಗಢದ ಬಲ್ರಾಂಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಧನ್​ಬಾಸಿಯ(62) ಹಾಗೂ ಆಕೆಯ ಪುತ್ರ ಹಿಮಾಚಲ್ (27) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.
ಆಂಧ್ರದಲ್ಲಿ ನಾಲ್ವರ ಸಾವು:ಆಂಧ್ರಪ್ರದೇಶದಲ್ಲಿ ಆಗಸ್ಟ್ 2ರಿಂದ 6ರವರೆಗೆ ಗುಡುಗು ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಚಿನ್ನವಂಗಲಿ ಗ್ರಾಮದಲ್ಲಿ ಶುಕ್ರವಾರ ಭಾರಿ ವರ್ಷಧಾರೆಗೆ ಮನೆಯೊಂದು ಕುಸಿದು ಬಿದ್ದು ಕುಟುಂಬದ ನಾಲ್ಕು ಜನರು ಮೃತಪಟ್ಟಿದ್ದಾರೆ.
ಆಂಧ್ರ ಪ್ರದೇಶ: ಮನೆ ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ಸಾವು

ಬಿಹಾರದಲ್ಲಿ ಸಿಡಿಲು ಬಡಿದು 8 ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
