ಜಮ್ಮು-ಕಾಶ್ಮೀರದ ವಿಧಾನಸಭಾ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಸೋಮವಾರ ದೇಶದ ಗಮನಸೆಳೆದಿದೆ. ಕ್ಷೇತ್ರ ಮರುವಿಂಗಡಣಾ ಆಯೋಗವು ಕರಡು ಶಿಫಾರಸು ವರದಿಯನ್ನು ಅಂತಿಮಗೊಳಿಸಿದೆ. ಇದರಲ್ಲಿ, ಜಮ್ಮುವಿಗೆ 6 ಮತ್ತು ಕಾಶ್ಮೀರಕ್ಕೆ 1 ಹೆಚ್ಚುವರಿ ಸ್ಥಾನ ನೀಡಲಾಗಿದೆ. ಇದಲ್ಲದೆ, 16 ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ (ಎಸ್​ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್​ಟಿ) ಸಮುದಾಯಗಳಿಗೆ ಮೀಸಲಿಡಬೇಕು ಎಂದು ಶಿಫಾರಸು ಮಾಡಿದೆ.
ತೀವ್ರ ವಿರೋಧ, ಪ್ರತಿಭಟನೆ:ಕ್ಷೇತ್ರ ಮರುವಿಂಗಡಣಾ ಆಯೋಗದ ಕರಡು ವರದಿಯ ಅಂಶಗಳು ಬಹಿರಂಗ ವಾಗುತ್ತಿದ್ದಂತೆ ನ್ಯಾಷನಲ್ ಕಾನ್ಪರೆನ್, ಪಿಡಿಪಿ, ಜೆಕೆ ಅಪ್ನಿ ಪಾರ್ಟಿ, ಪೀಪಲ್ಸ್ ಕಾನ್ಪರೆನ್ಸ್ ಮುಂತಾದ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿಯ ರಾಜಕೀಯ ಅಜೆಂಡಾಗಳಿಗೆ ಪೂರಕವಾಗಿ ಆಯೋಗ ಈ ಶಿಫಾರಸು ಮಾಡಿದೆ ಎಂದು ಟೀಕಿಸಿವೆ. ಕ್ಷೇತ್ರ ಮರುವಿಂಗಡಣಾ ಆಯೋಗದ ಸದಸ್ಯರಾಗಿರುವ ಜಮ್ಮು-ಕಾಶ್ಮೀರದ ಐವರು ಸಂಸದರಿಗೆ ಕರಡು ಶಿಫಾರಸು ವರದಿಯ ಪ್ರತಿಯನ್ನು ಸೋಮವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಂಚಲಾಗಿತ್ತು. ಕಾಶ್ಮೀರದ ಪ್ರಾದೇಶಿಕ ಪಕ್ಷಗಳ ನಾಯಕರು ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಈ ವರದಿ ಪೂರ್ವಗ್ರಹಪೀಡಿತವಾಗಿದ್ದು, ಸ್ವೀಕಾರಾರ್ಹವಲ್ಲ ಎಂದು ಅವರು ಷರಾ ಬರೆದಿದ್ದಾರೆ.
ಅಭಿಪ್ರಾಯ ಸಲ್ಲಿಕೆಗೆ ಅವಕಾಶ:ಕರಡು ಶಿಫಾರಸು ವರದಿಗೆ ಸಂಬಂಧಿಸಿ ಡಿ.31ರ ಒಳಗೆ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಪಕ್ಷಗಳಿಗೆ ಕ್ಷೇತ್ರ ಮರುವಿಂಗಡಣಾ ಆಯೋಗ ಸೋಮವಾರ ತಿಳಿಸಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ…:ಜಮ್ಮು-ಕಾಶ್ಮೀರ ಮರುಸಂಘಟನಾ ಕಾಯ್ದೆ 2019ರ ಪ್ರಕಾರ ಹೊಸ ವಿಧಾನಸಭೆಯಲ್ಲಿ 90 ಸ್ಥಾನಗಳು ಇರಲಿವೆ. ಹಿಂದಿನ ವಿಧಾನಸಭೆಗಿಂತ ಏಳು ಸ್ಥಾನಗಳು ಹೆಚ್ಚು. ಇದಕ್ಕೆ ಪೂರಕವಾಗಿ ಈಗ ಕಾಶ್ಮೀರಕ್ಕೆ ಒಂದು, ಜಮ್ಮುವಿಗೆ 6 ಸ್ಥಾನಗಳು ಹೆಚ್ಚಿಗೆ ಲಭ್ಯವಾಗುವ ನಿರೀಕ್ಷೆ ಇದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 24 ವಿಧಾನಸಭಾ ಕ್ಷೇತ್ರಗಳು ಹಾಗೆಯೇ ಉಳಿಯಲಿವೆ.
ಕ್ಷೇತ್ರ ಮರುವಿಂಗಡಣೆ ಎಂದರೆ…:ಕ್ಷೇತ್ರ ಮರುವಿಂಗಡಣೆ ಎಂದರೆ ಜನಗಣತಿ ವರದಿ ಪ್ರಕಾರ ಜನಸಂಖ್ಯೆ ಆಧರಿಸಿ ವಿಧಾನಸಭೆ ಅಥವಾ ಲೋಕಸಭೆ ಕ್ಷೇತ್ರಗಳ ಗಡಿ ಮರು ಹೊಂದಾಣಿಕೆ ಮಾಡುವುದು. ಕೇಂದ್ರ ಸರ್ಕಾರವು, ಕ್ಷೇತ್ರ ಪುನರ್​ವಿಂಗಡಣೆ- 2002ರ ಕಾಯ್ದೆಯ ಸೆಕ್ಷನ್ 3ರ ಅನ್ವಯ ವಿಧಾನಸಭಾ ಕ್ಷೇತ್ರ ಮರುವಿಂಗಡಣೆಗೆ ಕ್ರಮ ತೆಗೆದುಕೊಂಡಿದೆ.
ಜಮ್ಮು -ಕಾಶ್ಮೀರಕ್ಕೆ ಸಂಬಂಧಿಸಿ…:ಜಮ್ಮು-ಕಾಶ್ಮೀರ 2019ರಲ್ಲಿ ವಿಶೇಷ ಸ್ಥಾನಮಾನ ಕಳೆದುಕೊಂಡ ಬಳಿಕ ಅದರ ಲೋಕಸಭಾ ಸ್ಥಾನಗಳಂತೆ ವಿಧಾನ ಸಭಾ ಸ್ಥಾನಗಳ ನಿರ್ವಹಣೆಯೂ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬಂದಿದೆ. ಭಾರತದ ಸಂವಿಧಾನದ ಚೌಕಟ್ಟಿನಲ್ಲೇ ಈಗ ಕ್ಷೇತ್ರ ಮರುವಿಂಗಡನೆಯ ಕ್ರಮ ಜರುಗಿಸಲಾಗುತ್ತಿದೆ. 2011ರ ಜನಗಣತಿ ಪ್ರಕಾರ, ಜಮ್ಮು ಜನಸಂಖ್ಯೆ 53,78,538. ಕಾಶ್ಮೀರ ಜನಸಂಖ್ಯೆ 68,88,475. ಮೊದಲ ಕ್ಷೇತ್ರ ಮರುವಿಂಗಡಣೆ ಆಯೋಗವು 1981ರ ಜನಗಣತಿ ಆಧಾರದಲ್ಲಿ 1995ರಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿತ್ತು. ಅದಾದ ನಂತರ ಪುನರ್​ವಿಂಗಡಣೆ ಆಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. 2001ರಲ್ಲಿ ಜನಗಣತಿ ಆಗಿದ್ದರೂ, ಹಿಂದಿನ ರಾಜ್ಯ ಸರ್ಕಾರವು ವಿಧಾನಸಭೆ ಕ್ಷೇತ್ರ ಮರುವಿಂಗಡಣೆಯನ್ನು 2026ರ ತನಕ ತಡೆಹಿಡಿದಿತ್ತು.
ಜನಸಂಖ್ಯಾ ಲೆಕ್ಕಾಚಾರ ಮತ್ತು ವಿವಾದ:ಜಮ್ಮು -ಕಾಶ್ಮೀರದಲ್ಲಿ 2011ರ ಜನಗಣತಿ ಲೆಕ್ಕ ಪ್ರಕಾರ ಜಮ್ಮುವಿಗೆ ಹೋಲಿಸಿದರೆ ಕಾಶ್ಮೀರದಲ್ಲಿ ಜನಸಂಖ್ಯೆ 15 ಲಕ್ಷ ಹೆಚ್ಚಿಗೆಯಿದೆ. ಜಮ್ಮುವಿನಲ್ಲಿ 53.5 ಲಕ್ಷ ಮತ್ತು ಕಾಶ್ಮೀರದಲ್ಲಿ 68.8 ಲಕ್ಷ ಜನಸಂಖ್ಯೆ ಇದೆ. ಕ್ಷೇತ್ರ ಮರುವಿಂಗಡಣೆ ಮಾಡುವಾಗ ಹೊಸ ವಿಧಾನಸಭೆ ಕ್ಷೇತ್ರವನ್ನು ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ರಚಿಸಲಾಗಿದೆ. ಜಮ್ಮು ಪ್ರಾಂತ್ಯದಲ್ಲಿ 1.25 ಲಕ್ಷ ಜನಸಂಖ್ಯೆಗೆ ಒಂದು ಕ್ಷೇತ್ರವಾದರೆ, ಕಾಶ್ಮೀರದಲ್ಲಿ 1.46 ಲಕ್ಷ ಜನಸಂಖ್ಯೆಗೆ ಒಂದು ಕ್ಷೇತ್ರದಂತೆ ಕ್ಷೇತ್ರ ಮರುವಿಂಗಡಣೆ ಮಾಡಲಾಗಿದೆ. ಇಲ್ಲಿ ಜನಸಂಖ್ಯೆ ಆಧಾರದಲ್ಲಿ ಕಾಶ್ಮೀರಕ್ಕೆ ಹೆಚ್ಚುವರಿ ಸ್ಥಾನ ಸಿಗಬೇಕು ಎಂಬ ವಾದವನ್ನು ಪ್ರಾದೇಶಿಕ ಪಕ್ಷಗಳು ಮುಂದಿಟ್ಟಿವೆ. ಹೀಗಾಗಿ ಇದು ವಿವಾದಕ್ಕೆ ಈಡಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 4 =
Remember me
